ವರ್ಲ್ಡ್ ಗಿವಿಂಗ್ಸ್ ಇಂಡೆಕ್ಸ್ ಪ್ರಕಾರ, ಅಪರಿಚಿತರೊಬ್ಬರಿಗೆ ನೆರವು ನೀಡುವ ನಿಟ್ಟಿನಲ್ಲಿ ಅಮೆರಿಕಾಗೆ ಮೊದಲ ಸ್ಥಾನ ಲಭಿಸಿದೆ. ಅದೇ ರೀತಿ ಅಮೆರಿಕಾದಲ್ಲಿ ಶೇ.69 ರಷ್ಟು ಫೈರ್‌ ಫೈಟರ್ಸ್‌, ವಾಲೆಂಟಿಯರ್ಸ್‌ ಇದ್ದಾರೆ. ಇಂತಹ ಅದೆಷ್ಟೋ ಸಂಗತಿಗಳು ಅಮೆರಿಕನ್ನರು ಹಾಗೂ ಭಾರತೀಯರನ್ನು ಪ್ರತ್ಯೇಕಿಸುತ್ತವೆ. ಹೆಚ್ಚಿನ ಭಾರತೀಯರ ಹಾಗೆ ಅಮೆರಿಕನ್ನರು ವ್ಯರ್ಥ ಕಾಲಹರಣ ಮಾಡಲು ಇಷ್ಟಪಡುವುದಿಲ್ಲ. ಅವರು ಶ್ರಮಜೀವಿಗಳು. ಹೊಸ ಹೊಸ ಯೋಜನೆಗಳಿಗೆ ಮೂರ್ತರೂಪ ಕೊಡುವವರು. ಹೊಸ ಯೋಚನೆಯನ್ನು ಪ್ರಸ್ತುತಪಡಿಸುವುದು ಹಾಗೂ ಯಾವುದೇ ಒಂದು ವಸ್ತುವನ್ನು ಹೊಸ ರೀತಿಯಲ್ಲಿ ಸಿದ್ಧಪಡಿಸಲು ಹಿಂದೇಟು ಹಾಕುವುದಿಲ್ಲ. ಈ ಕಾರಣದಿಂದ ಅವರು ಮಾಡುವ ಪ್ರಯತ್ನದ ಫಲವಾಗಿ ಆಶ್ಚರ್ಯದಾಯಕ ಫಲಿತಾಂಶಗಳು ಹೊರಹೊಮ್ಮುತ್ತವೆ. ಕೆಲಸದ ಬಗೆಗಿನ ಅವರ ಪ್ರೀತಿ, ಸಕಾರಾತ್ಮಕ ಪ್ರವೃತ್ತಿ ಎಂಥವರನ್ನೂ ಬೆರಗುಗೊಳಿಸುತ್ತದೆ.

ಸಾಕಷ್ಟು ಮಟ್ಟಿಗೆ ಮಾನಸಿಕತೆಯ ಈ ಅಂತರದ ಪರಿಣಾಮ ಏನನ್ನು ಸೂಚಿಸುತ್ತದೆ ಎಂದರೆ, ಅಮೆರಿಕನ್ನರು ನಮಗಿಂತ ಸಮೃದ್ಧಶಾಲಿಗಳು, ಪ್ರಗತಿಪರರು ಎನ್ನುವುದು ತಿಳಿದುಬರುತ್ತದೆ. ಹಿಂದುಳಿದ ಹಾಗೂ ಅಭಿವೃದ್ಧಿಶೀಲ ದೇಶಗಳ ಪಟ್ಟಿಯಲ್ಲಿ ಭಾರತ ಕೂಡ ಒಂದು ಎಂದು ಪರಿಗಣಿಸಲ್ಪಡುತ್ತದೆ. ಭಾರತೀಯ ಯುವಕ ಯುವತಿಯರಿಗೆ ಅಮೆರಿಕಾ ತಮ್ಮ ಕನಸು ನನಸು ಮಾಡುವ ತಾಣ ಎನಿಸುತ್ತದೆ. ಹಾಗೆಂದೇ ಇಲ್ಲಿಗೆ ಬರಲು ಇಲ್ಲಿಯೇ ಖಾಯಂ ಆಗಿ ಇರಲು ಒಂದು ರೀತಿಯ ಸ್ಪರ್ಧೆಯೇ ಏರ್ಪಟ್ಟಿದೆ. ಆದರೆ ನಾಣ್ಯಕ್ಕೆ ಎರಡನೇ ಮುಖ ಇದೆ. ಇಲ್ಲಿ ಒಳ್ಳೆಯತನದ ಜೊತೆಗೆ ಜೀವನಶೈಲಿಯಲ್ಲಿ  ಕೆಲವು ಕೊರತೆಗಳೂ ಇವೆ.

