ಒಂದು ಹೂದೋಟದಲ್ಲಿ ಹೇಗೆ ಹೂಗಳು ಪ್ರತ್ಯೇಕವಾಗಿ ಹಾಗೂ ಹಾರವಾಗಿ ಗುರುತಿಸಲ್ಪಡುತ್ತೇವೋ, ಹಾಗೆಯೇ ವ್ಯಕ್ತಿ ಸಮಾಜದಲ್ಲಿ ತನ್ನ ಐಡೆಂಟಿಟಿ ಪ್ರತ್ಯೇಕವಾಗಿ ಪಡೆಯಬೇಕಾಗುತ್ತದೆ. ಇಂತಹ ವೈವಿಧ್ಯತೆ ಆಗುವುದು ಏಕೆ......?
ಶಾಲೆಯೆಂಬುದು ಒಂದು ಹೂದೋಟವಿದ್ದಂತೆ. ಅದರಲ್ಲಿ ನಾನಾ ತರಹದ ಹೂವಿನ ಗಿಡಗಳನ್ನು ಬೆಳೆಸುತ್ತಾರೆ.
ಚಿಕ್ಕ ವಯಸ್ಸಿನಲ್ಲಿ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಕಲಿಯುತ್ತಿರುವಾಗ ಯಾವುದೇ ಭೇದಭಾವಗಳು ಇರುವುದಿಲ್ಲ. ಜಾತಿ, ಮತಗಳ ಲಕ್ಷ್ಯವೇ ಇರುವುದಿಲ್ಲ. ಬಡ ಶ್ರೀಮಂತರು, ಮೇಲು ಕೀಳೆಂಬ ಅರಿವು ಇರುವುದಿಲ್ಲ. ಮುಗ್ಧ ಮನಸ್ಸಿನಿಂದ ವಿದ್ಯಾರ್ಜನೆ ಕಡೆಗೆ ಮಾತ್ರ ಗಮನ ಕೊಡುವುದಾಗುತ್ತದೆ.
ಅಲ್ಲಿ ನಾನಾ ತರಹದ ವಿದ್ಯಾರ್ಥಿಗಳು, ಗುಲಾಬಿ, ಸಂಪಿಗೆ, ಮಲ್ಲಿಗೆ, ಸುಗಂಧರಾಜ ಹಾಗೂ ಸೇವಂತಿಗೆ ಹೀಗೆ ಹಲವಾರು ಹೂವಿನ ಗಿಡಗಳಂತೆ ಬೆಳೆಯುತ್ತಿರುತ್ತಾರೆ.
ದೊಡ್ಡವರಾದ ನಂತರ ಶಾಲೆಯಿಂದ ಹೊರಬರುವಾಗ ತಮ್ಮ ಜಾಣ್ಮೆಯಿಂದ ಎಷ್ಟೋ ಜನ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ. ಯಾರೋ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಾರೆ.
ಕೆಲವೊಬ್ಬರು ಸಾದಾ ಜೀವನ ನಡೆಸುತ್ತಾರೆ. ಹೆಚ್ಚು ಕಲಿಯಲು ದುಡ್ಡಿನ ಅನುಕೂಲವಿಲ್ಲದವರು ಅಷ್ಟಕ್ಕೆ ಓದು ನಿಲ್ಲಿಸಿ ಏನೋ ಒಂದು ಜೀವನೋಪಾಯಕ್ಕೆ ಹಾದಿ ಹುಡುಕಿಕೊಂಡಿರುತ್ತಾರೆ. ದುಡ್ಡಿದ್ದರೂ ಒಬ್ಬೊಬ್ಬರಿಗೆ ವಿದ್ಯೆ ತಲೆಗೆ ಹತ್ತುವುದಿಲ್ಲ. ಹೀಗೆ ಹತ್ತು ಹಲವಾರು ತರಹ ಜೀವನ ನಡೆಯುತ್ತದೆ.
ಕಮಲ, ಸೂರ್ಯಪಾನ ಇಂತಹ ದೊಡ್ಡ ದೊಡ್ಡ ಹೂಗಳು ಅದರದೇ ರೀತಿಯಾದ ಗುರುತನ್ನು ಹೊಂದಿರುತ್ತವೆ. ಅವುಗಳು ತಮ್ಮದೇ ಆದ ಘನತೆ ಹೊಂದಿರುತ್ತವೆ. ಅವುಗಳನ್ನು ಯಾರೂ ಹಾರ ಮಾಡುವ ಗೋಜಿಗೆ ಹೋಗುವುದಿಲ್ಲ. ಉದಾಹರಣೆಗೆ ಸುಧಾ ಮೂರ್ತಿ, ನರೇಂದ್ರ ಮೋದಿ, ಅಬ್ದುಲ್ ಕಲಾಂ ಹಾಗೂ ರಾಜಕುಮಾರ್ ಇಂತಹವರು ಎಲ್ಲರ ನಡುವೆ ತಮ್ಮದೇ ಆದ ಕಾರ್ಯವೈಖರಿ ಅಥವಾ ಕಲಾತ್ಮಕವಾಗಿ, ತಮ್ಮದೇ ಆದ ಒಂದು ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜದಲ್ಲಿ ಎದ್ದು ಕಾಣುತ್ತಾರೆ.
