ಶಿವಾಂಗಿ ವಯಸ್ಸಿನಲ್ಲಿ ಚಿಕ್ಕವರು. ಆದರೆ ಆಕೆ ಉತ್ಸಾಹ ಹಿಮಾಲಯದಷ್ಟೇ ಉನ್ನತವಾಗಿತ್ತು!
17 ವರ್ಷದ ಶಿವಾಂಗಿ ಮೇ 2018ರಲ್ಲಿ ಹಿಮಾಲಯ ಪರ್ವತ ಏರಿ ಧ್ವಜದೊಂದಿಗೆ ಖುಷಿಯ ನಗೆ ಬೀರಿದರು. ಹರಿಯಾಣದ ಈ ಯುವತಿ ನೇಪಾಳಿ ಭಾಗದಿಂದ ಹಿಮಾಲಯದ ತುದಿ ತಲುಪಿದ ಅತ್ಯಂತ ಕಿರಿಯ ವಯಸ್ಸಿನ ಪರ್ವತಾರೋಹಿ ಎನಿಸಿದರು. ಪ್ರಧಾನಿ ನರೇಂದ್ರ ಮೋದಿ ತಮ್ಮ `ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಶಿವಾಂಗಿಯ ಸಾಹಸವನ್ನು ಹೊಗಳಿದರು.
ಶಿವಾಂಗಿಯ ಸಾಹಸ ಇಷ್ಟಕ್ಕೆ ಮುಗಿಯುವುದಿಲ್ಲ. ಜುಲೈ 2018ರಲ್ಲಿ ಆಕೆ ದಕ್ಷಿಣ ಆಫ್ರಿಕಾದ ಅತಿ ಎತ್ತರದ ಶಿಖರ ಕಿಲಿಮಂಜರೊ (5,895 ಮೀ.) ಪರ್ವತವನ್ನು ಕೇವಲ 3 ದಿನಗಳಲ್ಲಿಯೇ ಏರಿದರು. ಆ ಬಳಿಕ ಸೆಪ್ಟೆಂಬರ್ 2018ರಲ್ಲಿ ಯೂರೋಪ್ ನ ಮೌಂಟ್ ಅಬ್ರೂಸ್ (5,642 ಮೀ.) ಏರಿದರು.
ದೆಹಲಿಯಿಂದ 170 ಕಿ.ಮೀ. ದೂರದಲ್ಲಿರುವ ಹರಿಯಾಣದ ಹಿಸ್ಸಾರ್ ಪಟ್ಟಣದಲ್ಲಿ ಶಿವಾಂಗಿಯ ಕುಟುಂಬ ವಾಸಿಸುತ್ತದೆ. ಅದಕ್ಕೂ ಮುಂಚೆ ಆ ಕುಟುಂಬ ಝಾನ್ಸಿಯಲ್ಲಿ ವಾಸಿಸುತ್ತಿತ್ತು. ಆದರೆ ಕ್ರೀಡಾಪಟುಗಳಿಗೆ ಅಲ್ಲಿ ಹೆಚ್ಚಿನ ಸೌಕರ್ಯಗಳು ಇಲ್ಲದ ಕಾರಣ ಅವರ ಕುಟುಂಬ ಹಿಸ್ಸಾರ್ ನಗರಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅನೇಕ ಯುವತಿಯರು ಕ್ರೀಡೆಯಲ್ಲಿ ಕೆರಿಯರ್ ರೂಪಿಸಿಕೊಳ್ಳುತ್ತಾರೆ. ಶಿವಾಂಗಿ ತರಬೇತಿ ಪಡೆಯುವ ಕೇಂದ್ರದಲ್ಲಿ 50 ಮಕ್ಕಳಿದ್ದು, ಅವರಲ್ಲಿ 35 ಹುಡುಗಿಯರಿದ್ದಾರೆ. ಈ ಪಟ್ಟಿಯಲ್ಲಿ 4 ಜನ ಹುಡುಗಿಯರು ರಾಷ್ಟ್ರಮಟ್ಟದ ಕ್ರೀಡಾಪಟುಗಳು.
ಹರಿಯಾಣ ಅಗ್ರಿಕಲ್ಚರ್ ವಿವಿಯ ಗಿರಿ ಸೆಂಟರ್ ನಲ್ಲಿ ಅಥ್ಲೀಟ್ ಗಳನ್ನು ಸಜ್ಜುಗೊಳಿಸಲಾಗುತ್ತದೆ. ಅಲ್ಲಿ ಸಿಂಥೆಟಿಕ್ ಕ್ರೀಡಾಂಗಣವಿದ್ದು, ಅದು ಓಟಗಾರರಿಗೆ ತುಂಬಾ ಅನುಕೂಲಕರ.