ಭಾರತೀಯರು ಪ್ರಯತ್ನ ಪಟ್ಟು ಅಮೆರಿಕನ್ನರ ಕೆಲವು ಒಳ್ಳೆಯ ಅಂಶಗಳನ್ನು ತಮ್ಮ ಜೀವನದಲ್ಲೂ ಅವಳಡಿಸಿಕೊಂಡರೆ ಭಾರತದಲ್ಲೂ ಅಂತಹದೇ ಆಕರ್ಷಣೆಯನ್ನು ಹುಟ್ಟು ಹಾಕಬಹುದು.

ಅಮೆರಿಕಾ ವಿಶ್ವದ ಶ್ರೀಮಂತ, ಶಕ್ತಿಶಾಲಿ ಹಾಗೂ ಅಭಿವೃದ್ಧಿ ಹೊಂದಿದ ದೇಶಗಳಲ್ಲೊಂದು. ಅದು ಗಾತ್ರದಲ್ಲಿ ಭಾರತದ 3 ಪಟ್ಟು ಇದೆ. ಆದರೆ ಜನಸಂಖ್ಯೆಯಲ್ಲಿ 4 ಪಟ್ಟು ಕಡಿಮೆ ಇದೆ. ಸ್ವಾತಂತ್ರ್ಯಾನಂತರ ನಾವು ಜನಸಂಖ್ಯೆಯ ಮೇಲೆ ನಿಯಂತ್ರಣ ಹೇರಿದ್ದರೆ ದೇಶದ ಪರಿಸ್ಥಿತಿಯೂ ಚೆನ್ನಾಗಿರುತ್ತಿತ್ತು.

ಒಳ್ಳೆಯ ಮುಖ

ಉನ್ನತ ಜೀವನ ಮಟ್ಟ : ಇಲ್ಲಿನ ಜನರ ಜೀವನಮಟ್ಟ ಬಹಳ ಉನ್ನತಮಟ್ಟದಲ್ಲಿದೆ. ಇಲ್ಲಿ ಪಾರ್ಟ್‌ಟೈಮ್, ಮನೆ ಕೆಲಸ ಅಂದರೆ ಅಡುಗೆ ಸ್ವಚ್ಛತೆ, ತೋಟದ ಕೆಲಸ ಮಾಡುವವರು ಕೂಡ ಆಧುನಿಕ ಉಪಕರಣಗಳನ್ನು ಹೊಂದಿದ್ದಾರೆ. ಕಾರು, ಟಿ.ವಿ., ಸ್ಮಾರ್ಟ್‌ಫೋನ್‌, ಮೈಕ್ರೋವೇವ್‌ಗಳನ್ನು ಅವರು ಉಪಯೋಗಿಸುತ್ತಾರೆ.

