ಜಾತಿ ರಾಜಕಾರಣದಿಂದ ಯಾರಿಗೆ ಲಾಭ?

ದೇಶದಲ್ಲಿ ಮದುವೆಯಲ್ಲಿ ಯಾವ ರೀತಿ ಜಾತಿ ವಿಷಯ ಪ್ರಬಲವಾಗಿರುತ್ತದೊ, ಅದೇ ರೀತಿ ರಾಜಕೀಯದಲ್ಲೂ ಕೂಡ ಇದೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್‌ ಯಾದವ್ ರ ಸಮಾಜವಾದಿ ಪಾರ್ಟಿ ಮಾಯಾವತಿಯ ಬಿಎಸ್‌ಪಿ ಜೊತೆ ಸೇರಿಕೊಂಡು ಯಾದವರು, ಹಿಂದುಳಿದ ದಲಿತರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸಿದರು, ಆದರೆ ಅವರ ಪ್ರಯತ್ನ ಯಶಸ್ವಿಯಾಗಲಿಲ್ಲ. ವರನಿಗೆ ಬಹುಶಃ ವಧು ಇಷ್ಟ ಆಗಲಿಲ್ಲ ಅನಿಸುತ್ತದೆ. ಆತ ಬಿಜೆಪಿ ಮನೆಗೆ ಹೋಗಿ ಕುಳಿತುಬಿಟ್ಟ. ಈಗ ಈ ಬೀಗರು ನಾನು ನೀನು ಎಂದು ಕಚ್ಚಾಡುತ್ತಿದ್ದಾರೆ. ನೀನು ನಿನ್ನ ಪುತ್ರ ಪುತ್ರಿಯರನ್ನು ಹಿಡಿತದಲ್ಲಿ ಇಡಲಿಲ್ಲ ಎಂದು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ.

ಇದಕ್ಕೆ ಮುಖ್ಯ ಕಾರಣವೆಂದರೆ ಇಬ್ಬರು ಬೀಗರೂ ಮದುವೆ ನಿಶ್ಚಯ ಮಾಡಿ ಅದಕ್ಕೆ ತಕ್ಕಂತೆ ಪ್ರಯತ್ನ ಮಾಡಲಿಲ್ಲ. ವಧುವರ ಇಬ್ಬರಿಗೂ ತಿಳಿಸಿ ಹೇಳುವುದು ಅತ್ಯವಶ್ಯ. ಬೀದಿಯ ಇನ್ನೊಂದು ತುದಿಯಲ್ಲಿದ್ದ ಬಿಜೆಪಿ ತನ್ನ ವರನನ್ನು ವಧುವಿನ ಮನೆಯ ಕಡೆ ಕಳಿಸಿ ಅವನಿಂದ ವಧು ಹೊರಗೆ ಬಂದಾಗೆಲ್ಲ, ಆಕೆಯ ಮೇಲೆ ಹೂಮಳೆ ಸುರಿಸುವುದು ಪ್ರತಿದಿನ ಪ್ರೇಮಪತ್ರ ಬರೆಸುವುದೂ ಮಾಡಿದರು. ಚಂದ್ರನನ್ನೇ ನಿನ್ನ ಮನೆಬಾಗಿಲಲ್ಲಿ ತಂದು ಕೂರಿಸುವುದಾಗಿ ಭಾರಿ ಭರವಸೆ ಕೊಡಿಸಿದರು. ಇನ್ನೊಂದು ಕಡೆ ಬೀಗರು ತಮ್ಮ ತಮ್ಮ ಮನೆ ದುರಸ್ತಿ ಮಾಡುವುದರಲ್ಲಿ ಮಗ್ನರಾಗಿದ್ದರು. ಅವರಿಗೆ ವಧುವರರ ಬಗ್ಗೆ ಗಮನವೇ ಇರಲಿಲ್ಲ. ಅವರೇಕೆ ನಮ್ಮ ಮಾತು ಕೇಳುವುದಿಲ್ಲ ಎಂಬ ಆತ್ಮವಿಶ್ವಾಸವಿತ್ತು. ಆದರೆ ಮದುಮಕ್ಕಳು ಓಡಿಹೋದ ಬಳಿಕ ಅದರ ತಪ್ಪನ್ನು ಪರಸ್ಪರರ ಮೇಲೆ ಹೊರಿಸುತ್ತಿದ್ದಾರೆ. ಅದು ಹಾವು ಹೋದ ಬಳಿಕ ಕೋಲಿನಿಂದ ಹುತ್ತ ಹೊಡೆದಂತೆ! ಮಾಯಾವತಿ ಮೂರ್ಖತನದ ಬಳಿಕ ಮಹಾಮೂರ್ಖತನ ಪ್ರದರ್ಶಿಸುತ್ತಿದ್ದಾರೆ. ಹಿಂದುಳಿದವರು ದಲಿತರಿಗೆ ಮತ ಹಾಕುವ ಬದಲು ಬಿಜೆಪಿಗೆ ಹಾಕಿದ್ದು, ಹಿಂದುಳಿದವರು ದಲಿತರ ಮೇಲೆ ಸವಾರಿ ಮಾಡುವ ಸಂದೇಶ ಸಾರುತ್ತಿತ್ತು.

