ಮುಂಬೈನ ಒಂದು ವೈದ್ಯ ದಂಪತಿ ಪತ್ರಿಕೆಯಲ್ಲಿ  ಐವಿಎಫ್‌ ಬಗ್ಗೆ ನೀಡಿದ್ದ ಜಾಹೀರಾತನ್ನು ಮಹಾರಾಷ್ಟ್ರ ಮೆಡಿಕಲ್ ಕೌನ್ಸಿಲ್‌ ಆಫ್‌ ಇಂಡಿಯಾ ಸಮಿತಿಯು ರದ್ದುಪಡಿಸಿತು.

ಸ್ವಯಂ ಸೇವಾ ಸಂಸ್ಥೆಗಳ ವಾದಕ್ಕೆ ಹೆಚ್ಚಿನ ಬೆಂಬಲ ದೊರೆಯಲಿಲ್ಲ. ಏಕೆಂದರೆ ಐವಿಎಫ್‌ ಒಂದು ವೈಜ್ಞಾನಿಕ ಪಾರದರ್ಶಕ ಪದ್ಧತಿ. ಐವಿಎಫ್‌ ಸೆಂಟರ್‌ಗಳನ್ನು ನಡೆಸುತ್ತಿರುವ ಜನರು ಸಂತಾನಹೀನ ದಂಪತಿಗಳಿಂದ ಹಣ ಲೂಟಿ ಮಾಡುತ್ತಿದ್ದಾರೆ ಎಂಬ ಚರ್ಚೆಯನ್ನು ಸಾಮಾನ್ಯ ಜನರು ಸಮರ್ಥಿಸಲಿಲ್ಲ ಮತ್ತು ಆ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ತೋರಲಿಲ್ಲ.

ನಮ್ಮ ಸಮಾಜದಲ್ಲಿ ಪೂಜೆ, ಹೋಮ, ಶಾಸ್ತ್ರ, ತಂತ್ರಮಂತ್ರಗಳ ಮೂಲಕ ಸಂತಾನ ಭಾಗ್ಯವನ್ನು ಕರುಣಿಸುತ್ತೇನೆಂದು ಹೇಳುತ್ತಾ ಅವೈಜ್ಞಾನಿಕ ವಿಧಾನಗಳಿಂದ ಜನರನ್ನು ಸುಲಿಗೆ ಮಾಡುತ್ತಿರುವವರ ವಿರುದ್ಧವಾಗಿ ಯಾರೂ ಚಕಾರ ಎತ್ತುವುದಿಲ್ಲ ಮತ್ತು ಆ ಬಗ್ಗೆ ಕಾನೂನಿನ ಬೇಡಿಕೆಯನ್ನೂ ಮುಂದಿಡುವುದಿಲ್ಲ.

ಆ ಜನರ ಬಳಿ ಯಾವುದೇ ಉಪಕರಣ, ಔಷಧಗಳಿರುವುದಿಲ್ಲ. ವೈಜ್ಞಾನಿಕ ವಿಧಿ ವಿಧಾನಗಳೂ ಇಲ್ಲ. ಕೇವಲ ಶಾಸ್ತ್ರ ಗ್ರಂಥಗಳನ್ನಿರಿಸಿಕೊಂಡು ಜನರಿಗೆ ಪೊಳ್ಳು ಆಶ್ವಾಸನೆ ನೀಡುತ್ತಾ, ಜಪತಪ, ಪೂಜೆ ಪ್ರದಕ್ಷಿಣೆ ಎಂದು ಹೇಳಿ ಮೋಸ ಮಾಡುತ್ತಾರೆ. ವಿಪರ್ಯಾಸವೆಂದರೆ ಅಂತಹವರ ಬಗ್ಗೆ ಯಾರೂ ದೂರು ನೀಡುವುದಿಲ್ಲ ಮತ್ತು ಯಾವ ಕಾನೂನಿನ ಕ್ರಮ ಜರುಗುವುದಿಲ್ಲ. ಏಕೆಂದರೆ ಇದು ನಂಬಿಕೆಯ ಪ್ರಶ್ನೆ, ವಿಜ್ಞಾನಕ್ಕೆ ಸಂಬಂಧಿಸಿದ ವಿಷಯವಲ್ಲ.

