ಒಂದು ವಿಡಿಯೋ… ಎರಡು ದೃಷ್ಟಿಕೋನ… ಒಂದು ದೊಡ್ಡ ಪ್ರಶ್ನೆ!
ರಾಷ್ಟ್ರೀಯ ಕೈಮಗ್ಗ ದಿನದಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿದ್ದ ವಿವಿಧ ರಾಜ್ಯಗಳ ಕೈಮಗ್ಗ ಉತ್ಪನ್ನಗಳನ್ನು ಜನರಿಗೆ ತೋರಿಸಿದರು. ಅವುಗಳ ಇತಿಹಾಸ, ವಿಶೇಷತೆ, ನೇಕಾರರ ಪರಿಶ್ರಮ ಮತ್ತು ಸ್ವದೇಶಿ ಉತ್ಪನ್ನಗಳ ಮಹತ್ವವನ್ನು ವಿವರಿಸಿ, ಭಾರತೀಯರು ಸಾಧ್ಯವಾದಷ್ಟು ಕೈಮಗ್ಗ ಉತ್ಪನ್ನಗಳನ್ನು ಬಳಸಬೇಕೆಂದು ಕರೆ ನೀಡಿದರು. ಸಾಮಾನ್ಯವಾಗಿ ನೋಡಿದರೆ ಇದು ಒಂದು ಸರಳ ವಿಡಿಯೋ. ಆದರೆ ಸೈದ್ಧಾಂತಿಕವಾಗಿ ಮೋದಿಯವರನ್ನು ವಿರೋಧಿಸುವ ಮತ್ತು ಶತಾಯಗತಾಯ ಮೋದಿಯವರನ್ನು ಅಧಿಕಾರದಿಂದ ಕೆಳಗೆ ಇಳಿಸಲೇ ಬೇಕೆಂದು ಕನಸು ಕಾಣುತ್ತಿರುವ ಪಟ್ಟಭದ್ರಹಿತಾಸಕ್ತಿಯ ಕೈಗೊಂಬೆ ಎಂದು ಈಗಾಗಲೇ ಜಗಜ್ಜಾಹೀರಾತಾಗಿರುವ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮೋದಿಯೊಬ್ಬ ಪ್ರೈಮ್ ಇನ್‌ಫ್ಲುಯನ್ಸರ್. ಇದೆಲ್ಲಾ ಬಿಟ್ಟು ಯುವಕರ ಬಗ್ಗೆ ಮಾತಾನಾಡಬೇಕು ಎಂದಿರುವುದು, ಸಾಂವಿಧಾನಿಕವಾಗಿ ಆಯ್ಕೆಯಾಗಿರುವ ದೇಶದ ಪ್ರಧಾನಿಗಳು ಮತ್ತು ನಮ್ಮ ಭಾರತದ ಮೌಲ್ಯವನ್ನು ಎಲ್ಲೆಡೆ ಎತ್ತಿ ಹಿಡಿಯುವ ಕೈ ಮಗ್ಗ ನೇಕಾರರಿಗೆ ಮಾಡುವ ಅವಮಾನವಲ್ಲವೇ?
ವಿದ್ಯಾರ್ಥಿಗಳ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದ್ದೇ ತಮ್ಮ ದೊಡ್ಡ ಗೆಲುವು ಮತ್ತು ತಾವು ಆಡಿದ್ದೇ ಆಟ. ನಾವು ಹೇಳಿದ ಹಾಗೆಯೇ ಈ ದೇಶದ ಪ್ರಧಾನಿಗಳು, ಕಾರ್ಯಾಂಗ ಮತ್ತು ನ್ಯಾಯಾಂಗ ಕೇಳಬೇಕು ಎನ್ನುವ ಉದ್ದಟತನವೇ? ಅಥವಾ ದೀಪ(ಪ್ಕೆ) ಆರುವ ಮುನ್ನಾ ಜೋರಾಗಿ ಉರಿಯುತ್ತದೆ ಎನ್ನುವ ಲಕ್ಷಣವೇ?
