ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸಿನ ಉತ್ತುಂಗಕ್ಕೆ ಏರುತ್ತಿರುವ ಮಹಿಳೆಯರು ದೇಶದ ಸ್ವಾತಂತ್ರ್ಯಾನಂತರ 70 ವರ್ಷಗಳಲ್ಲಿ ತಮ್ಮ ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ನಿರಂತರ ಸಂಘರ್ಷ ನಡೆಸಿದ್ದಾರೆ. ಅದಕ್ಕೆ ಸ್ವತಃ ಅವರೇ ಹೊಣೆಗಾರರು. ಅದ್ಹೇಗೆ ಎನ್ನುವುದನ್ನು ತಿಳಿದುಕೊಳ್ಳಿ……

ಆಗಸ್ಟ್ 15. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದುಹೋಗಿವೆ. ಈ 70 ವರ್ಷಗಳಲ್ಲಿ ನಮ್ಮ ಮಹಿಳೆಯರ ಸ್ಥಿತಿಗತಿಯಲ್ಲಿ ಎಷ್ಟೊಂದು ಬದಲಾಗಿದೆ? ಅವರೆಷ್ಟು ಮಟ್ಟಿಗೆ ಸ್ವಾತಂತ್ರ್ಯ ಪಡೆದಿದ್ದಾರೆ? ಧಾರ್ಮಿಕ, ಸಾಮಾಜಿಕ ಸಂಕೋಲೆಗಳಲ್ಲಿ ಅವರಿನ್ನೂ ಬಂಧಿಯಾಗಿಯೇ ಇದ್ದಾರೆ. ಅವರಿಗೆ ಮಾಟಗಾತಿ, ಚಾರಿತ್ರ್ಯಹೀನಳು ಎಂಬಂತಹ ಆರೋಪ ಮಾಡುವುದು ಇನ್ನೂ ನಿಂತಿಲ್ಲ. ಅವರ ಆಸೆ ಅಭಿಲಾಷೆಗಳಿಗೆ ಯಾವುದೇ ಬೆಲೆಯಿಲ್ಲದಂತಾಗಿದೆ. ಆಕೆ ಭೇದಭಾವದ ವಿರುದ್ಧ ಸಿಡಿದೆದ್ದು ನಿಲ್ಲುತ್ತಿದ್ದಾಳೆ. ಸಮಾಜಕ್ಕೆ ಸವಾಲು ಕೂಡ ಹಾಕುತ್ತಿದ್ದಾಳೆ.

7 ದಶಕದ ಅವಧಿ ಅಷ್ಟೇನೂ ಹೆಚ್ಚಲ್ಲ. ಶತಶತಮಾನಗಳ ಸಂಕೋಲೆಗಳನ್ನು ಕಿತ್ತು ಬಿಸಾಕಲು 7 ದಶಕದ ಅವಧಿ ಕಡಿಮೆ ಅನಿಸುತ್ತದೆ. ಆದರೂ ತಮ್ಮ ಹೋರಾಟದ ಮೂಲಕ ಅವರು ಗಮನಸೆಳೆದರು. ಸಾಮಾಜಿಕ ಕಂದಾಚಾರದ ಸಂಕೋಲೆಗಳನ್ನು ಕಿತ್ತು ಬಿಸಾಡಲು ಆಕೆ ತೋರಿಸಿದ ಉತ್ಸಾಹ ಮೆಚ್ಚುವಂಥದ್ದು, ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಆಕೆಯ ಹೋರಾಟ ಇನ್ನೂ ಜಾರಿಯಲ್ಲಿದೆ.

ಒಂದೆಡೆ ಮಹಿಳೆಯರ ಶಿಕ್ಷಣ, ಸ್ವಾತಂತ್ರ್ಯ ಸಮಾನತೆ ಹಾಗೂ ಹಕ್ಕುಗಳ ಕುರಿತಂತೆ ಅನೇಕ ಮೂಲಭೂತ ಸಮಸ್ಯೆಗಳಿವೆ. ಇನ್ನೊಂದೆಡೆ ಮಹಿಳೆಯರನ್ನು ಎರಡನೇ ದರ್ಜೆ ವಸ್ತು ಎಂಬಂತೆ ಪರಿಗಣಿಸುವ ಧಾರ್ಮಿಕ, ಸಾಮಾಜಿಕ ಕಟ್ಟುಪಾಡುಗಳು, ಮೂಢನಂಬಿಕೆಗಳು, ರೀತಿನೀತಿಗಳನ್ನು ಅವರ ಮೇಲೆ ಒತ್ತಾಯಪೂರ್ವಕವಾಗಿ ಹೇರುವ ಪ್ರವೃತ್ತಿ ಜೋರಾಗಿ ನಡೆಯುತ್ತಿದೆ.

