ನವ ದಂಪತಿಗಳ ಸಲ್ಲಾಪ ಬೆಳಗ್ಗೆಯೂ ಮುಂದುವರಿದಿತ್ತು. ಪತಿಯ ಬಳಿಗೆ ತುಸು ಸರಿದು ಪತ್ನಿ ಹೇಳಿದಳು, ``ನೋಡ್ರಿ, ನಿನ್ನೆ ರಾತ್ರಿ ನನಗೊಂದು ಸುಂದರ ಕನಸು ಬಂದಿತ್ತು.''
``ಎಂಥ ಕನಸು ಡಾರ್ಲಿಂಗ್?'' ಪತಿ ಕೇಳಿದ.
``ಎಂಥ ಸುಂದರ ಕನಸು ಗೊತ್ತಾ... ಮದುವೆ ಆದ ಮೊದಲ ಸಲ ಲಾಂಗ್ ಲೀವ್ ಮುಗಿಸಿ ನೀವು ಇಂದು ಆಫೀಸಿನಿಂದ ಮರಳಿರುತ್ತೀರಿ. ಜೊತೆಗೆ ಒಂದು ಪುಟಾಣಿ ಗಿಫ್ಟ್ ಬಾಕ್ಸ್... ನನಗೆ ತೆರೆದು ತೋರಿಸುತ್ತೀರಿ, ಎಂಥ ಅದ್ಭುತ ಡೈಮಂಡ್ ರಿಂಗ್ ಗೊತ್ತಾ? ಇದರ ಅರ್ಥ ಏನಿರಬಹುದು. ಡಾರ್ಲಿಂಗ್...?''
``ಇರು, ಇದೀಗ ನೀನು ಹೇಳಿದಂತೆಯೇ ಆಫೀಸಿಗೆ ಹೊರಟಿದ್ದೇನೆ. ಸಂಜೆ ಬಂದ ಮೇಲೆ ಹೇಳ್ತೀನಿ,'' ಎಂದಾಗ ಅವನಿಗೆ ಫ್ಲೈಯಿಂಗ್ ಕಿಸ್ ಕೊಟ್ಟು ಕಳುಹಿಸಿಕೊಟ್ಟಳು ಪತ್ನಿ.
ಸಂಜೆ 7 ಗಂಟೆಗೆ ಪತಿರಾಯ ಮನೆಗೆ ಬಂದೇಬಿಟ್ಟ. ಅವನ ಕೈಲಿ ನೋಡಿದರೆ ಅವಳು ಅಂದುಕೊಂಡದ್ದಕ್ಕಿಂತ ತುಸು ದೊಡ್ಡ ಪ್ಯಾಕೆಟ್ ಇತ್ತು. ಅವಳ ಖುಷಿಗೆ ಎಣೆ ಇರಲಿಲ್ಲ. ಮುಗುಳ್ನಗುತ್ತಾ ಅವಳ ಕೈಗೆ ಬಾಕ್ಸ್ ಕೊಟ್ಟು ಕೈಕಾಲು ತೊಳೆಯಲು ಒಳಗೆ ಹೋದ. ಸಂಭ್ರಮದಿಂದ ಅವಳು ಅದನ್ನು ಬಿಡಿಸಿ ನೋಡುತ್ತಾಳೆ... ಒಂದು ಪುಸ್ತಕ : `ಕನಸುಗಳನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?'
ಆ ರಾತ್ರಿ ಅವನು ಎಷ್ಟು ಹೊತ್ತಿನಿಂದ ಅಡುಗೆ ಆಯ್ತಾ ಎಂದು ಕೇಳಿದರೂ ಒಳಗಿನಿಂದ ಉತ್ತರವೇ ಇಲ್ಲವಂತೆ!
ಅವಿವಾಹಿತ : ಗಂಡ ಮತ್ತು ಹೆಂಡತಿಯರ ಗುಣದಲ್ಲಿ ಯಾವಾಗಲೂ ವ್ಯತ್ಯಾಸ ಇರುತ್ತೆ ಅಂತೀಯಾ?
