ಬಿಡದಿ ವ್ಯಾಪ್ತಿಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಶನಿವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಇಂದು ಮುಂಜಾನೆ ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇನಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (KSRTC) ಸೇರಿದ ಬಸ್ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿದ್ದ ಬೃಹತ್ ಶೈನಿಂಗ್ ಬೋರ್ಡ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಬಸ್‌ನ ಚಾಲಕ ಮತ್ತು ಕಂಡಕ್ಟರ್ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಹಾಗೂ 20ಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ರಾಮನಗರ ತಾಲೂಕಿನ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯ ಅವರಗೆರೆ ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಅಪಘಾತಗೊಂಡ ಬಸ್ ಕೇರಳದ ಕೋಝಿಕ್ಕೋಡ್‌ನಿಂದ ಬೆಂಗಳೂರಿನ ಕಡೆಗೆ ಬರುತ್ತಿತ್ತು. ಮೃತರನ್ನು ಚಾಲಕ ಮಿಥಿಲೇಶ್ ಮತ್ತು ಕಂಡಕ್ಟರ್ ಅರುಣ್ ಎಂದು ಗುರುತಿಸಲಾಗಿದೆ.
ಚಾಲಕನಿಗೆ ನಿದ್ದೆಯ ಮಂಪು ಆವರಿಸಿದ್ದೇ ಈ ದುರಂತಕ್ಕೆ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅದರಂತೆ, ನಿದ್ದೆಯ ಮಂಪರಿನಲ್ಲಿ ಬಸ್ ರಸ್ತೆಯ ಎಡಭಾಗಕ್ಕೆ ಚಲಿಸಿ, ಅಲ್ಲಿ ಅಳವಡಿಸಿದ್ದ ಬೃಹತ್ ಕಬ್ಬಿಣದ ಸೈನ್ ಬೋರ್ಡ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಡಿಕ್ಕಿಯ ರಭಸಕ್ಕೆ ಆ ದೊಡ್ಡ ಸೈನ್ ಬೋರ್ಡ್ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಬಸ್ ಹೆದ್ದಾರಿಯಲ್ಲೇ ಒಂದು ಪಕ್ಕಕ್ಕೆ ಪಲ್ಟಿಯಾಗಿದೆ.





