ದಿವ್ಯಾ ಹೊಸೂರ್ ಅವರು ಸದ್ಯ ಬೆಳಗಾವಿ ಕಂಟೊನ್ಮೆಂಟ್‌ ಬೋರ್ಡ್‌ನ ಸಿಇಓ. ಬೆಳಗಾವಿಯ ಸಂಪೂರ್ಣ ಮಿಲಿಟರಿ ಪ್ರದೇಶ ಹಾಗೂ ಅದರಡಿ ಬರುವ ನಾಗರಿಕ ಪ್ರದೇಶಗಳ ಉಸ್ತುವಾರಿ ನೋಡಿಕೊಳ್ಳುವ ಪ್ರಮುಖ ಹೊಣೆಗಾರಿಕೆಯನ್ನು ಅವರು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

2012ರಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಐಎಎಸ್‌ ಉತ್ತೀರ್ಣರಾದ ಬಳಿಕ ಅವರು ಆಯ್ದುಕೊಂಡಿದ್ದು ಐಡಿಇಎಸ್‌. ಅಂದರೆ `ಇಂಡಿಯನ್‌ ಡಿಫೆನ್ಸ್ ಎಸ್ಟೇಟ್‌ ಸರ್ವೀಸ್‌.’ ಇದು ಎಂತಹ ಒಂದು ಮುಖ್ಯ ಜವಾಬ್ದಾರಿಯಾಗಿರುತ್ತದೆಂದರೆ, ದಂಡು ಪ್ರದೇಶಗಳಿರುವ ನಗರಗಳಲ್ಲಿ ಕೆಲಸ ಮಾಡುವ ಜವಾಬ್ದಾರಿ ಅವರ ಮೇಲಿರುತ್ತದೆ. ಉತ್ತರಾಖಂಡದ ರಾಣಿಖೇತ್‌ ಅಲ್ಮೋಡಾ ಹಾಗೂ ಗೋವಾದಲ್ಲಿ ಸೇವೆ ಸಲ್ಲಿಸಿದ ಬಳಿಕ ಬೆಳಗಾವಿ ಕಂಟೊನ್ಮೆಂಟ್‌ಗೆ ಬಂದಿದ್ದಾರೆ.

ಗೋವಾದಲ್ಲಿ ಕೆಲಸ ಮಾಡುವಾಗ ಅವರಿಗೆ ಕಾರವಾರದ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿತ್ತು. ಮಿಲಿಟರಿ ಪ್ರದೇಶಗಳ ಆಡಳಿತ ನಿರ್ವಹಣೆಯಲ್ಲಿ ದಿವ್ಯಾ ಅದೆಷ್ಟು ಸಮರ್ಥರು ಎನ್ನುವುದಕ್ಕೆ ಇದೇ ಸಾಕ್ಷಿ.

ಅಮ್ಮನಿಂದ ನನಸಾದ ಕನಸು

ದಿವ್ಯಾರ ತಂದೆ ಶಿವರಾಮ್ ಬ್ಯಾಂಕ್‌ ಉದ್ಯೋಗಿ. ಅಮ್ಮ ಗಾಯತ್ರಿ ಸಮಾಜ ಸೇವಕಿ. ಜೊತೆಗೆ ಸಾಕಷ್ಟು ಓದುವ ಹವ್ಯಾಸ ಉಳ್ಳವರಾಗಿದ್ದರು. “ಅಮ್ಮ ತಾವು ಸಾಕಷ್ಟು ಓದುವುದರ ಜೊತೆ ಜೊತೆಗೆ ನಮ್ಮ ಓದಿನ ಬಗ್ಗೆಯೂ ತುಂಬಾ ಆಸಕ್ತಿ ತೋರಿಸುತ್ತಿದ್ದರು. ನಮಗಾಗಿ ಬೇಕಾದಷ್ಟು ಪತ್ರಿಕೆ, ನಿಯತಕಾಲಿಕೆ, ಹೆಸರಾಂತ ಲೇಖಕರ ಕೃತಿಗಳನ್ನು ತಂದು ಕೊಡುತ್ತಿದ್ದರು. ನಮ್ಮೂರಿನವರೇ ಆದ ತರಾಸು, ಬಿ.ಎಲ್. ವೇಣು ಅವರ ಬಹುತೇಕ ಎಲ್ಲ ಪುಸ್ತಕಗಳನ್ನೂ ನಾನು ಬಾಲ್ಯದಲ್ಲಿಯೇ ಓದಿ ಮುಗಿಸಿದ್ದೆ.  ಅದೇ ನನಗೆ ಮುಂದೆ ಐಎಎಸ್‌ ಮಾಡಲು ಪ್ರೇರಣೆಯಾಯಿತು,” ಎಂದು ದಿವ್ಯಾ ತಮ್ಮ ಬಾಲ್ಯದ ದಿನಗಳನ್ನು ಬಿಚ್ಚಿಟ್ಟರು.

