ಭೂಮಿ ಯಾರನ್ನೂ ಹೊರತಳ್ಳಲ್ಲ. ಮನುಷ್ಯ ಮಾತ್ರ ಗಡಿ ಹಾಕುತ್ತಾನೆ. ಇದನ್ನು ನಾವೇ ಅಳಿಸಬೇಕು. ಆಸ್ತಿಗಳಿಂದಲ್ಲ, ಅಕ್ಷರಗಳಿಂದ ನಾವು ಗೆಲ್ಲಬೇಕು ಎಂದು ಹಿರಿಯ ಸಾಹಿತಿ ಬಾನು ಮುಷ್ತಾಕ್​ ಅವರು ಹೇಳಿದ್ದಾರೆ.

ಮೈಸೂರು ದಸರಾ ಉದ್ಘಾಟಿಸಿ ಮಾತನಾಡಿದ ಬಾನು ಮುಷ್ತಾಕ್, ದಸರಾ ಉತ್ಸವದ ಉದ್ಘಾಟನೆಯನ್ನು ತಾಯಿ ಚಾಮುಂಡೇಶ್ವರಿಯ ಕೃಪಾಶೀರ್ವಾದದಿಂದ ಮಾಡಿದ್ದೇವೆ. ನನ್ನ ಆಪ್ತ ಗೆಳತಿ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರು. ಆದರೆ ತಾಯಿ ಚಾಮುಂಡೇಶ್ವರಿ ನನ್ನ ಈ ರೀತಿ ಕರೆಸಿಕೊಳ್ಳುತ್ತಿದ್ದಾಳೆ. ಒಂದಷ್ಟು ವಿರೋಧಗಳು ವ್ಯಕ್ತವಾದರೂ ನನ್ನನ್ನ ತಾಯಿ ಕರೆಸಿಕೊಂಡಿದ್ದಾಳೆ. ಚಾಮುಂಡಿ ತಾಯಿಯ ಕೃಪೆಯ ನೆರಳಿನಲ್ಲಿ ನಾನು ನಿಮ್ಮೆದುರು ನಿಂತಿದ್ದೇನೆ ಎಂದರು.ಇದು ಜೀವನದ ಅತ್ಯಂತ ಗೌರವದ ಸಂಗತಿ. ನಾಡಿನ ಸಂಸ್ಕೃತಿಯ ಉತ್ಸವ ಹಾಗೂ ಸಮನ್ವಯದ ಮೇಳ. ಈ ನೆಲದಲ್ಲಿ ಹುಟ್ಟಿದ್ದ ಪ್ರತಿಯೊಬ್ಬರಿಗೂ ಇದರ ಅರ್ಹತೆ ಇದೆ. ಎಲ್ಲರನ್ನೂ ಒಳಗೊಂಡು ಆಚರಿಸುವ ಹಬ್ಬ ಇದು. ನನ್ನ ಆಪ್ತ ಸಂಬಂಧಿಯೊಬ್ಬರು ನನಗೆ ಮಾವ ಆಗಬೇಕು. ಅವರು ಇಲ್ಲೇ ಬೆಳಗೊಳದಲ್ಲಿದ್ದರು. ಮಹಾರಾಜರ ಅಂಗರಕ್ಷಣೆಯ ತಂಡದಲ್ಲಿ ಸೈನಿಕರಾಗಿದ್ದರು. ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಂ ಅವರನ್ನು ನಂಬಿದ್ದರು. ಅವರ ಅಂಗಪಡೆಯ ಸದಸ್ಯರನ್ನಾಗಿ ಮಾಡಿಕೊಂಡಿದ್ದರು. ನನ್ನ ಧಾರ್ಮಿಕ ನಂಬಿಕೆಗಳು ಮಾನವೀಯ ದರ್ಶನಗಳನ್ನು ಕಲಿಸಿದೆ.