ಕೈಮಗ್ಗವನ್ನು ರಾಷ್ಟ್ರಮಟ್ಟದಲ್ಲಿ ಪ್ರಚಾರ ಮಾಡಿದ ನಾಯಕರು

ಪ್ರಧಾನಿ ಮೋದಿಯವರ ಈ ಪ್ರಯತ್ನ ಹೊಸದೇನಲ್ಲ. ಸ್ಮೃತಿ ಇರಾನಿ ಕೇಂದ್ರ ಜವಳಿ ಸಚಿವೆಯಾಗಿದ್ದ ಸಂದರ್ಭದಲ್ಲಿ ಅವರು ಭಾರತದ ವಿವಿಧ ರಾಜ್ಯಗಳ ಕೈಮಗ್ಗ ಸೀರೆಗಳನ್ನು ಧರಿಸುವ ಮೂಲಕ ರಾಷ್ಟ್ರೀಯ ಕೈಮಗ್ಗ ದಿನಕ್ಕೆ ಹೊಸ ಮೌಲ್ಯ ತಂದರು. ನಿರ್ಮಲಾ ಸೀತಾರಾಮನ್ ಕಳೆದ ಹಲವು ವರ್ಷಗಳಿಂದ ಪ್ರತಿಯೊಂದು ಕೇಂದ್ರ ಬಜೆಟ್ ಮಂಡನೆಯ ಸಂದರ್ಭದಲ್ಲೂ ಅವರು ದೇಶದ ವಿವಿಧ ಭಾಗಗಳ ವಿಶಿಷ್ಟ ಕೈಮಗ್ಗ ಸೀರೆಗಳನ್ನೇ ಧರಿಸುತ್ತಿದ್ದಾರೆ. ಅದು ಕೇವಲ ಉಡುಪು ಆಯ್ಕೆ ಅಲ್ಲ. ಅದು ಭಾರತದ ನೇಕಾರ ಸಮುದಾಯಕ್ಕೆ ನೀಡುವ ಗೌರವ. ಅದೇ ಪರಂಪರೆಯನ್ನು ಪ್ರಧಾನಿ ಮೋದಿ ಮುಂದುವರೆಸಿರುವುದು ಅಪರಾಧವೇ?
ಖಾದಿ ಮತ್ತು ಕೈಮಗ್ಗ ಎಂದರೆ ಕೇವಲ ಬಟ್ಟೆಯಲ್ಲ

ಖಾದಿ ಮತ್ತು ಕೈಮಗ್ಗವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಅರ್ಥ ಮಾಡಿಕೊಳ್ಳಬೇಕು. ಮಹಾತ್ಮ ಗಾಂಧೀಜಿ ಚರಕವನ್ನು ಕೇವಲ ನೂಲಿನ ಯಂತ್ರವಾಗಿ ನೋಡಲಿಲ್ಲ. ಅದನ್ನು ಭಾರತದ ಆರ್ಥಿಕ ಸ್ವಾತಂತ್ರ್ಯದ ಸಂಕೇತವನ್ನಾಗಿ ರೂಪಿಸಿದರು. ಒಂದು ಕಾಲದಲ್ಲಿ ಬ್ರಿಟಿಷರು ಭಾರತದ ಹತ್ತಿಯನ್ನು ಕಡಿಮೆ ಬೆಲೆಗೆ ಕೊಂಡೊಯ್ದು, ಅದೇ ಹತ್ತಿಯಿಂದ ತಯಾರಿಸಿದ ಬಟ್ಟೆಯನ್ನು ಭಾರತದಲ್ಲೇ ದುಬಾರಿಯಾಗಿ ಮಾರುತ್ತಿದ್ದರು. ಅದಕ್ಕೆ ಉತ್ತರವಾಗಿ ಗಾಂಧೀಜಿಯವರು “ನಮ್ಮ ಹತ್ತಿಯನ್ನು ನಾವು ನೆಯ್ದು ನಾವು ಧರಿಸೋಣ.” ಎಂದು ಖಾದಿ ಚಳವಳಿಯನ್ನು ಆರಂಭಿಸಿದರು. ಅವರು ಜೀವಮಾನವಿಡೀ ಚರಕ ಮತ್ತು ಖಾದಿಯನ್ನು ಒಪ್ಪಿ, ಅಪ್ಪಿ, ಇಡೀ ದೇಶಕ್ಕೆ ಖಾದಿಯ ನಂಟನ್ನು ಹತ್ತಿಸಿದರು. ಅದೇ ಸಂದೇಶವನ್ನೇ ಆಧುನಿಕ ರೂಪದಲ್ಲಿ ಇಂದು ಪ್ರಧಾನಿ ಮೋದಿಯವರು ಹೇಳಿದರೆ ಇನ್‌ಫ್ಲುಯೆನ್ಸರ್ ಎಂದು ಕರೆಯುವುದು, ಮೋದಿಯವರಿಗೆ ಮಾಡಿದ ಅವಮಾನ ಎನ್ನುವುದಕ್ಕಿಂತಲೂ ರಾಷ್ಟ್ರಪಿತ ಮಹಾತ್ಮಾಗಾಂಧಿಯವರಿಗೆ ಮಾಡಿದ ಅವಮಾನ ಆಗುತ್ತದೆ ಅಲ್ಲವೇ?
ಒಂದು ವಿಡಿಯೋ… ಲಕ್ಷಾಂತರ ಕುಟುಂಬಗಳ ಬದುಕಿನ ಪ್ರಶ್ನೆ
ಭಾರತದ ಕೈಮಗ್ಗ ಕ್ಷೇತ್ರವು ಇಂದಿಗೂ ದೇಶದ ಅತಿದೊಡ್ಡ ಗ್ರಾಮೀಣ ಉದ್ಯೋಗ ಕ್ಷೇತ್ರಗಳಲ್ಲಿ ಒಂದಾಗಿದೆ.





