– ರಾಘವೇಂದ್ರ ಅಡಿಗ ಎಚ್ಚೆನ್.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ.ದೇವರಾಜ್ (67) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದಾಗ ಆರ್.ವಿ.ದೇವರಾಜ್ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದು, ತಕ್ಷಣವೇ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆರ್.ವಿ ದೇವರಾಜ್ ಅವರು ವಿಧಿವಶರಾಗಿದ್ದಾರೆ.
ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಕಾಂಗ್ರೆಸ್ ಮುಖಂಡ ಆರ್.ವಿ ದೇವರಾಜ್ ಅವರು ನಿನ್ನೆ ಚಾಮುಂಡೇಶ್ವರಿ ದರ್ಶನ ಮಾಡಲು ಚಾಮುಂಡಿ ಬೆಟ್ಟಕ್ಕೆ ತೆರಳಿದ್ದರು. ಚಾಮುಂಡಿ ಬೆಟ್ಟಕ್ಕೆ ಹೋಗ್ತಿದ್ದಾಗ ಹೃದಯಾಘಾತ ಸಂಭವಿಸಿದೆ. ಚಿಕ್ಕಪೇಟೆ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದ ಕಾಂಗ್ರೆಸ್ನ ಆರ್.ವಿ ದೇವರಾಜ್ ಬರ್ತ್ಡೇ ಖುಷಿಯಲ್ಲಿದ್ದಾಗಲೇ ವಿಧಿವಶರಾಗಿದ್ದಾರೆ. ನಿನ್ನೆಯಿಂದಲೇ ಚಿಕ್ಕಪೇಟೆಯಾದ್ಯಂತ ಹುಟ್ಟುಹಬ್ಬದ ಕಟೌಟ್ಸ್ ರಾರಾಜಿಸುತ್ತಿತ್ತು.
ಆರ್.ವಿ ದೇವರಾಜ್ ಅವರು ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರಿಗೆ ಕ್ಷೇತ್ರ ತ್ಯಾಗ ಮಾಡಿದ್ದರು. ಕಾಂಗ್ರೆಸ್ನ ಆರ್.ವಿ ದೇವರಾಜ್ ಮೂರು ಬಾರಿ ಶಾಸಕ, ಒಮ್ಮೆ MLC ಆಗಿದ್ದರು. ಇನ್ನು ಕೆಎಎಸ್ಆರ್ಟಿಸಿ ಅಧ್ಯಕ್ಷ, ಸ್ಲಂ ಬೋರ್ಡ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಆರ್.ವಿ ದೇವರಾಜ್ ಚಿಕ್ಕಪೇಟೆ, ಚಾಮರಾಜಪೇಟೆಯಿಂದಲೂ ಶಾಸಕರಾಗಿದ್ದರು. ಆರ್.ವಿ ದೇವರಾಜ್ ನಿಧನ ಹಿನ್ನೆಲೆ ಚಿಕ್ಕಪೇಟೆಯಾದ್ಯಂತ ಶೋಕದ ವಾತಾವರಣ ಸೃಷ್ಟಿಯಾಗಿದೆ.





