ಬೆಂಗಳೂರಿನ ಕಬ್ಬನ್ ಪಾರ್ಕ್ಗೆ ಹೊಸ ಕಳೆ ಬಂದಿದೆ. ಅದಕ್ಕೆ ಕಾರಣ ಹೂಗಳ ಲೋಕ. ಹೌದು.. ರಾಜ್ಯ ತೋಟಗಾರಿಕಾ ಇಲಾಖೆ ನವೆಂಬರ್ 25ರಿಂದ ಆರಂಭಿಸಿದ್ದು, 13 ದಿನಗಳ ಕಾಲ ಕಣ್ಮನ ತಣಿಸುತ್ತಿದೆ. ಹೂಗಳ ಹಬ್ಬ-2026 ಅನ್ನೋ ಪರಿಕಲ್ಪನೆಯಲ್ಲಿ ಈ ಬಾರಿ ಫ್ಲವರ್ ಶೋ ನಡೆಯುತ್ತಿದ್ದು, ತರೇಹವಾರಿ ಹೂಗಳಿಂದ ಕಬ್ಬನ್ ಪಾರ್ಕ್ ನಲ್ಲಿ ವಿವಿಧ ಥೀಮ್ ಗಳನ್ನು ರೆಡಿ ಮಾಡಿದ್ದು, ಬರೋಬ್ಬರಿ 15 ಲಕ್ಷ ಹೂಗಳನ್ನ ಬಳಸಲಾಗಿದೆ.
ವೀರವನಿತೆಯರು, ನಮ್ಮ ಮೆಟ್ರೋ, ಹೊಯ್ಸಳ ಕಲೆ ಮುಂತಾದ ಆಕರ್ಷಕ ಕಲಾಕೃತಿಗಳು ಎಲ್ಲರನ್ನ ಕೈ ಬೀಸಿ ಕರೆಯುತ್ತಿವೆ. ಈ ಫ್ಲವರ್ ಶೋನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯುತ್ತಿದೆ. ಅಷ್ಟೇ ಅಲ್ಲ, ಸೇನಾ ಪ್ರದರ್ಶನವೂ ಇರಲಿದ್ದು, ವಯಸ್ಕರಿಗೆ 50 ರೂಪಾಯಿ, ಮಕ್ಕಳಿಗೆ 20 ರೂಪಾಯಿ ಶುಲ್ಕ ಪಡೆಯಲಾಗುತ್ತಿದೆ.
ಫೌಂಟೇನ್ ವೃತ್ತದಿಂದ ಬ್ಯಾಂಡ್ ಸ್ಟಾಂಡ್ ಮಾರ್ಗವಾಗಿ ಬಾಲಭವನದವರೆಗೂ ಈ ಪ್ರದರ್ಶನ ಹರಡಿಕೊಂಡಿದ್ದು, ಪ್ರತಿ ದಿನ ಸಾವಿರಾರು ಜನರು ಭೇಟಿ ಕೊಡುತ್ತಿದ್ದಾರೆ. ವಿವಿಧ ಕಾನ್ಸೆಪ್ಟ್ನಲ್ಲಿ ರೆಡಿಯಾಗಿರುವ ಕಲಾಕೃತಿಗಳನ್ನ ನೋಡಿ ಜನರು ಖುಷಿ ಪಡುತ್ತಿದ್ದಾರೆ.
ತಾಯಿ ಭುವನೇಶ್ವರಿ ದೇವಿ, ಕರ್ನಾಟಕದ ನಕ್ಷೆ, ಹಸಿರು ವರ್ಟಿಕಲ್ ಗಾರ್ಡನ್ನಲ್ಲಿ ನಾಡಿನ ವೀರ ವನಿತೆಯರ ಶೌರ್ಯದ ಅನಾವರಣ, ಹೊಯ್ಸಳ ವಾಸ್ತುಶಿಲ್ಪ, ಗಂಡಭೇರುಂಡ ಹಾಗೂ ನವದೆಹಲಿಯ 'ಇಂಡಿಯಾ ಗೇಟ್', ಆಕರ್ಷಕ ಹೂಗಳಿಂದ ಸಿಂಗಾರಗೊಂಡ ಮೆಟ್ರೋ ರೈಲಿನ ಮಾದರಿ, ವಿವಿಧ ಕಾರ್ಟೂನ್ ಪಾತ್ರಗಳು, ನವಿಲುಗಳು, ಪಾಂಡಾ ಮತ್ತು ಸ್ಟಾರ್ಫಿಶ್ ಪ್ರತಿಕೃತಿ, ತರಕಾರಿ ಮತ್ತು ಹೂಗಳಿಂದ ಸಿದ್ಧಪಡಿಸಿದ ಆನೆ, ಚಿಟ್ಟೆ, ಪುಷ್ಪ ರಂಗೋಲಿ... ಹೀಗೆ ಹೂಗಳಿಂದಲೇ ಅಲಂಕಾರ ಮಾಡಿರುವ ಪ್ರತಿಯೊಂದು ಪ್ರತಿಕೃತಿ ಮುಂದೆ ನಿಂತು ಜನರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
2025ರಲ್ಲಿ 2025ರಲ್ಲಿ, ತರಕಾರಿಗಳನ್ನು ಬಳಸಿ ಮಾಡಿದ ಆನೆಯ ಶಿಲ್ಪ, ಹಂಪಿಯ ಕಲ್ಲಿನ ರಥದ ಹೂವಿನ ಪ್ರತಿಕೃತಿ, ಹೂವುಗಳಿಂದ ರಚಿಸಿದ ಕರ್ನಾಟಕದ ನಕ್ಷೆ, ಪಕ್ಷಿಗಳು, ಪ್ರಾಣಿಗಳ ಬಣ್ಣ ಬಣ್ಣದ ಕಲಾಕೃತಿಗಳನ್ನು ಸಂದರ್ಶಕರು ವೀಕ್ಷಿಸಿದ್ದರು. ಮಕ್ಕಳ ದಿನಾಚರಣೆ, ಕರ್ನಾಟಕ ರಾಜ್ಯೋತ್ಸವವನ್ನು ಆಧರಿಸಿದ ವಿಶೇಷ ಪ್ರದರ್ಶನಗಳಿಗಾಗಿ 35,000ಕ್ಕೂ ಹೆಚ್ಚು ಗಿಡಗಳನ್ನು ಬಳಸಲಾಗಿತ್ತು. ಈ ಬಾರಿ ಅದಕ್ಕಿಂತಲೂ ಹೆಚ್ಚು ಶ್ರಮವಹಿಸಿ ಬರೋಬ್ಬರಿ 15 ಲಕ್ಷ ಹೂಗಳಿಂದ ಅಲಂಕಾರ ಮಾಡಿರುವುದು ವಿಶೇಷವಾಗಿದೆ.





