ಇತ್ತೀಚಿನ ದಿನಗಳಲ್ಲಿ ಕ್ಯಾಬ್‌ನ ಸೇವೆಗಳ ಕಾರಣದಿಂದಾಗಿ ಸಾಮಾನ್ಯ ಜನರಿಗೂ ಪ್ರಯಾಣ ಮಾಡುವುದು ಬಹಳ ಸುಲಭವಾಗಿದೆ. ಮೊದಲು ಆಟೋಗಳ ನಿರೀಕ್ಷೆ ಹಾಗೂ ಜನರಿಂದ ತುಂಬಿ ತುಳುಕುವ ಬಸ್‌ಗಳಲ್ಲಿ ಪ್ರಯಾಣ ಜನರಿಗೆ ತೀವ್ರ ದಣಿವನ್ನುಂಟು ಮಾಡುತ್ತಿತ್ತು.

ಆದರೆ ಈಗ ಕ್ಯಾಬ್‌ಗಳು ಈ ಎಲ್ಲ ಕಷ್ಟಗಳನ್ನು ದೂರಗೊಳಿಸಿವೆ. ಮಹತ್ವದ ಸಂಗತಿಯೆಂದರೆ, ಆ್ಯಪ್‌ನಲ್ಲಿ ಕ್ಲಿಕ್‌ ಮಾಡಿದ ಕೆಲವೇ ನಿಮಿಷಗಳಲ್ಲಿ ಕ್ಯಾಬ್‌ ನೀವು ಕೊಟ್ಟ ವಿಳಾಸದಲ್ಲಿ ಬಂದು ನಿಂತುಕೊಳ್ಳುತ್ತದೆ. ಇದರಿಂದಾಗಿ ನಿಮ್ಮ ಅಮೂಲ್ಯ ಸಮಯ ನಷ್ಟವಾಗುವುದಿಲ್ಲ. ನಿಮಗೆ ಕೈಗೆಟುಕುವ ದರ ಪಾವತಿಸುತ್ತೀರಿ. ಆದರೆ ಎಷ್ಟೋ ಸಲ ಕ್ಯಾಬ್‌ ಚಾಲಕರು ಹುಡುಗಿಯರು ಹಾಗೂ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ಪ್ರಕರಣಗಳು ನಡೆಯುತ್ತಿದ್ದು ಅವರ ಸುರಕ್ಷತೆಯ ಕುರಿತಂತೆ ಸವಾಲುಗಳು ಏಳುತ್ತಿವೆ. ಮಹಿಳೆಯರ ಜೊತೆ ಯಾವಾಗ ಏನು ಘಟಿಸುತ್ತದೋ ಹೇಳಲಿಕ್ಕೆ ಆಗದು.

ಕ್ಯಾಬ್‌ನಲ್ಲಿ ಪ್ರಯಾಣದ ವೇಳೆ ಕೆಲವು ಮಹಿಳೆಯರ ಜೊತೆ ಏನೇನು ಘಟಿಸಿತು ಹಾಗೂ ಆ ಸಂದರ್ಭದಲ್ಲಿ ಅವರ ನೋವಿನ ಅನುಭವ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಿ.

ಅಚಾತುರ್ಯದ ಸಾಧ್ಯತೆ : ಉದ್ಯೋಗಸ್ಥೆ ಸ್ನೇಹಾ ಕ್ಯಾಬ್‌ನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಅವಳಿಗೆ ಮದ್ಯ ಹಾಗೂ ಪಾನ್‌ಬೀಡಾದ ವಾಸನೆ ಬಂತು. ಬಳಿಕ ಅಲ್ಲಿಂದ ಹೊರಟ ಕ್ಯಾಬ್‌ನ್ನು ಚಾಲಕ ನಿರ್ಜನ ಸ್ಥಳವೊಂದರಲ್ಲಿ ನಿಲ್ಲಿಸಿದ. ಅಲ್ಲಿ ಕತ್ತಿ ಜೊತೆಗೆ ಅಪರಾಧದ ಘಟನೆಗಳು ನಡೆದ ಸ್ಥಳ. ಇಲ್ಲಿ ಏಕೆ ಗಾಡಿ ನಿಲ್ಲಿಸಿದೆ ಎಂದು ಕೇಳಿದರೆ ಪೆಟ್ರೋಲ್‌ ಖಾಲಿಯಾಗಿದೆ ತರಲು ತಿಳಿಸಿರುವೆ ಎಂದ.