ಸ್ತ್ರೀ ನರಕದ ದ್ವಾರ

ಧರ್ಮಶಾಸ್ತ್ರಗಳಲ್ಲಿ ಸ್ತ್ರೀಯನ್ನು ನರಕದ ದ್ವಾರ, ಪಾಪದ ಕೂಪ ಎಂದು ಹೇಳಲಾಗಿದೆ. ಮನು ಸ್ತ್ರೀ ಕುಲಕ್ಕೆ ಓದುವುದು ಮತ್ತು ಕೇಳಿಸಿಕೊಳ್ಳುವುದಕ್ಕೆ ನಿಷಿದ್ಧ ಎಂದು ಹೇಳಿದ್ದ. ಅವಳನ್ನು ತಂದೆ, ಗಂಡ, ಮಗು ಮತ್ತು ಕುಟುಂಬದ ಆಶ್ರಯದಲ್ಲಿಟ್ಟ. ಈ ವಿಧಾನವನ್ನು ಎಲ್ಲ ಧರ್ಮಗಳು ಅನುಸರಿಸಿದವು. ಮನೆಯ 4 ಗೋಡೆಗಳ ನಡುವೆ ಕುಟುಂಬದ ಪಾಲನೆ ಪೋಷಣೆ ಮತ್ತು ಸಂತಾನೋತ್ಪತ್ತಿ ಮಾಡುವುದನ್ನೇ ಅವಳ ಧರ್ಮ ಎಂದು ಹೇಳಲಾಯಿತು. ಮಹಿಳೆ ಏನು ಮಾಡಬೇಕು? ಏನು ಮಾಡಬಾರದು ಎಂದು ಸ್ಮೃತಿಗಳಲ್ಲಿ ಉಲ್ಲೇಖವಾಗಿದೆ. ಸತಿ ಸಹಗಮನ ಪದ್ಧತಿಯಿಂದ ಹಿಡಿದು ದೇವಸ್ಥಾನಗಳಿಗೆ ದೇವದಾಸಿ ಆಗುವತನಕ ಅನೇಕ ಪದ್ಧತಿಗಳಿವೆ. ಆ ಯೋಚನೆಯ ಬೇರುಗಳು ಇನ್ನೂ ಆಳವಾಗಿ ಬೇರೂರಿವೆ. ಅದರ ವಿರುದ್ಧ ಮಾತನಾಡುವವರನ್ನು ಧರ್ಮಭ್ರಷ್ಟ, ದೇಶದ್ರೋಹಿ ಎಂದೆಲ್ಲ ಕರೆಯಲಾಗುತ್ತದೆ. ಸ್ತ್ರೀ ಸ್ವಾತಂತ್ರ್ಯ ಈಗಲೂ ಅಪಾಯದಲ್ಲಿದೆ.

ಧರ್ಮದ ಕಾರಣದಿಂದ ಮಹಿಳೆ ಯಾವಾಗಲೂ ಸ್ವಾತಂತ್ರ್ಯ ಇಲ್ಲದವಳು. ಶತಶತಮಾನಗಳಿಂದ ಅವಳಿಗೆ ತನ್ನ ಬಗ್ಗೆ ನಿರ್ಧಾರ ಕೈಗೊಳ್ಳುವ ಹಕ್ಕು ಇರಲಿಲ್ಲ. ಬಾಲ್ಯದಲ್ಲಿ ತಂದೆ, ಯೌವನದಲ್ಲಿ ಗಂಡ ಹಾಗೂ ವೃದ್ಧಾಪ್ಯದಲ್ಲಿ ಮಗನ ಜೊತೆಗೆ ಇರಬೇಕೆಂದು ಧರ್ಮ ಆದೇಶ ಹೊರಡಿಸಿದೆ. ಶಿಕ್ಷಣ, ಉದ್ಯೋಗ, ಪ್ರೀತಿ, ಮದುವೆ ಇವೆಲ್ಲದಕ್ಕೂ ಕುಟುಂಬ, ಸಮಾಜ ಹಾಗೂ ಧರ್ಮದ ಮರ್ಜಿ ಕಾಯಬೇಕಾಗುತ್ತದೆ. 7 ದಶಕಗಳ ಬಳಿಕ ಇದರಲ್ಲಿ ಏನಾದರೂ ಬದಲಾವಣೆ ಆಗಿರುವುದನ್ನು ಗಮನಿಸಲು ಸಾಧ್ಯವೇ ಇಲ್ಲ. ಕಾನೂನು ಹಾಗೂ ನ್ಯಾಯಾಲಯದ ಆದೇಶಗಳಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ.

ಈಗ ಮಹಿಳೆಯರು ತಮ್ಮ ನಿರ್ಧಾರಗಳನ್ನು ತಾವೇ ಕೈಗೊಳ್ಳುವಷ್ಟರ ಮಟ್ಟಿಗೆ ಮುಂದೆ ಸಾಗಿದ್ದಾರೆ. ಕೆಲವು ಕಡೆ ಅವರು ಕುಟುಂಬ ಮತ್ತು ಸಮಾಜದಿಂದ ಹೊರಬಂದು ಬಂಡಾಯದ ಬಾವುಟ ಹಾರಿಸುತ್ತಿರುವುದು ಕೂಡ ಗೋಚರಿಸುತ್ತದೆ.

