ನಮ್ಮಲ್ಲಿ ಹಬ್ಬ ಮತ್ತು ಶುಭ ಮಹೂರ್ತದ ಸಾಲು ಬಂದಿತೆಂದರೆ ಎಲ್ಲರಿಗೂ ಸುಗ್ಗಿಯೋ ಸುಗ್ಗಿ. ತರಕಾರಿ, ಹೂವು ಹಣ್ಣು ವ್ಯಾಪಾರಿಗಳಿಗೆ, ದಿನಸಿ, ಬಟ್ಟೆ ವ್ಯಾಪಾರಿಗಳಿಗೆ, ಎಲ್ಲರೀತಿಯ ಛತ್ರದವರಿಗೆ, ಬಾಣಸಿಗರಿಗೆ, ಪುರೋಹಿತರಿಗೆ ಪುರುಸೊತ್ತೇ ಇರುವುದಿಲ್ಲ. ಹೆಚ್ಚಿನ ಸಮಯಗಳಲ್ಲಿ ಒಳ್ಳೆಯ ಮಹೂರ್ತದ ಜೊತೆಗೆ ಛತ್ರ, ಅಡುಗೆಯವರ ಮತ್ತು ಪುರೋಹಿತರ ಸಮಯವನ್ನೂ ನೋಡಿಕೊಂಡೇ ಮದುವೆ ಮುಂಜಿಗಳನ್ನು ನಿರ್ಧರಿಸಬೇಕಾದಂತಹ ಪರಿಸ್ಥಿತಿ ಬಂದೊದಗಿದೆ.

ಈ ಶುಭ ಸಂದರ್ಭಗಳಲ್ಲಿ, ಎರಡು ಮೂರು, ಗೃಹಪ್ರವೇಶಗಳು, ಒಂದೆರೆಡು ನಿಶ್ಚಿತಾರ್ಥ, ಒಂದೆರಡು ಮದುವೆ ಮತ್ತು ಹುಟ್ಟಿದ ಹಬ್ಬಕ್ಕೆ ಹೋಗಲೇ ಬೇಕಾದ ಪರಿಸ್ಥಿತಿ. ತುಂಬಾ ಆತ್ಮೀಯವಾಗಿ, ಪ್ರೀತಿಯಿಂದ, ಇಂದಿನ ಕಾಲದಲ್ಲೂ ಮನೆಯವರೆಗೂ ಬಂದು ಆತ್ಮೀಯವಾಗಿ ಆಮಂತ್ರಿಸಿದಾಗ ಹೋಗದಿದ್ದರೆ, ಅವರಿಗೆ ವಿಶ್ವಾಸಕ್ಕೆ ಮತ್ತು ಬಂಧುತ್ವಕ್ಕೆ ಮಾಡಿದ ಅಪಮಾನ ಎಂದು ಕಛೇರಿಯ ನಡುವಿನಲ್ಲೂ ಅಲ್ಪ ಸ್ವಲ್ಪ ಸಮಯ ಮಾಡಿಕೊಂಡು ಸಪತ್ನಿ ಸಮೇತರಾಗಿ ಹೋಗಿರುವ ಎಷ್ಟೋ ಉದಾಹರಣೆಗಳು ಉಂಟು. ಇಂದಿನ ಕಾಲದಲ್ಲಿ ಮಂತ್ರಕ್ಕಿಂತ ತಂತ್ರವೇ ಹೆಚ್ಚು ಎನ್ನುವಂತೆ ಶಾಸ್ತ್ರ ಸಂಪ್ರದಾಯಕ್ಕಿಂತಲೂ ಫೋಟೋ ವೀಡೀಯೋಗಳಲ್ಲಿ ತೋರಿಕೆಯ ಆಡಂಬರವೇ ತುಸು ಹೆಚ್ಚೇ ಎನಿಸಿದರು ಕಾಲಾಯ ತಸ್ಮೈ ನಮಃ ಎಂದು ಯಾವುದೇ ಚಕಾರವೆತ್ತದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಸಭೆ ಸಮಾರಂಭಗಳ ಕರ್ತರು ಮತ್ತು ಪುರೋಹಿತರು ಶಾಸ್ತ್ರ ಸಂಪ್ರದಾಯದ ಕಡೆ ಗಮನಿಸಿದರೆ ಬಹುತೇಕ ಕಾರ್ಯಕ್ರಮಕ್ಕೆ ಬಂದವರೆಲ್ಲರ ಗಮನವೆಲ್ಲವೂ ಊಟ ತಿಂಡಿ ತೀರ್ಥಗಳ ಬಗ್ಗೆಯೇ ಇರುತ್ತದೆ ಎಂದು ಹೇಳಿದರೆ ಉತ್ಪ್ರೇಕ್ಷೆ ಏನಲ್ಲ. ಅದೇ ರೀತಿ ಕಾರ್ಯಕ್ರಮ ಬಹುತೇಕ ಮುಗಿಯುವ ಹಂತಕ್ಕೆ ಬಂದು ಎಲ್ಲರೂ ಉಡುಗೊರೆಗಳನ್ನು ಕೊಟ್ಟು ಮನೆಯವರಿಗೆಲ್ಲಾ ಶುಭಕೋರಿ ಊಟದ ಮನೆಯತ್ತ ಧಾವಿಸುವುದರಲ್ಲಿಯೇ ನಿರತರಾಗಿರುತ್ತಾರೆ.