ಸಾಕಷ್ಟು ಅವಕಾಶಗಳು : ಇಲ್ಲಿ ಪ್ರತಿಯೊಬ್ಬರಿಗೂ ಅವರವರ ಅರ್ಹತೆಗನುಗುಣವಾಗಿ ಉದ್ಯೋಗಾವಕಾಶಗಳು ಲಭಿಸುತ್ತವೆ. ಇಲ್ಲಿ ಜಾತಿ ಧರ್ಮ ಅಲ್ಪಸಂಖ್ಯಾತರು ಎಂಬ ರಿಸರ್ವೇಶನ್ಸ್ ಇಲ್ಲ. ತಮ್ಮದೇ ಸ್ವಬಲದಿಂದ ಮುಂದೆ ಬಂದ ಉದ್ಯಮಿಗಳ ಸಂಖ್ಯೆ ಇಲ್ಲಿರುವಷ್ಟು ಬೇರೆಲ್ಲೂ ಕಂಡುಬರುವುದಿಲ್ಲ.

ಶ್ರಮಕ್ಕೆ ಬೆಲೆ : ನೀವು ಯಾವುದೇ ಚಿಕ್ಕ ಕೆಲಸ ಮಾಡುತ್ತಿರಬಹುದು ಅಥವಾ ದೊಡ್ಡ ಕಂಪನಿಯ ಕಾರ್ಯಾಧ್ಯಕ್ಷರಿರಬಹುದು. ಇಲ್ಲಿನ ಸಮಾಜ ಇಬ್ಬರಿಗೂ ಸಮಾನ ಗೌರವ ಕೊಡುತ್ತದೆ. ಕಟಿಂಗ್‌ಶಾಪ್‌ ಕೆಲಸಗಾರನಿಗೂ, ದೊಡ್ಡ ಕಂಪನಿಯ ಮಾಲೀಕನಿಗೂ ಕಾನೂನು ಸಮಾನವಾಗಿ ಅನ್ವಯವಾಗುತ್ತದೆ.

ಧಾರ್ಮಿಕ ಭೇದಭಾವ ಇಲ್ಲ : ಇಲ್ಲಿನ ಸಮಾಜ ಹಾಗೂ ಕಾನೂನಿನ ಪ್ರಕಾರ, ಧರ್ಮ ಹಾಗೂ ಜಾತಿಯ ಆಧಾರದ ಮೇಲೆ ಯಾವುದೇ ಭೇದಭಾವ ಅನುಸರಿಸಲಾಗುವುದಿಲ್ಲ. ಇಲ್ಲಿ ಕೋಮು ಸಂಘರ್ಷ, ಲೂಟಿಯಂಥ ಘಟನೆಗಳು ನಡೆಯುವುದು ಕಡಿಮೆ.

ಕಾನೂನು ಹಕ್ಕು : ಈ ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಅನ್ವಯಿಸುತ್ತದೆ. ಧರ್ಮದ ಆಧಾರದ ಮೇಲೆ ಕಾನೂನು ಅಥವಾ ಮೀಸಲಾತಿ ಇಲ್ಲ.

ಸ್ವತಂತ್ರ ದೇಶ/ನಾಗರಿಕ : ನಿಜವಾದ ಅರ್ಥದಲ್ಲಿ ಅಮೆರಿಕಾ ಒಂದು ಸ್ವತಂತ್ರ ದೇಶ. ಇಲ್ಲಿನ ನಾಗರಿಕರು ಪರಿಪೂರ್ಣ ಸ್ವಾತಂತ್ರ್ಯದ ಅನುಭವ ಪಡೆಯುತ್ತಾರೆ. ಅಮರಿಕನ್ನರು ಸ್ವಾತಂತ್ರ್ಯದ ದುರುಪಯೋಗ ಮಾಡಿಕೊಳ್ಳುವುದಿಲ್ಲ. ಸ್ವಾತಂತ್ರ್ಯದ ಹೆಸರಿನಲ್ಲಿ ಗೊಂದಲ ಗಲಾಟೆ ಬಂದ್‌ಗಳು ನಡೆಯುವುದಿಲ್ಲ.

