- ಎಸ್.ಎಸ್.ಹಿರೇಮಠ
ಕಲಬುರಗಿ
ಕೈಯಲ್ಲಿ ಮೊಬೈಲ್, ಕಣ್ಣುಗಳ ಮುಂದೆ ಸದಾ ಮಿಂಚುವ ಪರದೆ... ಇದು ಇಂದಿನ ನಮ್ಮ ಬದುಕಿನ ಅಘೋಷಿತ ಸೆರೆಮನೆ. ವರ್ಚ್ಯುವಲ್ ಲೋಕದಲ್ಲಿ ನಾವು ಕಳೆದುಕೊಳ್ಳುತ್ತಿರುವುದು ನಮ್ಮದೇ ನೆಮ್ಮದಿಯನ್ನು!
ಶಾಸ್ತ್ರೀಜಿಯವರ ಆದರ್ಶವನ್ನು ಇಂದಿನ ಡಿಜಿಟಲ್ ಯುಗಕ್ಕೆ ಅನ್ವಯಿಸುತ್ತಾ, ಮನಸ್ಸಿನ ಆಯಾಸ ಕಳಚಿಕೊಳ್ಳಲು ಇಲ್ಲಿದೆ ಒಂದು ಸುಂದರ ದಾರಿ. ಓದಿ, ಡಿಜಿಟಲ್ ಉಪವಾಸ ನಿಮ್ಮ ಬದುಕನ್ನೂ ಬದಲಾಯಿಸಲಿ!
***************
ಇಂದಿನ ಧಾವಂತದ ಬದುಕಿನಲ್ಲಿ ಸ್ಮಾರ್ಟ್‌ಫೋನ್, ಕಂಪ್ಯೂಟರ್ ಮತ್ತು ಸೋಶಿಯಲ್ ಮೀಡಿಯಾಗಳು ನಮ್ಮ ಜೀವನದ ಒಡನಾಡಿಗಳಾಗಿಬಿಟ್ಟಿವೆ. ಬೆಳಗ್ಗೆ ಕಣ್ಣು ಬಿಟ್ಟ ಕ್ಷಣದಿಂದ ರಾತ್ರಿ ನಿದ್ರೆಗೆ ಜಾರುವವರೆಗೂ ನಮ್ಮ ಬೆರಳುಗಳು ಹಾಗೂ ಕಣ್ಣುಗಳು ಮೊಬೈಲ್ ಪರದೆಯ ಮೇಲೆಯೇ ನೆಟ್ಟಿರುತ್ತವೆ. ಈ ನಿರಂತರ ಡಿಜಿಟಲ್ ಸಂಪರ್ಕವು ನಮಗೆ ತಿಳಿಯದಂತೆಯೇ ತಲೆಭಾರ, ಮನಸ್ಸಿಗೆ ಆಯಾಸ ಹಾಗೂ ದೈಹಿಕ ಸುಸ್ತನ್ನು ತಂದೊಡ್ಡುತ್ತಿವೆ.
ಈ ಹಿನ್ನೆಲೆಯಲ್ಲಿ, ನಮ್ಮ ಮನಸ್ಸನ್ನು ಹಗುರಗೊಳಿಸಲು 'ಡಿಜಿಟಲ್ ಉಪವಾಸ' (Digital Detox) ಇಂದಿನ ದಿನಗಳಲ್ಲಿ ನಮಗೆ ಅತ್ಯಂತ ಅಗತ್ಯವಾದ ಅಭ್ಯಾಸವಾಗಿದೆ.
ನಮ್ಮ ಭಾರತವರ್ಷ ಕಂಡ ಸರಳ - ಸಜ್ಜನಿಕೆ ವ್ಯಕ್ತಿತ್ವದ ಪ್ರಧಾನಿ ಲಾಲಬಹಾದ್ದೂರ ಶಾಸ್ತ್ರೀಜಿಯವರು
1965-66ರ ಸಂದರ್ಭದಲ್ಲಿ 'ಜೈ ಜವಾನ್, ಜೈ ಕಿಸಾನ್' ಎಂಬ ಘೋಷಣೆಯೊಂದಿಗೆ ದೇಶದ ಜನತೆಗೆ ವಾರದಲ್ಲಿ ಒಂದು ಹೊತ್ತಿನ ಉಪವಾಸ ಮಾಡುವಂತೆ ಕರೆ ನೀಡಿದ್ದರು. ಆಹಾರದ ತೀವ್ರ ಅಭಾವದ ಹಿನ್ನೆಲೆಯಲ್ಲಿ
ಅಂದು ಅವರು ನೀಡಿದ ಕರೆ ಕೇವಲ ಆಹಾರ ಉಳಿತಾಯಕ್ಕಷ್ಟೇ ಅಲ್ಲದೆ, ದೇಶದ ಸಾರ್ವಭೌಮತ್ವ, ಆತ್ಮನಿಯಂತ್ರಣ ಮತ್ತು ಸ್ವಾವಲಂಬನೆಯ ಸಂಕೇತವಾಗಿತ್ತು.