ಕೊಯಂಬತ್ತೂರು ಹಾಗೂ ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ಮುಗಿಸಿದ ಬಳಿಕ ಅವರು ತಮ್ಮ ಭವಿಷ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದು ಯುಪಿಎಸ್‌ಸಿ ನಡೆಸುವ ಐಎಎಸ್‌ ಪರೀಕ್ಷೆಯನ್ನು. ಅದಕ್ಕಾಗಿ ಅವರು ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡು ಪರೀಕ್ಷೆ ಬರೆದರು. `ಕಬ್ಬಿಣದ ಕಡಲೇ’ ಎಂದೇ ಹೇಳಲ್ಪಡುವ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿಯೇ ಪಾಸಾದದ್ದು ಅವರ ಅವಿರತ ಪ್ರಯತ್ನ ಹಾಗೂ ಉತ್ಕೃಷ್ಟ ಅಧ್ಯಯನಶೀಲತೆಯನ್ನು ತೋರಿಸುತ್ತದೆ.

ತರಬೇತಿ ಅವಧಿಯಲ್ಲಿ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಅಭ್ಯರ್ಥಿಗಳಿಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಉದ್ದ ಜಿಗತ, ಎತ್ತರ ಜಿಗಿತ, ಬ್ಯಾಡ್ಮಿಂಟನ್‌, ಓಟ, ರಿಲೇ ಹೀಗೆ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಶಾಲಾ ಜೀವನದಲ್ಲಿ ನೃತ್ಯ ಸಂಗೀತದಲ್ಲಿ ಮಾತ್ರ ಅಪಾರ ಆಸಕ್ತಿ ಹೊಂದಿದ್ದ ದಿವ್ಯಾ, ಕ್ರೀಡೆಯ ಬಗ್ಗೆ ಅಷ್ಟೇನೂ ಉತ್ಸಾಹ ತೋರಿಸುತ್ತಿರಲಿಲ್ಲ. ಆದರೆ ಆಶ್ಚರ್ಯ ಎಂಬಂತೆ ಯುಪಿಎಸ್‌ಸಿಯಲ್ಲಿ ಉತ್ತೀರ್ಣರಾದವರಿಗೆ ನಡೆಸುವ ಕ್ರೀಡಾ ಸ್ಪರ್ಧೆಯಲ್ಲಿ ದಿವ್ಯಾ ಒಟ್ಟು 9 ಪದಕಗಳನ್ನು ಗೆದ್ದು ಅತಿ ಹೆಚ್ಚು ಪದಕ ಪಡೆದ ಸ್ಪರ್ಧಾರ್ಥಿ ಎನಿಸಿಕೊಂಡರು.

ಶ್ರೇಯಸ್‌ ಭೇಟಿ

ಕ್ರೀಡಾಕೂಟದ ಅವಧಿಯಲ್ಲಿ ಅವರಿಗೆ ಶ್ರೇಯಸ್‌ ಹೊಸೂರರ ಭೇಟಿಯಾಗುತ್ತದೆ. ಅವರೂ ಕೂಡ ಐಎಎಸ್‌ ಉತ್ತೀರ್ಣರಾಗಿ ಆ ಕ್ರೀಡಾಕೂಟಕ್ಕೆ ಬಂದಿದ್ದರು. ಪರಸ್ಪರರ ಗೆಲುವಿಗೆ ಹೆಮ್ಮೆ ವ್ಯಕ್ತಪಡಿಸಿದ ಅವರು ಬಳಿಕ ಪರಸ್ಪರ ಪ್ರೀತಿಸತೊಡಗುತ್ತಾರೆ. ಆ ಪ್ರೀತಿ ಬಳಿಕ ಮದುವೆಯಲ್ಲಿ ಪರಿವರ್ತನೆಗೊಳ್ಳುತ್ತದೆ.