ಏಕರಾಷ್ಟ್ರದ ಕಲ್ಪನೆ : ಅಮೆರಿಕಾ 50 ರಾಜ್ಯಗಳ ಒಕ್ಕೂಟ. ನಮ್ಮಲ್ಲಿನ ಹಾಗೆ ಆ ರಾಜ್ಯ, ಈ ರಾಜ್ಯ ಎಂಬ ಭೇದಭಾವ ಅಲ್ಲಿಲ್ಲ.

ಕಠೋರ ಶಿಸ್ತು : ಇಲ್ಲಿ ನಿಯಮಗಳ ಪಾಲನೆ ಅನಿವಾರ್ಯ. ಸಂಚಾರಿ ನಿಯಮಗಳನ್ನು ಬಹಳ ಅಚ್ಚುಕಟ್ಟಾಗಿ ಪಾಲಿಸಲಾಗುತ್ತದೆ. 22 ಚಿನ್ನದ ಪದಕ ಪಡೆದ ಈಜು ಪಟು ಮೈಕೆಲ್‌ ಫಿಲಿಪ್‌ ಕೂಡ 2 ಸಲ ಅಮಲಿನಲ್ಲಿ ಗಾಡಿ ಓಡಿಸಿದ್ದಕ್ಕೆ ಬಂಧನಕ್ಕೊಳಗಾಗಿದ್ದರು.

ಧನ್ಯವಾದ : ಅಮೆರಿಕಾಕ್ಕೆ ಯಾರೇ ಬರಲಿ, ಅಲ್ಲಿನ ನಾಗರಿಕರು ಅವರಿಗೆ ಧನ್ಯವಾದ ಹೇಳಲು ಮರೆಯುವುದಿಲ್ಲ. ಅವರು ಹೆಚ್ಚು ಮಾತನಾಡಲಿಕ್ಕಿಲ್ಲ. ಆದರೆ ಹಾಯ್‌, ಹಲೋ, ಗುಡ್‌ಮಾರ್ನಿಂಗ್‌ಹೇಳದೇ ಇರಲಾರರು.

ಎಲ್ಲ ದೇಶಗಳ ಊಟತಿಂಡಿ ಲಭ್ಯ : ಅಮೆರಿಕಾದಲ್ಲಿ ಭಾರತ ಸಹಿತ ಬಹುತೇಕ ಎಲ್ಲ ದೇಶಗಳ ನಾಗರಿಕರು ವಾಸಿಸುತ್ತಿದ್ದಾರೆ. ಹೀಗಾಗಿ ಎಲ್ಲ ದೇಶಗಳ ವಿಶೇಷ ರುಚಿ ಇಲ್ಲಿ ಸವಿಯಬಹುದಾಗಿದೆ.

ಉತ್ತಮ ರಸ್ತೆಗಳು : ಅಮೆರಿಕದಾದ್ಯಂತ ಅತ್ಯುತ್ತಮ ರಸ್ತೆ ಹಾಗೂ ಫ್ಲೈಓವರ್‌ಗಳ ಜಾಲ ಪಸರಿಸಿದೆ. ಇದೇ ಕಾರಣದಿಂದ ಇಲ್ಲಿನ ನಾಗರಿಕರು ಬಹುದೂರದ ತನಕ ಕಾರಿನಲ್ಲಿಯೇ ಪ್ರವಾಸ ಮಾಡುತ್ತಾರೆ. ಅತಿ ಹೆಚ್ಚಿನ ದೂರವನ್ನು ಮಾತ್ರ ಅವರು ವಿಮಾನದಲ್ಲಿ ಕ್ರಮಿಸುತ್ತಾರೆ. ಅಲ್ಲಿ ರೈಲು ಪ್ರವಾಸದ ಬಗ್ಗೆ ಅಷ್ಟೊಂದು ಆಕರ್ಷಣೆಯಿಲ್ಲ.

ಮಕ್ಕಳು ಸ್ವಾವಲಂಬಿ : ಅಮೆರಿಕಾದಲ್ಲಿ ಎಲ್ಲ ಮಕ್ಕಳಿಗೂ ಆರಂಭದಿಂದಲೇ ತಮ್ಮ ಕೆಲಸ ತಾವೇ ಮಾಡಿಕೊಳ್ಳುವ ಬಗ್ಗೆ ಕಲಿಸಲಾಗುತ್ತದೆ.

