ಪತಿ : ಏನಪ್ಪ, ಲೇಡೀಸ್ ಚಪ್ಪಲಿ ಕೊಳ್ಳಬೇಕು. ಒಂದಿಷ್ಟು ಬೇರೆ ಬೇರೆ ತರಹದ್ದು ತೋರಿಸಿ.
ಅಂಗಡಿಯವನು : ನಿಮ್ಮ ಬಜೆಟ್ ಗೆ ತಕ್ಕಂತೆ ಎಲ್ಲಾ ಗುಣಮಟ್ಟದಲ್ಲೂ ಲಭ್ಯ. ಯಾವ ತರಹದ್ದು ಬೇಕು?
ಪತಿ : ಲೈಟ್ ವೆಯ್ಟ್ ಹಾಗೂ ಮೃದು ಆಗಿರಬೇಕು. ದುಡ್ಡು ಎಷ್ಟಾದರೂ ಆಗಲಿ....
ಅಂಗಡಿಯವನು : ಗೊತ್ತಾಯ್ತು ಬಿಡಿ!
ನಗರದ ಯುವ ಪ್ರೇಮಿಗಳಾದ ಗುಂಡ, ಗುಂಡಿ ಡಿನ್ನರ್ ಗೆಂದು ಒಂದು ಹೋಟೆಲ್ ಗೆ ಬಂದಿದ್ದರು.
ಮಾಣಿ : ನಿಮಗೆ ಏನು ತಂದುಕೊಡಲಿ?
ಗುಂಡಿ : ಆ ಚಕ್ರಾಕಾರದ ರೊಟ್ಟಿ ಇದೆಯಲ್ಲ.... ಅದನ್ನೇ ಕೊಡಿ!
ಮಾಣಿ : ನನಗೆ ಗೊತ್ತಾಗಲಿಲ್ಲ.
ಗುಂಡ : ಇವಳು ಈಗ ತಾನೇ ಹಳ್ಳಿಯಿಂದ ಬೆಂಗಳೂರಿಗೆ ಹೊಸದಾಗಿ ಬಂದಿದ್ದಾಳೆ. ಪಿಜ್ಜಾ ತಂದುಕೊಡಿ ಅಂತ ಕೇಳ್ತಿದ್ದಾಳೆ.
ಪಾರ್ವತಿ ತನ್ನೆಲ್ಲ ಗೆಳತಿಯರನ್ನು ಕಿಟೀ ಪಾರ್ಟಿಗೆ ಮನೆಗೆ ಆಹ್ವಾನಿಸಿದ್ದಳು.
ಪಾರ್ಟಿ ಮುಗಿದ ನಂತರ ಅವಳು ಎಲ್ಲರಿಗೂ ಹೇಳಿದಳು, ``ಡಾಕ್ಟರ್ ನನಗೆ 2-3 ವಾರ ಕ್ವಾರೆಂಟೈನ್ ಆಗಿರಬೇಕೆಂದು ಹೇಳಿದ್ದಾರೆ. ಅದಕ್ಕೆ ಮುಂಚೆ ಒಂದು ಕಿಟೀ ಪಾರ್ಟಿ ಕೊಡಬಾರದೇಕೆ ಎಂದು ನಿರ್ಧರಿಸಿದೆ. ಈಗ ನೀವೇನಂತೀರಿ?'' ಅವರೆಲ್ಲ ಕಣ್ಕಣ್ಣು ಬಿಡುತ್ತಾ ಓಡಿಹೋದರು.
ಆಫೀಸಿನಲ್ಲಿ ಕುಳಿತು ಬೋರ್ ಆಗಿದ್ದ ಪತಿ ಟೈಂಪಾಸ್ ಗೆಂದು ವಾಟ್ಸ್ ಆ್ಯಪ್ ಸ್ಟೇಟಸ್ ನಲ್ಲಿ ಏನೋ ಮೆಸೇಜ್ ಕಳಿಸಿದ, `ಹಾರಲೇ.... ನಾ ಹಾಡಲೇ... ಮುಗಿಲೇ ನಿನ್ನ ಎತ್ತರಕ್ಕೆ....'
