ಜಪಾನ್‌ನ ಐಚಿ–ನಗೋಯಾದಲ್ಲಿ 2026ರ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ನಡೆದ, ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಸ್ಪರ್ಧಿಗಳು ನಿರೀಕ್ಷಿತ ಯಶಸ್ಸನ್ನು ಪಡೆಯದೇ ಹೋದರೂ, ತೀರ ಕಳಪೆ ಸಾಧನೆಯಾಗಿರದೇ, 4 ನೇ ಸ್ಥಾನದಲ್ಲಿ ಮುಗಿಸಿದೆ. 2023ರಲ್ಲಿ ಚೀನಾದ ಹಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವು 107 ಪದಕಗಳನ್ನು ಗೆದ್ದು ತನ್ನ ಹಿಂದಿನ ದಾಖಲೆಯನ್ನು ಮುರಿದಿತ್ತು. 2026ರ ಸ್ಪರ್ಧೆಗೆ ಭಾರತವು 100ಕ್ಕೂ ಹೆಚ್ಚು ಪದಕಗಳನ್ನು ಗೆಲ್ಲುವ ಗುರಿಯೊಂದಿಗೆ ಪ್ರವೇಶಿಸಿತ್ತು. ಆದರೆ ಈ ಬಾರಿ ಭಾರತದ ಪರ 85ಕ್ಕೇ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.
ಹಾಗಾಗಿ ಈ ಲೇಖನದಲ್ಲಿ ಮೂರು ಮುಖ್ಯ ಅಂಶಗಳನ್ನು ಪರಿಶೀಲಿಸೋಣ
- 2026ರಲ್ಲಿ ಭಾರತ ಯಾವ ಕ್ರೀಡೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ?
- 2023ರ ಸಾಧನೆಗೆ ಹೋಲಿಸಿದರೆ ಯಾವ ವಿಭಾಗಗಳಲ್ಲಿ ಹಿನ್ನಡೆ ಕಂಡುಬಂದಿದೆ?
- ಪದಕದ ನಿರೀಕ್ಷೆಯಿದ್ದರೂ ಯಶಸ್ಸು ಸಿಗದ ಕ್ರೀಡೆಗಳಲ್ಲಿ ಮುಂದಿನ ಬಾರಿ ಏನು ಸುಧಾರಿಸಬೇಕು?
| 2023 ಮತ್ತು 2026 ರ ಪದಕಗಳ ಹೋಲಿಕೆ | ||||
| ಚಿನ್ನ | ಬೆಳ್ಳಿ | ಕಂಚು | ಒಟ್ಟು | |
| 2023 ಹಾಂಗ್‌ಝೌ | 28 | 38 | 41 | 107 |
| 2026 ಐಚಿ–ನಗೋಯಾ | 21 | 27 | 37 | 85 |
| ಪದಕಗಳ ವೆತ್ಯಾಸ | 7 | 11 | 4 | 22 |
2026ರಲ್ಲಿ ಭಾರತವು ಒಟ್ಟಾರೆ ಪದಕಗಳ ಸಂಖ್ಯೆಯಲ್ಲಿ ಹಿಂದಿನ ಆವೃತ್ತಿಗಿಂತ ಕಡಿಮೆ ಸಾಧನೆ ಮಾಡಿದರೂ, ಪದಕಗಳ ಪಟ್ಟಿಯಲ್ಲಿ ಚೀನ, ಜಪಾನ್ ಮತ್ತು ಕೊರಿಯಾದ ನಂತರ ನಾಲ್ಕನೇ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಬಾರಿ ಪುರುಷರ ಹಾಕಿ, ಮಹಿಳೆಯರ ಹಾಕಿ, ಪುರುಷರ ಮತ್ತು ಮಹಿಳೆಯರ ಕ್ರಿಕೆಟ್ ಹಾಗೂ ಕಬಡ್ಡಿಯಲ್ಲಿ ದೊರೆತ ಚಿನ್ನದ ಪದಕಗಳು ಭಾರತದ ಸಾಧನೆಯನ್ನು ಬಲಪಡಿಸಿವೆ.