ಹಿಂದೆಲ್ಲಾ ಅಚ್ಚು ಕಟ್ಟಾಗಿ ತೊಳೆದ ಅಗ್ರದ ಬಾಳೆ ಎಲೆಯನ್ನೋ ಇಲ್ಲವೇ ಮುತ್ತಗದ ಎಲೆಯನ್ನು ಸಾಲಾಗಿ ನೆಲದ ಮೇಲೆ ಜೋಡಿಸಿ, ಮಂದಲಿಗೆ (ಊಟದ ಚಾಪೆ) ಹಾಸಿ ಸ್ಟೀಲ್ ಲೋಟದ ತುಂಬಾ ನೀರು ತುಂಬಿಸಿ, ಎಲೆಗಳ ಮುಂದೆ ಎರಡೆಳೆಯ ರಂಗೋಲಿ ಎಳೆ ಎಳೆದು ಪ್ರತೀ ಎಲೆಗಳ ಮುಂದೆ ಸಣ್ಣಗೆ ದೀಪ ಹಚ್ಚಿಸಿಟ್ಟು ಊಟ ಮಾಡಲು ಬಂದಿರುವವರಿಗೆ ಸಂಭ್ರಮದ ವಾತಾವರಣ ಸೃಷ್ಟಿ ಮಾಡಿರುತ್ತಿದ್ದರು. ಬಂದವರೆಲ್ಲರೂ ಕೈಕಾಲು ತೊಳೆದುಕೊಂಡು ಸಾಲು ಸಾಲಾಗಿ ಪಂಕ್ತಿಯಲ್ಲಿ ಕುಳಿತು ಕೊಳ್ಳಲು ಆರಂಭಿಸಿದರೆ, ಅಡುಗೆ ಭಟ್ಟರುಗಳು ಸಾಲು ಸಾಲಿನಲ್ಲಿ ಬಂದು, ಎಲೆಯ ಬಲ ತುದಿಗೆ ಪಾಯಸ, ಎಲೆಯ ಅಗ್ರದ ಕಡೆಯಿಂದ ಎಡದಿಂದ ಬಲಕ್ಕೆ ಉಪ್ಪು, ಉಪ್ಪಿನಕಾಯಿ, ಹೆಸರು ಬೇಳೆ ಮತ್ತು ಕಡಲೇ ಬೇಳೆಗಳ ಕೋಸಂಬರಿ, ಅದರ ಪಕ್ಕದಲ್ಲಿ ಅಯಾಯಾ ಕಾಲದ ಅನುಗುಣವಾಗಿ ಲಭಿಸುವ ತರಕಾರಿಗಳ ಎರಡು ರೀತಿಯ ಚೆನ್ನಾಗಿ ಇಂಗು ತೆಂಗಿನ ಒಗ್ಗರಣೆ ಹಾಕಿ ಹದವಾಗಿ ಬಾಡಿಸಿದ ಪಲ್ಯಗಳು, ಅದರ ಮುಂಭಾಗದಲ್ಲಿ ಸಿಹಿ-ಹುಳಿ ಸಮಾಗಮದ ಗೊಜ್ಜು, ಎಲೆಯ ಎಡ ತುದಿಯಲ್ಲಿ ಚಿತ್ರಾನ್ನ ಇಲ್ಲವೇ ಪುಳಿಯೋಗರೆ ಅಥವಾ ಯಾವುದಾದರೂ ಕಲೆಸಿದ ಅನ್ನ. ಅದರ ಮೇಲೆ ಕರಿದ ಹಪ್ಪಳ, ಸಂಡಿಗೆ, ಬಾಳಕದ ಮೆಣಸಿನಕಾಯಿ (ಉಪ್ಪು ಮೆಣಸಿನಕಾಯಿ), ಎಲೆಯ ಬಲ ತುದಿಯಲ್ಲಿ ಬೂದುಕುಂಬಳದ ಮಜ್ಜಿಗೆ ಹುಳಿ, ಎಲೆಯ ಮಧ್ಯ ಭಾಗದಲ್ಲಿ ಬಿಸಿ ಬಿಸಿಯಾದ ಅನ್ನ ಅದರ ಮೇಲೆ ಹುಳಿ ತೊವ್ವೆ ಹಾಕಿ ತುಪ್ಪದ ಆಭಿಗಾರ ಮಾಡಿ, ಊಟದ ಶಾಂತಿ ಮಂತ್ರ ಸಹನಾ ವವತು ಸಾಮೂಹಿಕವಾಗಿ ಹೇಳಿ, ಓಂ ಶಾಂತಿ ಶಾಂತಿ ಶಾಂತಿಃ ಎಂದು ಮುಗಿಸುತ್ತಿದ್ದಂತೆ ಮನೆಯ ಹಿರಿಯರು ತಮ್ಮ ಮನೆ ದೇವರನ್ನು ನೆನೆದು ಗೋವಿಂದ ಹೇಳಿಸಿ, ಭೋಜನ ಕಾಲೇ ಸೀತಾ ರಾಮ ಸ್ಮರಣೆ ಮಾಡಿಸಿ, ಹರ ನಮಃ ಪಾರ್ವತಿ ಪತಯೇ, ಹರ ಹರ ಮಹಾದೇವ ಎಂದು ಹೇಳಿ ಮುಗಿಸುತ್ತಿದ್ದಂತೆಯೇ, ಅಡುಗೆಯವರು ಬಡಿಸುತ್ತಿದ್ದ ಬಿಸಿ ಬಿಸಿ ಹುಳಿದೊವ್ವೆಯನ್ನೂ ಇಲ್ಲವೇ ಚೆನ್ನಾಗಿ ಎಲ್ಲಾ ರೀತಿಯ ತರಕಾರಿ ಹಾಕಿ ಮಾಡಿದ ಹುಳಿ/ಕೂಟನ್ನು ಕಲೆಸಿ ತಿನ್ನುವ ರುಚಿ ವರ್ಣಿಸುವುದಕ್ಕಿಂತ ಅನುಭವಿಸಿದರೆ ಮಾತ್ರ ಆನಂದ. ಆದಾದ ನಂತರ ಕಟ್ಟೆ ಕಲಿಸಿದ ಅನ್ನದ ಮಧ್ಯೆ ಚೆನ್ನಾಗಿ ಹದವಾಗಿ ಕುದಿಸಿ ಇಂಗಿನ ಒಗ್ಗರಣೆ ಹಾಕಿದ ಬಿಸಿ ಬಿಸಿ ಬೇಳೆ ಸಾರು ಅದಕ್ಕೆ ಒಂದೆರಡು ಮಿಳ್ಳೆ ತುಪ್ಪ ಹಾಕಿಸಿಕೊಂಡು ಸಾರು ಎಲೆಯಿಂದ ಜಾರಿ ಹೋಗದಂತೆ ಹದವಾಗಿ ಕಲೆಸಿ ತಿನ್ನುವುದೇ ಒಂದು ಕಲೆ. ಚೆನ್ನಾಗಿ ಕಲೆಸಿದ ಸಾರನ್ನವನ್ನು ಸೊರ್ ಸೊರ್ ಎಂದು ಚಪ್ಪರಿಸಿ ಕೈನ ಐದೂ ಬೆರಳು ಬಾಯಿಯ ಒಳಗೆ ಫೂರ್ತಿ ಹಾಕಿಕೊಂಡು ಸಾರನ್ನ ತಿನ್ನುತ್ತಿದರೆ, ಸ್ವರ್ಗಕ್ಕೆ ಮೂರೇ ಗೇಣು. ಸಾರನ್ನ ತಿಂದು ಮುಗಿಸಿದ ನಂತರ ಅವರವರ ಅಂತಸ್ತಿಗೆ ತಕ್ಕಂತೆ ಲಾಡು, ಬೂಂದಿ, ಬಾದುಶಾ, ಜಿಲೇಬಿ, ಜಾಹಂಗೀರ್ ಇಲ್ಲವೇ ಬೇಳೆ ಒಬ್ಬಟ್ಟು ಅಥವಾ ಕಾಯಿ ಹೋಳಿಗೆ. ಇನ್ನು ಸ್ಥಿತಿವಂತರಾಗಿದ್ದರೆ ಪೇಣಿಯನ್ನೋ ಇಲ್ಲವೇ ಚಿರೋಟಿ ಜೊತೆಗೆ ಬೂರಾ ಸಕ್ಕರೆ ಮತ್ತು ಬಿಸಿ ಬಿಸಿ ಘಮ ಘಮವಾದ ಬಾದಾಮಿ ಹಾಲಿನೊಂದಿಗೆ ಕಲೆಸಿ ತಿಂದು ಮುಗಿಸುವುದರೊಳಗೆ, ಖಾರ ಖಾರವಾದ ಬೂಂದಿ ಇಲ್ಲವೇ ಹೀರೇ ಕಾಯಿ ಬಜ್ಜಿ ಅಥವಾ ಆಲೂಗೆಡ್ಡೆ ಬೋಂಡ ತಿನ್ನುವ ಅನುಭವ ಅವರ್ಣನೀಯ. ಇಷೃರ ಮಧ್ಯದಲ್ಲಿ ಪಂಕ್ತಿಯಲ್ಲಿದ್ದವರು ಯಾವುದಾದರೂ ದೇವರನಾಮವನ್ನೋ ಇಲ್ಲವೆ ಶ್ಲೋಕವನ್ನು ಎತ್ತರದ ಧನಿಯಲ್ಲಿ ಹೇಳಲು ಶುರುಮಾಡಿದರೆ ಒಬ್ಬರಿಗಿಂತ ಮತ್ತೊಬ್ಬರು ಒಂದಾದ ಮೇಲೆ ಮೂರ್ನಾಲ್ಕು ಹಾಡು/ಶ್ಲೋಕಗಳನ್ನು ಹೇಳುವಷ್ಟರಲ್ಲಿ, ಅಡುಗೆಯವರು ಮಾಡಿದ ಎಲ್ಲಾ ಪದಾರ್ಥಗಳನ್ನೂ ಮತ್ತೊಮ್ಮೆ ವಿಚಾರಣೆ ಮಾಡಿದ ನಂತರ ಸಲಿಗೆಯಿಂದ ಬಡಿಸಿದ ಕಲೆಸಿದ ಅನ್ನ ತಿಂದು ಮುಗಿಸಿ ಸ್ವಲ್ಪವೇ ಸ್ವಲ್ಪ ಅನ್ನ ಮೊಸರು ಹಾಕಿಸಿಕೊಂಡು ಅದಕ್ಕೆ ತಕ್ಕಷ್ಟು ಉಪ್ಪು ಹಾಕಿಕೊಂಡು ಕಲೆಸಿಕೊಂಡು ಉಪ್ಪಿನ ಕಾಯಿ ಜೊತೆ ನೆಂಚಿಕೊಂಡು ತಿಂದರೆ ಹೊಟ್ಟೆಯಲ್ಲಿ ತಣ್ಣಗಾದ ಹಿತಾನುಭವ. ಇಷೃರಲ್ಲಿ ಕೊಟ್ಟ ತಾಂಬೂಲವನ್ನು ಎಡಗೈಯಲ್ಲಿ ತೆಗೆದುಕೊಂಡು ಅಲ್ಲಿಯೇ ಅಕ್ಕ ಪಕ್ಕದಲ್ಲಿಯೇ ತೆಂಗಿನಕಾಯಿನ್ನು ಇಟ್ಟು, ಊಟ ಮುಗಿಯುವವರೆಗೂ ತಾಳ್ಮೆಯ ಪ್ರತೀಕವಾಗಿದ್ದವರು ಕೈ ತೊಳೆಯುವ ಹೊತ್ತಿಗೆ ಒಬ್ಬರಿಗಿಂತ ಮತ್ತೊಬ್ಬರು ಕೈ ತೊಳೆಯಲು ಏಕೆ ಆತುರ ತೋರುತ್ತಾರೆ ಎನ್ನುವುದು ಇಂದಿಗೂ ನನಗೆ ತಿಳಿಯದ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಊಟ ಮುಗಿಸಿ ಡರ್ ಎಂದು ತೇಗಿ ಅಲ್ಲಿಯೇ ತಟ್ಟೆಯಲ್ಲಿ ಇಟ್ಟಿದ್ದ ವಿಳ್ಳೇದೆಲೆ ಮತ್ತು ಚೂರಡಿಕೆ ಅದಕ್ಕೆ ಹದವಾಗಿ ಸುಣ್ಣ ಹಚ್ಚಿಕೊಂಡು ಬಾಯಿಯೊಳಗೆ ಮೆಲ್ಲುತ್ತಾ , ನಾಲಿಗೆ ಕೆಂಪಾಗಿದೆಯೇ ಎಂದು ನೋಡಿ ಕೊಂಡು ನಾಲಿಗೆ ಕೆಂಪಾಗಿದ್ದರೆ ಏನು ಸಾಧಿಸಿದಂತಹ ಅನುಭವ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