ಪತ್ನಿ ಅದನ್ನು ಗಮನಿಸಿದ ನಂತರ ಉತ್ತರಿಸಿದಳು, `ಮುಗಿಲಿನಿಂದ ಧರೆಗೆ ಇಳಿದ ಮೇಲೆ ಅಗತ್ಯವಾಗಿ ತರಕಾರಿ ಕೊಂಡು ಮನೆ ಸೇರುವುದು!'
ಅವಿವಾಹಿತ ಮಗ : ಅಪ್ಪ, ಅಮ್ಮನಲ್ಲಿ ಅದೇನು ಕಂಡು ಮರುಳಾಗಿ ಮದುವೆ ಆದೆ ನೀನು?
ತಂದೆ : ಏನು ಹೇಳಲಪ್ಪ.... ಅವಳ ತುಟಿಯಂಚಿನ ಆ ಸಣ್ಣ ಮಚ್ಚೆ.... ನಾನು ಸಂಸಾರ ಸಾಗರಕ್ಕೆ ಜಿಗಿಯುವಂತೆ ಮಾಡಿತು!
ಮಗ : ಸಾಸುವೆ ಕಾಳಿಗಾಗಿ ಸಾಗರಕ್ಕೆ ಜಿಗಿತವೇ?
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು....
ರಾಧಾ : ನೀವೇನೇ ಹೇಳಿ, ಈ ವಾಟ್ಸ್ ಆ್ಯಪ್ ಬಂದ ಮೇಲೆ ಮಾನವರು ಬಹಳ ಮುಂದುವರಿದುಬಿಟ್ಟರು!
ಸುಧಾ : ಅದೇ ಹೇಗೆ ಹೇಳ್ತೀರಿ?
ರಾಧಾ : ಈಗ ನನ್ನನ್ನೇ ನೋಡಿ, 2-3 ಸ್ಟೇಷನ್ ಹಿಂದೆ ಇಳಿಯಬೇಕಿತ್ತು. ಮುಂದೆ ಬಂದಿದ್ದೇನೆ.
ಪ್ರಿಯಾ : ಏ ನಿನಗೆ ಗೊತ್ತಾ, ಈ ಸಿನಿಮಾಗಳಲ್ಲಿ ಹೀರೋ ಹೀರೋಯಿನ್ ಮಧ್ಯೆ ಹಾಡಿನ ದೃಶ್ಯ ಬಂದಾಗ, ದಿಂಬು ಕಿತ್ತು ಕೋಣೆ ತುಂಬಾ ಹತ್ತಿ ಹರಡುತ್ತಾರಲ್ಲ ಬಿಡಿ ಬಿಡಿಯಾಗಿ.... ಅಂಥದ್ದು ಎಲ್ಲೂ ಸಿಗಲ್ಲ ಅಂತೀನಿ!
ಉಮಾ : ಈಗ ಯಾಕೆ ಈ ಬಗ್ಗೆ ತಲೆ ಕೆಡಿಸಿಕೊಳ್ತಿದ್ದಿ?
ಪ್ರಿಯಾ : ಮೊನ್ನೆ ಶನಿವಾರ ನನ್ನನ್ನು ಬಾಯ್ ಫ್ರೆಂಡ್ ಜೊತೆ ಮಾಲ್ ನಲ್ಲಿ ನೋಡಿದ ನಮ್ಮಮ್ಮ ಮನೆಗೆ ಬಂದ ತಕ್ಷಣ ನನ್ನತ್ತ ಬೀಸಿದ ತಲೆದಿಂಬಿನಿಂದ ನಾನು ಒಂದು ಕ್ಷಣ ಕೋಮಾಗೇ ಹೋಗಿಬಿಟ್ಟೆ ಗೊತ್ತಾ....?
ಮೊಮ್ಮಗು : ತಾತಾ, ಈಗ ಎಚ್ಚರವಾಗಿ ಏನೋ ನೋಡ್ತಿದ್ದೀಯಲ್ವಾ, ಎಲ್ಲಿ ಒಮ್ಮೆ ಕಣ್ಣು ಮುಚ್ಚಿಕೋ ನೋಡೋಣ.