2026ರಲ್ಲಿ ಕ್ರೀಡಾವಾರು ಪದಕಗಳ ವಿವರ
| ಆಟಗಳು | ಚಿನ್ನ | ಬೆಳ್ಳಿ | ಕಂಚು | ಒಟ್ಟು ಪದಕಗಳು |
| ಕುಸ್ತಿ | 2 | 2 | 2 | 6 |
| ಹಾಕಿ | 2 | 0 | 0 | 2 |
| ಬಿಲ್ಲುಗಾರಿಕೆ | 5 | 2 | 2 | 9 |
| ಕ್ರಿಕೆಟ್ | 2 | 0 | 0 | 2 |
| ಗಾಲ್ಫ್ | 1 | 1 | 0 | 2 |
| ಬಾಕ್ಸಿಂಗ್ | 3 | 0 | 3 | 6 |
| ಸೆಪಕ್ಟಕ್ರಾ | 0 | 0 | 1 | 1 |
| ನೌಕಾಯಾನ | 0 | 1 | 2 | 3 |
| ಸ್ಕ್ವ್ಯಾಷ್ | 0 | 2 | 3 | 5 |
| ಶೂಟಿಂಗ್ | 3 | 8 | 4 | 15 |
| ಅಥ್ಲೆಟಿಕ್ಸ್ | 1 | 9 | 14 | 24 |
| ಕುರಾಶ್ | 0 | 0 | 1 | 1 |
| ಕಬಡ್ಡಿ | 2 | 0 | 0 | 2 |
| ಟೇಬಲ್ ಟೆನಿಸ್ | 0 | 0 | 1 | 1 |
| ಸಾಫ್ಟ್ ಟೆನ್ನಿಸ್ | 0 | 0 | 1 | 1 |
| ವುಶು | 0 | 1 | 0 | 1 |
| ರೋಯಿಂಗ್ | 0 | 0 | 1 | 1 |
| ಬ್ಯಾಡ್ಮಿಂಟನ್ | 0 | 0 | 1 | 1 |
| ಭಾರ ಎತ್ತುವಿಕೆ | 0 | 1 | 0 | 1 |
| ಮಿಶ್ರ ಸಮರ ಕಲೆಗಳು | 0 | 0 | 1 | 1 |
| ಒಟ್ಟು ಪದಕಗಳು | 21 | 27 | 37 | 85 |
ಪ್ರಮುಖವಾದ ಗಮನಾರ್ಹವಾದ ಸಾಧನೆಗಳು
ಟ್ರ್ಯಾಪ್ ಶೂಟಿಂಗ್: ಭಾರತದ ಶೂಟರ್ ನೀರು ಧಂಡಾ ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. ಫೈನಲ್‌ನಲ್ಲಿ 30ರಲ್ಲಿ 28 ಗುರಿಗಳನ್ನು ನಿಖರವಾಗಿ ಹೊಡೆದು ಏಷ್ಯನ್ ದಾಖಲೆಯನ್ನೂ ನಿರ್ಮಿಸಿದರು. ಈ ವಿಭಾಗದಲ್ಲಿ ಏಷ್ಯನ್ ಕ್ರೀಡಾಕೂಟದ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಹಿಳಾ ತಂಡದ ವಿಭಾಗದಲ್ಲಿ ಆಶಿಮಾ ಅಹ್ಲಾವತ್ ಮತ್ತು ಮನೀಷಾ ಕೀರ್ ಅವರೊಂದಿಗೆ ಬೆಳ್ಳಿ ಪದಕ ಗೆದ್ದ ಅವರು, ಕೈನನ್ ಚೆನಾಯ್ ಜೊತೆ ಮಿಶ್ರ ಟ್ರ್ಯಾಪ್ ತಂಡದ ಸ್ಪರ್ಧೆಯಲ್ಲಿಯೂ ಚಿನ್ನ ಗೆದ್ದು ಒಟ್ಟು ಮೂರು ಪದಕಗಳೊಂದಿಗೆ ಭಾರತದ ಕೀರ್ತಿ ಹೆಚ್ಚಿಸಿದರು.
ಕುಸ್ತಿ ಪಂದ್ಯಾವಳಿಗಳು : 2023ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವು ಕುಸ್ತಿಯಲ್ಲಿ ೧ ಬೆಳ್ಳಿ ೫ ಕಂಚು ಪದಕಗಳನ್ನು ಗೆದ್ದುಕೊಂಡಿತ್ತು. ಈ ಬಾರಿಯೂ ಒಟ್ಟು 6 ಪದಕಗಳನ್ನು ಗೆದ್ದಿದ್ದರೂ ಅದರಲ್ಲಿ 2 ಚಿನ್ನ ಮತ್ತು 2 ಬೆಳ್ಳಿ ಪದಗಳನ್ನು ಪಡೆಯುವ ಮೂಲಕ ಸುಧಾರಿಸಿಕೊಂಡಿದ್ದು ಈ ಬಾರಿ ಕೇವಲ 2 ಕಂಚು ಪದಕಗಳನ್ನು ಗೆಲ್ಲುವುದರಲ್ಲಿ ಸಫಲವಾಗಿದೆ
ಬಿಲ್ಲುಗಾರಿಕೆ, ಕುಂಕುಮ್ ಮೊಹೋಡ್ : ಮಹಿಳೆಯರ ವೈಯಕ್ತಿಕ ರಿಕರ್ವ್‌ನಲ್ಲಿ ಚಿನ್ನ ಗೆದ್ದ ಕುಂಕುಮ್ ಮೊಹೋಡ್, ದಕ್ಷಿಣ ಕೊರಿಯಾದ ಓ ಯೆಜಿನ್ ಅವರನ್ನು ಶೂಟ್‌ಆಫ್‌ನಲ್ಲಿ ಸೋಲಿಸಿದರು. ಈ ಸಾಧನೆ ಭಾರತದ ಬಿಲ್ಲುಗಾರಿಕೆಯಲ್ಲಿ ಗಮನಾರ್ಹ ಮೈಲಿಗಲ್ಲಾಯಿತು.
ಗಾಲ್ಫ್ , ಪ್ರಣವಿ ಅರಸ್ : ಏಷ್ಯನ್ ಕ್ರೀಡಾಕೂಟದ ಮಹಿಳೆಯರ ವೈಯಕ್ತಿಕ ಗಾಲ್ಫ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಸಾಧನೆಯನ್ನು ನಮ್ಮ ಕರ್ನಾಟಕದ ಮೈಸೂರಿನ ಪ್ರಣವಿ ಅರಸ್ ಮಾಡಿದ್ದಾರೆ. ಮಹಿಳೆಯರ ತಂಡದ ಬೆಳ್ಳಿ ಪದಕವೂ ಭಾರತದ ಗಾಲ್ಫ್ ಸಾಮರ್ಥ್ಯಕ್ಕೆ ಹೊಸ ಆಯಾಮ ನೀಡಿತು.