ಹಿಸ್ಸಾರ್ ನಲ್ಲಿ ಪರ್ವತಗಳಾಗಲಿ, ಹಿಮಚ್ಛಾದಿತ ಗಿರಿಶಿಖರಗಳಾಗಲಿ ಇಲ್ಲ. ಆದರೆ ಯಾರಿಗೆ ಕನಸು ಕಾಣುವ ಹವ್ಯಾಸ ಇರುತ್ತದೊ, ಅವರು ಅದನ್ನು ಈಡೇರಿಸಿಕೊಳ್ಳಲು ದಾರಿ ಹಾಗೂ ಉತ್ತಮ ವಾತಾವರಣವನ್ನು ತಾವೇ ಸ್ವತಃ ಸೃಷ್ಟಿಸಿಕೊಳ್ಳುತ್ತಾರೆ. ಕೇವಲ 4 ತಿಂಗಳಲ್ಲಿ 3 ಪರ್ವತಗಳನ್ನು ಏರಿದರು. 18 ವರ್ಷ ಆಗುವುದರೊಳಗೆ ಆಕೆ 7 ಪರ್ವತಗಳನ್ನು ಏರಬೇಕೆಂಬ ಆಕಾಂಕ್ಷೆ ಹೊಂದಿದ್ದಾರೆ.
ಶಿವಾಂಗಿಯ ಕುಟುಂಬದ ಎಲ್ಲರೂ ಆಕೆಗೆ ಪ್ರೋತ್ಸಾಹ ನೀಡುತ್ತಾರೆ. ಅಮ್ಮ ಆರತಿ ಪಾಠಕ್ ಅವರಂತೂ ತರಬೇತಿ ಅವಧಿ ಸೇರಿದಂತೆ ಎಲ್ಲೆಲ್ಲೂ ಜೊತೆ ಕೊಡುತ್ತಾರೆ.
``ಹಿಮಾಲಯ ಪರ್ವತ ಏರುವ ಅಭಿಲಾಷೆ ಹೇಗೆ ಮೂಡಿತು?'' ಎಂಬ ಪ್ರಶ್ನೆಗೆ ಅವರು ನಗುತ್ತಲೇ ಹೀಗೆ ಹೇಳುತ್ತಾರೆ, ``ನನಗೆ ಬಾಲ್ಯದಿಂದಲೇ ಏನನ್ನಾದರೂ ಸಾಧಿಸಬೇಕೆಂಬ ಅಭಿಲಾಷೆ ಇತ್ತು. ಅದೊಂದು ದಿನ ಗೂಗಲ್ ನಲ್ಲಿ ನನ್ನ ಹೆಸರು ಟೈಪ್ ಮಾಡಿ ಸರ್ಚ್ ಗೆ ಹಾಕಿದೆ. ಅದಕ್ಕೆ ಪ್ರತಿಯಾಗಿ ಏನೂ ದೊರಕಲಿಲ್ಲ. ಆಗ ನನ್ನ ಅಣ್ಣ ಅದಕ್ಕಾಗಿ ಏನನ್ನಾದರೂ ಸಾಧಿಸಿ ತೋರಿಸಬೇಕು. ಆಗಲೇ ನೀನು ಯಾರು, ನಿನ್ನ ಸಾಧನೆ ಇಂಥಿಂಥದು ಎಂದು ಉಲ್ಲೇಖ ದೊರೆಯುತ್ತದೆ,'' ಎಂದರು.
``ಕೆಲವರು ಪರ್ವತ ಏರುತ್ತಾರೆ. ಮತ್ತೆ ಕೆಲವರು ಅಪರೂಪದ ಸಾಧನೆ ಮಾಡುತ್ತಾರೆ. ಅಂಥವರು ಬಹುಬೇಗ ಗುರುತು ಸಿಗುತ್ತಾರೆ ಎಂದು ಹೇಳಿದ. ಆಗಲೇ ನನಗೆ ಪರ್ವತ ಹತ್ತುವ ಆಸಕ್ತಿ ಮೂಡಿತು. ಅದೊಂದು ದಿನ ನಾನು ಒಂದು ಸೆಮಿನಾರ್ ಅಟೆಂಡ್ ಮಾಡಿದೆ. ಅಲ್ಲಿ ಅರುಣಿಮಾ ಸಿನ್ಹಾರವರ ಸಾಹಸ ಕುರಿತ ವಿಡಿಯೋ ಒಂದನ್ನು ತೋರಿಸಲಾಗುತ್ತಿತ್ತು. 22 ನಿಮಿಷಗಳ ಆ ವಿಡಿಯೋ ನೋಡಿ ನಾನು ಮೌಂಟ್ ಎವರೆಸ್ಟ್ ಹತ್ತಲೇಬೇಕು ಎಂದು ಗಟ್ಟಿ ನಿರ್ಧಾರ ಮಾಡಿದೆ. ಆಗ ನಾನು 11ನೇ ತರಗತಿಯಲ್ಲಿ ಓದುತ್ತಿದ್ದೆ.