ವಿಶಾಖಪಟ್ಟಣಂನ ಕೊವೆವ್ ಮೂಜುತ್ತಾ ಸರಸ್ವತಿ ಅಂತಹ ವ್ಯಕ್ತಿಗಳಲ್ಲಿ ಒಬ್ಬರು. ಬಡತನದಲ್ಲಿ ಹುಟ್ಟಿದ ಸರಸ್ವತಿ ಆರ್ಥಿಕ ಸಂಕಷ್ಟ ಹಾಗೂ ಕಷ್ಟಕೋಟಲೆಗಳನ್ನು ಎಷ್ಟು ಹತ್ತಿರದಿಂದ ಕಂಡಿದ್ದಾರೆಂದರೆ, ಪ್ರತಿಯೊಬ್ಬ ಬಡವರಲ್ಲೂ ಅವರಿಗೆ ತಮ್ಮ ದುಃಖ ಕಂಡುಬರತೊಡಗಿತು.
15 ವರ್ಷಗಳ ಹಿಂದೆ ಸ್ವಾರ್ಥ ಬದಿಗೊತ್ತಿ ಬಡರೈತರಿಗೆ ಹಾಗೂ ಮಹಿಳೆಯರಿಗೆ ಸಹಾಯ ಮಾಡುವುದಾಗಿ ಪಣತೊಟ್ಟಿದ್ದ ಸರಸ್ವತಿ ಈಗಲೂ ಅದನ್ನು ನಿಭಾಯಿಸುತ್ತಿದ್ದಾರೆ.
ಆರಂಭದ ಸಂಘರ್ಷ
ತಮ್ಮ ಕುರಿತಂತೆ ಸರಸ್ವತಿ ಹೀಗೆ ಹೇಳುತ್ತಾರೆ, ``ನನ್ನ ಬಾಲ್ಯ ಬಡತನದಲ್ಲಿಯೇ ಕಳೆಯಿತು. ನಾನು ನನ್ನ ಕುಟುಂಬದವರೊಂದಿಗೆ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿದ್ದೆ. ತಂದೆ ಕ್ಷೌರಿಕನ ಕೆಲಸ ಮಾಡುತ್ತಿದ್ದರು. 2 ಹೊತ್ತು ಸರಿಯಾಗಿ ಊಟ ಮಾಡುವಷ್ಟು ಆದಾಯ ನಮ್ಮ ತಂದೆಗಿರಲಿಲ್ಲ. ನಾನು ಓದಿದ್ದು ಸಂಘಸಂಸ್ಥೆಗಳಿಂದ ದೊರೆತ ಚೈಲ್ಡ್ ಫಂಡ್‌ಗಳ ಮುಖಾಂತರ.''
ಪದವಿ ಪಡೆದ ಬಳಿಕ ತಮ್ಮ ತಂದೆಯ ನೆರವಿಗಾಗಿ ಅವರು ಟೈಪಿಸ್ಟ್ ಕೆಲಸ ಮಾಡಲಾರಂಭಿಸಿದರು. ಆದರೆ ಅವರಿಗೆ ಆ ಕೆಲಸದಲ್ಲಿ ಸ್ವಲ್ಪ ಸಂತೃಪ್ತಿ ದೊರಕುತ್ತಿರಲಿಲ್ಲ. ಜನರಿಗೆ ನೆರವಾಗುವಂತಹ ಯಾವುದಾದರೂ ಕೆಲಸವನ್ನು ಅವರು ಮಾಡಲು ಇಚ್ಛಿಸುತ್ತಿದ್ದರು. ಹೀಗಾಗಿ ಅವರು ಒಂದು ಎನ್‌ಜಿಓ ಸೇರಿದರು. ಎನ್‌ಜಿಓ ಕೆಲಸಕ್ಕಾಗಿ ಅವರು ಹಳ್ಳಿಹಳ್ಳಿಗೆ ಹೋಗಬೇಕಾಗಿ ಬರುತ್ತಿತ್ತು. ಬಡ ರೈತರಿಗೆ, ಮಹಿಳೆಯರಿಗೆ ಸ್ವಚ್ಛತೆ, ಲೈಂಗಿಕ ಸಮಾನತೆ ಮತ್ತು ಮತದಾನದ ಕುರಿತಂತೆ ತಿಳಿವಳಿಕೆ ನೀಡಬೇಕಾಗುತ್ತಿತ್ತು.
