ಮನುಷ್ಯ ಎಷ್ಟೋ ವಿಷಯಗಳನ್ನು ದೇಶ ಸುತ್ತುವುದರಿಂದ ತಿಳಿದುಕೊಳ್ಳುತ್ತಾನೆ. ದೇಶ ಸುತ್ತುವುದರಿಂದ ಕೋಶ ಓದಿದಷ್ಟೇ ಜ್ಞಾನ ಸಂಪಾದನೆಯಾಗುತ್ತದೆ. ಅಲ್ಲದೇ, ಮನಸ್ಸಿಗೆ ರಂಜನೆ, ಆನಂದ, ಉಲ್ಲಾಸ ದೊರಕುವುದರ ಜೊತೆಗೆ ಪಾಂಡಿತ್ಯ ಕೂಡ ಬೆಳೆಯುತ್ತದೆ.

ನಾವು ಎಷ್ಟೋ ಸಲ ಕೆಲವು ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತೇವೆ. ಆದರೆ ಅಲ್ಲಿಯೇ ಹತ್ತಿರವಿರುವ ಅನೇಕ ಎಲೆ ಮರೆಯ ಕಾಯಿಯಂತೆ ಇರುವ ತಾಣಗಳು ನಮ್ಮ ಕಣ್ಣಿಗೆ ಬೀಳದೇ ಹೋಗುವ ಸಾಧ್ಯತೆಯುಂಟು. ಅಂಥ ಸ್ಥಳಗಳ ಬಗ್ಗೆ ಕೇಳಿ ತಿಳಿದು ಭೇಟಿ ನೀಡಿದಾಗ ಆಗುವ ಸಂತಸ ಹೇಳತೀರದ್ದು. ಇತಿಹಾಸ ಪ್ರಸಿದ್ಧ ಹಂಪೆ ನೋಡಿದರು ಅದರ ಸಮೀಪವಿರುವ ಆನೆಗೊಂದಿಗೂ ಹೋಗುವುದುಂಟು. ಅಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ಕಿಷ್ಕಿಂಧಾ ರೆಸಾರ್ಟ್‌ ಕೂಡ ಇಲ್ಲಿನ ಮತ್ತೊಂದು ಆಕರ್ಷಣೆ. ಗಂಗಾವತಿ ಮೂಲಕ ಕಿಷ್ಕಿಂಧಾ ರೆಸಾರ್ಟ್‌ ಮಾರ್ಗದಲ್ಲಿ ಅಂಜನಾದ್ರಿ ಪರ್ವತವಿದೆ. ಇಲ್ಲಿ ಬರುವವರು ಮಾತ್ರ ವಿರಳ, ಏಕೆಂದರೆ ಇದೊಂದು ಬೆಟ್ಟ ಪ್ರದೇಶ, ಈ ಬೆಟ್ಟದ ಮೇಲೆ ದೇವಾಲಯ ಕಾಣುತ್ತದೆ. ಮೆಟ್ಟಿಲುಗಳನ್ನೇರುವ ದಮ್ ಇದ್ದವರಿಗೆ ಮಾತ್ರ ಅಂಜನಾದ್ರಿ ಪರ್ವತ ನೋಡಲು ಸಾಧ್ಯ. ಇಲ್ಲದಿದ್ದಲ್ಲಿ ಕೆಳಗೆ ನಿಂತು ಬೆಟ್ಟದ ತುದಿಯಲ್ಲಿ ಕಂಡು ಬರುವ ದೇವಾಲಯ ನೋಡಿ ಮುಂದೆ ಸಾಗಬೇಕಷ್ಟೆ.

devalaya-edurina-deepastamba

ನಿಜಕ್ಕೂ ಜೀವನದಲ್ಲಿ ಥ್ರಿಲ್ ‌ಬಯಸುವವರಿಗೆ, ಚಾರಣಿಗರು, ಸಾಹಸಿಗರು ದಿಲ್ ‌ಖುಷ್‌ ಆಗಬೇಕೆಂದರೆ ಒಮ್ಮೆಯಾದರೂ ಅಂಜನಾದ್ರಿ ಪರ್ವತಕ್ಕೆ ಬರಬೇಕು. ಇದು ಗಂಗಾವತಿಯಿಂದ ಕಿಷ್ಕಿಂಧಾ ಮಾರ್ಗದಲ್ಲಿ 16 ಕಿ.ಮೀ. ಅಂತರದಲ್ಲಿದೆ. ಹುಲಗಿಯಿಂದ ಕೂಡ 15 ಕಿ.ಮೀ. ಹುಲಗಿ ಅಥವಾ ಗಂಗಾವತಿ ಯಾವುದೇ ಮಾರ್ಗದಿಂದ ಸುಲಭವಾಗಿ ತಲುಪಬಹುದು, ಅಂದರೆ ಸಾರಿಗೆ ವ್ಯವಸ್ಥೆಯ ಅನುಕೂಲವಿದೆ.