ಅದೇ ರೀತಿ ಹೂದೋಟದಲ್ಲಿರುವ ಉಳಿದ ಹೂಗಳಾದ ಮಲ್ಲಿಗೆ, ಸುಗಂಧರಾಜ, ಸೇವಂತಿ ಇವುಗಳಿಗೆ ಬೇಕಾದಷ್ಟು ಸುವಾಸನೆ ಇದ್ದರೂ ಅವು ಪ್ರತ್ಯೇಕ ಪ್ರತ್ಯೇಕವಾಗಿ ಎದ್ದು ಕಾಣಲು ಆಗುವುದಿಲ್ಲ.
ಅದೇ ತರಹ ಸಣ್ಣ ಉದ್ಯೋಗ ಮಾಡುವವರಾಗಲಿ, ಸಣ್ಣ ಸಣ್ಣ ನೌಕರಿ ಮಾಡುವ ಜನರಾಗಲಿ ಅವರದೇ ಆದ ಒಂದು ಕಲೆ, ಜಾಣ್ಮೆ ಇದ್ದರೂ ಕೂಡ ಅವರು ಸಮಾಜದಲ್ಲಿ ಎದ್ದು ಕಾಣುವಷ್ಟು ಬೆಳೆಯಲಾಗದೆ ಅವರು ತಮ್ಮ ಸ್ಥಾನವನ್ನು ಬೇರೆಲ್ಲೋ ಗುರುತಿಸಿಕೊಳ್ಳಬೇಕಾಗುತ್ತದೆ.
ಮಲ್ಲಿಗೆ ಹೂ ಎಲ್ಲಾ ಹೂಗಳನ್ನು ಜೋಡಿಸಿ ಹಾರ ಮಾಡಿದಾಗ ಎಷ್ಟೊಂದು ಚೆನ್ನಾಗಿ ಕಾಣುತ್ತದೆ. ಹಾರವನ್ನು ಬೇಕಾದಷ್ಟು ಹಣ ಕೊಟ್ಟು ಕೊಂಡುಕೊಳ್ಳುತ್ತಾರೆ. ಶ್ರೀಮಂತರಿರಲಿ, ಬಡವರಿರಲಿ ಅವರಿಗೆ ಅವರದೇ ಆದ ಒಂದು ಬೆಲೆ ಇದ್ದೇ ಇರುತ್ತದೆ.
ಚಿಕ್ಕ ಪುಟ್ಟ ಹೂಗಳು ಮಲ್ಲಿಗೆ, ಸುಗಂಧಿ ಇಂತಹವನ್ನು ಒಂದೊಂದಾಗಿ ದೇವರಿಗೆ ಆಗಲಿ, ಮುಡಿಯಲ್ಲಿ ಆಗಲಿ ಮುಡಿಸಿದರೆ ಅವು ಅಷ್ಟು ಎದ್ದು ಕಾಣುವುದಿಲ್ಲ. ಸುವಾಸನೆಯಿಂದ ಕೂಡಿದ್ದರೂ ಅವುಗಳ ಮಹತ್ವ ಕಾಣುವುದಿಲ್ಲ.
ಅದೇ ಎಲ್ಲಾ ಹೂಗಳನ್ನು ಜೋಡಿಸಿ, ಪೋಣಿಸಿ ಒಳ್ಳೆಯ ಹಾರವನ್ನು ಮಾಡಿದಾಗ, ಎಷ್ಟೊಂದು ಚೆನ್ನಾಗಿ ಕಾಣುತ್ತದೆ. ಆದರೆ ಪ್ರತ್ಯೇಕವಾಗಿ ಅದರಲ್ಲಿರುವ ಹೂವನ್ನು ಯಾರೂ ಹೊಗಳುವುದಿಲ್ಲ. ಹಾರ ಎಷ್ಟು ಸುಂದರವಾಗಿದೆ ಎನ್ನುತ್ತಾರೆ. ಅದಕ್ಕೆ ಬೆಲೆ ಕೊಟ್ಟು ಕೊಂಡುಕೊಳ್ಳುತ್ತಾರೆಯೇ ಹೊರತು ಹೂ ಚೆನ್ನಾಗಿದೆ ಎನ್ನುವುದಿಲ್ಲ.