ಸಮಯ ಪಾಲನೆ : ಇಲ್ಲಿ ಯಾರೊಬ್ಬರೂ ಸಮಯ ಹಾಳು ಮಾಡುವುದಿಲ್ಲ. ಅವರಿಗೆ ಸಮಯದ ಮಹತ್ವ ಗೊತ್ತಿರುತ್ತದೆ. ಎಲ್ಲ ಕೆಲಸಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳುತ್ತವೆ.

ಇಂಟರ್‌ನೆಟ್‌ನ ಸೃಷ್ಟಿಕರ್ತ : ಇಂಟರ್‌ನೆಟ್‌ ಜನ್ಮ ತಳೆದದ್ದು ಅಮೆರಿಕಾದಲ್ಲಿಯೇ. ಹೀಗಾಗಿ ನೆಟ್ ಮುಖಾಂತರ ಜಗತ್ತನ್ನೇ ಸಂಪರ್ಕದಲ್ಲಿರಿಸಿದೆ. ಆಧುನಿಕ ಇಂಟರ್‌ನೆಟ್‌ರಲ್ಲಿ ಟೀಮ್ ಲೀ ಮುಖಾಂತರ ಇಲ್ಲಿಯೇ ಜನಿಸಿತ್ತು.

ಉದಾರತೆ : ಅಮೆರಿಕಾ ಸರ್ಕಾರ ಹಾಗೂ ಇಲ್ಲಿನ ಸರ್ಕಾರದ ಉದಾರತೆ ಜಗಜ್ಜಾಹೀರು. ಸರ್ಕಾರ ಬೇರೆ ಬಡದೇಶಗಳಿಗೆ ನೆರವು ಘೋಷಿಸುತ್ತದೆ. ಅಲ್ಲಿನ ಉದ್ಯಮಿಗಳು, ಹಾಲಿವುಡ್‌ ತಾರೆಯರು ಬೇರೆ ದೇಶಗಳ ಸಾಮಾಜಿಕ ಕಾರ್ಯಕ್ರಮಗಳಿಗೆ ಉದಾರ ದೇಣಿಗೆ ನೀಡುತ್ತಾರೆ.

ಉನ್ನತ ಶಿಕ್ಷಣ ಸಂಶೋಧನೆಗೆ ಅವಕಾಶ : ಅಮೆರಿಕಾದ ವಿಶ್ವಮಟ್ಟದ ವಿಶ್ವವಿದ್ಯಾಲಯಗಳಿಗೆ ಜಗತ್ತಿನಾದ್ಯಂತ ವಿದ್ಯಾರ್ಥಿಗಳು ಬಂದು ಉನ್ನತ ಶಿಕ್ಷಣ ಪಡೆದುಕೊಂಡು ಹೋಗುತ್ತಾರೆ. ಹಲವರಿಗೆ ಸ್ಕಾಲರ್‌ಶಿಪ್‌ ಕೂಡ ದೊರೆಯುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಶೋಧನೆಯ ವ್ಯವಸ್ಥೆ ಕೂಡ ಇದೆ.

ಸರ್ವಾಂಗೀಣ ವಿಕಾಸದ ಬಗ್ಗೆ ಒತ್ತು : ಇಲ್ಲಿ ಬಾಲ್ಯದಿಂದಲೇ ವ್ಯಕ್ತಿತ್ವ ವಿಕಾಸಕ್ಕೆ ಪ್ರಾಧಾನ್ಯತೆ ಕೊಡಲಾಗುತ್ತದೆ. ಮಕ್ಕಳು ಓದಿನ ಜೊತೆ ಜೊತೆಗೆ ಬೇರೆ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಈಜು, ಅಥ್ಲೆಟಿಕ್ಸ್, ಟೆನಿಸ್‌, ಬ್ಯಾಸ್ಕೆಟ್‌ಬಾಲ್‌ಮುಂತಾದ ಆಟಗಳಲ್ಲಿ ಭಾಗವಹಿಸುತ್ತಾರೆ. ಸರ್ಕಾರ ಕೂಡ ಕ್ರೀಡೆಯ ಮೇಲಾಗುವ ಖರ್ಚಿಗೆ ಆದಾಯ ತೆರಿಗೆಯಲ್ಲಿ ವಿನಾಯ್ತಿ ನೀಡುತ್ತದೆ.