ಅಂದು ಜಠರಕ್ಕಿತ್ತ ಉಪವಾಸ ದೇಶಕ್ಕೆ ಆಹಾರ ಭದ್ರತೆ ತಂದುಕೊಟ್ಟರೆ, ಇಂದು ನಮಗೆ ಬೇಕಿರುವುದು ಮನಸ್ಸಿಗೆ ಮತ್ತು ಇಂದ್ರಿಯಗಳಿಗೆ ಕೊಡುವ 'ಡಿಜಿಟಲ್ ಉಪವಾಸ!'
ಅಂದು ಆಹಾರದ ಅಭಾವವಿತ್ತು. ಇಂದು 'ಸಮಯ ಮತ್ತು ಗಮನದ (Attention)' ಅಭಾವವಿದೆ. ಶಾಸ್ತ್ರೀಜಿಯವರ ಸದಾಶಯದಂತೆ ನಾವಿಂದು ವಾರದಲ್ಲಿ ಒಮ್ಮೆಯಾದರೂ ಅಥವಾ ದಿನದ ಕೆಲ ಗಂಟೆಗಳ ಕಾಲ ಡಿಜಿಟಲ್ ಉಪವಾಸ ಆಚರಿಸಿದರೆ, ನಮ್ಮ ವಿಚಾರಶಕ್ತಿ, ಏಕಾಗ್ರತೆ ಮತ್ತು ಆತ್ಮನಿಯಂತ್ರಣವನ್ನು ಮರಳಿ ಪಡೆಯಲು ಸಾಧ್ಯವಿದೆ.
ಈ ದಿಶೆಯಲ್ಲಿ ಅನುಸರಿಸಬೇಕಾದ ನಿಯಮಗಳು ಹೀಗಿವೆ:
ಡಿಜಿಟಲ್ ಉಪವಾಸ ಎಂದರೆ ತಂತ್ರಜ್ಞಾನವನ್ನು ಸಂಪೂರ್ಣವಾಗಿ ತೊರೆಯುವುದಲ್ಲ; ಬದಲಾಗಿ, ಅನಗತ್ಯ ಡಿಜಿಟಲ್ ಬಳಕೆಗೆ ಕೊಂಚ ವಿಶ್ರಾಂತಿ ನೀಡಿ, ನಮ್ಮ ಅತ್ಯಮೂಲ್ಯ ಸಮಯ ಮತ್ತು ಗಮನವನ್ನು ಮರಳಿ ನಮ್ಮ ಸ್ವಂತ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿದೆ.
(ಅ) ಊಟದ ಸಮಯದಲ್ಲಿ ಫೋನ್ ಬೇಡ: ಊಟದ ಮೇಜಿನ ಬಳಿ ಕುಳಿತಾಗ ಮೊಬೈಲ್ ನೋಡುವುದು ನಾವು ತಿನ್ನುವ ಆಹಾರದ ರುಚಿ ಮತ್ತು ಮಹತ್ವವನ್ನು ಮರೆಸಿಬಿಡುತ್ತದೆ. ಕುಟುಂಬದವರೊಂದಿಗೆ ಕುಳಿತು ಊಟ ಮಾಡುವಾಗ ಫೋನ್ ಅನ್ನು ಬದಿಗಿಟ್ಟು ನೋಡಿ; ಆಗ ಮನೆಯವರ ಜೊತೆಗಿನ ಮಾತುಕತೆ ಜೀವಂತಗೊಳ್ಳುತ್ತದೆ, ಪ್ರೀತಿ-ಬಾಂಧವ್ಯಗಳು ಮತ್ತಷ್ಟು ಗಟ್ಟಿಯಾಗುತ್ತವೆ.
(ಆ) ಮಲಗುವ ಕೋಣೆಯಲ್ಲಿ ಗೆಜೆಟ್ಸ್ ಬೇಡ: ನಮ್ಮ ಮಲಗುವ ಕೋಣೆಯನ್ನು ಸಂಪೂರ್ಣವಾಗಿ ಡಿಜಿಟಲ್ ಮುಕ್ತ 'ನೆಮ್ಮದಿಯ ವಲಯ'ವನ್ನಾಗಿ ಮಾಡಿಕೊಳ್ಳೋಣ. ಫೋನಿನ ನೀಲಿ ಬೆಳಕು ನಮ್ಮ ನಿದ್ರೆಯನ್ನಷ್ಟೇ ಅಲ್ಲ, ಮನಸ್ಸಿನ ಶಾಂತಿಯನ್ನೂ ಕೆಡಿಸುತ್ತದೆ. ಬೆಳಗ್ಗೆ ಏಳಲು ಫೋನ್ ಅಲಾರಾಂ ಬದಲು ಸಾಂಪ್ರದಾಯಿಕ ಗಡಿಯಾರ ಬಳಸುವುದು ಮತ್ತು ಮಲಗುವ ಮುನ್ನ ಫೋನ್ ದೂರವಿಡುವುದು ನೆಮ್ಮದಿಯ ನಿದ್ರೆಗೆ ದಾರಿ ಮಾಡಿಕೊಡುತ್ತದೆ.