ಸ್ವಾತಂತ್ರ್ಯದ ಬಳಿಕ ಮಹಿಳೆಗೆ ಎಷ್ಟರಮಟ್ಟಿಗೆ ಸ್ವಾತಂತ್ರ್ಯ ಸಿಕ್ಕಿತು ಎಂಬುದನ್ನು ಅಳೆಯಲು ಯಾವುದೇ ಮಾನದಂಡಗಳಿಲ್ಲ. ಆದರೆ ಸಮಾಜಶಾಸ್ತ್ರಜ್ಞರೊಂದಿಗೆ ನಡೆಸಿದ ಮಾತುಕತೆಯ ಪ್ರಕಾರ, ದೇಶದಲ್ಲಿ ಈಗಲೂ ಬಹಳಷ್ಟು ಮನೆಗಳಲ್ಲಿ ಶಿಕ್ಷಣ, ನೌಕರಿಯ ಹೊರತಾಗಿ ಬೇರೆ ಸಂದರ್ಭದಲ್ಲಿ ಮಹಿಳೆಯರನ್ನು ಹೊಸ್ತಿಲಿನಿಂದ ಹೊರಗೆ ಹೋಗಲು ಅವಕಾಶ ಕೊಡುವುದಿಲ್ಲ. ಉದಾರ ಧೋರಣೆ ಹೊಂದಿದ ಮನೆಗಳಲ್ಲಿ ಪ್ರೇಮವಿವಾಹ, ಲಿವ್ ‌ಇನ್‌ ರಿಲೇಶನ್‌ಶಿಪ್‌ನ್ನು ಒಪ್ಪಿಕೊಳ್ಳಲಾಗುತ್ತಿದೆ.

ಕೆಲವು ಮನೆಗಳಲ್ಲಿ ತಮ್ಮ ಮಗಳಿಗೆ, ಸೊಸೆಗೆ ನೌಕರಿ ಮಾಡಲು ಏಕೆ ಅವಕಾಶ ಕೊಡಲಾಗುತ್ತಿದೆ ಎಂದರೆ, ಕೈತುಂಬ ಸಂಬಳ ತರುತ್ತಾರೆಂದು. ಆದರೂ ಅವರು ಸಮಾಜದ ನಿಂದನೆಯ ಮಾತುಗಳನ್ನು ಕೇಳಬೇಕಾಗುತ್ತದೆ. ದೇಶದಲ್ಲಿ ತಲೆ ಮತ್ತು ಮುಖದ  ಮೇಲೆ ಸೆರಗು ಹೊದ್ದುಕೊಳ್ಳುವ ಪದ್ಧತಿ ಹೆಚ್ಚು ಕಡಿಮೆ ನಿಲ್ಲುವ ಹಂತಕ್ಕೆ ಬಂದಿದೆ. ಆದರೆ ದೇಹವನ್ನು ಮುಚ್ಚಿಕೊಳ್ಳಿ ಎಂಬ ಉಪದೇಶ ಮಾತ್ರ ಎಲ್ಲೆಡೆಯಿಂದ ಈಗಲೂ ಕೇಳಿಬರುತ್ತಿವೆ.

ಈಗ ಮಹಿಳೆಯರು ಶಿಕ್ಷಣ, ರಾಜಕೀಯ, ನ್ಯಾಯಾಂಗ, ರಕ್ಷಣೆ, ತಂತ್ರಜ್ಞಾನ, ಕ್ರೀಡೆ, ಸಿನಿಮಾ, ಉದ್ಯಮ ಹೀಗೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ವಿಜಯಪತಾಕೆ ಹಾರಿಸುತ್ತಿದ್ದಾರೆ. ಈ ಸಮಾನತೆಯನ್ನು ಕೊಟ್ಟಿದ್ದು ಸಂವಿಧಾನ. ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಅವರಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತಿದೆ. ಆದರೆ ಪುರುಷರಿಗೆ ಹೋಲಿಸಿದರೆ ಅವರು ಈಗಲೂ ಹಿಂದೆ ಇದ್ದಾರೆ.

ಈ 70 ವರ್ಷಗಳಲ್ಲಿ ಬಹಳ ಕಷ್ಟಪಟ್ಟು ಅಷ್ಟಿಷ್ಟು ಸ್ವಾತಂತ್ರ್ಯ ಸಿಕ್ಕಿದೆ. ಅದಕ್ಕೂ ಆಕೆ ಬೆಲೆ ತೆರಬೇಕಾಗುತ್ತದೆ. ಸ್ವಾತಂತ್ರ್ಯಕ್ಕಾಗಿ ಅವಳು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾಳೆ. ಈಚೆಗೆ ಬಲಾತ್ಕಾರ, ಕೊಲೆ, ಆತ್ಮಹತ್ಯೆ, ಮನೆ ತೊರೆಯುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ.

ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ದೆಹಲಿಯ ಜಾಮಾ ಮಸೀದಿ, ಚಾಂದಿನಿ ಚೌಕ್‌ ಪ್ರದೇಶದಲ್ಲಿ ಶ್ರೀಮಂತ ಮುಸ್ಲಿಂ ಮಹಿಳೆಯರು ಹೊರಗೆ ಹೊರಟರೆ ನಾಲ್ಕು ಜನರು ಅವರ ಅಕ್ಕಪಕ್ಕ ಪರದೆ ಹಿಡಿದುಕೊಂಡು ಹೋಗುತ್ತಿದ್ದರು. ಈಗ ಜಾಕೀರ್‌ಹುಸೇನ್‌ ಕಾಲೇಜ್‌, ಜಾಮಿಯಾ ಮಿಲಿಯಾ ಯೂನಿರ್ಸಿಟಿಗಳಲ್ಲಿ ಯುವತಿಯರು ಬುರ್ಖಾ ಬದಲಿಗೆ ಜೀನ್ಸ್ ಟಾಪ್‌ನಲ್ಲಿ ಕಂಡುಬರುತ್ತಾರೆ. ಆದರೆ ಅಲ್ಲಿಯೇ ಸ್ವಲ್ಪ ಸಮೀಪದಲ್ಲಿ ಕಮ್ಯುನಿಟಿ ಸೆಂಟರ್‌ನಲ್ಲಿ ಹಿಜಾಬ್‌ ಮತ್ತು ಬುರ್ಖಾದಲ್ಲಿ  ಕಂಡುಬರುತ್ತಾರೆ.

