ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯೂರು ಶಾಸಕರು ಹಾಗೂ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ನಿಧನರಾಗಿದ್ದಾರೆ.
ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಧಾಕರ್ ಭಾನುವಾರ ಮುಂಜಾನೆ 3:15ಕ್ಕೆ ಕೊನೆಯುಸಿರೆಳೆದಿದ್ದಾರೆ. ಸುಧಾಕರ್ ನಿಧನದ ಕುರಿತು ಕಿಮ್ಸ್ ಆಸ್ಪತ್ರೆ ಅಧಿಕೃತ ಘೋಷಣೆ ಮಾಡಿದೆ.
ಮೊಣಕಾಲು ಶಸ್ತ್ರಚಿಕಿತ್ಸೆ ಸಂಬಂಧ ಸಚಿವ ಸುಧಾಕರ್ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಶಸ್ತ್ರಚಿಕಿತ್ಸೆ ನಂತರ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡು ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಬಳಿಕ ಅವರನ್ನು ಮಣಿಪಾಲ್ ಆಸ್ಪತ್ರೆಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆಗಿನಿಂದಲೂ ಅವರು ಐಸಿಯುನಲ್ಲಿಯೇ ಇದ್ದರು.
ಭಾನುವಾರ ಮಧ್ಯಾಹ್ನ ಬೆಂಗಳೂರಿನ ಕೆಪಿಸಿಸಿ ಕಚೇರಿ ಬಳಿ ಸುಧಾಕರ್ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಸ್ವಕ್ಷೇತ್ರ ಹಿರಿಯೂರು ನೆಹರು ಮೈದಾನದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ನಂತರ ಅಲ್ಲಿಂದ ಚಳ್ಳಕೆರೆ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನ ಮಾಡಲಾಗಿದ್ದು, ಸೋಮವಾರ ಚಳ್ಳಕೆರೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.