ಬಳಿಕ ಚಾಲಕ ಗೆಳೆಯನಿಗೆ ಫೋನ್‌ ಮಾಡಿ ತನ್ನ ಗಾಡಿಯಲ್ಲಿ ಮಹಿಳೊಬ್ಬಳಿದ್ದಾಳೆ ಎಂದು ಹೇಳುವುದು ಕೇಳಿಸಿಕೊಂಡು ಅವಳಿಗೆ ದೇಹ ಒಮ್ಮೆಲೆ ಕಂಪಿಸಿತು. ಅವಳು ಕೂಡ ತನ್ನ ಸ್ನೇಹಿತನಿಗೆ ಫೋನ್‌ ಮಾಡಿ ತಾನಿರುವ ಜಾಗ, ಕಾರಿನ ನಂಬರ್‌ ಎಲ್ಲ ವಿವರಗಳನ್ನು ತಿಳಿಸಿದಳು. ಡ್ರೈವರ್‌ನ ಗೆಳೆಯ ಬರುವುದರೊಳಗೆ ಅವಳ ಸ್ನೇಹಿತ ಬಂದು ಅವಳನ್ನು ಕರೆದುಕೊಂಡು ಹೋದ. ಅಂದಿನ ಘಟನೆಯ ಬಗ್ಗೆ ನೆನಪಿಸಿಕೊಂಡರೆ ಅವಳಿಗೆ ಈಗಲೂ ಮೈ ಕಂಪಿಸುತ್ತದೆ.

ಮಧ್ಯರಾತ್ರಿಯ ಚುಡಾಯಿಸುವಿಕೆ : ಕ್ಯಾಬ್‌ ಕಂಪನಿಯೊಂದಕ್ಕೆ ಸೇರಿದ ಚಾಲಕನೊಬ್ಬ 23 ವರ್ಷದ ಯುವತಿಗೆ ಮಾನಸಿಕ ಹಿಂಸೆ ನೀಡಿದ. ದಾರಿಯುದ್ದಕ್ಕೂ ಅವಳನ್ನು ಚುಡಾಯಿಸಿ ಮಾತನಾಡುತ್ತಿದ್ದ. ಗಾಡಿಯಿಂದ ಇಳಿಯದಂತೆ ಡೋರ್‌ ಲಾಕ್‌ ಮಾಡಿದ್ದ ಎಂದೂ ಆ ಯುವತಿ ಹೇಳಿದಳು.

ಆ ಯುವತಿಯ ಮೊಬೈಲ್‌ ಬ್ಯಾಟರಿ ಡೌನ್‌ ಆಗಿ ಯಾರನ್ನೂ ಸಂಪರ್ಕಿಸಲು ಆಗಲಿಲ್ಲ. ಕ್ಯಾಬ್‌ ಕಂಪನಿಯ ಆ್ಯಪ್‌ನಲ್ಲಿ ಎಸ್‌ಓಎಸ್‌ ಆಪ್ಶನ್‌ನ್ನು ಬಳಸಲು ಕೂಡ ಅವಳಿಗೆ ಆಗಲಿಲ್ಲ.