ಶ್ರೇಯಸ್‌, ಕರ್ನಾಟಕದ ಖಡಕ್‌ ಆಫೀಸರ್‌ ಎಂದೇ ಖ್ಯಾತರಾಗಿದ್ದ ಗೋಪಾಲ್ ಹೊಸೂರ್‌ರವರ ಪುತ್ರ. ಶ್ರೇಯಸ್‌ ಐಎಎಸ್‌ ಆದ ಬಳಿಕ ಕೇವಲ ಅಧಿಕಾರಿಯಾಗಿ ಒಂದೇ ಕಡೆ ಕುಳಿತುಕೊಳ್ಳದೆ, ಸಿಯಾಚಿನ್‌ನಂತಹ ಹಲವು ದುರ್ಗಮ ಪ್ರದೇಶಗಳಿಗೆ ಭೇಟಿ ಕೊಟ್ಟು ಬಂದ ಸಾಹಸಿಗ. ಅಂತಹ ದಿಟ್ಟ ಆಫೀಸರ್‌ ಸಂಪರ್ಕಕ್ಕೆ ಬಂದ ಬಳಿಕ ದಿವ್ಯಾ ಕೂಡ ಕ್ರಮೇಣ ಸಾಹಸಕ್ಕೆ ತಮ್ಮನ್ನು ಒಗ್ಗಿಸಿಕೊಂಡರು.

ಶ್ರೇಯಸ್‌ ಅವರೊಂದಿಗೆ ಮದುವೆಯಾದ ಬಳಿಕ ಕರ್ತವ್ಯದ ಕಾರಣದಿಂದ ಗಂಡ ಹೆಂಡತಿ ಜೊತೆಗೆ ಹೆಚ್ಚು ಸಮಯ ಕಳೆಯಲು ಆಗಲಿಲ್ಲ. ಪತಿ ಶ್ರೇಯಸ್‌ ಉತ್ತರದಲ್ಲಿ (ಈಗ ಪ್ರಧಾನಮಂತ್ರಿ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ) ಕರ್ತವ್ಯ ನಿಭಾಯಿಸುತ್ತಿದ್ದರೆ, ದಿವ್ಯಾ ದಕ್ಷಿಣದಲ್ಲಿ (ಬೆಳಗಾವಿಯಲ್ಲಿ) ಕಾರ್ಯ ನಿಭಾಯಿಸುತ್ತಿದ್ದಾರೆ.

“ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಒಂದಾದ ಸ್ಟಾಕ್‌ ಕಾಂಗ್ರಿ ಪರ್ವತವನ್ನು ಜೊತೆ ಜೊತೆಗೆ ಏರಿ ಬಂದದ್ದನ್ನೇ `ಹನಿಮೂನ್‌’ ಪ್ರವಾಸ ಎಂದು  ಭಾವಿಸಿದ್ದೆವು,” ಎಂದು ದಿವ್ಯಾ ಹೇಳಿಕೊಳ್ಳುತ್ತಾರೆ.

ಕಾಂಗ್ರಿ ಎಂಬ ದುರ್ಗಮ ಪರ್ವತ

ಶ್ರೇಯಸ್‌ ಐಎಎಸ್‌ ಅಧಿಕಾರಿಯಾಗಿ ಹುದ್ದೆ ವಹಿಸಿಕೊಂಡ ಬಳಿಕ ಸಿಯಾಚಿನ್‌ನಂತಹ ಹಲವು ದುರ್ಗಮ ಪರ್ತಗಳನ್ನು ಏರಿದ್ದರು. ಅಲ್ಲಿನ ವಾತಾವರಣದ ಬಗ್ಗೆ ಅವರಿಗೆ ಚೆನ್ನಾಗಿ ಅರಿವಿತ್ತು. ಅವರ ಮುಂದಿನ ಗುರಿ ಕಾಂಗ್ರಿ ಪರ್ವತವಾಗಿತ್ತು. ಅದು ಸಮುದ್ರ ಮಟ್ಟದಿಂದ  20,000 ಅಡಿಗಳಷ್ಟು ಎತ್ತರದಲ್ಲಿದೆ. ಸಿಯಾಚಿನ್‌ನ ಹಾಗೆ ಇಲ್ಲೂ ಕೂಡ ಆಮ್ಲಜನಕ ಕೊರತೆಯಂತಹ ಸಮಸ್ಯೆಗಳು ಉದ್ಭವಿಸುತ್ತವೆ.