ದುರ್ಬಲ ಮುಖ

ಆಧುನಿಕ ಶಸ್ತ್ರಾಸ್ತ್ರಗಳ ನಿರ್ಮಾಣ : ಅಮೆರಿಕಾ ಜಗತ್ತಿನಲ್ಲಿಯೇ ಅತಿ ಹೆಚ್ಚು ಆಧುನಿಕ ಶಸ್ತ್ರಾಸ್ತ್ರಗಳನ್ನು ನಿರ್ಮಿಸುವ ರಾಷ್ಟ್ರವಾಗಿದೆ. ಈ ಶಸ್ತ್ರಾಸ್ತ್ರಗಳೇನಾದರೂ ಉಗ್ರರ ಕೈಗೆ ದೊರೆತರೆ ಏನಾಗಬಹುದು ಎಂಬ ಆತಂಕ ಜನರನ್ನು ಸದಾ ಕಾಡುತ್ತಿರುತ್ತದೆ.

ವಾಯುಮಾಲಿನ್ಯ ಪಸರಿಸುವಿಕೆ : ಇಲ್ಲಿನ ಕಾರ್ಖಾನೆಗಳು ಹಾಗೂ ಕೋಟ್ಯಂತರ ಕಾರುಗಳು ವಾಯುಮಂಡಲದಲ್ಲಿ ಅಪಾರ ಪ್ರಮಾಣದಲ್ಲಿ ಮಾಲಿನ್ಯ ಪಸರಿಸುತ್ತಿವೆ. ಚೀನಾದ ಬಳಿಕ ಇದು ಎರಡನೇ ಸ್ಥಾನದಲ್ಲಿದೆ.

ಬೊಜ್ಜು : ಅಮೆರಿಕಾದ ಪ್ರತಿ ಮೂವರು ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ಬೊಜ್ಜಿಗೆ ತುತ್ತಾಗಿದ್ದಾನೆ. ಇಲ್ಲಿ ಜಂಕ್‌ಫುಡ್‌, ಪಿಜ್ಜಾ, ಬರ್ಗರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿವೆ.

ಸಾರ್ವಜನಿಕ ಸಾರಿಗೆಯ ಕೊರತೆ : ಪ್ರತಿಯೊಬ್ಬ ವ್ಯಕ್ತಿ ಕಾರು ಹೊಂದಿರುವುದರಿಂದ ಇಲ್ಲಿ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಯ ಕೊರತೆ ಬಾಧಿಸುತ್ತದೆ. ದೀರ್ಘ ಪ್ರಯಾಣಕ್ಕಾಗಿ ಬಸ್‌, ರೈಲುಗಳ ಸೌಲಭ್ಯ ಕಡಿಮೆ.

ಜಗತ್ತಿನ ಬಗ್ಗೆ ಅಜ್ಞಾನ : ಇಲ್ಲಿನ ಜನರಿಗೆ ಇತರೆ ದೇಶಗಳ ಬಗ್ಗೆ ಮಾಹಿತಿ ಕಡಿಮೆ. ಕೆಲವು ವರ್ಷಗಳ ಹಿಂದಿನತನಕ ಅಮೆರಿಕವೇ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಇಲ್ಲಿನ ಜನರು ಕ್ವಿಜ್‌ಗಳಲ್ಲಿ ಉತ್ತರಿಸುತ್ತಿದ್ದರು.