ಸಮಾನತೆಯ ಹಕ್ಕು

ಇಷ್ಟದ ಪೋಷಾಕು ಧರಿಸುವ ಹಕ್ಕು, ಸಾಕ್ಷರತೆಯ ಸ್ವಾತಂತ್ರ್ಯ, ಎಲ್ಲಿ ಬೇಕಾದಲ್ಲಿ ಸುತ್ತಾಡುವ ಹಕ್ಕು, ಲೈಂಗಿಕ ಚಟುವಟಿಕೆಯ ಹಕ್ಕು ಸಿಗಬೇಕೆಂದು ಎಲ್ಲೆಡೆ ಕೂಗೂ ಕೇಳಿ ಬರುತ್ತಿದೆ. ಆದರೆ ಮಹಿಳೆಗೆ ಸಮಾನತೆಯ ನೈಸರ್ಗಿಕ ಹಕ್ಕು ಈವರೆಗೂ ದೊರೆತಿಲ್ಲ.

ಜಗತ್ತಿನಾದ್ಯಂತ ಮಹಿಳೆಯರನ್ನು ಸುಶಿಕ್ಷಿತರನ್ನಾಗಿ ಮಾಡಲು ಸಾಧ್ಯವಿದ್ದ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆಫ್ಘಾನಿಸ್ತಾನದಲ್ಲಿ ಉಗ್ರರು ಹುಡುಗಿಯರು ಓದುತ್ತಿರುವ ಶಾಲೆಯೊಂದನ್ನು ಬಾಂಬ್‌ ಹಾಕಿ ನೆಲಸಮ ಮಾಡಿದರು. ಮಾಲಾ ಯೂಸೂಫ್‌ ಉಗ್ರರ ವಿರುದ್ಧ ಹೋರಾಟ ಶುರು ಮಾಡಿ ಜಗತ್ತಿನಾದ್ಯಂತ ಮನೆ ಮಾತಾದಳು. ಕಂದಾಚಾರದ ಸಮಾಜ ಈಗಲೂ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಅಷ್ಟೊಂದು ಮಹತ್ವ ಕೊಡುವುದಿಲ್ಲ. ಅಂದಹಾಗೆ ಮಹಿಳೆಯರನ್ನು, ರಾಜಕಾರಣ ಅಥವಾ ಪುರುಷರು ತಡೆದಿಲ್ಲ. ಸ್ವಾತಂತ್ರ್ಯದ ಬಳಿಕ ಸರ್ಕಾರಗಳು ಅವರಿಗೆ ಸಮಾನತೆಯನ್ನು ತಂದುಕೊಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದವು. ಪುರುಷರೇ ಹೊಸ ಕಾನೂನನ್ನು ತಂದರು, ಅದರಲ್ಲಿ ತಿದ್ದುಪಡಿ ಮಾಡಿದರು. ಸ್ವಾತಂತ್ರ್ಯದ ಬಳಿಕ ಸ್ತ್ರೀಯರಿಗೆ ಸಾಕಷ್ಟು ಹಕ್ಕುಗಳು ದೊರೆತಿವೆ. ಅವರಿಗೆ ಶಿಕ್ಷಣ, ಉದ್ಯೋಗ, ಆಸ್ತಿ ಹಕ್ಕು, ಪ್ರೇಮ ವಿವಾಹದ ಬಾಬತ್ತಿನಲ್ಲಿ ಸಮಾನತೆಯ ಹಕ್ಕು ಕಾಗದದ ಮೇಲೆ ನಮೂದಿಸಲ್ಪಟ್ಟಿವೆ. ಸತಿ ಸಹಗಮನ ನಿರ್ಮೂಲನೆ, ವಿಧವಾ ವಿವಾಹ, ಪಂಚಾಯತ್‌ ರಾಜ್‌ನ 73ನೇ ಕಾಯ್ದೆಗೆ ತಿದ್ದುಪಡಿಯ  ಮೂಲಕ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ, ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕು, ಅಂತರ್ಜಾತೀಯ ವಿವಾಹ ಕಾನೂನಿನ ಪ್ರಕಾರ ಮಹಿಳೆಗೆ ಸಮಾನತೆಯ ಹಕ್ಕು ಕೊಡಲಾಗಿದೆ. ಬದಲಾಗುತ್ತಿರುವ ಕಾನೂನುಗಳ ಮುಖಾಂತರ ಮಹಿಳೆಯರು ಸಬಲೀಕರಣಗೊಂಡಿದ್ದಾರೆ.