ವೈದ್ಯರು ಮತ್ತು ವಿಜ್ಞಾನಿಗಳು ಅನೇಕ ಸಂಶೋಧನೆ ಮತ್ತು ಪ್ರಯೋಗಗಳ ನಂತರ ಸ್ತ್ರೀ ಪುರುಷರ ಅಂಡಾಣು ಮತ್ತು ವೀರ್ಯಾಣುಗಳನ್ನು ಶರೀರದಿಂದ ಹೊರಗೆ ಸಂಯೋಗಗೊಳಿಸಿ, ನಂತರ ಗರ್ಭಕೋಶದಲ್ಲಿರಿಸಿ ಸಂತಾನ ಪ್ರಾಪ್ತಿಯ ಸಾಧ್ಯತೆಯನ್ನು ಪ್ರದರ್ಶಿಸಿದಾಗ ಜನರ ಮೂಢನಂಬಿಕೆ ಹೋಗಬಹುದೆಂಬ ಭಾವನೆ ನಿಜವಾಗಲಿಲ್ಲ. ಭಾರತೀಯ ಸಮಾಜ ವೈಜ್ಞಾನಿಕ ರೀತಿಯಲ್ಲಿ ಆಲೋಚಿಸುವುದನ್ನೇ ಕಲಿತಿಲ್ಲವಾಗಿ ಜ್ಯೋತಿಷಿ, ಪೂಜಾರಿಗಳ ಬಲೆಯಿಂದ ಹೊರಬರುವುದಾದರೂ ಹೇಗೆ….?

ಐವಿಎಫ್‌ ಮೂಲಕ ಸಂತಾನ ಪಡೆಯುವುದು ಒಂದೇ ಸಲಕ್ಕೆ ಸಫಲವಾಗುವ ಖಾತರಿ ಇರುವುದಿಲ್ಲ. ಪದೇ ಪದೇ ಆ ಪ್ರಯತ್ನದಲ್ಲಿ ತೊಡಗುವ ದಂಪತಿಯು ಐವಿಎಫ್‌ ಸೆಂಟರ್‌ಗೆ ಹೋಗುವ ಮೊದಲು, “ಈ ಸಲ ನಮ್ಮ ಕೆಲಸವನ್ನು ಯಶಸ್ವಿಗೊಳಿಸು ದೇವಾ,” ಎಂದು ಹರಕೆ ಹೊರುತ್ತಾರೆ.

ಧರ್ಮಗ್ರಂಥಗಳಲ್ಲಿನ ಉಲ್ಲೇಖ

ಜೀವನದ ಪ್ರತಿಯೊಂದು ಕಾರ್ಯ ಭಗವಂತನ ಇಚ್ಛೆಯಿಂದಲೇ ಜರುಗುತ್ತದೆ ಎಂಬ ಪಾಠವನ್ನು ನಮ್ಮ ಮಕ್ಕಳು ಬಾಲ್ಯದಿಂದಲೂ ಕಲಿಯುತ್ತಾ ಬಂದಿರುತ್ತಾರೆ. ಹೀಗಾಗಿ ಮುಂದೆ ಅವರು ಸಂತಾನ ಭಾಗ್ಯ ಆ ಮೇಲಿನವನ ಕೃಪೆಯಿಂದ ಆಗುವುದೆಂದು ನಂಬುತ್ತಾರೆ. ಆದ್ದರಿಂದ ಜನರು ಪೂಜೆ, ಹರಕೆ, ಹೋಮ, ಜಪತಪಗಳಿಂದ ಅವನನ್ನು ಒಲಿಸಿಕೊಂಡು ಸಂತಾನ ಪಡೆಯುವ ಹುನ್ನಾರ ನಡೆಸುತ್ತಾರೆ.

ಹಿಂದೂಗಳ ಆರಾಧ್ಯ ದೈವವಾದ ಶ್ರೀರಾಮಚಂದ್ರನ ಜನನದ ಬಗೆಯನ್ನು ನೋಡೋಣ. ದಶರಥ ಮಹಾರಾಜನಿಗೆ ಸಂತಾನ ಪ್ರಾಪ್ತಿಗಾಗಿ ಋಷಿಯೋರ್ವನು ಪಾಯಸವನ್ನು ನೀಡಿ  ಮಹಾರಾಣಿಯರು ಅದನ್ನು ಸೇವಿಸಿ ಮಕ್ಕಳನ್ನು ಪಡೆಯಬಹುದೆಂದು ತಿಳಿಸುತ್ತಾನೆ. ರಾಣಿಯರು ಪಾಯಸವನ್ನು ಸೇವಿಸಿ ಮಕ್ಕಳನ್ನು ಪಡೆಯುತ್ತಾರೆ. ಮಹಾರಾಣಿ ಕೌಸಲ್ಯೆಯ ಮಗನೇ ಶ್ರೀರಾಮ. ಲಕ್ಷ್ಮಣ, ಶತೃಘ್ನ ಮತ್ತು ಭರತ ಇವರು ಮೂವರು ಶ್ರೀರಾಮನ ತಮ್ಮಂದಿರು. ಹಾಗೆಯೇ ಶ್ರೀರಾಮನ ಪತ್ನಿ ಸೀತೆಯು ಭೂಮಿಯ ಮಗಳಾಗಿ ಜನಿಸಿದಳೆಂದು ರಾಮಾಯಣದ ಕಥೆ ಹೇಳುತ್ತದೆ.