ಗನ್‌ ಫ್ರೀಡಂ : ಇಲ್ಲಿನ ಯಾರೇ ಆಗಲಿ ಸುಲಭವಾಗಿ ಬಂದೂಕನ್ನು ಪಡೆದುಕೊಳ್ಳಬಹುದಾಗಿದೆ. ಆ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲೂ ಶೂಟೌಟ್‌ಘಟನೆಗಳು ಸಾಮಾನ್ಯ ಎನಿಸಿವೆ.

ಸಲಿಂಗ ವಿವಾಹ : ಇಲ್ಲಿ ಸಲಿಂಗ ವಿವಾಹಕ್ಕೆ ಇತ್ತೀಚೆಗೆ ಮಾನ್ಯತೆ ದೊರಕಿದೆ. ಅವರು ತಮ್ಮ ಹಕ್ಕುಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಆದರೆ ಇಂತಹ ಸಂಬಂಧಗಳು ಅನೈಸರ್ಗಿಕ ಎಂಬುದು ಜಗಜ್ಜಾಹೀರು.

ದುಬಾರಿ ಕೆಲಸಗಾರರು : ಇಲ್ಲಿ ಕೆಲಸಗಾರರು ಸಿಗುವುದು ಕಷ್ಟ. ಸಿಕ್ಕರೂ ತುಂಬಾ ದುಬಾರಿ. ಯಾವುದೇ ವಸ್ತು ದುರಸ್ತಿಗೆ ಬಂದರೆ ಅವನ್ನು ತೊಟ್ಟಿಗೆ ಎಸೆದು ಹೊಸ ಸಲಕರಣೆಗಳನ್ನು ಕೊಂಡುಕೊಳ್ಳುತ್ತಾರೆ.

ಕೌಟುಂಬಿಕ ಆತ್ಮೀಯತೆಯ ಕೊರತೆ : ಭಾರತಕ್ಕೆ ಹೋಲಿಸಿದರೆ ಇಲ್ಲಿನ ನಾಗರಿಕರಲ್ಲಿ ಕೌಟುಂಬಿಕ ಭಾವನೆ, ಆತ್ಮೀಯತೆ ತುಂಬಾ ಕಡಿಮೆ. ವಿಚ್ಛೇದನಗಳು ಅಷ್ಟೇ ಜಾಸ್ತಿ.

ತಂತ್ರಜ್ಞಾನದ ಅತಿಯಾದ ಬಳಕೆ : ಮನೆಯಲ್ಲಿನ ಬಹುತೇಕ ಕೆಲಸಗಳು ಅಂದರೆ ಅಡುಗೆ, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಹೀಗೆ ಎಲ್ಲ ಕೆಲಸಗಳೂ ಯಂತ್ರದಿಂದಲೇ ಆಗುತ್ತವೆ. ಮಕ್ಕಳ ಕೈಯಲ್ಲೂ ಆಧುನಿಕ ಗ್ಯಾಜೆಟ್ಸ್ ಕಂಡುಬರುತ್ತವೆ.

ಈ ಕುರಿತಂತೆ ಮಹಾನ್‌ ವಿಜ್ಞಾನಿ ಐನ್‌ಸ್ಟಿನ್‌ ಹೇಳಿದ ಒಂದು ಮಾತು ನೆನಪಿಗೆ ಬರುತ್ತದೆ, “ನನಗೆ ಆ ದಿನದ ಭಯವಿದೆ. ಯಾವಾಗ ತಂತ್ರಜ್ಞಾನ ಮಾನವರ ನಡುವಿನ ಮಾತುಕತೆಗಿಂತಲೂ ಮಿಗಿಲಾದ ಸ್ಥಾನ ಪಡೆದುಕೊಂಡರೆ ಅದು ಮೂರ್ಖರ ಪೀಳಿಗೆಯೇ ಹೌದು.”

– ಜಿ. ಶರ್ವಾಣಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