ಅಂಶುಮಾನ್ ದತ್ತಾಜಿರಾವ್ ಗಾಯಕ್ವಾಡ್ ಭಾರತ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದಲ್ಲದೇ, ಆಟದಿಂದ ನಿವೃತ್ತರಾದ ನಂತರವೂ ಕ್ರಿಕೆಟ್ ನೊಂದಿಗೆ ತರಭೇತುದಾರರಾಗಿ, ಆಯ್ಕೆದಾರರಾಗಿ ಮತ್ತು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಹೆಮ್ಮೆಯ ಆಟಗಾರತಾಗಿದ್ದವರು. ಕಳೆದ ಒಂದು ವರ್ಷಗಳಿಂದ ಕ್ಯಾನ್ಸರ್ ಮಹಾ ಮಾರಿಗೆ ತುತ್ತಾಗಿ, ಲಂಡನ್ನಿನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, 1983ರ ವಿಶ್ವಕಪ್ ಗೆದ್ದ ಕಪಿಲ್ ದೇವ್ ನಾಯಕತ್ವದ ಬಹುತೇಕ ಆಟಗಾರರು ಗಾಯಕ್ವಾಡ್ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹುರಿದುಂಬಿಸಿದ್ದಲ್ಲದೇ, ಅವರ ಚಿಕಿತ್ಸೆಗೆ ತಮ್ಮ ಕೈಯಲ್ಲಾದ ಮಟ್ಟಿಗೆ ಸಹಾಯ ಮಾಡಿದ್ದಲ್ಲದೇ, ಬಿಸಿಸಿಐ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಲು ಮನವಿ ಮಾಡಿ, ಸುಮಾರು ಒಂದು ಕೋಟಿ ರೂಪಾಯಿಗಳ ಸಹಾಯ ಹಸ್ತವನ್ನು ನೀಡಿದರೂ ಚಿಕಿತ್ಸೆಗೆ ಅವರ ದೇಹ ಸ್ಪಂದಿಸದೇ, ಬುಧವಾರ, 31 ಜುಲೈ 2024 ರಂದು ನಿಧನರಾಗಿರುವುದು ನಿಜಕ್ಕೂ ದುಃಖಕರವಾದ ವಿಷಯವಾಗಿದೆ.

23 ಸೆಪ್ಟೆಂಬರ್ 1952 ರಂದು ಮುಂಬೈನಲ್ಲಿ ಜನಿಸಿದ ಅಂಶುಮಾನ್ ಗಾಯಕ್ವಾಡ್ ಅವರ ಸಂಪೂರ್ಣ ಹೆಸರು ಅಂಶುಮಾನ್ ದತ್ತಾಜಿರಾವ್ ಗಾಯಕ್ವಾಡ್ ಅಗಿದ್ದು ಕುತೂಹಲಕಾರಿ ಆದ ವಿಷಯವೇನೆಂದರೆ ಅವರ ತಂದೆಯವರಾದ ಶ್ರೀ ದತ್ತಾಜಿರಾವ್ ಗಾಯಕ್ವಾಡ್ ಅವರೂ ಸಹಾ ಭಾರತದ ಪರವಾಗಿ 1952 ಮತ್ತು 1961 ರ ನಡುವೆ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದರಿಂದ ಸಹಜವಾಗಿ ಅಂಶುಮಾನ್ ಸಹಾ ಬಾಲ್ಯದಿಂದಲೇ ಕ್ರಿಕೆಟ್ ಆಟದ ಬಗ್ಗೆ ಒಲವನ್ನು ತೋರಿಸಿದ್ದಲ್ಲದೇ, ತಮ್ಮ ಕ್ರಿಕೆಟ್ ಜೀವನವನ್ನು ಬರೋಡ ತಂಡ ಮೂಲಕ ಆರಂಭಿಸಿದರು. ಗಾಯಕ್ವಾಡ್ ಅವರು ಆರಂಭಿಕ ಆಟಗಾರರಾಗಿಯೇ ಪ್ರಖ್ಯಾತವಾಗಿದ್ದರೂ, ಬಹುತೇಕರಿಗೆ ತಿಳಿಯದೇ ಇರುವ ವಿಷಯವೇನೆಂದರೆ, ಮೂಲತಃ ಅವರು ಬಲಗೈ ಆಫ್ ಸ್ಪಿನ್ನರ್ ಆಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಆರಂಭದಲ್ಲಿ ಕಡೆಯ ಕ್ರಮಾಂಕದ ಆಟಗಾರನಾಗಿ ಆಡಲು ಆರಂಭಿಸಿ ನಂತರದ ತಮ್ಮ ಜಿಗುಟುತನದ ಮತ್ತು ಜವಾಭ್ಧಾರಿಯುತ ತಾಳ್ಮೆಯ ಬ್ಯಾಟಿಂಗ್ ನಿಂದಾಗಿ ಭಾರತ ತಂಡ ಕಂಡ ಅತ್ಯಂತ ಶ್ರೇಷ್ಠ ಆರಂಭಿಕ ಆಟಗಾರರಾಗಿದ್ದ ಸುನೀಲ್ ಗವಾಸ್ಕರ್ ಅವರ ಜೊತೆ ಇನ್ನಿಂಗ್ಸ್ ಆರಂಭಿಸಿದ ಖ್ಯಾತಿ ಅಂಶುಮಾನ್ ಗಾಯಕ್ವಾಡ್ ಅವರ ಹೆಗ್ಗಳಿಕೆಯಾಗಿದೆ.

27 ಡಿಸೆಂಬರ್ 1974 ರಂದು ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತ್ತಾದಲ್ಲಿ ಭಾರತದ ಪರ ಟೆಸ್ಟ್ ಕ್ರಿಕೆಟ್ ಆಡಲು ಆರಂಭಿಸಿದ ಗಾಯಕ್ವಾಡ್, 31 ಡಿಸೆಂಬರ್ 1984 ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಕ್ರಿಕೆಟ್ ಆಡುವುದರ ನಡುವೆ ಭಾರತದ ಪರ ಬಲಗೈ ಆಟಗಾರಾಗಿ 40 ಟೆಸ್ಟ್‌ಗಳಿಂದ 1985 ರನ್ ಗಳಿಸಿದ್ದರು. ಅದರಲ್ಲಿ 70 ಇನ್ನಿಂಗ್ಸ್‌ಗಳಲ್ಲಿ 30.07 ಸರಾಸರಿಯಲ್ಲಿ1 ದ್ವಿಶತಕ, 2 ಶತಕವೂ ಸೇರಿದಂತೆ 10 ಅರ್ಧ ಶತಕಗಳಿಸಿದ್ದರು. ಬಹಳ ಸುಧೀರ್ಘ ಕಾಲ ತಾಳ್ಮೆಯಿಂದ ಆಟವಾಡುವಂತಹ ಶಕ್ತಿಯನ್ನು ಹೊಂದಿದ್ದ ಕಾರಣ ಅಂದಿನ ಕಾಲದಲ್ಲಿ ಅವರಿಗೆ ದಿ ಗ್ರೇಟ್ ವಾಲ್ ಎಂಬ ಅಡ್ಡ ಹೆಸರನ್ನೂ ಇಡಲಾಗಿತ್ತು. ಗಾಯಕ್ವಾಡ್ ಅವರು ಭಾರತ ಟೆಸ್ಟ್ ಕ್ರಿಕೆಟ್ಟಿನಲ್ಲಿ ಆಟಗಾರರಾಗಿ ಎರಡು ಸಂಧರ್ಭದಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಗಳಿಸಿದ್ದಾರೆ ಎಂದರೂ ತಪ್ಪಾಗದು.