ಇದೇ ರೀತಿ ಮಹಾಭಾರತದ ಕಥೆಯಲ್ಲಿ ಕೌರವರ ಜನನ ಮಡಕೆಯಿಂದ ಆಯಿತು ಎಂದು ತಿಳಿದುಬರುತ್ತದೆ. ನಮ್ಮ ಪೌರಾಣಿಕ ಗ್ರಂಥಗಳಲ್ಲಿ ಪುತ್ರಕಾಮೇಷ್ಟಿ ಯಾಗ ಮಾಡಿ ಮಗುವನ್ನು ಪಡೆದಿರುವ ಕಥೆಗಳು ಹೇರಳವಾಗಿ ದೊರೆಯುತ್ತವೆ.

ಮೂಢನಂಬಿಕೆ

ಇಂದಿನ ಸಭ್ಯ, ಸುಶಿಕ್ಷಿತ ನಾಗರಿಕರೂ ಇಂತಹ ಕಥೆಗಳಿಂದ ಪ್ರಭಾವಿತರಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಮಗುವಾಗದಿದ್ದರೆ ಅವರು ನೇರವಾಗಿ ದೇವಸ್ಥಾನಗಳಿಗೆ ಹೋಗಿ ತಲೆಬಾಗುತ್ತಾರೆ, ತೀರ್ಥಯಾತ್ರೆ ಮಾಡುತ್ತಾರೆ. ಆ ಯಾತ್ರಾಸ್ಥಳದಲ್ಲಿ ಅವರಿಗೆ ಎದುರಾಗುವ ಪುಂಡರು ಸಂತಾನಪ್ರಾಪ್ತಿಗಾಗಿ ಕೆಲವಾರು ಸಿದ್ಧ ಉಪಾಯಗಳನ್ನು ಸೂಚಿಸಿ ಹಣ ವಸೂಲಿ ಮಾಡುತ್ತಾರೆ. ಅವರ ಆದೇಶದಂತೆ ದಂಪತಿ ಪೂಜೆ, ವ್ರತ, ದಾನಗಳನ್ನು ಮಾಡಿ ದಣಿಯುತ್ತಾರೆ.

ಸಂತಾನವಿಲ್ಲವೆಂದು ಜ್ಯೋತಿಷಿಗಳ ಬಳಿ ಸಾರಿದರೆ, ಅವರು ಜಾತಕ ನೋಡಿ ಕೆಲವೇ ನಿಮಿಷಗಳಲ್ಲಿ ಲೆಕ್ಕಾಚಾರ ಹಾಕಿ ಯಾವ ಗ್ರಹದಿಂದ ಅಡ್ಡಿಯಾಗುತ್ತಿದೆ ಎಂಬುದನ್ನು ತಿಳಿಸಿಕೊಡುತ್ತಾರೆ. ಆ ಗ್ರಹಶಾಂತಿಗಾಗಿ ಸಾವಿರಾರು ರೂಪಾಯಿ ವೆಚ್ಚದಲ್ಲಿ ಒಂದು ವ್ರತನೇಮವನ್ನು ನಡೆಸಿಕೊಡುತ್ತಾರೆ.

ಜ್ಯೋತಿಷಿಗಳ ವಿಧಾನ ಫಲಿಸದಿದ್ದರೆ ಸಾಧು ಮಹಾರಾಜರ ಕುಟೀರಗಳು ಬಾಗಿಲು ತೆರೆದು ಸ್ವಾಗತಿಸುತ್ತವೆ. ಅಲ್ಲಿ ಅವರ ಆಶೀರ್ವಾದ ಮಾತ್ರದಿಂದಲೇ ಸಂತಾನಭಾಗ್ಯ ಲಭಿಸುತ್ತದೆ.

