ಬೆಂಗಳೂರು ನಗರ ಹೊರವಲಯದ ಆನೇಕಲ್ ತಾಲೂಕಿನ ಹಳೆ ಚಂದಾಪುರ ಸಮೀಪ ಭಾನುವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ಕು ಖಾಸಗಿ ಬಸ್‌ಗಳು ಸುಟ್ಟು ಕರಕಲಾಗಿವೆ.
ಘಟನೆಯಿಂದ ಸ್ಥಳೀಯ ನಿವಾಸಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಭಾನುವಾರ ಮಧ್ಯಾಹ್ನ 3.10 ಗಂಟೆ ಸುಮಾರಿಗೆ ನಿಲ್ಲಿಸಿದ್ದ ನಾಲ್ಕು ಖಾಸಗಿ ಬಸ್‌ಗಳಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಅಗ್ನಿಜ್ವಾಲೆಗಳು ಬಸ್‌ಗಳನ್ನು ಸಂಪೂರ್ಣ ಆವರಿಸಿತ್ತು.
ಬೆಂಕಿಯಿಂದ ದಟ್ಟ ಹೊಗೆ ಆಕಾಶದೆತ್ತರಕ್ಕೆ ಏರಿತ್ತು. ದೂರದ ಪ್ರದೇಶಗಳಿಂದಲೂ ಹೊಗೆ ಕಾಣಿಸುತ್ತಿತ್ತು. ಇದರಿಂದ ಸುತ್ತಮುತ್ತಲಿನ ಜನರಲ್ಲಿ ಭಯದ ವಾತಾವರಣ ಉಂಟಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತ್ವರಿತ ಕಾರ್ಯಾಚರಣೆ: ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಆಸ್ತಿಗಳು ಹಾಗೂ ಇತರ ವಾಹನಗಳಿಗೆ ಬೆಂಕಿ ವ್ಯಾಪಿಸುವುದನ್ನು ತಡೆಯುವಲ್ಲಿ ಯಶಸ್ವಿಯಾದರು.
ಬೆಂಕಿಯ ತೀವ್ರತೆಗೆ ನಾಲ್ಕೂ ಖಾಸಗಿ ಬಸ್‌ಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನೆಯ ವೇಳೆ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿ ಬಸ್‌ಗಳಲ್ಲಿ ಇರದ ಕಾರಣ ಯಾರಿಗೂ ಗಾಯಗಳಾಗಿಲ್ಲ ಎಂಬುದು ಸಮಾಧಾನದ ಸಂಗತಿ.
ತನಿಖೆ ಆರಂಭ: ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ದೋಷ, ನಿರ್ಲಕ್ಷ್ಯ ಅಥವಾ ಇತರ ಯಾವ ಕಾರಣಗಳಿಂದ ಬೆಂಕಿ ಹೊತ್ತಿಕೊಂಡಿದೆ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.





