ಪ್ಯಾರಾ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ (CWG 2026) ಭಾಗವಹಿಸಿ ಕಂಚಿನ ಪದಕ ಪಡೆದ.ಎಸ್ ಶಿಲ್ಪಾ ಅವರಿಗೆ ಅವರಿಗೆ 15 ಲಕ್ಷ ರೂ. ನಗದು ಬಹುಮಾನ ಹಾಗೂ ಸರ್ಕಾರದ ಗ್ರೂಪ್-ಬಿ ಹುದ್ದೆ ನೀಡಿ ಗೌರವಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ಯಾರಾ ಕಾಮನ್‍ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ಕೆ.ಎಸ್ ಶಿಲ್ಪಾ ಅವರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ಈ ಚಿಕ್ಕ ಕಾರ್ಯಕ್ರಮ ಕ್ರೀಡಾಪಟುಗಳಿಗೆ ನವ ಚೈತನ್ಯ ತುಂಬಲಿದೆ. ಶಿಲ್ಪ ಕೆ.ಎಸ್. ಅವರ ಈ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಈಗಾಗಲೇ ಗ್ಲಾಸ್ಗೋನಲ್ಲಿ ನಡೆದ 2026 ರ ಪ್ಯಾರಾ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ 8 ಜನರಿಗೆ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂ. ನೀಡಲಾಗಿದೆ. ಪ್ಯಾರಾ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುವ ಕೆ.ಎಸ್ ಶಿಲ್ಪಾ ಅವರಿಗೆ 15 ಲಕ್ಷ ರೂ. ನಗದು ಬಹುಮಾನ ಹಾಗೂ ಸರ್ಕಾರದ ಗ್ರೂಪ್-ಬಿ ಹುದ್ದೆ ನೀಡಿ ಗೌರವಿಸಲಾಗುವುದು. ಇನ್ನುಳಿದಂತೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗುವುದು. ಶೀಘ್ರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಂದ ಶಿಲ್ಪ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಶಿಲ್ಪಾ ಅವರನ್ನು ಸನ್ಮಾನಿಸಿದ ವಿಧಾನ ಪರಿಷತ್ ಸದಸ್ಯ ಹಾಗೂ ಕರ್ನಾಟಕ ಒಲಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಗ್ಲಾಸ್ಗೋನಲ್ಲಿ ನಡೆದ 2026 ರ ಪ್ಯಾರಾ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಶಾರ್ಟ್ ಪುಟ್ ಕ್ರೀಡೆಯಲ್ಲಿ ಕಂಚಿನ ಪದಕ ಪಡೆಯುವ ಮೂಲಕ ದೇಶಕ್ಕೆ ಹಾಗೂ ನಮ್ಮ ಕರ್ನಾಟಕಕ್ಕೆ ಕೀರ್ತಿ ತಂದಿರುವ ಕೆ.ಎಸ್ ಶಿಲ್ಪಾ ಅವರು ಈ ನಾಡಿನ ಸಾವಿರಾರು ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ವಿಜೇತರು ತಾಯ್ತಾಡಿಗೆ ಆಗಮಿಸಿದಾಗ ಈ ರೀತಿಯ ಗೌರವ ಸಲ್ಲಿಸುವ ಮೂಲಕ ಕರ್ನಾಟಕ ಕ್ರೀಡಾ ಇಲಾಖೆ ಕ್ರೀಡಾ ಪಟುಗಳಲ್ಲಿ ಸ್ಪೂರ್ತಿ ತುಂಬಿದೆ. ಈಗಾಗಲೇ ಕ್ರೀಡಾ ಇಲಾಖೆ ಒಲಿಂಪಿಕ್ಸ್ ಪದಕ ಗೆದ್ದವರಿಗೆ ಮೊದಲ ನಗದು ಬಹುಮಾನ 6 ಕೋಟಿ ರೂ., 2ನೇ ಸ್ಥಾನ ಪಡೆದವರಿಗೆ 5 ಕೋಟಿ ರೂ. ಹಾಗೂ ತೃತೀಯ ಸ್ಥಾನಕ್ಕೆ 3 ಕೋಟಿ ರೂ. ಬಹುಮಾನ ಘೋಷಿಸಿದೆ. ಜೊತೆಗೆ ಸರ್ಕಾರಿ ಹುದ್ದೆಯನ್ನು ಸಹ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಇತರೆ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ವಿಜೇತರಿಗೆ ಅನೇಕ ಆಕರ್ಷಕ ಕೊಡುಗೆಗಳನ್ನು ಕರ್ನಾಟಕ ರಾಜ್ಯ ಘೋಷಿಸಿದೆ.
ಕ್ರೀಡಾಪಟು ಕೆ.ಎಸ್ ಶಿಲ್ಪಾ ಮಾತನಾಡಿ, ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಬಂದಿರುವುದು ಖುಷಿಯಾಗಿದೆ. ಈ ರೀತಿಯ ಸ್ವಾಗತ ನೀಡಿ ಸನ್ಮಾನಿಸಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದಗಳು. ಈ ನನ್ನ ಸಾಧನೆಗೆ ನನ್ನ ಕೋಚ್‍ಗಳು ಮುಖ್ಯ ಕಾರಣ, ಅವರೆಲ್ಲರಿಗೂ ಧನ್ಯವಾದ ತಿಳಿಸಲು ಬಯಸುತ್ತೇನೆ. ಪ್ರತಿಯೊಬ್ಬರು ಶ್ರಮಿಸಿದರೆ ಸಾಧನೆ ಖಚಿತ, ನಮ್ಮಂತ ಕ್ರೀಡಾಪಟುಗಳಿಗಾಗಿ ಸರ್ಕಾರ ಸಹ ಅನೇಕ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಅನೇಕರು ಸಾಧನೆಗೆ ಧುಮುಕುವಂತೆ ಹುರಿದುಂಬಿಸುತ್ತದೆ. ಕಷ್ಟ ಪಟ್ಟರೆ ಪ್ರತಿಫಲ ಗ್ಯಾರಂಟಿ ಎಂದು ಹೇಳಿದರು.