ಆಯುರ್ವೇದದ ಶಾಸ್ತ್ರದಲ್ಲಿಯೂ ಸಂತಾನ ಪ್ರಾಪ್ತಿಯ ವಿಧಾನಗಳನ್ನು ವಿವರಿಸಲಾಗಿದೆ. ಆ ವಿವರಣೆಯಲ್ಲಿ ಯಾವುದೇ ಗಿಡಮೂಲಿಕೆ ಅಥವಾ ಔಷಧದ ಬಗ್ಗೆ ಹೇಳದೆ ಪ್ರಾಡಕ್ಟ್ ಒಂದನ್ನು ಮಾರಾಟ ಮಾಡುವ ರೀತಿ ಎಂಬಂತೆ ತೋರುತ್ತದೆ. ಯಾವ ಗ್ರಹ ನಕ್ಷತ್ರದಲ್ಲಿ ಸಂಯೋಗವಾದರೆ ಸಂತಾನ ಆಗೇ ಆಗುತ್ತದೆ ಎಂಬುದನ್ನು ತಿಳಿಸಲಾಗುತ್ತದೆ.

ಸಾಧು ಬಾಬಾಗಳು ಜನರ ದೌರ್ಬಲ್ಯವನ್ನು ಗುರುತಿಸಿ, ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ. ಇದಕ್ಕೆ ಬಾಬಾ ರಾಮದೇವ್‌ ಸಹ ಹೊರತಾಗಿಲ್ಲ. ಅವರು ಪುತ್ರ ಜೀಕ್‌ ಎಂಬ ಔಷಧಿಯೊಂದನ್ನು ಮಾರುಕಟ್ಟೆಗೆ ಇಳಿಸಿದರು. ಕಳೆದ ವರ್ಷ ಹರಿಯಾಣದಲ್ಲಿ ಇದರ ಕುರಿತು ಗಲಾಟೆ ಎದ್ದಾಗ, ಆ ಔಷಧಿಯ ಹೆಸರು ಬದಲಿಸಲು ಒಪ್ಪಿದರು.

ಆದರೂ ಈಡೇರದ ಆಸೆ

ಸಂತಾನ ಹೀನತೆಯ ಕಾರಣವನ್ನು ಕುರಿತು ವೈದ್ಯ ವಿಜ್ಞಾನ ಸಾಕಷ್ಟು ತಿಳಿವಳಿಕೆ ನೀಡಿದೆ. ಆದರೂ ಜನರು ಪೂಜೆ, ಶಾಸ್ತ್ರ ಪದ್ಧತಿಗಳಿಗೇ ಅಂಟಿಕೊಂಡಿರುತ್ತಾರೆ ಪರಿಣಾಮವಾಗಿ ದೇಶದಲ್ಲಿ ಲಕ್ಷಾಂತರ ಜನರು ಸಂತಾನರಹಿತರಾಗಿ ಉಳಿದಿದ್ದಾರೆ. ಇದು ತಮ್ಮ ದೌರ್ಭಾಗ್ಯವೆಂದು ತಿಳಿದು ಸುಮ್ಮನಿರುತ್ತಾರೆ.