ಎಲ್ಲರನ್ನು ಗೌರವಿಸುವುದನ್ನು ಕಲಿಸಿದೆ. ಇದು ಸರ್ವಜನಾಂಗದ ಶಾಂತಿಯ ತೋಟ. ನಾವು ಎಲ್ಲರನ್ನೂ ಗೌರವಿಸೋಣ. ಈ ನೆಲದ ಹೂವುಗಳು ಐಕ್ಯತೆಯಿಂದ ಕೂಡಿರಲಿ. ನಮ್ಮೊಳಗಿನ ದ್ವೇಷ, ಅಸಹಿಷ್ಣತೆ ಎಲ್ಲವನ್ನೂ ಹೋಗಿಸಲಿ. ಇಡೀ ಜಗತ್ತಿನ ಮಾನವ ಕುಲಕ್ಕೆ ಶಾಂತಿ, ಸಹನೆ ನ್ಯಾಯದ ದೀಪ ಬೆಳಗಿಸಲಿ. ಇಲ್ಲಿ ಬೆಳಗಿದ ದೀಪ ಜಗತ್ತನ್ನು ಬೆಳಗಲಿ ಎಂದು ಆಶಿಸಿದರು. ಈ ನೆಲದ ಪರಂಪರೆ ಇದು ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳುತ್ತದೆ. ಪ್ರತಿ ಹೂ ತನ್ನ ತೋಟದಲ್ಲಿ ಅರಳಲಿ. ಒಟ್ಟಿಗೆ ಸೇರಿದಾಗ ಎಲ್ಲರೂ ಒಂದಾಗಲಿ. ನಾವೆಲ್ಲರೂ ಒಂದೇ ಗಗನದ ಪಯಣಿಕರು. ಭೂಮಿ ಯಾರನ್ನೂ ಹೊರತಳ್ಳಲ್ಲ. ಮನುಷ್ಯ ಮಾತ್ರ ಗಡಿ ಹಾಕುತ್ತಾನೆ. ಇದನ್ನು ನಾವೇ ಅಳಿಸಬೇಕು. ಆಸ್ತಿಗಳಿಂದಲ್ಲ, ಅಕ್ಷರಗಳಿಂದ ನಾವು ಜನರನ್ನು ಗೆಲ್ಲಬೇಕು.

ಕೃಷ್ಣರಾಜ ಒಡೆಯರ್ ಸಾಮಾಜಿಕ ನ್ಯಾಯದ ದೊರೆ ಆಗಿದ್ದರು. ತಾರತಮ್ಯ ತೋರಲಿಲ್ಲ. ಶಕ್ತಿಯನ್ನು ಹಂಚಿಕೊಂಡರೆ ದೀರ್ಘ ಕಾಲ ಉಳಿಯುತ್ತೆ ಎಂದು ಹೇಳಿದ್ದರು. ನಾನು ಒಬ್ಬ ಸಾಹಿತಿ, ಲೇಖಕಿ. ಸಾಹಿತ್ಯದ ಮೂಲಕ ಸಂದೇಶ ಸಾರುತ್ತೇನೆ. ಪ್ರೀತಿಯ ಸಮಾಜವನ್ನು ಕಟ್ಟೋಣ, ಎಲ್ಲರಿಗೂ ಸಮಪಾಲು ಸಮಬಾಳು ಇರಲಿ. ನಾನು ನೂರಾರು ದೀಪಗಳನ್ನು ಬೆಳಗಿದ್ದೇನೆ. ಇವತ್ತು ಪುಷ್ಪಾರ್ಚನೆ ಮಾಡಿದ್ದೇನೆ. ಮಂಗಳಾರತಿ ಸ್ವೀಕರಿಸಿದ್ದೇನೆ. ನನ್ನ ಮತ್ತು ಹಿಂದೂ ಧರ್ಮದ ಸಂಬಂಧ ಆತ್ಮಕಥೆಯಲ್ಲಿ ಬರೆದಿದ್ದೇನೆ. ಅದು ನಾಳೆ ಪ್ರಕಟ ಆಗಲಿದೆ. ಎಷ್ಟೇ ಸವಾಲು ಬಂದ್ರೂ ದಿಟ್ಟವಾಗಿ ನನ್ನನ್ನು ಆಹ್ವಾನ ನೀಡಿ ನೈತಿಕ ಬೆಂಬಲ ನೀಡಿದ ಸಿಎಂ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದ ಅರ್ಪಿಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