ವಿವಾಹಿತ : ಹ್ಞೂಂ ಮತ್ತೆ..... ಪತ್ನಿ ಕೂಲರ್ ತರಹ ಅಂತೆ. ತಣ್ಣನೆ ಗಾಳಿ ಕಡಿಮೆ ನೀಡಿದರೂ ಸದಾ ಸದ್ದುಗದ್ದಲ ತುಂಬಿರುವಂತೆ. ಅದೇ ಗಂಡ ಅಂದ್ರೆ ಸ್ಪ್ಲಿಟ್ ಫ್ಯಾನ್ ತರಹ ಅಂತೆ, ಹೊರಗೆ ಎಷ್ಟೇ ಸದ್ದು ಕೇಳಿಸಿದರೂ ಒಳಗೆ ಮಾತ್ರ ಬಲು ಶಾಂತ ಸ್ವಭಾವ.
ಹಿಂದೆಲ್ಲ ಘೋಷವಾಕ್ಯ ಹೀಗಿರುತ್ತಿತ್ತು...`ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾಳೆ!'
ಆದರೆ ಇದೀಗ ಘೋಷವಾಕ್ಯ ಬದಲಾಗಿದೆಯಂತೆ...
ಹೆಂಗಸು ಎಷ್ಟು ಕಾಟ ಕೊಡುತ್ತಾಳೆಂದರೆ ಗಂಡಸು ಎಲ್ಲವನ್ನೂ ಮರೆತು ತನ್ನ ಕೆಲಸದಲ್ಲೇ ಸಂಪೂರ್ಣ ಮುಳುಗಿಹೋಗುತ್ತಾನೆ. ಅದು ಯಾವ ಪರಿ ಎಂದರೆ, ಯಶಸ್ಸು ಅವನನ್ನು ಹುಡುಕಿಕೊಂಡು ಬಂದು ತನ್ನನ್ನು ಎತ್ತಿಕೋ ಅನ್ನುತ್ತದಂತೆ!
ಬಸ್ಸಿನಲ್ಲಿ ತಾಳಿ ಕದ್ದು ಸಿಕ್ಕಿಬಿದ್ದನಿಗೆ... ಧರ್ಮದೇಟು, 3 ತಿಂಗಳ ಸಜೆ!
ಅದೇ ಮದುವೆ ಮಂಟಪದಲ್ಲಿ ತಾಳಿ ಕಟ್ಟುವವನಿಗೆ... ಜೀವಾವಧಿ ಸೆರೆವಾಸ!
ಮದುವೆ ವೈಭವದಿಂದ ನಡೆಯಿತು. ಸಪ್ತಪದಿ ಮುಗಿದ ಮೇಲೆ ಪತ್ನಿ ಸಂಭ್ರಮದಿಂದ ಹೇಳಿದಳು, ``ಏನೂಂದ್ರೆ... ಇಂದಿನಿಂದ ನಿಮ್ಮನ್ನು ಬಿಟ್ಟರೆ ನಾನಿಲ್ಲ... ನನ್ನನ್ನು ಬಿಟ್ಟರೆ ನೀವಿಲ್ಲ!''
2 ವರ್ಷಗಳ ನಂತರ ``ನೀನೇನು ಮನುಷ್ಯನಾ ಮಂಗನಾ? ನಿನ್ನಂಥ ವ್ಯಕ್ತಿ ಇಡೀ ಪ್ರಪಂಚದಲ್ಲೇ ಎಲ್ಲೂ ಇರುವುದಿಲ್ಲ. ಒಂದು, ಈ ಮನೆಯಲ್ಲಿ ನೀನಿರಬೇಕು.... ಇಲ್ಲ ನಾನಿರಬೇಕು!''
ನಿಂಗಿ ಸ್ಟೈಲಾಗಿ ಇಂಗ್ಲಿಷ್ ಕಲಿಯುತ್ತಿದ್ದಳು. ಅಂತೂ ಹರಕುಮುರುಕು ಮಾತಾಡುವಲ್ಲಿ ಯಶಸ್ವಿಯಾದಳು. ಅದನ್ನು ಪರೀಕ್ಷಿಸಿಯೇ ಬಿಡೋಣ ಎಂದು ಅಂಗಡಿಗೆ ಹೋದಳು.
ಅಂಗಡಿಯವನ ಮುಂದೆ ಹ್ಯಾಂಡ್‌ಬ್ಯಾಗ್ ತಿರುಗಿಸುತ್ತಾ ಪಲುಕಿದಳು, ``ಗಿವ್ ಮಿ ಸಮ್ ವೈಟ್‌ಲೈಮ್...''