ಸ್ವಾತಂತ್ರ್ಯದ ಮೇಲೆ ಅಂಕುಶ

ಒಂದೆಡೆ ಲವ್ ಜಿಹಾದ್‌, ಖಾಪ್‌ ಪಂಚಾಯತ್‌ನ ನಿರ್ಧಾರಗಳು, ವ್ಯಾಲೆಂಟೈನ್‌ ದಿನಕ್ಕೆ ವಿರೋಧ, ಪ್ರೇಮ ವಿವಾಹಕ್ಕೆ ವಿರೋಧ, ಮಾಟಗಾತಿ ಎಂದು ಹೇಳಿ ಮಹಿಳೆಯರ ಮೇಲೆ ಹಲ್ಲೇ ಇವು ಇದೇ ಸಮಾಜದ ಉಡುಗೊರೆಗಳಾಗಿವೆ. ಮಹಿಳೆಯರು ಸಮಾಜಕ್ಕೆ ಸವಾಲು ಹಾಕುತ್ತಲೇ ಇದ್ದಾರೆ. ಸರ್ಕಾರ ಈ ಎಲ್ಲ ಸಂಗತಿಗಳಿಂದ ಮಹಿಳೆಯರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದೆ.

ಮಹಿಳೆಯರಿಗೆ ತಮ್ಮ ಅಭಿವ್ಯಕ್ತಿಯ ಸ್ವಾತಂತ್ರ್ಯದ ಬೆಲೆ ತೆರಬೇಕಾಗಿ ಬರುತ್ತಿದೆ. ತಮಗಿಷ್ಟವಾದ ಪೋಷಾಕು ಧರಿಸುವುದು, ರಾತ್ರಿ ಹೊತ್ತು ಸುತ್ತಾಟ, ಸೆಕ್ಸ್ ಅಪೇಕ್ಷೆ ಇಟ್ಟುಕೊಳ್ಳುವುದು, ಪ್ರೀತಿ ಮಾಡುವುದು ಇವೆಲ್ಲ ಸಮಾಜಕ್ಕೆ ಸವಾಲೊಡ್ಡುವ ಸಂಗತಿಗಳಾಗಿವೆ. ಹಾಗಾಗಿ ಅವರ ಮೇಲೆ ಹಲ್ಲೆಯಂಥ ಘಟನೆಗಳು ನಡೆಯುತ್ತಿವೆ.

ಈಗ ಮಹಿಳೆಗೆ ತನ್ನ ದೇಹದ ಮೇಲಿನ ಸ್ವಾತಂತ್ರ್ಯವೇ ಎಲ್ಲಕ್ಕೂ ಮಿಗಿಲಾಗಿದೆ. ಅವಳ ದೇಹವನ್ನು ಪುರುಷ ಅಕ್ರಮವಾಗಿ ವಶಪಡಿಸಿಕೊಳ್ಳುತ್ತಿದ್ದಾನೆ. ಅದರ ಮೇಲೆ ಅವನದೇ ಹಕ್ಕು ಎಂಬಂತಾಗಿದೆ. ಗಂಡ ಇಬ್ಬರು, ಮೂವರು ಮಹಿಳೆಯರ ಜೊತೆ ಸಂಬಂಧ ಇಟ್ಟುಕೊಳ್ಳಬಹುದು. ಆದರೆ ಮಹಿಳೆಯೊಬ್ಬಳು ಪರಪುರುಷನ ಜೊತೆ ಮಾತನಾಡುವುದು ಕೂಡ ಅಪರಾಧ ಎಂದು ಭಾವಿಸಲಾಗುತ್ತದೆ. ಇಂದಿನ ಬಹಳಷ್ಟು ಅಪರಾಧಗಳ ಮೂಲದಲ್ಲಿ ಸ್ತ್ರೀಯರ ಸ್ವಾತಂತ್ರ್ಯದ ಸಂಘರ್ಷ ಸೇರಿಕೊಂಡಿದೆ. ನಿರ್ಭಯಾದಂತಹ ಘಟನೆಗಳು ಮಹಿಳೆಯರ ಸ್ವಾತಂತ್ರ್ಯದತ್ತ ಹೆಜ್ಜೆಯನ್ನು ತಡೆಯುವುದಾಗಿದೆ. ಮಹಿಳೆಯರು ಈಗ ಹೊರಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಘಟನೆಗಳು ಅವರನ್ನು ತಡೆಯುವ ಪ್ರಯತ್ನಗಳಾಗಿವೆ.  ಸ್ತ್ರೀಯರ ಸ್ವಾತಂತ್ರ್ಯದಿಂದ ಸಮಾಜದ ಗುತ್ತಿಗೆದಾರರಿಗೆ ತಮ್ಮ ಅಧಿಕಾರದ ಚುಕ್ಕಾಣಿ ಅಲ್ಲಾಡುತ್ತಿರುವಂತೆ ಭಾಸವಾಗುತ್ತಿದೆ.

ಇಂದು ಪತ್ರಿಕೆಗಳಲ್ಲಿ ದಿನಕ್ಕೆ 5-6 ಹುಡುಗಿಯರಾದರೂ ಕಣ್ಮರೆಯಾಗುತ್ತಿರುವ ಸುದ್ದಿಗಳು ಪ್ರಕಟವಾಗುತ್ತಿವೆ.

