ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಗ್ಲೆಂಡ್ ವಿರುದ್ಧದ ಮುಂಬರುವ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಭಾರತ ಮಹಿಳಾ ತಂಡವು 2025ರ ಜೂನ್ 28 ರಿಂದ ಇಂಗ್ಲೆಂಡ್‌ನಲ್ಲಿ ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿ ಆಡಲಿದೆ. ಹರ್ಮನ್‌ಪ್ರೀತ್ ಕೌರ್ ಟಿ20 ಮತ್ತು ಏಕದಿನ ಮಾದರಿಗೆ ನಾಯಕಿಯಾಗಿ ಮುಂದುವರೆದಿದ್ದಾರೆ. ಶಫಾಲಿ ವರ್ಮಾ ಟಿ20ಐ ತಂಡಕ್ಕೆ ಹಿಂದಿರುಗಿದ್ದಾರೆ.ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಖಷಿಯಲ್ಲಿರುವ ಭಾರತ ಮಹಿಳಾ ತಂಡ ಆಂಗ್ಲರ ನೆಲದಲ್ಲಿ ಸವಾಲಿಗೆ ಸಜ್ಜಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಟಿ20ಐ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳಪೆ ಫಾರ್ಮ್‌ನಿಂದಾಗಿ ಅವರನ್ನು ಇತ್ತೀಚೆಗೆ ತಂಡದಿಂದ ಕೈಬಿಡಲಾಗಿತ್ತು, ಆದರೆ ಇಂಗ್ಲೆಂಡ್ ವಿರುದ್ಧದ ಪ್ರಮುಖ ಸರಣಿಗಾಗಿ ಅವರು ತಂಡಕ್ಕೆ ಮರಳಿದ್ದಾರೆ.
ಆರ್ ಸಿಬಿ ಆಟಗಾರ್ತಿಗೆ ಬಂಪರ್ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಬದಲೀ ಆಟಗಾರ್ತಿಯಾಗಿ ಆರ್ ಸಿಬಿ ತಂಡ ಸೇರಿದ್ದ ಅನುಭವಿ ಸ್ಪಿನ್ನರ್ ಸ್ನೇಹ್ ರಾಣಾ ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಭಾರತ ತ್ರಿಕೋನ ಸರಣಿಯಲ್ಲಿ ತಮ್ಮ ಮ್ಯಾಜಿಕ್ ಮಾಡಿದ್ದರು. ಅವರು ಅಮೋಘ ಬೌಲಿಂಗ್ ಪ್ರದರ್ಶನದ ಮೂಲಕ ಭಾರತ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಸ್ನೇಹ್ ರಾಣಾ ಭಾರತ ಟಿ20, ಏಕದಿನ ತಂಡದಲ್ಲೂ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ತಂಡದ ಪ್ರಮುಖ ವೇಗದ ಬೌಲರ್ ರೇಣುಕಾಸಿಂಗ್ ಠಾಕೂರ್ ಇನ್ನೂ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಇಂಗ್ಲೆಂಡ್ ವಿರುದ್ಧದ ಸರಣಿಗೂ ಅವರನ್ನು ಆಯ್ಕೆ ಮಾಡಿಲ್ಲ. ಶ್ರೇಯಾಂಕಾ ಪಾಟೀಲ್ ಕೂಡ ಇನ್ನೂ ಫಿಟ್ ಆಗಿಲ್ಲದ ಕಾರಣ ಅವರೂ ಭಾರತ ತಂಡದಲ್ಲಿ ಅವಕಾಶ ಪಡೆದಿಲ್ಲ.
ಜೂನ್ 28 ರಿಂದ ಟಿ-20 ಸರಣಿ
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಜೂನ್ 28 ರಂದು ಮೊದಲ ಪಂದ್ಯದೊಂದಿಗೆ ಆರಂಭವಾಗಲಿದೆ. ಜುಲೈ 1, ಜುಲೈ 4, ಜುಲೈ 9 ಮತ್ತು ಜುಲೈ 12 ರಂದು ಕ್ರಮವಾಗಿ 2, 3, 4 ಮತ್ತು 5ನೇ ಟಿ20 ಪಂದ್ಯ ನಡೆಯಲಿದೆ. ಜುಲೈ 16, ಜುಲೈ 19 ಮತ್ತು ಜುಲೈ 22ರಂದು ಏಕದಿನ ಪಂದ್ಯಗಳು ನಡೆಯಲಿವೆ.
ಭಾರತ ಟಿ-20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ಶ್ರೀ ಚರಣಿ, ಸುಚಿ ಉಪಾಧ್ಯಾಯ, ಅಮಂಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್, ಸಯಾಲಿ ಸತ್ಘಾರೆ.
ಭಾರತ ಏಕದಿನ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ತೇಜಲ್ ಹಸಬ್ನಿಸ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ಶ್ರೀ ಚರಣಿ, ಸುಚಿ ಉಪಾಧ್ಯಾಯ್, ಅಮಂಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್, ಸಯಾಲಿ ಸತ್ಘಾರೆ.