ಶ್ರೇಯಸ್‌ ಈ ಸಲ ಪತ್ನಿ ದಿವ್ಯಾರನ್ನು ಕರೆದುಕೊಂಡು ಹೋಗುವುದಾಗಿ ನಿರ್ಧರಿಸಿದರು. ಕಡಿದಾದ ಪರ್ವತ, ಹವಾಮಾನ ವೈಪರೀತ್ಯಗಳಿಂದ ಏನೇನು ಸಮಸ್ಯೆಗಳಾಗಬಹುದು ಎಂಬುದನ್ನು ಮೊದಲೇ ಅಂದಾಜಿಸಿಕೊಂಡು ಅದಕ್ಕೆ ತಕ್ಕಂತೆ ನಮ್ಮ ದೇಹವನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ.

ಎಂಜಿನಿಯರಿಂಗ್‌ ಓದುತ್ತಿರುವಾಗಲೇ ದಿವ್ಯಾ ನಿಯಮಿತವಾಗಿ ಯೋಗಾಭ್ಯಾಸ, ಪ್ರಾಣಾಯಾಮ ಅನುಸರಿಸುತ್ತಿದ್ದುದರಿಂದ, ಉಸಿರಾಟದ ಪ್ರಕ್ರಿಯೆಯ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದರು. ಹೀಗಾಗಿ ಅದು ಅವರಿಗೆ ಕಷ್ಟಕರ ಎನಿಸಲಿಲ್ಲ.

ಪೂರ್ವ ತಯಾರಿಯಲ್ಲಿ ಪ್ರತಿದಿನ ಬೆಳಗಿನ ಜಾವ 1-2 ಗಂಟೆ ಓಡಲೇಬೇಕಿತ್ತು. ದಿವ್ಯಾರಿಗೆ ಬೆಳಗಿನ ಓಟ ಎರಡು ರೀತಿಯಲ್ಲಿ ನೆರವಾಯಿತು. ಕಂಟೊನ್ಮೆಂಟ್‌  ಸಿಇಓ ಆಗಿದ್ದರಿಂದ ಮಿಲಿಟರಿ ಪ್ರದೇಶಗಳ ನಿರೀಕ್ಷಣೆ ಜೊತೆಗೆ, ಮುಂಜಾನೆಯ ಓಟವನ್ನು ಅವರು ಮನಸಾರೆ ಆನಂದಿಸಿದರು. ಒಂದರ್ಥದಲ್ಲಿ ಅದು ಅವರಿಗೆ ಕರ್ತವ್ಯದ ಓಟವೇ ಆಗಿತ್ತು. ಈ ಓಟ ಅವರಲ್ಲಿ ಆತ್ಮವಿಶ್ವಾಸ ತುಂಬಿತು. ನಾನು ಕಾಂಗ್ರಿಯನ್ನು ಹತ್ತಬಲ್ಲೆ ಎಂದು ನಂಬಿಕೆ ಹುಟ್ಟಿಸಿತು.

ಕಾಂಗ್ರಿ ಪಯಣ

ಬೆಳಗಾವಿಯಿಂದ ದೆಹಲಿ ತಲುಪಿ, ಅಲ್ಲಿಂದ ಸ್ಟಾಕ್‌ ಕಾಂಗ್ರಿಯತ್ತ ಪಯಣ. ಅಲ್ಲಿ ಒಂದೆರಡು ದಿನ ವಿಶ್ರಾಂತಿ. ಮೊದಲು ಅಲ್ಲಿನ ವಾತಾವರಣಕ್ಕೆ ನಮ್ಮ ದೇಹವನ್ನು ಹೊಂದಾಣಿಕೆ ಮಾಡಿಕೊಂಡು ಮುಂದಿನ ದಾರಿ ಕ್ರಮಿಸಲು ಈ ಅವಧಿ ಸಾಕಷ್ಟು ನೆರವಾಗುತ್ತದೆ. ಪ್ರತಿದಿನ 2000 ಅಡಿಗಳಷ್ಟು ಎತ್ತರಕ್ಕೇರಿ ವಿಶ್ರಾಂತಿ ಪಡೆಯಬೇಕಿತ್ತು. ಹೀಗೆ ಆರು ದಿನಗಳ ಪಯಣ.