ಈ ಕಣ್ಮರೆಯಾಗುತ್ತಿರುವ ಯುವತಿಯರು ಯಾರು ಗೊತ್ತೆ? ತಮ್ಮ ನಿರ್ಧಾರವನ್ನು ತಾವೇ ತೆಗೆದುಕೊಳ್ಳಲು ಆಗದ ಸ್ವಾತಂತ್ರ್ಯ ಕಳೆದುಕೊಂಡ ಯುವತಿಯರು. ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಇಷ್ಟದ ವ್ಯಕ್ತಿಯ ಜೊತೆ ಮದುವೆಯಾಗಲು, ಶಿಕ್ಷಣ, ನೌಕರಿ ಮುಂದುವರಿಸಲು ಮನೆಯಿಂದ ಓಡಿಹೋಗುತ್ತಿದ್ದಾರೆ.

ಸ್ವಾತಂತ್ರ್ಯದ ಪರಿಣಾಮ ಹೇಗಿದೆಯೆಂದರೆ ಮಹಿಳೆಯರು ಸಾಕಷ್ಟು ಕಟು ಟೀಕೆಗಳನ್ನು ಎದುರಿಸಬೇಕಾಗಿ ಬರುತ್ತಿದೆ. ಕಳೆದ 25-30 ವರ್ಷಗಳಲ್ಲಿ ಮಹಿಳೆಯರು ಮನೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹೊರಬಂದಿದ್ದಾರೆ. ಈಗ ಆಫೀಸುಗಳಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗೆ ಸರಿಸಮಾನ ಎಂಬಂತೆ ಇದೆ. ಸಂಜೆ ಆಫೀಸು ಬಿಟ್ಟಾಗ, ರಸ್ತೆಗಳಲ್ಲಿ, ಮೆಟ್ರೋಗಳಲ್ಲಿ, ಬಸ್ಸುಗಳಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಕಣ್ಮುಂದೆ ಗೋಚರಿಸುತ್ತದೆ.

ಮಹಿಳೆಯರಿಗಾಗಿಯೇ ಈಗ ಪ್ರತ್ಯೇಕ ಕಾಲೇಜುಗಳು, ವಿವಿಗಳು ಶುರುವಾಗಿವೆ. ಪುರುಷರ ಜೊತೆ ಜೊತೆಗೆ ಅಧ್ಯಯನ ನಡೆಸುವ ಅವಕಾಶಗಳು ಅವರಿಗೆ ಲಭಿಸುತ್ತಿವೆ.

ಮಹಿಳೆಯರಿಗೆ ಸ್ವಾತಂತ್ರ್ಯ ಸಿಕ್ಕಿರುವುದು ಹಠದಿಂದ, ಯಾರ ಮುಲಾಜಿಗೂ ಕಟ್ಟುಬೀಳದೇ ಇದ್ದುದರಿಂದ. ಉದ್ಯೋಗಸ್ಥ ಮಹಿಳೆಯರು ಆಫೀಸುಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಮನೆಗೆ ಬಂದ ನಂತರ ಬಾಸ್‌ ಜೊತೆಗೆ ಸಹೋದ್ಯೋಗಿಗಳ ಜೊತೆ ಅವರ ಚರ್ಚೆ ಮುಂದುವರಿಯುತ್ತದೆ. ಕೆಲವು ಮಹಿಳೆಯರು ತಮ್ಮ ಇಷ್ಟದವರೊಂದಿಗೆ ಪಾರ್ಕ್‌, ಹೋಟೆಲ್‌, ಪಬ್‌, ಮಾಲ್ ‌ಹೀಗೆ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದಾರೆ.

ಮಹಿಳೆಯರ ಈ ತೆರನಾದ ವರ್ತನೆ ಸಮಾಜದ ಗುತ್ತಿಗೆ ಹಿಡಿದಂತಿರುವ ಪುರುಷರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇಂಥವರಿಂದ ತಮಗೆ ಅಪಾಯವಿದೆ ಎಂದು ಅವರಿಗೆ ಅನ್ನಿಸುತ್ತಿದೆ.

ಸಮಾಜದ ಗುತ್ತಿಗೆದಾರರು ಒಮ್ಮೊಮ್ಮೆ ಡ್ರೆಸ್‌ ಕೋಡ್‌ ಹೇರುವ ಬಗ್ಗೆಯೂ ಮಾತನಾಡುತ್ತಾರೆ. ಇಂತಿಂಥ ಬಟ್ಟೆ ತೊಟ್ಟವರಿಗೆ ದೇಗುಲಗಳಿಗೆ ಪ್ರವೇಶಕ್ಕೆ ನಿಷೇಧ ಹೇರಬೇಕೆಂದೂ ಹೇಳಲಾಗುತ್ತದೆ. ಆದರೆ ದೇವಸ್ಥಾನಗಳಿಗೆ ಹೋಗುವ ಮಹಿಳೆಯರ ಪರಿಸ್ಥಿತಿಯೇನೂ ಸುಧಾರಣೆ ಆಗಿಲ್ಲ. ಅದರ ಲಾಭ ಆಗುವುದು ಧರ್ಮದ ದಂಧೆಕೋರರರಿಗೆ.

ಈಗ ಮಹಿಳೆಯರು ಪ್ರೀತಿಯ ನಿವೇದನೆ ಮಾಡುತ್ತಾರೆ, ಸಮಾಗಮದ ಅಪೇಕ್ಷೆ ಕೂಡ ಹೇಳಿಕೊಳ್ಳುತ್ತಾರೆ. ಸಮಾಜ ಇಂಥ ಮಹಿಳೆಯರಿಗೆ ಹೆದರುತ್ತದೆ. ಅವರನ್ನು ಸ್ವೇಚ್ಛಾಚಾರಿ ಎಂದು ಸಂಬೋಧಿಸುತ್ತದೆ.