ತಪ್ಪು ಒಪ್ಪಿಕೊಳ್ಳಲಿಲ್ಲ : ನೊಯ್ಡಾದ ಕ್ಯಾಬ್‌ ಕಂಪನಿಯೊಂದರ ಚಾಲಕ ಮಹಿಳೊಬ್ಬಳ ಕಾರಿಗೆ ಡಿಕ್ಕಿ ಹೊಡೆದ. ಮಹಿಳೆ ಆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದಳು. ಚಾಲಕ ತನ್ನ ತಪ್ಪು ಒಪ್ಪಿಕೊಳ್ಳದೆ ಆ ಮಹಿಳೆಯ ಮೇಲೆಯೇ ಕೂಗಾಡತೊಡಗಿದ. ಅಷ್ಟೇ ಅಲ್ಲ ಅವಳ ಮೇಲೆ ದೈಹಿಕವಾಗಿ ಹಲ್ಲೆ ಮಾಡಲು ಮುಂದಾದ. ಅವಳನ್ನು ಕೆಟ್ಟ ಶಬ್ದಗಳಲ್ಲಿ ನಿಂದಿಸಿದ.

ನಮ್ಮ ಸುರಕ್ಷತೆ ನಮ್ಮ ಕೈಯಲ್ಲಿ : 24 ವರ್ಷದ ಫ್ಯಾಷನ್‌ ಡಿಸೈನರ್‌ ಉಮಾ ಹೀಗೆ ಹೇಳುತ್ತಾರೆ. ರಾತ್ರಿ 9 ಗಂಟೆಯ ನಂತರ ಮಹಿಳೆಯರು ಮನೆಯಿಂದ ಹೊರಗೆ ಹೋಗುವುದು ಭಯಾನಕವೇ ಹೌದು. ನಿಮ್ಮ ಸಮೀಪ ನಿಂತು ಅಥವಾ ಒಂದಿಷ್ಟು ದೂರ ನಿಂತು ನಿಮ್ಮನ್ನೇ ದಿಟ್ಟಿಸಿನೋಡುವ ವ್ಯಕ್ತಿ ನಿಮಗೆ ಯಾವ ತೊಂದರೆ ಕೊಡಬಹುದು ಎಂದು ಹೇಳಲಿಕ್ಕಾಗದು. ಆಟೋ ಅಥವಾ ಕ್ಯಾಬ್‌ ಎರಡೂ ಅಷ್ಟೆ. ನಮಗೆ ನಾವೇ ನಮ್ಮ ಸುರಕ್ಷತೆಯ ಕಾಳಜಿ ವಹಿಸಬೇಕು.

ಹೆದರಿಕೆಯ ವಾತಾವರಣ : ನಿಖಿತಾ ಕ್ಯಾಬ್‌ನಲ್ಲಿ ಪ್ರಯಾಣಿಸಬೇಕೆಂದರೆ ಸಾಕಷ್ಟು ಹೆದರಿಕೊಳ್ಳುತ್ತಾಳೆ. ತನ್ನೊಂದಿಗೆ ಯಾವಾಗ ಏನಾಗುತ್ತೊ ಎಂಬ ಹೆದರಿಕೆ ಅವಳನ್ನು ಕಾಡುತ್ತಿರುತ್ತದೆ. ಡ್ರೈವರ್‌ ಮಿರರ್‌ನಲ್ಲಿ ದಿಟ್ಟಿಸಿ ನೋಡುವುದು ಅವಳನ್ನು ಚುಚ್ಚುತ್ತಿರುತ್ತದೆ.

ಸುರಕ್ಷತೆಯ ಕೊರತೆ : ಕ್ಯಾಬ್‌ಗಳಲ್ಲಿ ಎಲ್ಲಕ್ಕೂ ದೊಡ್ಡ ಸಮಸ್ಯೆಯೆಂದರೆ ಸುರಕ್ಷತೆಯದ್ದು. ಕಂಪನಿಯ ವತಿಯಿಂದ ಪಿಕ್‌ ಅಂಡ್‌ ಡ್ರಾಪ್‌ಗಾಗಿ ಯಾವ ವಾಹನವನ್ನು ಕಳುಹಿಸಲಾಗುತ್ತದೊ ಅದರಲ್ಲಿ ಸೆಕ್ಯೂರಿಟಿ ಗಾರ್ಡ್‌ನ್ನು ನೇಮಿಸಬೇಕು.