ಸಂತಾನವಿಲ್ಲವೆಂಬ ಚಿಂತೆಯಲ್ಲಿ ದಂಪತಿಗಳು ಕೊರಗುತ್ತಿದ್ದರೆ, ಕೆಲವು ಜನರು ಅದನ್ನೇ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ. ಕೆಲವು ಬಾಬಾ ಮತ್ತು ದೇವಿಯರ ಬಗ್ಗೆ ರೋಚಕಾರಿ ಕಥೆಗಳು ಜನರಲ್ಲಿ ಹರಡತೊಡಗುತ್ತವೆ. ಕೇವಲ ಅವರ ಆಶೀರ್ವಾದ ಮಾತ್ರದಿಂದಲೇ ಸಂತಾನ ಭಾಗ್ಯ ಲಭಿಸುವುದೆಂಬ ವದಂತಿ ಹಬ್ಬುತ್ತದೆ. ಇಂತಹದೊಂದು ಘಟನೆ ಗುಜರಾತ್‌ನ ಭಾವ‌ನಗರದಲ್ಲಿ ಜರುಗಿತು. ಅಲ್ಲಿನ ದೇವಿ ಮಾತೆಯ ಬಳಿಗೆ ದೂರ ದೂರದ ಊರುಗಳಿಂದ ಸಂತಾನಹೀನ ದಂಪತಿಗಳು ತೆರಳುತ್ತಿದ್ದರು. ಆ ದೇವಿಯು ಮಹಿಳೆಯರಿಗೆ ಆಶೀರ್ವಾದ ಪೂರ್ವಕವಾಗಿ ವಿಭೂತಿಯನ್ನು ಕೊಡುತ್ತಿದ್ದರು. ಜೊತೆಗೆ `ಏನೇ ಆದರೂ ಡಾಕ್ಟರ್‌ ಬಳಿಗೆ ಹೋಗಬಾರದು, ಹೋದರೆ ಹೊಟ್ಟೆಯಲ್ಲಿರುವ ಮಗು ಮಾಯಾಗುತ್ತದೆ,’ ಎಂಬ ಎಚ್ಚರಿಕೆಯ ಮಾತನ್ನೂ ಹೇಳುತ್ತಿದ್ದರು. ವಿಭೂತಿ ಪ್ರಸಾದದ ಸೇವನೆಯಿಂದ ಮಹಿಳೆಯರ ಮುಟ್ಟು ನಿಂತುಹೋಗುತ್ತಿತ್ತು. ಆಶ್ಚರ್ಯದ ವಿಷಯವೆಂದರೆ ಆ ಮಹಿಳೆಯರು ತಿಂಗಳುಗಳಲ್ಲ, ವರ್ಷ ಕಳೆದ ನಂತರ ತಾವು ಗರ್ಭವತಿಯೆಂಬ ಭ್ರಮೆಯಲ್ಲಿರುತ್ತಿದ್ದರು. ಆರೋಗ್ಯ ತೀರ ಹದಗೆಟ್ಟಾಗ ವೈದ್ಯರಿಂದ ದೀರ್ಘಕಾಲ ಚಿಕಿತ್ಸೆ ಪಡೆಯಬೇಕಾಯಿತು.

ತಮ್ಮ ಗುಟ್ಟು ಬಯಲಾಗುವವರೆಗೆ

20 ವರ್ಷಗಳ ಅವಧಿಯಲ್ಲಿ ಆ ದೇವಿ ಕೋಟ್ಯಾಂತರ ರೂಪಾಯಿಗಳನ್ನು ಬಾಚಿಕೊಂಡು ನಂತರ ಪತ್ತೆ ಇಲ್ಲದಂತೆ ಮಾಯವಾದರು.ಇಂತಹ ಮೋಸಗಳು ಬಯಲಾದ ನಂತರ ಪಂಡರ, ಜ್ಯೋತಿಷಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ತಮ್ಮ ಬಳಿಗೆ ಬಂದಿದ್ದ ಒಬ್ಬ ಮಹಿಳೆಗೆ ಮಗುವಾದರೆ ಸಾಕು, ಅದನ್ನು ತಮ್ಮ ಆಶೀರ್ವಾದದ ಫಲವೆಂದು ದೇಶಾದ್ಯಂತ ಪ್ರಚಾರ ಮಾಡುತ್ತಾರೆ. ಈ ರೀತಿಯಾಗಿ ತಮ್ಮ ಬಳಿಗೆ ಹಣದ ಹೊಳೆ ಹರಿದು ಬರುವಂತೆ ನೋಡಿಕೊಳ್ಳುತ್ತಾರೆ.

ಪೂಜೆಯಲ್ಲ ಚಿಕಿತ್ಸೆ ಬೇಕು

ಈ ಮೊದಲೇ ಹೇಳಿರುವಂತೆ ಮಹಿಳೆ ಗರ್ಭವತಿಯಾಗಲು ಹಲವಾರು ಅಂಶಗಳು ಇರುತ್ತವೆ ಎಂದು ವೈದ್ಯ ವಿಜ್ಞಾನ ಸ್ಪಷ್ಟಪಡಿಸುತ್ತದೆ. ಗರ್ಭ ನಿಲ್ಲದಿರಲು ಕಾರಣವೇನೆಂದು ವೈದ್ಯರು ಪರೀಕ್ಷೆ ಮಾಡಿ, ಕೊರತೆ ಪತಿಯಲ್ಲಿದೆಯೋ ಅಥವಾ ಪತ್ನಿಯಲ್ಲಿದೆಯೋ ಎಂದು ಹೇಳಿ ನಂತರ ಅದನ್ನು ದೂರ ಮಾಡುವುದು ಹೇಗೆ ಎಂದು ತಿಳಿಸಿಕೊಡುತ್ತಾರೆ. ಸರಳ ವಿಧಾನದಿಂದ ಆಗದಿದ್ದಾಗ ಐವಿಎಫ್‌ ವಿಧಾನ ಸಂತಾನರಹಿತ ದಂಪತಿಗಳಿಗೆ ವರದಾನವಾಗಿದೆ.