ಈ ಪರ್ವತ ಕೇವಲ ಚಾರಣಕ್ಕಷ್ಟೇ ಸೀಮಿತವಾಗದೇ ಪುರಾಣಕ್ಕೂ ನಂಟನ್ನು ಹೊಂದಿದೆ. ರಾಮಾಯಣ ಕಾಲದ ಘಟನೆಗಳಿಗೆ ಸಾಕ್ಷಿಯಾಗಿ ನೆಲೆ ನಿಂತಿದೆ. ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧುನಿಕ ಯಾವುದೇ ಪ್ರವಾಸೀ ತಾಣಗಳನ್ನು ಸುತ್ತಿದರೂ ಮಾನವನ ದೃಷ್ಟಿ ಬದಲಾಗುತ್ತದೆ. ಅವನ ಬುದ್ಧಿ ಬೆಳೆಯುತ್ತದೆ. ಈ ರೀತಿ ಜ್ಞಾನ ಪರಿವರ್ತನೆಗೆ ಕಾರಣವಾಗುವ ಸ್ಥಳಗಳನ್ನು ಸುತ್ತಲೂ ಹೊಂದಿದೆ. ರಾಮಾಯಣ ಕಾಲಕ್ಕೆ ವಾನರ ಸೇನೆಯ ತಾಣವಾಗಿದ್ದ ಕಿಷ್ಕಿಂಧಾ, ಅಂಜನಾದ್ರಿ, ವಿರೂಪಾಪುರದಡಿ ಹನುಮಾಪುರ, ಸನಾಪುರ, ತಿರುಮಾಪುರ ಸುತ್ತಲಿನ ಪರಿಸರಕ್ಕೆ ಹೊಂದಿಕೊಂಡಿದೆ. ಅಂಜನಾದ್ರಿ ಪರ್ವತ. ಇಲ್ಲಿ ಉದ್ಭವ ಆಂಜನೇಯ ವಿಗ್ರಹ ಪೂಜೆಗೊಳ್ಳುತ್ತಿರುವುದು. ಅಷ್ಟೇ ಅಲ್ಲ, ರಾಮಾಯಣದಲ್ಲಿ ಬರುವ ವಾನರ ರಾಜ ಕೇಸರಿ ಮತ್ತು ಅವನ ಪತ್ನಿ ಅಂಜನಾದೇವಿಯ ಪುತ್ರ ಆಂಜನೇಯನ ಜನ್ಮಸ್ಥಳ ಈ ಅಂಜನಾದ್ರಿ ಬೆಟ್ಟ.

ಇಂತಹ ಹಿನ್ನೆಲೆಯುಳ್ಳ ಅಂಜನಾದ್ರಿ ಪರ್ವತದ ಮೇಲೆ ಬರಲು ಕಡಿದಾದ ಬೆಟ್ಟದ ಮಧ್ಯದಲ್ಲಿ 575 ಮೆಟ್ಟಿಲುಗಳನ್ನು ನಿರ್ಮಿಸಿರುವರು. ಈ ಮೆಟ್ಟಿಲುಗಳನ್ನೇರುವುದೇ ಒಂದು ಹರಸಾಹಸ. ಕೆಲವೆಡೆ ಚಿಕ್ಕಪುಟ್ಟ ಮೆಟ್ಟಿಲುಗಳಿದ್ದರೆ, ಇನ್ನು ಕೆಲವೆಡೆ ವಿಸ್ತಾರವಾದ ಮೆಟ್ಟಿಲುಗಳು. ಮತ್ತೊಂದೆಡೆ ಬಂಡೆಗಲ್ಲುಗಳ ನಡುವೆ ಬಾಗುತ್ತ ಮೆಟ್ಟಿಲು ಏರುತ್ತ ಸಂದುಗಳಲ್ಲಿ ತೂರಿ ಮೇಲೆ ಬರುವಂತೆ ಮೆಟ್ಟಿಲುಗಳು. ಅಲ್ಲಲ್ಲಿ ಬೆಟ್ಟದಲ್ಲಿ ಜಿನುಗುವ ನೀರಿನ ಝರಿಗಳು, ಸುತ್ತಲೂ ಹಸಿರುಟ್ಟ ನಿಸರ್ಗ, ಇವುಗಳನ್ನೆಲ್ಲ ನೋಡುತ್ತ ಸಾಗಿ ಬೆಟ್ಟ ಏರಿ ಪೂರ್ಣ ಮೇಲ್ತುದಿಗೆ ಬಂದರೆ ಸಾಕು ಮೆಟ್ಟಿಲು ಏರಿರುವ ಆಯಾಸಿಲ್ಲ ಪ್ರಕೃತಿ ಮಡಿಲನ್ನು ಕಂಡಾಗ ಮಾಯವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಮೆಟ್ಟಿಲುಗಳನ್ನೇರಲು ದಮ್ ಬೇಕು.  ಬೆಟ್ಟದ ಮೇಲೆ ಧ್ಯಾನಮಂದಿರ, ಪೂಜಾರಿಗಳ ವಾಸದ ಕೊಠಡಿ, ಒಂದೆಡೆ ದೇವಾಲಯ, ಅದರ ಮುಂದೆ ತುಳಸಿಕಟ್ಟೆ, ದೀಪಮಾಲಿಕಾಸ್ತಂಭ ಇತ್ಯಾದಿ ಕಾಣುತ್ತೇವೆ. ದೊಡ್ಡ ಬಂಡೆಗಲ್ಲೊಂದರ ಮೇಲೆ ನಿರ್ಮಿಸಿದ ದೇವಾಲಯ ಪ್ರದಕ್ಷಿಣಾಪಥವನ್ನು ಹೊಂದಿದ್ದು, ದೇವಾಲಯದ ಒಳಗೆ ಬಂಡೆಗಲ್ಲಿನಲ್ಲಿ ಉದ್ಭ ಆಂಜನೇಯ ಮೂರ್ತಿ ಇದೆ.

ಇಲ್ಲಿ ಕೆಂಪು ಮೂತಿಯ ಕೋತಿಗಳ ಕಾಟ ಹೇಳತೀರದು. ಎಷ್ಟೇ ಅಂದರೂ ಇದು ವಾನರ ರಾಜ್ಯವಲ್ಲವೇ? ದೇವಾಲಯದ ಸುತ್ತಲೂ ಬಂಡೆಗಲ್ಲುಗಳ ಆವರಣದಲ್ಲಿ ಎಲ್ಲಿ ನೋಡಿದರೂ ನಿಸರ್ಗವೇ! ಒಂದೆಡೆ ಆನೆಗೊಂದಿ, ಹಾಳು ಹಂಪೆಯ ಪರಿಸರ, ಮತ್ತೊಂದೆಡೆ ಕಿಷ್ಕಿಂಧಾ ರೆಸಾರ್ಟ್‌. ತುಂಗಭದ್ರಾ ನದಿಯಲ್ಲಿ ಮುಳುಗಿದ ಹಳೆಯ ಹಂಪೆಯ ದೇಗುಲಗಳು ಕಾಣುತ್ತವೆ. ಈ ಬೆಟ್ಟಕ್ಕೆ ಬೆಳಗಿನ ಇಲ್ಲವೇ ಸಂಜೆ ವೇಳೆ ಆಗಮಿಸಿದರೆ ಸೂರ್ಯೋದಯ ಮತ್ತು ಸೂರ್ಯಾಸ್ತದ ರಮಣೀಯ ದೃಶ್ಯಗಳನ್ನು ಕಾಣಬಹುದು.

ಆದರೆ ವಾಹನ ಸಂಚಾರ ಸುಲಭವಲ್ಲ. ಗಂಗಾವತಿಯಿಂದ ಬರುವುದಾದರೆ ಬೆಳಗಿನಿಂದಲೇ ವಾಹನಗಳು ಹುಲಗಿ ಗ್ರಾಮಕ್ಕೆ ಸಂಚರಿಸತೊಡಗುತ್ತವೆ. ಸಂಜೆ ವೇಳೆಯ ಸೊಬಗನ್ನು ಸವಿಯಲು ಮಾತ್ರ ಯಾವ ಕೊರತೆಯೂ ಇಲ್ಲ. ಸಾಧ್ಯವಾದಷ್ಟು ಸ್ವಂತ ವಾಹನಗಳ ಮೂಲಕ ಬಂದಲ್ಲಿ ಇಂಥ ಸ್ಥಳ ಸುಲಭವಾಗಿ ನೋಡಿ ಹೋಗಬಹುದು.

