ಭಾರತ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ.
ಮೊದಲ ಪಂದ್ಯದಲ್ಲಿ ಸ್ಮೃತಿ ಮಂಧಾನ ಅವರ ಶತಕದ ನೆರವಿನಿಂದ ಭಾರತ ಭರ್ಜರಿ ಗೆಲುವು ಸಾಧಿಸಿದೆ. ರಡನೇ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ಅವರ ಲಭ್ಯತೆ ಪ್ರಮುಖ ಅಂಶವಾಗಿದೆ. ಇಂಗ್ಲೆಂಡ್ ತಂಡ ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತದೆ.
ಪ್ರಸ್ತುತ ಭಾರತ ಮಹಿಳಾ ತಂಡ ಐದು ಪಂದ್ಯಗಳ ಟಿ20 ಸರಣಿಗಾಗಿ ಇಂಗ್ಲೆಂಡ್ (India Women vs England Women) ಪ್ರವಾಸದಲ್ಲಿದೆ. ಈಗಾಗಲೇ ಉಭಯ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ 97 ರನ್ಗಳ ಭಾರಿ ಜಯ ಸಾಧಿಸಿದೆ.
ಖಾಯಂ ನಾಯಕಿ ಹರ್ಮನ್ ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಸ್ಮೃತಿ ಮಂಧಾನ ಭರ್ಜರಿ ಶತಕ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಂದು (ಜುಲೈ 1) ನಡೆಯಲ್ಲಿರುವ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಪ್ರಯತ್ನಿಸಲಿದೆ. ಇತ್ತ, ತವರಿನಲ್ಲಿ ಮುಜುಗರದ ಸೋಲಿಗೆ ಕೊರಳೊಡ್ಡಿರುವ ಇಂಗ್ಲೆಂಡ್ ತಂಡ ಕೂಡ ಮೊದಲ ಪಂದ್ಯದ ಸೋಲಿಗೆ ಸೇರಡು ತೀರಿಸಿಕೊಳ್ಳಲು ಸಿದ್ಧತೆ ನಡೆಸಿದೆ.
ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ರೌಂಡರ್ ಪ್ರದರ್ಶನ ನೀಡಿತ್ತು. ಬ್ಯಾಟಿಂಗ್ನಲ್ಲಿ ಮೂವರನ್ನು ಬಿಟ್ಟರೆ ಉಳಿದವರಿಂದ ಹೆಚ್ಚಿನ ಕೊಡುಗೆ ಸಿಗಲಿಲ್ಲ. ಆದಾಗ್ಯೂ ಆಡಿದ ಮೂವರಲ್ಲಿ ಸ್ಮೃತಿ ಮಂಧಾನ ಶತಕ ಭಾರಿಸಿದ್ದರಿಂದ ತಂಡ ಬೃಹತ್ ಮೊತ್ತ ಕಲೆಹಾಕಿತು. ಆ ಬಳಿಕ ಬೌಲಿಂಗ್ನಲ್ಲಿ ಹಾಗೂ ಫೀಲ್ಡಿಂಗ್ನಲ್ಲಿ ತಂಡ ಸಾಂಘಿಕ ಪ್ರದರ್ಶನ ನೀಡಿ ಆಂಗ್ಲ ತಂಡವನ್ನು ಮಕಾಡೆ ಮಲಗಿಸಿತ್ತು.
ಫೀಲ್ಡ್ಗೆ ಇಳಿಯುತ್ತಾರಾ ಹರ್ಮನ್ಪ್ರೀತ್ ಕೌರ್?
ಎರಡನೇ ಟಿ20 ಪಂದ್ಯಕ್ಕೂ ಮುನ್ನ ತಂಡದ ಚಿಂತೆ ಏನೆಂದರೆ ಇಂಜುರಿಯಿಂದಾಗಿ ಮೊದಲ ಟಿ20 ಪಂದ್ಯದಿಂದ ಹೊರಗುಳಿದಿದ್ದ ಹರ್ಮನ್ಪ್ರೀತ್ ಕೌರ್ ಎರಡನೇ ಪಂದ್ಯದಲ್ಲಿ ಆಡುತ್ತಾರಾ ಎಂಬುದು. ಒಂದು ವೇಳೆ ಹರ್ಮನ್ಪ್ರೀತ್ ಇಂಜುರಿಯಿಂದ ಚೇತರಿಸಿಕೊಂಡು ತಂಡಕ್ಕೆ ಎಂಟ್ರಿ ಕೊಟ್ಟರೆ ಬ್ಯಾಟಿಂಗ್ ವಿಭಾಗ ಇನ್ನಷ್ಟು ಬಲಿಷ್ಠವಾಗಲಿದೆ. ಆದಾಗ್ಯೂ ಅವರು ಇಂಜುರಿಯಿಂದ ಚೇತರಿಸಿಕೊಳ್ಳದಿದ್ದರೆ, ಮೊದಲ ಪಂದ್ಯದಂತೆ ಎರಡನೇ ಪಂದ್ಯದಲ್ಲೂ ಸ್ಮೃತಿ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ.