ಮೈಸೂರು ದಸರಾ ಉದ್ಘಾಟಿಸುವವರ ಬಗ್ಗೆ ವಿರೋಧ ವ್ಯಕ್ತಪಡಿಸಿದವರಿಗೆ ಸುಪ್ರೀಂ ಕೋರ್ಟ್​ನಲ್ಲಿಯೂ ಛೀಮಾರಿ ಹಾಕಲಾಗಿದೆ ಎಂದು  ಮುಖ್ಯಮಂತ್ರಿ ಸಿದ್ಧರಾಮಯ್ಯ ಟಾಂಗ್ ನೀಡಿದ್ದಾರೆ.

ಮೈಸೂರು ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಿದ್ಧರಾಮಯ್ಯ, ದಸರಾ ಉತ್ಸವ ರಾಜಕೀಯದ ವಿಷಯವಲ್ಲ ಎಂದು ಹೇಳಿದರು.

ದಸರಾದಲ್ಲಿ ಏರ್ ಶೋ, ದೀಪಾಲಂಕಾರ, ಡ್ರೋನ್ ಶೋ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜನಪ್ರಿಯವಾಗಿವೆ. ಜನರು ಸಂತಸದಿಂದ ಪಾಲ್ಗೊಳ್ಳುವುದೇ ದಸರಾ ಉತ್ಸವ. ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ, ವಸ್ತು ಪ್ರದರ್ಶನ ಪ್ರಾಧಿಕಾರ ಈಗಾಗಲೇ ಅಸ್ತಿತ್ವದಲ್ಲಿದೆ. ಹಾಗಾಗಿ ದಸರಾ ಪ್ರಾಧಿಕಾರದ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟರು.

ಈ ಬಾರಿ ದಸರಾ ಹಬ್ಬವು ಹನ್ನೊಂದು ದಿನಗಳ ಕಾಲ ನಡೆದಿದೆ. ಮೈಸೂರು ದಸರಾ ವಿಶ್ವವಿಖ್ಯಾತವಾಗಿದ್ದು, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜನರ ಆಶೀರ್ವಾದದಿಂದ 8 ಬಾರಿ ದಸರಾದಲ್ಲಿ ಪಾಲ್ಗೊಳ್ಳುವ ಅವಕಾಶ ತನಗೆ ದೊರೆತಿದ್ದು, ಅತ್ಯಂತ ಸಂತೋಷ ತಂದಿದೆ. ದಸರಾ ಜನರ ಹಬ್ಬ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದಾಗ ಮಾತ್ರ ದಸರಾ ಆಯೋಜನೆ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ದಸರಾ ಉತ್ಸವವನ್ನು ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಅಭಿನಂದನೆಗಳು, ದಸರಾ ಉತ್ಸವ ಯಾವುದೇ ಅಡಚಣೆಗಳಿಲ್ಲದೇ ಯಶಸ್ವಿಯಾಗಿ ನಡೆದಿರುವುದು ಸಂತಸ ತಂದಿದೆ. ಇದಕ್ಕಾಗಿ ಶ್ರಮಿಸಿದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು.

ದಸರಾ ಉದ್ಘಾಟಕರ ಬಗ್ಗೆ ಬಿಜೆಪಿಯವರು ವಿರೋಧದ ಧ್ವನಿಯೆತ್ತಿದ್ದರು, ಕರ್ನಾಟಕ ಜಾತ್ಯಾತೀತ ರಾಜ್ಯವಾಗಿದ್ದು, ಸಂವಿಧಾನದ ಬಗ್ಗೆ ಅರಿವಿಲ್ಲದವರೇ ಇಂತಹ ವಿರೋಧ ವ್ಯಕ್ತಪಡಿಸುತ್ತಾರೆ. ಆದ್ದರಿಂದ ಸುಪ್ರೀಂ ಕೋರ್ಟ್ ನಲ್ಲಿಯೂ ಕೂಡ ಛೀಮಾರಿಯಾಯಿತು ಎಂದು ಹೇಳಿದರು.

ದಸರಾವೇಳೆಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡುವುದಿಲ್ಲ ಎಂದು ವಿಪಕ್ಷಗಳು ಭವಿಷ್ಯ ನುಡಿದಿದ್ದರಲ್ಲ ಎಂಬ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ವಿರೋಧ ಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ಅವರ ಭವಿಷ್ಯ ನಿಜವಾಗುವುದಿಲ್ಲ. ಆದರೆ ಪಕ್ಷದ ವರಿಷ್ಠರ ಆದೇಶದಂತೆ ಎಲ್ಲರೂ ನಡೆಯಬೇಕಿದೆ. ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಉತ್ಸವದಲ್ಲಿ ಪುಷ್ಪಾರ್ಚನೆ ಮಾಡುತ್ತೇನೆಂಬ ಭರವಸೆ ಇದೆ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲು , ಬಜೆಟ್ ಮಂಡಿಸಲು ಸಾಧ್ಯವಿಲ್ಲ ಎಂದಿದ್ದರು. ಆದರೂ ನಾನೇ ಎರಡನೇ ಬಾರಿಗೂ ಮುಖ್ಯಮಂತ್ರಿಯಾಗಿ ಮುಂದುವರೆದು ಬಜೆಟ್ ಮಂಡಿಸಿದ್ದೇನೆ ಎಂದರು.

ಸರ್ಕಾರಿ ನೌಕರರ ತುಟ್ಟಿಭತ್ಯ ಬಾಕಿಯಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ತುಟ್ಟಿಭತ್ಯೆ ನೀಡಿದ ನಂತರ ರಾಜ್ಯ ಸರ್ಕಾರವೂ ನೌಕರರಿಗೆ ತುಟ್ಟಿಭತ್ಯೆ ನೀಡುತ್ತದೆ ಎಂದು ಹೇಳಿದರು.

ಈ ವರ್ಷ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿದ್ದು, ಎಲ್ಲ ಜಲಾಶಯಗಳು ತುಂಬಿ, ಉತ್ತಮ ಬೆಳೆಯೂ ಆಗುತ್ತಿದೆ.  ಆದರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದ ಸುಮಾರು 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ.

ರೈತರಿಗೆ ಸಮೀಕ್ಷೆ ನಡೆಸಿ ಬೆಳೆಪರಿಹಾರ ನೀಡುವುದಾಗಿ ಕಲಬುರಗಿಯ ಭೇಟಿ ಸಂದರ್ಭದಲ್ಲಿ ತಿಳಿಸಿದ್ದು, ಸರ್ಕಾರ ಮತ್ತು ಎನ್‌ಡಿಆರ್‌ಎಫ್ ಸೇರಿದಂತೆ ಖುಷ್ಕಿ ಜಮೀನಿನ ತಲಾ ಹೆಕ್ಟೇರ್ ಗೆ 17,000 ರೂ, ನೀರಾವರಿ ಜಮೀನಿಗೆ 17,500 ರೂ ಮತ್ತು ಬಹುಬೆಳೆ ಬೆಳೆಯುವ ಜಮೀನಿಗೆ 31,000 ರೂ ಗಳ ಪರಿಹಾರ ನೀಡುವುದಾಗಿ ತಿಳಿಸಲಾಗಿದೆ. ಆದರೆ ಹೆಚ್ಚಿನ ಮಳೆಯಿರುವುದರಿಂದ ಬೆಳೆಹಾನಿಯ ಜಂಟಿಸಮೀಕ್ಷೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸಮೀಕ್ಷೆಯ ನಂತರ ಬೆಳೆಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್ ಗೂ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