ಧರ್ಮದ ಗ್ರಾಹಕರು ಅಂದರೆ ಭಕ್ತರು ದೇವಸ್ಥಾನಗಳಿಗೆ ಬರದೇ ಇದ್ದರೆ ಏನಾಯ್ತು? ಹೈಟೆಕ್ ಪೂಜಾರಿಗಳು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಆನ್ ಲೈನ್ ಪೂಜೆಯ ನೆಪದಲ್ಲಿ ಗ್ರಾಹಕರ ಜೇಬಿಗೆ ಕನ್ನ ಹಾಕುತ್ತಿದ್ದಾರೆ.
ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತ ಹಿನ್ನಡೆ ಸಾಧಿಸುತ್ತಿದೆ. ಆದರೆ ಪೂಜಾರಿ ಪುರೋಹಿತರು ಮಾತ್ರ ಧರ್ಮದ ಹೆಸರಿನಲ್ಲಿ ಭಕ್ತರನ್ನು ಲೂಟಿ ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ.
1991ರ ಬಳಿಕ ದೇಶದಲ್ಲಿ ಉದಾರೀಕರಣ ನೀತಿ ಹಾಗೂ ಖಾಸಗೀಕರಣದ ಪವರ್ ಶುರುವಾಯಿತು. ಇದರಿಂದ ಜನರು ಉದ್ಯೋಗಕ್ಕಾಗಿ ವಿದೇಶಗಳಿಗೆ ಹೋದರು. ಉದ್ಯೋಗಾವಕಾಶಗಳು ಹೇರಳವಾಗಿ ಹೆಚ್ಚಾದವು. ಆ ಕಾರಣದಿಂದ ಪೂಜಾರಿ ಪುರೋಹಿತರ ಪೂಜಾ ಕೈಂಕರ್ಯಗಳಿಗೆ ಹಣ ಕಾಣಿಕೆಗಳ ಹರಿವು ಕಡಿಮೆಯಾಯಿತು. ಆಗ ಪೂಜಾರಿ ಪುರೋಹಿತರಿಗೆ ಹೊಳೆದದ್ದು ಆನ್ ಲೈನ್ ದರ್ಶನ, ಆರತಿ, ಪೂಜೆ ಪುನಸ್ಕಾರ, ಪಿಂಡದಾನ, ತರ್ಪಣ, ಶ್ರಾದ್ಧದಂತಹ ವಿಧಾನಗಳು. ಸ್ಕೈಪ್, ಗೂಗಲ್, ಫೇಸ್ ಬುಕ್, ಚಾಟ್ ನಂತಹ ಅಪ್ಲಿಕೇಶನ್ ನೊಂದಿಗೆ ಸಂಪರ್ಕಗೊಂಡಿರುವ ಈ ಪೂಜಾರಿಗಳು ಆನ್ ಲೈನ್ ಮೂಲಕ ಜೇಬು ಕತ್ತರಿಸುವಲ್ಲಿ ನಿಪುಣರಾಗಿದ್ದಾರೆ.
ಇದರರ್ಥ ಸ್ಪಷ್ಟವಾಗಿ ಪುರೋಹಿತರು ಎಲ್ಲಾ ರೀತಿಯಲ್ಲೂ ಪೂಜೆ ಪುನಸ್ಕಾರವನ್ನು ಖಾಯಂ ಆಗಿಟ್ಟುಕೊಂಡು ಜನರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆಶ್ಚರ್ಯದ ಸಂಗತಿಯೆಂದರೆ, ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಸಹಾಯ ಸಹಕಾರ ನೀಡುತ್ತಿರುವುದು. ಅವರಿಗೆ ಮತ್ತಷ್ಟು ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಅವಕಾಶ ಕೊಡುತ್ತಿದೆ. ಸಾವಿನ ಬಳಿಕ ಮನುಷ್ಯನಿಗೆ ಯಾವುದೇ ಅಸ್ತಿತ್ವ ಇರುವುದಿಲ್ಲ. ಆದರೂ ಆನ್ ಲೈನ್ ಪೂಜೆಯ ಪ್ಯಾಕೇಜ್ ಹೆಸರಿನಲ್ಲಿ ಲೈವ್ ಪಿಂಡ ಪ್ರದಾನದ ಮುಖಾಂತರ ಮೋಕ್ಷ ದೊರಕಿಸಿಕೊಡು ದಂಧೆ ಭಾರಿ ಜೋರಾಗಿ ನಡೆಯುತ್ತಿದೆ.