ಆದರೂ ಮಹಿಳೆಯರ ಕಾಲುಗಳಲ್ಲಿ ಈಗಲೂ ಸಾಮಾಜಿಕ ಬಂಧನಗಳಂಥ ಬೇಡಿಗಳಿವೆ. ಅಂತಹ ಸಂಕೋಲೆಗಳಿಂದ ಮುಕ್ತಳಾಗಲು ಆಕೆ ಪ್ರಯತ್ನ ಮುಂದುವರಿಸಿದ್ದಾಳೆ. ಕೇರಳದ ಶಬರಿಮಲೈ, ಮಹಾರಾಷ್ಟ್ರದ ಶನಿ ಸಿಂಗ್ಣಾಪುರ, ಹಾಜಿ ಅಲಿ ದರ್ಗಾಗಳಲ್ಲಿ ಮಹಿಳೆಯರಿಗೆ ಪ್ರವೇಶ ದೊರಕಿಸುವ ಕುರಿತಂತೆ ಈಗಲೂ ಹೋರಾಟ ಮುಂದುವರಿದಿದೆ.

ಇಲ್ಲೂ ಸಮಾಜ ಅವಳನ್ನು ತಡೆಯಲು ಪ್ರಯತ್ನ ಮಾಡುತ್ತಿದೆ. ಸಂವಿಧಾನ ಆಕೆಗೆ ಸಮಾನ ಸ್ಥಾನಮಾನ ನೀಡಲು ಪ್ರಯತ್ನಶೀಲವಾಗಿದೆ. ಅವರ ಪ್ರವೇಶಕ್ಕೆ ತಡೆಯೊಡ್ಡುವುದು ತಪ್ಪು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಮಹಿಳೆಯರಿಗೆ ದೊರಕುತ್ತಿರುವ ಸಮಾನತೆ ಸಹಜವಾಗಿ ದೊರಕುತ್ತಿಲ್ಲ. ಅದನ್ನು ಉಪಕಾರ ಎಂಬಂತೆ ಭಾವಿಸಲಾಗುತ್ತಿದೆ. ಪ್ರತಿಭಾ ಪಾಟೀಲ್ ‌ಅವರನ್ನು ರಾಷ್ಟ್ರಪತಿ ಹುದ್ದೆಗೆ ಕೂರಿಸಿದಾಗ ಬಹಳಷ್ಟು ವಿವರಣೆಗಳು ಸಿಕ್ಕವು. ನೋಡಿ ನಾವು ಒಬ್ಬ ಮಹಿಳೆಯನ್ನು ರಾಷ್ಟ್ರಪತಿ ಹುದ್ದೆಗೆ ತಂದೇಬಿಟ್ಟೆವು ಎಂದು ಹೇಳಿಕೊಳ್ಳಲಾಯಿತು. ಮಹಿಳೆಯರನ್ನು ರಾಜ್ಯಪಾಲ, ನ್ಯಾಯಮೂರ್ತಿ, ರಾಯಭಾರಿ, ಪೈಲಟ್‌ ಹುದ್ದೆಗೆ ನೇಮಕ ಮಾಡಿದಾಗ ನಮ್ಮ ಪ್ರಯತ್ನದಿಂದ ಅವರು ಆ ಹುದ್ದೆಗೆ ಬಂದರು ಎಂದು ಹೇಳಿಕೊಳ್ಳಲಾಯಿತು. ಅವಳಿಗೆ ಆ ಹುದ್ದೆಗೆ ಆಯ್ಕೆಯಾಗುವ ಅರ್ಹತೆ ಇಲ್ಲವೇ?

ಹುಡುಗಿಯೊಬ್ಬಳು ಹುಟ್ಟಿದಾಗ ನೈಸರ್ಗಿಕ ಲಕ್ಷಣಗಳನ್ನು ತನ್ನೊಳಗೆ ಇಟ್ಟುಕೊಂಡೇ ಬರುತ್ತಾಳೆ. ಅವಳಿಗೆ ಸ್ವಾತಂತ್ರ್ಯದ ನೈಸರ್ಗಿಕ ಹಕ್ಕು ದೊರೆಯುತ್ತದೆ. ಉಸಿರಾಟ ಪ್ರಕ್ರಿಯೆ, ನಗು, ಅಳು, ಹಾಲು ಸೇವನೆ, ಅತ್ತಿತ್ತ ನೋಟ ಹೀಗೆ ನೈಸರ್ಗಿಕ ಹಕ್ಕುಗಳು ದೊರೆಯುತ್ತವೆ. ಅವಳು ದೊಡ್ಡವಳಾಗುತ್ತ ಹೋದಂತೆ ಅವಳ ಈ ನೈಸರ್ಗಿಕ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತದೆ. ಕುಟುಂಬ, ಸಮಾಜದ ಕಾನೂನುಬಾಹಿರ ಹಸ್ತಕ್ಷೇಪ ಶುರುವಾಗುತ್ತದೆ. ಅವಳಿಗೆ ಧಾರ್ಮಿಕ, ಸಾಮಾಜಿಕ ಸಂಕೋಲೆಗಳನ್ನು ಹಾಕಲಾಗುತ್ತದೆ. ಅವಳಿಗೆ ಕೃತಕ ಆವರಣ ಗೋಡೆಯೊಂದು ಸುತ್ತಿಕೊಳ್ಳುತ್ತದೆ. ಅವಳ ಮೇಲೆ ಪುರುಷನ ಹಕ್ಕು ಇರಬೇಕೆಂದು ಅವಳ ಮೇಲೆ ಅನೇಕ ನಿರ್ಬಂಧಗಳನ್ನು ಹೇರಲಾಗುತ್ತದೆ.