ರೋಗ ಬಂದಾಗ ಜನರು `ಹಣೆಬರಹ’ ಎಂದು ಭಾವಿಸುವಂತೆ ಸಂತಾನಹೀನತೆಯನ್ನೂ ದುರದೃಷ್ಟ ಎಂದು ತಿಳಿಯುತ್ತಾರೆ. ಅದಕ್ಕಾಗಿ ಪೂಜೆ, ವ್ರತಗಳ ಅನುಷ್ಠಾನ ಮಾಡುವುದು ಅವರಿಗೆ ಸುಲಭೋಪಾಯ. ಅವುಗಳನ್ನು ಮಾಡಿಸುವ ಮಂದಿಯೂ ಸುಲಭವಾಗಿ ದೊರೆಯುತ್ತಾರೆ. ಆದರೆ ಐವಿಎಫ್‌ ವಿಧಾನಕ್ಕೆ ಒಳಗಾಗುವುದು ಅಷ್ಟೊಂದು ಸುಲಭವಲ್ಲ. ಏಕೆಂದರೆ ಮೊದಲನೆಯದಾಗಿ ಅದಕ್ಕೆ ವ್ಯಾಪಕ ಪ್ರಚಾರ ದೊರೆತಿಲ್ಲ. ಜನರಿಗೆ ಈ ಬಗ್ಗೆ ಮನದಟ್ಟು ಮಾಡಿಕೊಟ್ಟರೆ, ಬಹುಶಃ ದಂಪತಿಗಳು ಅಂಧಶ್ರದ್ಧೆಯಿಂದ ಹೊರಬಂದು ನವ ಚಿಕಿತ್ಸಾ ವಿಧಾನಕ್ಕೆ ಅನುವಾಗಬಲ್ಲರು.

ಸುಮಾರು 40 ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಜನಸಂಖ್ಯಾ ಸ್ಛೋಟವನ್ನು ತಡೆಯಲು ಸರ್ಕಾರ ಕಾಂಡೋಮ್ ಮತ್ತು ಇತರೆ ಕುಟುಂಬ ಯೋಜನಾ ವಿಧಾನಗಳನ್ನು ಜಾರಿಗೆ ತಂದಾಗ, ಅದಕ್ಕೆ ಹೆಚ್ಚಿನ ವಿರೋಧ ಎದುರಾಯಿತು. ಸಂಪ್ರದಾಯಸ್ಥ ಸ್ವಾರ್ಥಿಗಳ ವಾದವೆಂದರೆ, `ಮಗು ದೇವರ ಕೊಡುಗೆ, ಅದನ್ನು ತಡೆಯುವುದು ಪಾಪ!’ ಕೆಲವು ಧರ್ಮಗಳ ಅನುಯಾಯಿಗಳ ಮನಸ್ಸಿನಾಳದಲ್ಲಿ ಈಗಲೂ ಆ ಭಾವನೆ ಇದ್ದೇ ಇದೆ. ಆದರೂ ಈಗ ಜನರಲ್ಲಿ ಜಾಗೃತಿ  ಉಂಟಾಗಿ ಕುಟುಂಬ ಯೋಜನೆ ಚೆನ್ನಾಗಿ ಜಾರಿಯಾಗಿದೆ. ಅದು ಪಾಪವಲ್ಲ ಎಂಬ ಅರಿವು ಮೂಡಿದೆ.

ಹಾಗೆಯೇ ಸಂತಾನಹೀನತೆಯೂ ದುರದೃಷ್ಟವಲ್ಲ, ಅದನ್ನು ನಿವಾರಿಸಲು ಪ್ರಯತ್ನಪಡಬೇಕು ಎಂಬ ಜಾಗೃತಿ ಜನರಲ್ಲಿ ಉಂಟಾಗಬೇಕು. ಕೇವಲ ದೇವಸ್ಥಾನ, ತೀರ್ಥಯಾತ್ರೆಗೆ ಹೋಗುವ ಬದಲು ಐವಿಎಫ್‌ ಸೆಂಟರ್‌ಗೆ ಹೋಗಬೇಕು. ಏಕೆಂದರೆ ಪೂಜೆಗಿಂತ ಚಿಕಿತ್ಸೆಯಿಂದ ಸಂತಾನ ಪಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

– ಭರತ್‌ ಭೂಷಣ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