ಪ್ರಸಿದ್ಧ ದೇವಸ್ಥಾನಗಳ ಆರತಿ ಹಾಗೂ ದರ್ಶನವನ್ನು ಆನ್ ಲೈನ್ ನಲ್ಲಿ ತೋರಿಸಿ ಆಧುನಿಕ ಪುರೋಹಿತರು ತಮ್ಮ ಜೇಬು ಭರ್ತಿ ಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಇಂದಿನ ಸ್ಥಿತಿಯಲ್ಲಿ ಆನ್ ಲೈನ್ ಪೂಜೆಯ ಆಫರ್ ಕೊಡುವ ಪುರೋಹಿತರು ಹಾಗೂ ಪೂಜಾರಿಗಳಿಂದ ದೂರ ಇರುವುದೇ ಒಳ್ಳೆಯದು.
ಲೈವ್ ಪಿಂಡ ಪ್ರದಾನ
ಕೆಲವು ತಿಂಗಳುಗಳ ಹಿಂದೆ ಪ್ರಯಾಗ್ ರಾಜ್ (ಹಿಂದೆ ಅಲಹಾಬಾದ್)ನಲ್ಲಿ ಕೆಲವು ಪುರೋಹಿತರು ಲೈವ್ ಪಿಂಡ ಪ್ರದಾನದ ಕಾರ್ಯ ಮಾಡಿಸಿದರು. ಅನುಷ್ಠಾನದ ಸಮಯದಲ್ಲಿ ಒಬ್ಬ ವ್ಯಕ್ತಿ ಮೊಬೈಲ್ ಹಿಡಿದು ನಿಲ್ಲುತ್ತಾನೆ. ಅದರಲ್ಲಿ ಎಲ್ಲ ವಿಧಿ ವಿಧಾನಗಳನ್ನೂ ತೋರಿಸಲಾಗುತ್ತದೆ. ದೂರದ ದೇಶದಲ್ಲಿ ಕುಳಿತ ವ್ಯಕ್ತಿ ಸುಲಭವಾಗಿ ಅದನ್ನೆಲ್ಲ ವೀಕ್ಷಿಸುತ್ತಾನೆ. ಅದಕ್ಕೆ ಬದಲಿಯಾಗಿ ಆ ವ್ಯಕ್ತಿಯಿಂದ ಬಹು ದೊಡ್ಡ ಮೊತ್ತ ಇವರ ಖಾತೆಗೆ ಸೇರ್ಪಡೆ ಆಗಿರುತ್ತದೆ.
ಧರ್ಮದಿಂದ ಪುರೋಹಿತರು ಧನ್ಯ
ಪೂಜಾರಿ ಪುರೋಹಿತರು ದೈವ ಭೀತಿಯುಳ್ಳವರಾಗಿ ಜನರಿಂದ ಹಣ ವಸೂಲಿ ಮಾಡುತ್ತಲೇ ಇರುತ್ತಾರೆ. ಆದರೆ ನಿಜವಾದ ಸಮಸ್ಯೆ ಇರುವುದು ಓದುಬರಹ ಬಲ್ಲ ಹಣವಂತ ಭಕ್ತರದ್ದು. ಯಾರ ಜೇಬು ಭರ್ತಿಯಾಗಿರುತ್ತೊ, ಅವರು ಧರ್ಮ ಭಯದಿಂದ ಹಣ ಕೊಡುತ್ತಿರುತ್ತಾರೆ. ಆ ಶ್ರೀಮಂತ ವ್ಯಕ್ತಿಗಳನ್ನು ನೋಡಿ ಬಡ ನಾಗರಿಕರು ಕೂಡ ಪೂಜಾರಿಗಳ ಪಾದಕ್ಕೆ ಶರಣಾಗುತ್ತಾರೆ.