ಹಿಂದೂ ಧರ್ಮ ಸ್ತ್ರೀಯರು ಹಾಗೂ ದಲಿತರನ್ನು ಒಂದು ತಕ್ಕಡಿಯಲ್ಲಿಟ್ಟು ನೋಡುತ್ತದೆ. ಅವರಿಬ್ಬರ ಬಗ್ಗೆ ಶತಶತಮಾನಗಳಿಂದ ಭೇದಭಾವ ಮಾಡಲಾಗುತ್ತಿವೆ. ದಲಿತರಾಗಿರುವ ರಾಮನಾಥ ಕೋವಿಂದ್‌ ಅವರನ್ನು ರಾಷ್ಟ್ರಪತಿಗಳಾಗಿ ಚುನಾಯಿಸಿದಾಗ ಅವರ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಯಿತು. ಹುಲ್ಲಿನ ಗುಡಿಸಲಿನಲ್ಲಿದ್ದ ಒಬ್ಬ ವ್ಯಕ್ತಿಯನ್ನು ನಾವು 360 ಕೋಣೆಗಳ ಅದ್ಧೂರಿ ರಾಷ್ಟ್ರಪತಿ ಭವನಕ್ಕೆ ಕರೆತಂದೆವು. ಆದರೆ ಅವರನ್ನು ಶತಮಾನಗಳಿಂದ ಏಕೆ ದಬ್ಬಿ ಹಿಡಿದಿದ್ದಿರಿ? ಆ ಬಗ್ಗೆ ಯಾರೊಬ್ಬರಿಂದಲೂ ಸೂಕ್ತ  ಉತ್ತರ ದೊರಕುವುದಿಲ್ಲ.
ಈಗ ಮಹಿಳೆಯರಿಗೆ ದೊರಕುತ್ತಿರುವ ಸ್ವಾತಂತ್ರ್ಯ ಸಂವಿಧಾನದ ಕಾರಣದಿಂದ ದೊರಕುತ್ತಿದೆ. ಆದರೆ ಧರ್ಮದ ಕೊಳೆತುಹೋದ ನೀತಿನಿಯಮಗಳು ಆಕೆಯ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನ ನಡೆಸಿವೆ. ಒಂದು ಖೇದದ ಸಂಗತಿಯೆಂದರೆ ಧರ್ಮ ಸಂಸ್ಕೃತಿಯ ಹೆಸರಿನಲ್ಲಿ ತನ್ನ ಸ್ವಾತಂತ್ರ್ಯಕ್ಕೆ ಮಹಿಳೆ ತಾನೇ ಧಕ್ಕೆ ತಂದುಕೊಳ್ಳುತ್ತಿದ್ದಾಳೆ. ಹೆಣ್ಣು ತನ್ನ ಸ್ಥಿತಿಗೆ ಪೂರ್ವಜನ್ಮದ ದೋಷ, ತನ್ನ ಹಣೆಬರಹ ಎಂದು ಹಳಿದುಕೊಂಡು ತನ್ನ ಸ್ವಾತಂತ್ರ್ಯಕ್ಕೆ ತಾನೇ ಸಂಕೋಲೆ ಹಾಕಿಕೊಳ್ಳುತ್ತಿದ್ದಾಳೆ.

– ಪಿ. ಜ್ಯೋತಿ 

ದೇಶದ ಅರ್ಧ ಜನಸಂಖ್ಯೆ ಕಂದಾಚಾರದಿಂದ ಎಲ್ಲಿಯವರೆಗೆ ಮುಕ್ತಿ ಪಡೆದುಕೊಳ್ಳವುದಿಲ್ಲವೋ ಅಲ್ಲಿಯವರೆಗೆ ನಮ್ಮ ಸಮಾಜ ಪ್ರಗತಿಪಥದಲ್ಲಿ ಸಾಗದು. ಹುಡುಗಿಯರು ಸಾಕ್ಷರರಾಗುವ ಮೂಲಕ ಬದಲಾವಣೆ ಬರುತ್ತಿದೆ ಎಂಬುದು ನಿಜ. ಆದರೆ ಈ ಸಾಕ್ಷರ ಸಮಾಜದ ಅನೇಕರು ಧರ್ಮದ ಕೆಟ್ಟ ಪದ್ಧತಿಗಳಿಗೆ ತುತ್ತಾಗುತ್ತಿರುವುದು ದುರ್ದೈದ ಸಂಗತಿ. ಹಬ್ಬಗಳಲ್ಲಿ ಸದ್ಭಾವನೆಯ ಹೊಂದಾಣಿಕೆ ಕಡಿಮೆ ಹಾಗೂ ರೀತಿರಿವಾಜು ಮತ್ತು ಪರಂಪರೆಯ ಹೆಸರಿನಲ್ಲಿ ಕಂದಾಚಾರದ ವೈಭವ ಹೆಚ್ಚಾಗುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