bettakke-mettilugalu

ಹಂಪೆಯನ್ನು ನೋಡಬಂದರೆ ಖಂಡಿತವಾಗಿಯೂ ಕಿಷ್ಕಿಂಧಾ, ಅಂಜನಾದ್ರಿ, ವಿರೂಪಾಪುರಗಡ್ಡೆ, ನವ ಬೃಂದಾವನ, ಆನೆಗೊಂದಿ ಸ್ಥಳಗಳನ್ನು ನೋಡದೇ ಹೋದಲ್ಲಿ ನೀವು ಏನನ್ನೋ ಕಳೆದುಕೊಂಡಂತೆ ಎಂಬುದನ್ನು ಮರೆಯದಿರಿ. ಈ ಸ್ಥಳಗಳು ಒಂದೇ ಮಾರ್ಗದಲ್ಲಿ ಸುಮಾರು 30 ಕಿ.ಮೀ. ಅಂತರದಲ್ಲಿವೆ. ಹೊಸಪೇಟೆ ಅಥವಾ ಗಂಗಾವತಿಯಲ್ಲಿ ಉಳಿದುಕೊಳ್ಳಲು ಸಾಕಷ್ಟು ವಸತಿ ಗೃಹಗಳಿವೆ. ಬೆಂಗಳೂರು ಮಾರ್ಗದಿಂದ ಬರುವವರು ಚಿತ್ರದುರ್ಗ ಮೂಲಕ ಹೊಸಪೇಟೆ ಅಥವಾ ಗಂಗಾವತಿ ತಲುಪಬಹುದು. ಹುಬ್ಬಳ್ಳಿ-ಬೆಳಗಾವಿಯಿಂದ ಬರುವವರು ಗದಗ ಮಾರ್ಗವಾಗಿ ಹೊಸಪೇಟೆ ಅಥವಾ ಗಂಗಾವತಿಗೆ ಬಂದಲ್ಲಿ, ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಸುಲಭವಾಗಿ ಸಂಚರಿಸಬಹುದು. ಬೆಂಗಳೂರು-ಚಿತ್ರದುರ್ಗ ಮೂಲಕ ಹೊಸಪೇಟೆ 310 ಕಿ.ಮೀ. ಹುಬ್ಬಳ್ಳಿಯಿಂದ ಹೊಸಪೇಟೆ 150 ಕಿ.ಮೀ. ಅಂತರದಲ್ಲಿದೆ.

ಹೊಸಪೇಟೆಯಿಂದ ಗಂಗಾವತಿ 50 ಕಿ.ಮೀ. ಹೊಸಪೇಟೆಯಿಂದ ಕಿಷ್ಕಿಂಧಾ 25 ಕಿ.ಮೀ. ಗಂಗಾವತಿಯಿಂದ 16 ಕಿ.ಮೀ. ಅಂತರದಲ್ಲಿವೆ. ರೈಲು ಮಾರ್ಗವಾಗಿ ಬರುವವರು ಮುನಿರಾಬಾದ್‌ (ಹುಲಗಿ) ಜಂಕ್ಷನ್‌ನಲ್ಲಿ ಇಳಿದುಕೊಂಡರೆ ಅನುಕೂಲ. ಒಟ್ಟಾರೆ ಇಲ್ಲಿನ ಎಲ್ಲ ಸ್ಥಳಗಳನ್ನು ನೋಡಬೇಕೆಂದರೆ ಕನಿಷ್ಠ ನಾಲ್ಕು ದಿನಗಳ ವಸತಿ ವ್ಯವಸ್ಥೆಯೊಂದಿಗೆ ಬಂದರೆ ಒಳ್ಳೆಯದು.

ನೀವು ವಸತಿ ಇರುವುದು ಆದರೆ ಗಂಗಾವತಿಯಲ್ಲಿಯೋ ಹೊಸಪೇಟೆಯಲ್ಲಿಯೋ ಎಂಬುದನ್ನು ಮೊದಲು ನಿರ್ಧರಿಸಿ ಪ್ರವಾಸ ಹೊರಡಲು ಮಾರ್ಗಸೂಚಿ ಹಾಕಿಕೊಳ್ಳಿ. ಹೊಸಪೇಟೆಯಾದಲ್ಲಿ ಹುಲಗಿ, ನಂತರ ಹಿಟ್ನಾಳ ಕ್ರಾಸ್‌, ಅಗಳಕೇರಾ, ಶಿವಪುರ, ಹೊಸಬಂಡಿ ಹರ್ಲಾಪುರ, ಬಸಾಪುರ, ತಿರುಮಾಪುರ, ಸನಾಪುರ, ಹನುಮನಹಳ್ಳಿ, ವಿರೂಪಾಪುರ ಮೂಲಕ ಕಿಷ್ಕಿಂಧಾ ನಂತರ ಹತ್ತಿರದಲ್ಲಿನ ಅಂಜನಾದ್ರಿ ಪರ್ವತ.

ನಂತರ ಆನೆಗೊಂದಿ ನೋಡಲು ಅನುಕೂಲ. ಗಂಗಾವತಿ ಮೂಲಕ ಬಂದರೆ ಮೊದಲು ಆನೆಗೊಂದಿ ನಂತರ ಅಂಜನಾದ್ರಿ ಪರ್ವತ ಆಮೇಲೆ ವಿರೂಪಾಪುರ ಗಡ್ಡೆ, ಕಿಷ್ಕಿಂಧಾ ರೆಸಾರ್ಟ್‌ ನೋಡಿ ಹೊಸಪೇಟೆಯ ಅಣೆಕಟ್ಟು ವೀಕ್ಷಿಸಬಹುದು.

– ವೈ.ಬಿ. ಕಡಕೋಳ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