ದೆಹಲಿ ಎನ್‌ಸಿಆರ್‌ನಲ್ಲಿರುವ 56% ಕ್ಯಾಬ್‌ ಡ್ರೈವರ್‌ಗಳು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಾರೆ ಎನ್ನುವುದು ಒಂದು ಸಮೀಕ್ಷೆಯಿಂದ ಖಚಿತವಾಯಿತು. ಆ್ಯಪ್‌ ಬೇಸ್ಡ್, ರೇಡಿಯೊ ಟ್ಯಾಕ್ಸಿ ಹಾಗೂ ಇತರೆ ಟ್ಯಾಕ್ಸಿಗಳನ್ನು ನಿರ್ವಹಿಸುವ ಕಂಪನಿಗಳು ಎಂದೂ ತಮ್ಮ ಚಾಲಕರನ್ನು ತಪಾಸಣೆಗೊಳಪಡಿಸುವುದಿಲ್ಲ. ಹಾಗಾದರೆ ಇದು ಪ್ರಯಾಣಿಕರಿಗೆ ಎಷ್ಟರಮಟ್ಟಿಗೆ ಸರಿ? ಕ್ಯಾಬ್‌ ಆಗಿರಲಿ ಅಥವಾ ಯಾವುದೇ ಸಾರ್ವಜನಿಕ ವಾಹನದಲ್ಲಿ ಪ್ರಯಾಣಿಸುವಾಗ ಒಂದಿಷ್ಟು ಎಚ್ಚರಿಕೆಗಳನ್ನು ವಹಿಸಿದರೆ ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು.

– ಕ್ಯಾಬ್‌ನ ಸೇವೆ ತೆಗೆದುಕೊಳ್ಳುವಾಗ ಗಾಡಿಯ ಪರ್ಮಿಟ್‌ನ್ನು ಪರಿಶೀಲಿಸಿ.

– ಕ್ಯಾಬ್‌ ಬುಕ್‌ ಮಾಡುವಾಗ ಡ್ರೈವರ್‌ನ ಹೆಸರು ಫೋನ್‌ ನಂಬರ್‌ ಅವಶ್ಯವಾಗಿ ಒಂದು ಕಡೆ ಬರೆದಿಟ್ಟುಕೊಳ್ಳಿ. ಅವಶ್ಯಕತೆ ಇದ್ದರೆ ಚಾಲಕನನ್ನು ಸಂಪರ್ಕಿಸಬಹುದು.

– ನಿಮಗೆ ಪರಿಚಿತ ಮಾರ್ಗದಲ್ಲಿಯೇ ಸಾಗಲು ಕ್ಯಾಬ್‌ ಡ್ರೈವರ್‌ಗೆ ಹೇಳಿ.

– ಲೊಕೇಶನ್‌ ಪ್ರಕಾರ ಸಾಗಲು ತಿಳಿಸಿ. ಈ ದಾರಿ ನನಗೆ ಅಪರಿಚಿತ ಎಂದು ಡ್ರೈವರ್‌ ಮುಂದೆ ತೋರಿಸಿಕೊಳ್ಳಬೇಡಿ.

– ಪ್ರಯಾಣದ ಸಂದರ್ಭದಲ್ಲಿ ಮೊಬೈಲ್‌ ಫೋನ್‌ನ್ನು ಕೈಯಲ್ಲಿಯೇ ಇಟ್ಟುಕೊಳ್ಳಿ. ಫೋನ್‌ನಲ್ಲಿ ಸಾಕಷ್ಟು ಚಾರ್ಜ್‌ ಇದೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ನಿಮ್ಮ ಪರಿಚಿತರನ್ನು ಸಂಪರ್ಕಿಸಲು ಯಾವುದೇ ಸಮಸ್ಯೆ ಆಗಬಾರದು.

