ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ 51ನೇ ವಾರ್ಷಿಕ ಕೇಕ್ ಶೋ ಆರಂಭಗೊಂಡಿದ್ದು, ಜನವರಿ 4ರವರೆಗೆ ನಡೆಯಲಿದೆ.
ಶೆಫ್‌ಗಳ ಕಲಾತ್ಮಕ ಕೈಚಳಕದಲ್ಲಿ ಮೂಡಿಬಂದಿರುವ 25ಕ್ಕೂ ಹೆಚ್ಚು ವೈವಿಧ್ಯಮಯ ಕೇಕ್ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ಈ ಪ್ರದರ್ಶನದಲ್ಲಿ ಡಿಸ್ನಿ ಕ್ಯಾಸಲ್, ಧಾರ್ಮಿಕ ದೇವಾಲಯಗಳು ಸೇರಿದಂತೆ ವಿಶಿಷ್ಟ ಕೇಕ್‌ಗಳನ್ನು ಕಣ್ತುಂಬಿಕೊಳ್ಳಬಹುದು.
ಕೇಕ್ ಶೋ ಎಂದಾಕ್ಷಣ ನೆನಪಾಗುವುದು ಕ್ರಿಸ್ಮಸ್. ಆದರೆ ಕ್ರಿಸ್ಮಸ್ಗೂ ಮುನ್ನವೇ ಅರಮನೆ ಮೈದಾನದಲ್ಲಿ 51ನೇ ವಾರ್ಷಿಕ ಕೇಕ್ ಶೋ ಆಯೋಜಿಸಲಾಗಿದೆ.
ಬೆಳಗ್ಗೆ 10 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಉಚಿತ ಪ್ರದರ್ಶನವಿರಲಿದೆ. ಶೆಫ್ ಗಳ ಕೈಚಳಕದಲ್ಲಿ ತರಹೇವಾರಿ ಕೇಕ್ ಗಳು ಮೂಡಿ ಬಂದಿದ್ದು, ಕೇಕ್ಗಳು ಕಣ್ಮನ ಸೆಳೆದವು.
ಕೇಕ್ನಲ್ಲಿ ಮಾಡಿರುವ ವಿಭಿನ್ನ ಬಗೆಯ ಕಲಾಕೃತಿಗಳು ಜನರ ಗಮನ ಸೆಳೆಯುತ್ತಿದ್ದು, ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಧರ್ಮಕ್ಕೆ ಸಂಬಂಧಿಸಿದ ದೇವರನ್ನು ಮತ್ತು ದೇವಾಲಯಗಳನ್ನು ಕೇಕ್ ಮೂಲಕ ತಯಾರಿಸಲಾಗಿದೆ. ಕೇವಲ ಕೈಗಳಿಂದ ಮಾತ್ರವಲ್ಲದೇ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕೇಕ್‌ಗಳನ್ನು ತಯಾರಿಸಲಾಗಿದೆ.
ಡಿಸ್ನಿ ಕ್ಯಾಸ್ಟಲ್, ತಮಿಳುನಾಡಿನ ವೆಲಂಕಿ ಚರ್ಚ್ ಕೇಕ್, ಒಡಿಶಾದ ಜಗನಾಥ ಪುರಿ, ಕಾಂತರ ಸಿನಿಮಾದ ಯಕ್ಷಗಾನ ಕಲೆ, ಮಕ್ಕಳನ್ನು ಆರ್ಕಷಿಸುವ ಪಾಂಡ, ಮಾಸ್ಟರ್ ಶೆಫ್, ವೆಡಿಂಗ್ ಕೇಕ್, ವಿಕ್ಟೋರಿಯಾ ಮಾದರಿಯ ಕೇಕ್, ರ್ಯಾಗ್ ಟು ರಿಚಸ್, ಮೋವಾನಾ ಸಿನಿಮಾದ ಹಡಗು, ಜಿಆರ್ ಬಿ ಬಾಟಲ್, ಕ್ರಿಸ್ ಮಸ್ ಟ್ರೀ, ಹೀಗೆ ನಾನಾ ರೀತಿಯ ಕೇಕ್ ಕಲಾಕೃತಿಗಳನ್ನು ತಯಾರಿಸಲಾಗಿದೆ.
ಕೇಕ್ ನಲ್ಲಿ ಅರಳಿದ 18 ಅಡಿ ಎತ್ತರದ ರಾಯಲ್ ಡ್ರೀಮ್ ಕ್ಯಾಸಲ್, ಸೇಕ್ರೆಡ್ ಸೀ ಬಾಸಿಲಿಕಾ ವೇಳಾಂಕಣ ಚರ್ಚ್ ಕೇಕ್ ಪ್ರದರ್ಶನ ಕೇಂದ್ರಬಿಂದುವಾಗಿವೆ. 51 ನೇ ವರ್ಷದ ಸಂಭ್ರಮದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಕಲೆಯ ಸಮ್ಮಿಲನದೊಂದಿಗೆ ನಡೆಯುತ್ತಿರುವ ಕೇಕ್ ಉತ್ಸವ ಈಗ ಕೇಕ್ ಪ್ರಿಯರಿಗೆ ಸಂತಸ ತಂದಿದೆ.