ದಿವ್ಯಾಶ್ರೇಯಸ್‌ ಸೇರಿದಂತೆ ಒಟ್ಟು 25 ಜನರು ಪರ್ತಾರೋಹಣಕ್ಕೆಂದು ಬಂದಿದ್ದರು. ಆದರೆ ಅಂತಿಮ ಹಂತಕ್ಕೆ ತಲುಪಿದ್ದು 6 ಜನರು ಮಾತ್ರ. ಅದರಲ್ಲಿ ದಿವ್ಯಾ ಏಕೈಕ ಮಹಿಳೆಯಾಗಿದ್ದರು ಎನ್ನುವುದೊಂದು ವಿಶೇಷ. ಕೊನೆಯ ದಿನ ಅಂದರೆ 6ನೇ ದಿನದ ಪ್ರಯಾಣ ನಿಜಕ್ಕೂ ಸವಾಲಿನದಾಗಿತ್ತು. ಒಂದೇ ಹಂತದಲ್ಲಿ ಸತತ 9 ಗಂಟೆಗಳ ಕಾಲ ಸಾಗಬೇಕಿತ್ತು. ಅದು ಕೂಡ ರಾತ್ರಿ ಹೊತ್ತು. ಕೊನೆಯ ಕ್ಷಣದಲ್ಲಿ ದಿವ್ಯಾರಿಗೆ ಸಾಕಷ್ಟು ಸಮಸ್ಯೆಯಾಯಿತು. ಇನ್ನೂ ಮೇಲೆ ಹತ್ತಲು ಆಗುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಿತ್ರಾಣಗೊಂಡಿದ್ದರು. ಆದರೆ ಪತಿ ಶ್ರೇಯಸ್‌ ಹಾಗೂ ಸ್ಥಳೀಯ ಶರ್ಪಾಗಳು ಅವರಲ್ಲಿ ಸ್ಛೂರ್ತಿ ತುಂಬಿಸಿದ್ದರಿಂದಾಗಿ ಅತ್ಯಂತ ಕಷ್ಟದ ಸ್ಥಿತಿಯಲ್ಲೂ ಕಾಂಗ್ರಿಯ ಶಿಖರ ತಲುಪುವಲ್ಲಿ ಯಶಸ್ವಿಯಾದರು. ಅದುವೇ ಅವರ ಜೀವನದ ಅತ್ಯಂತ ರೋಚಕ ಕ್ಷಣವಾಗಿತ್ತು. ಈ ಮೂಲಕ ಕಾಂಗ್ರಿ ಶಿಖರ ತಲುಪಿದ `ಮೊದಲ ಸಿವಿಲ್ ಸರ್ವೀಸಸ್‌ ದಂಪತಿಗಳು,’ ಎಂಬ ಖ್ಯಾತಿಗೆ ಅವರು ಪಾತ್ರರಾದರು.

ಗುರಿ ಮುಖ್ಯ

“ಮಹಿಳೆಯರು ತಮಗೆ ಸಮಾನತೆ ಸಿಗುತ್ತಿಲ್ಲ ಎಂದು ಗೊಣಗುವುದಕ್ಕಿಂತ ನಮ್ಮನ್ನು ನಾವು ಮೊದಲು ಸಮರ್ಥರನ್ನಾಗಿ ಮಾಡಿಕೊಳ್ಳಬೇಕು. ಅದಕ್ಕಾಗಿ ಸೂಕ್ತ ಗುರಿ ಇರಬೇಕು. ಗುರಿಯತ್ತ ಸಾಗಲು ಛಲವನ್ನು ಒಗ್ಗೂಡಿಸಿಕೊಳ್ಳಬೇಕು. ಆಗ ಯಶಸ್ಸು ಸಿಗದಿದ್ದರೆ ಹೇಳಿ,” ಎಂದು ದಿವ್ಯಾ ಇಂದಿನ ಯುವತಿಯರಿಗೆ ಕಿವಿಮಾತು ಹೇಳುತ್ತಾರೆ.

– ಅಶೋಕ ಚಿಕ್ಕಪರಪ್ಪಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