ಮೊಬೈಲ್ ಸದ್ದು ಮಾಡಿತು. ದೀಪಾ ಸ್ಕ್ರೀನ್ ಮೇಲೆ ತನ್ನ ಅಕ್ಕನ ಫೋಟೋ ನೋಡಿ ಏನೋ ಮಹತ್ವದ ವಿಷಯ ಇರಬೇಕು ಎಂದುಕೊಂಡಳು. ಅವಳು ಎಂದೂ ನಿರರ್ಥಕ ವಿಷಯಗಳಿಗೆ ಕಾಲ್ ಮಾಡುತ್ತಿರಲಿಲ್ಲ.
``ಕೋಲಾರದಲ್ಲಿದ್ದ ಪಿತ್ರಾರ್ಜಿತ ಆಸ್ತಿಯನ್ನು ಇಬ್ಬರೂ ಅಣ್ಣಂದಿರು ಸೇರಿ, ನಮ್ಮಿಬ್ಬರ ಸಹಿ ತಾವೇ ಮಾಡಿ, ಆಸ್ತಿಯನ್ನು ಮಾರಿಬಿಟ್ಟಿದ್ದಾರಂತೆ. ನನಗೆ ತುಂಬಾ ಬೇಕಾದ ಅಲ್ಲಿನ ವ್ಯಕ್ತಿಯೊಬ್ಬರು ಫೋನ್ ಮಾಡಿ ವಿಷಯ ತಿಳಿಸಿದರು,'' ಎಂದು ಹೇಳಿದಳು.
ಅಕ್ಕ ಹೇಳಿದ ವಿಷಯ ಕೇಳಿ ದೀಪಾಳಿಗೆ ಆಘಾತವೇ ಆಯಿತು. ತಂದೆಯ ಚಿತೆಯ ಬೆಂಕಿ ಆರುವ ಮುನ್ನವೇ ಈ ನಿರ್ಧಾರ ಕೈಗೊಂಡಿದ್ದ ಅಣ್ಣ, ಬಹುಶಃ ತಾವೆಲ್ಲರೂ ಹೋಗುವುದನ್ನೇ ಕಾಯುತ್ತಿದ್ದ ಅನಿಸುತ್ತೆ. ಒಂದುವೇಳೆ ಅಪ್ಪನೇ ಮಾರುವ ನಿರ್ಧಾರ ಕೈಗೊಂಡಿದ್ದರೆ ತಮ್ಮೆಲ್ಲರಿಗೂ ಸಮನಾಗಿ ಆಸ್ತಿ ಹಂಚಿಕೆ ಮಾಡುತ್ತಿದ್ದರು. ಆದರೆ ಅವರು ಅಕಾಲಿಕವಾಗಿ ಅಪಘಾತದಲ್ಲಿ ತೀರಿಹೋದರು. ಅಪ್ಪ ಅದೆಷ್ಟೋ ಸಲ ದೀಪಾಗೆ ಹೇಳಿದ್ದರು. ಕೇವಲ ಅವನೊಬ್ಬ ಮಾತ್ರ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾನೆ. ಹೀಗಾಗಿ ಅವನಿಗೆ ಆ ಆಸ್ತಿಯಿಂದ ಸಾಕಷ್ಟು ಅನುಕೂಲ ಆಗುತ್ತೆ. ಆದರೆ ಈ ಘಟನೆ ಇದೊಂದೇ ಕುಟುಂಬಕ್ಕೆ ಸಂಬಂಧಿಸಿದ್ದಲ್ಲ. ಪ್ರತಿ ಮನೆಗೂ ಸಂಬಂಧಿಸಿದ್ದಾಗಿದೆ.
ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು
ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಇರುತ್ತಿದ್ದವು. ಹೆಚ್ಚಿನ ಪುರುಷರು ತಮ್ಮ ತಂದೆಯ ಉದ್ಯೋಗ ವೃತ್ತಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದರು. ಹೀಗಾಗಿ ಅಕ್ಕ ತಂಗಿಯರ ವಿವಾಹದಲ್ಲಿ ತಂದೆಯ ಆಸ್ತಿಯಲ್ಲಿ ಬಂದ ಪಾಲನ್ನು ಅವರಿಗೂ ವರದಕ್ಷಿಣೆ ರೂಪದಲ್ಲಿ ಕೊಡುತ್ತಿದ್ದರು. ಮದುವೆಯ ಬಳಿಕ ಅವರ ಪ್ರತಿಯೊಂದು ಕಷ್ಟಸುಖದಲ್ಲಿ ಭಾಗಿಯಾಗುತ್ತಿದ್ದರು ಹಾಗೂ ತಮ್ಮ ಕೈಲಾದ ಮಟ್ಟಿಗೆ ಆರ್ಥಿಕ ಸಹಾಯ ಮಾಡುತ್ತಿದ್ದರು. ಅಷ್ಟೇ ಏಕೆ, ಯಾವುದೇ ಮಹಿಳೆ ಗಂಡನಿಂದ ಬೇರೆಯಾದರೆ ಅಥವಾ ವಿಧವೆಯಾದರೆ ಆಕೆಗೆ ಮತ್ತು ಆಕೆಯ ಮಕ್ಕಳಿಗೆ ಆಶ್ರಯ ಕೊಡುತ್ತಿದ್ದರು. ಇದನ್ನು ಅವರು ತಮ್ಮ ನೈತಿಕ ಕರ್ತವ್ಯವೆಂದು ಭಾವಿಸುತ್ತಿದ್ದರು. ಅವರು ತಮ್ಮ ತಾಯಿ ತಂದೆಯರ ಬಗೆಗೂ ಅಷ್ಟೇ ಜವಾಬ್ದಾರಿ ನಿಭಾಯಿಸುತ್ತಿದ್ದರು. ಹೆಣ್ಣುಮಕ್ಕಳು ಮದುವೆಯಾದ ಬಳಿಕ ತಮ್ಮ ಅತ್ತೆಮನೆಗೆ ಸಮರ್ಪಿತರಾಗುತ್ತಿದ್ದರು. ಆದರೆ ಕಾಲಕ್ರಮೇಣ ಜನರ ಯೋಚನೆಯಲ್ಲಿ ಸಾಕಷ್ಟು ಬದಲಾವಣೆಯಾಯಿತು. ಈಗ ಯುವಕರು ತಮ್ಮ ಕುಟುಂಬ ಉದ್ಯೋಗ ತೊರೆದು ಬೇರೆ ಬೇರೆ ನಗರಗಳಲ್ಲಿ ನೌಕರಿ ಮಾಡತೊಡಗಿದರು. ಒಟ್ಟು ಕುಟುಂಬಗಳು ಚಿಕ್ಕ ಚಿಕ್ಕ ಕುಟುಂಬಗಳಾಗಿ ಪರಿವರ್ತನೆಗೊಂಡವು. ಇದರ ಪರಿಣಾಮ ಎಂಬಂತೆ ಕುಟುಂಬದ ಎಲ್ಲರೂ ಜೊತೆ ಜೊತೆಗಿಲ್ಲ. ಹಾಗಾಗಿ ಅವರವರ ಖರ್ಚು ವೆಚ್ಚಗಳು ಹೆಚ್ಚಾದವು.
ಮಹಿಳೆಯರು ಸ್ವಾವಲಂಬಿಯಾಗುತ್ತಿದ್ದಂತೆ ಪುರುಷರು ಅವರ ಬಗ್ಗೆ ಉದಾಸೀನ ಧೋರಣೆ ತಳೆಯಲಾರಂಭಿಸಿದರು. ಹೆಣ್ಣುಮಕ್ಕಳು ಕೂಡ ತಮ್ಮ ಸೋದರರ ಜೊತೆ ದುಡಿಯುತ್ತ ತಮ್ಮ ತಾಯಿ ತಂದೆಯರ ಜವಾಬ್ದಾರಿಯಿಂದ ವಿಮುಖರಾಗಿಲ್ಲ. ಈಗ ವರದಕ್ಷಿಣೆ ಹಾವಳಿ ಕೂಡ ಅಷ್ಟಾಗಿ ಇಲ್ಲ. ಮಹಿಳೆಯರು ಕೂಡ ಸ್ವಾವಲಂಬಿಗಳಾಗಿರುವುದರಿಂದ ಸ್ವಾಭಿಮಾನದ ಪ್ರತೀಕ ಎಂಬಂತೆ ವರದಕ್ಷಿಣೆ ಕೊಡಬಾರದು ಎಂಬ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಇದೆಲ್ಲವನ್ನೂ ಗಮನಿಸಿ ಮಹಿಳೆಯರಿಗೂ ಕೂಡ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುವುದು ಅತ್ಯವಶ್ಯಕ ಎನಿಸುತ್ತದೆ.