`ಸಬಾ' ಸ್ಥಾಪನೆ
ತಾವು ಸ್ವತಂತ್ರವಾಗಿಯೇ ಬಡವರಿಗೆ ನೆರವಾಗಬಹುದೆಂದು ಸರಸ್ವತಿಗೆ ಅನಿಸತೊಡಗಿತು. ಹೀಗಾಗಿ 2003ರಲ್ಲಿ ಅವರು `ಸಬಾ' ಸಂಸ್ಥೆಯೊಂದನ್ನು ಹುಟ್ಟುಹಾಕಿದರು.`ಇದೇ ಹೆಸರನ್ನು ಏಕೆ ಇಟ್ಟಿರಿ?' ಎಂಬ ಪ್ರಶ್ನೆಗೆ ಅವರು, ``ನಾನು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬೇಕಿತ್ತು. ಹೀಗಾಗಿ ನಾನು ನನ್ನ ಸಂಸ್ಥೆಗೆ ಈ ಹೆಸರನ್ನು ಆಯ್ದುಕೊಂಡೆ. ಮಹಿಳೆಯರಿಗೆ ಶಿಕ್ಷಣ ದೊರೆಯಬೇಕು. ಅವರು ಸ್ವತಃ ಗಳಿಸಲು ಸಮರ್ಥರಾಗಬೇಕು ಎನ್ನುವುದೇ ನನ್ನ ಮುಖ್ಯ ಗುರಿಯಾಗಿತ್ತು. ನಾನು ಊರೂರು ಅಲೆದಾಡಿ ಹಲವು ವರ್ಕ್ ಶಾಪ್‌ಗಳನ್ನು ಆಯೋಜಿಸಿದೆ,'' ಎಂದು ಹೇಳುತ್ತಾರೆ.
ಸರಸ್ವತಿಯವರ ಉದ್ದೇಶ ಮಹಿಳೆಯರನ್ನಷ್ಟೇ ಸ್ವಾವಲಂಬಿಯಾಗಿಸುವುದಾಗಿರಲಿಲ್ಲ. ಪುರುಷರಲ್ಲಿ ಬದಲಾವಣೆ ತರುವುದು ಕೂಡ ಅವರ ಮುಖ್ಯ ಗುರಿಯಾಗಿತ್ತು. ಇದಕ್ಕಾಗಿ ಅವರು ಪುರುಷರನ್ನು ತಮ್ಮ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರಲ್ಲದೆ, ಅವರ ಜೀವನಶೈಲಿ ಉತ್ತಮಗೊಳ್ಳುವಂತೆ ಪ್ರಯತ್ನ ಮಾಡಿದರು.
ಅವರ ಸಲಹೆ ಎಷ್ಟೊಂದು ಮಹತ್ವ ಪಡೆದುಕೊಂಡಿತೆಂದರೆ, ಇಂದು 30 ಹಳ್ಳಿಗಳ ರೈತರ ನೂರಾರು ಎಕರೆ ಜಮೀನು ಹಸಿರು ಹಸಿರಾಗಿ ಗೋಚರಿಸುತ್ತಿದೆ. ಸರಸ್ವತಿ ಗ್ರಾಮಸ್ಥರಿಗೆ ಮತದಾನದ ಮಹತ್ವವನ್ನು ಬಿಂಬಿಸಿದರು ಹಾಗೂ ಮತದಾನ ಮಾಡಲು ಹೆಚ್ಚಿನ ಪ್ರೋತ್ಸಾಹ ನೀಡಿದರು.
ಸಮಾಜ ಸೇವೆಗಾಗಿ ಅವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಆದರೆ ಅದರ ಶ್ರೇಯಸ್ಸನ್ನು ಅವರು ತಮ್ಮ ಕುಟುಂಬದವರಿಗೆ ನೀಡುತ್ತಾರೆ. ``ನನ್ನ ಪತಿ ಹಾಗೂ ನನ್ನ 3 ವರ್ಷದ ಮಗು ನನಗೆ ಸಮಾಜ ಸೇವೆಗೆ ಪ್ರೋತ್ಸಾಹ ನೀಡಿದರು,'' ಎಂದು ಅವರು ಹೇಳುತ್ತಾರೆ.
ಕುಟುಂಬದ ಇತರೆ ಸದಸ್ಯರು ಕೂಡ ಅವರ ಈ ಕೆಲಸವನ್ನು ಪ್ರಶಂಸಿಸುತ್ತಾರೆ ಹಾಗೂ ಮುಂದೆ ಸಾಗಲು ಬೆಂಬಲಿಸುತ್ತಾರೆ. ಅವರ ಜೊತೆಗೆ ಸದಾ ಇರುತ್ತಾರೆ.