– ಕ್ಯಾಬ್‌ ಡ್ರೈವರ್‌ ನಿಮ್ಮೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಯತ್ನಿಸುತ್ತಿದ್ದ, ಆದರೆ ಮಾಡಲು ಆಗಲಿಲ್ಲ ಎಂದಾದರೆ, ಅಂತಹ ಸಂದರ್ಭದಲ್ಲಿ ನೀವು ತಕ್ಷಣವೇ ಕ್ಯಾಬ್‌ನ ಕಂಪನಿಗೆ ಫೋನ್‌ ಮಾಡಿ ಪೂರ್ತಿ ವಿಷಯ ತಿಳಿಸಿ. ಏಕೆಂದರೆ ಮುಂದೆ ಆ ಚಾಲಕನಿಂದ ಬೇರಾರಿಗೂ ಸಮಸ್ಯೆ ಆಗಬಾರದು.

– ಅಂದಹಾಗೆ ಹೆಚ್ಚಿನ ಕ್ಯಾಬ್‌ಗಳಲ್ಲಿ ಜಿಪಿಎಸ್‌ ಟ್ಯ್ರಾಕರ್‌ ಅಳವಡಿಸಲಾಗಿರುತ್ತದೆ. ಒಂದು ವೇಳೆ ಅಳವಡಿಸದೇ ಇದ್ದರೆ ನೀವು ನಿಮ್ಮ ಫೋನ್‌ನಿಂದ ನಿಮ್ಮ ಮನೆಯವರಿಗೆ ನೀವು ಪ್ರಸ್ತುತ ಎಲ್ಲಿದ್ದೀರಿ ಎಂಬ ಮಾಹಿತಿ ತಿಳಿಸುತ್ತಿರಬಹುದು.

– ಕ್ಯಾಬ್‌ನಲ್ಲಿರುವಾಗ ನೀವು ನಿಮ್ಮ ಗೆಳತಿಯರು, ಸಂಬಂಧಿಕರು ಯಾರಾದರೊಂದಿಗಾದರೂ ಮಾತನಾಡುತ್ತಾ ಇರಿ. ನೀವು ಇಲ್ಲಿ ಯಾರದ್ದೋ ಸಂಪರ್ಕದಲ್ಲಿದ್ದೀರಿ ಎಂದು ಡ್ರೈವರ್‌ಗೆ ತಿಳಿಯುತ್ತದೆ. ಜೊತೆಗೆ ಇದು ನೀವು ನಿದ್ರೆ ಮಾಡದೇ ಇರಲು ಒಳ್ಳೆಯ ಉಪಾಯ.

– ನಿಮ್ಮ ಬ್ಯಾಗ್‌ನಲ್ಲಿ ಪೆಪ್ಪರ್‌ ಸ್ಪ್ರೇ ಇಟ್ಟುಕೊಳ್ಳಿ.

– ಕ್ಯಾಬ್‌ನಲ್ಲಿ ನಿಮ್ಮೊಂದಿಗೆ ಬೇರೆ ಯಾರಾದರೂ ಪ್ರಯಾಣ ಮಾಡುತ್ತಿದ್ದರೆ, ನಿಮ್ಮ ಪರಿಚಿತರಿಗೆ ಅವರ ಬಗ್ಗೆ ಕೂಡ ಮಾಹಿತಿ ಕೊಡಿ.

ನಿಮಗೆ ನೀವೇ ಬಾಡಿಗಾರ್ಡ್‌ ಆಗಿ

ತಜ್ಞರ ಪ್ರಕಾರ, ಯಾವುದೇ ಒಂದು ದುರ್ಘಟನೆಗೆ 3 ಸಂಗತಿಗಳು ಮುಖ್ಯವಾಗುತ್ತವೆ. ಮೊದಲನೆಯವ ಅಪರಾಧಿ, ಎರಡನೆಯವಳು ಸಂತ್ರಸ್ಥೆ, ಮೂರನೆಯದು ಅವಕಾಶ, ಇವುಗಳಲ್ಲಿ ಯಾವುದಾದರೂ ಒಂದು ಇಲ್ಲದಿದ್ದರೆ ಅಪರಾಧ ಘಟಿಸುವುದಿಲ್ಲ. ಇವುಗಳಲ್ಲಿ ಎಲ್ಲಕ್ಕೂ ಸುಲಭ ಹಾಗೂ ಅತ್ಯವಶ್ಯ ಸಂಗತಿಯೆಂದರೆ ಅವಕಾಶ ಕೊಡುವುದರಿಂದ ದೂರ ಇರುವುದರಿಂದ, ಆ ಬಳಿಕದ ಸರದಿ ತಮ್ಮನ್ನು ತಾವು ಘಟನೆಯಲ್ಲಿ ಬಲಿಪಶು ಮಾಡುವುದರಿಂದ ಹೇಗೆ ದೂರ ಇರುವುದು ಮತ್ತು ಅಪರಾಧಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದು, ಅಪರಾಧಿಗೆ ಅವಕಾಶ ಕೊಡುವುದರಿಂದ ಹೇಗೆ ರಕ್ಷಿಸಿಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳಿ.

– ಆತ್ಮವಿಶ್ವಾಸದಿಂದಿರುವಂತೆ ತೋರಿಸಿಕೊಳ್ಳಿ.

– ತಲೆ ತಗ್ಗಿಸಿ ನೆಲ ನೋಡುತ್ತ ನಡೆಯುವ ಬದಲು ಎಚ್ಚರಿಕೆ ಹಾಗೂ ಜಾಗೃತ ಹೆಜ್ಜೆ ಇಡಿ.

– ನಿಮಗೆ ಯಾವುದೊ ಒಂದು ಭಾಗದ ನಿರ್ದಿಷ್ಟ ರಸ್ತೆಯ ಬಗ್ಗೆ ಮಾಹಿತಿ ಇರದೆ ಇದ್ದರೆ ಅಪರಿಚಿತರಿಗೆ ಅದರ ಬಗ್ಗೆ ಹೇಳಲು ಹೋಗಬೇಡಿ.

– ನಿಮಗೆ ಎಂಥದೇ ಅನಿವಾರ್ಯತೆ ಇದ್ದರೂ ಅಪರಿಚಿತ ಜನರಿಂದ ಯಾವುದೇ ಲಿಫ್ಟ್ ತೆಗೆದುಕೊಳ್ಳಬೇಡಿ.

– ಟ್ರಾಫಿಕ್‌ನ ತದ್ವಿರುದ್ಧ ದಿಸೆಯಿಂದ ಅಂದರೆ ಎದುರಿಗಿನಿಂದ ಬರುವ ವಾಹನಗಳು ನಿಮಗೆ ಸ್ಪಷ್ಟವಾಗಿ ಗೋಚರಿಸಬೇಕು. ಇಂತಹದರಲ್ಲಿ ಹಿಂದಿನಿಂದ ಹಲ್ಲೆ ನಡೆಯದು.

– ಯಾರಾದರೂ ನಿಮ್ಮನ್ನು ಬೆನ್ನಟ್ಟಿರುವುದು ಕಂಡು ಬಂದರೆ ನಿಮಗೆ ಕಂಡುಬಂದ ಯಾವುದಾದರೊಂದು ಮನೆಯ ಕಾಲ್ ಬೆಲ್ ಒತ್ತಿ. ಅವರಿಗೆ ಎಲ್ಲ ವಿಷಯನ್ನು ತಿಳಿಸಿಬಿಡಿ, ಹಿಂಜರಿಯಬೇಡಿ. ಹಗಲಾಗಿರಬಹುದು ಅಥವಾ ರಾತ್ರಿ, ನಿಮ್ಮ ತಿಳಿವಳಿಕೆಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಪ್ರಯತ್ನಿಸಿ.

– ವಿನುತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