ಈ ದೇಶದ ರಾಜಕೀಯದಲ್ಲಿ ಜಾತಿ ಅತ್ಯಂತ ಮುಖ್ಯವಾಗಿದೆ. ಅದು ಹಾಗೆಯೇ ಮುಂದುವರಿಯುತ್ತದೆ. ಅದರಲ್ಲಿ ಆಕಸ್ಮಿಕವಾಗಿ ದೇಶಭಕ್ತಿ ಉಕ್ಕೇರುವುದು ತಪ್ಪು. ಜಾತಿಯ ಕಾರಣದಿಂದ ನಮ್ಮ ಮನೆಗಳಲ್ಲಿ ಆಫೀಸುಗಳಲ್ಲಿ ಶಾಲೆಗಳಲ್ಲಿ ದೇಶದ ಎಳೆ ಎಳೆಯೂ ಭಿನ್ನ ಎಂಬ ಲಕ್ಷಣರೇಖೆ ಎಳೆಯಲಾಗುತ್ತಿರುತ್ತದೆ. ಬ್ರಾಹ್ಮಣರು, ದಲಿತರು, ಮೇಲುಕೀಳು ಎಂಬುದಿದೆ. ಜಾತಕಗಳನ್ನು ನೋಡಿ ಮದುವೆ ಮಾಡಲಾಗುತ್ತದೆ. ಜಾತಿಯ ಸಮಸ್ಯೆ ಎಷ್ಟಿದೆಯೆಂದರೆ, ಅಕ್ಕಪಕ್ಕದವರು ಕೂಡ ಹೊಂದಾಣಿಕೆ ಮಾಡಿಕೊಳ್ಳಲು ಯಾವ ಜಾತಿ, ಯಾವ ಪಂಗಡ ಎಂದು ಕೇಳದೇ ಇರುವುದಿಲ್ಲ. ಪ್ರೀತಿ ಮಾಡುವ ಮುನ್ನ ಸಂಗಾತಿಯ ಜಾತಿಯ ಬಗ್ಗೆ ಕೇಳದೇ ಇದ್ದಿದ್ದರೆ ಅರ್ಧದಷ್ಟು ಸಂಬಂಧಗಳು ತಂತಾನೇ ಅಂತ್ಯಗೊಳ್ಳುತ್ತವೆ. ಒಂದು ವೇಳೆ ಯುವಕ-ಯುವತಿ ಜಾತಿಯ ಗೋಡೆಯನ್ನು ಜಿಗಿದರೆ ಮನೆಯವರು ವಿರೋಧಿಸುತ್ತಾರೆ. ಪ್ರತಿ ಮನೆಯಲ್ಲೂ ಹಬ್ಬಿದ ಮಹಾರೋಗವಿದು. ಮಹಾ ಘಟಬಂಧನ್‌ ಒಂದು ಚಿಕ್ಕ ಚಿಕಿತ್ಸೆಯಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗೆಂದು ಅದನ್ನು ಕೈ ಬಿಡಲಾಗಿದೆ ಎಂದಲ್ಲ.

ದೇಶವನ್ನು ಜಾತಿ ಸಮಸ್ಯೆಯೆಂಬ ಕೊಚ್ಚೆಯಿಂದ ಹೊರತರಲು ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ತಮ್ಮ ಅಹಂಕಾರ ಬಿಡಬೇಕು ಹಾಗೂ ಹಿಂದುಳಿದವರು ದಲಿತರು ಕೀಳರಿಮೆಯನ್ನು ತೊರೆಯಬೇಕು. ಅಖಿಲೇಶ್‌ ಮತ್ತು ಮಾಯಾವತಿ ಮಾಡಿದ ಪ್ರಯೋಗ ಗುರಿ ತಲುಪದೇ ಇರುವಾಗಲೇ ಅವರಿಬ್ಬರು ಹೆಜ್ಜೆ ಹಿಂದೆ ಇಟ್ಟರು. ಇದಕ್ಕೆ ತದ್ವಿರುದ್ಧ ಎಂಬಂತೆ ಜಾತಿ ಗಾಳಿ ಎಬ್ಬಿಸುತ್ತ ಭಾಜಪಾ ಕಳೆದ 100 ವರ್ಷಗಳಿಂದ ಇದನ್ನು ಹಿಂದೂ ಧರ್ಮದ ಮೂಲ ಭಾವನೆ ಎಂದು ಹೇಳಿಕೊಳ್ಳುತ್ತ ಪ್ರತಿ ಜಾತಿಯನ್ನು ತನ್ನವರನ್ನಾಗಿ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದೆ.

ಅಖಿಲೇಶ್‌ ಯಾದವ್ ಮತ್ತು ಮಾಯಾವತಿ ಸರಿಯಾದ ಹೆಜ್ಜೆ ಇಟ್ಟಿದ್ದರು. ಆದರೆ ಇಬ್ಬರ ಸಲಹೆಗಾರರು ಹಾಗೂ ಅಕ್ಕಪಕ್ಕದ ಮುಖಂಡರು ಈ ಬದಲಾವಣೆ ತರಲು ಸಿದ್ಧರಿಲ್ಲ.

ಜನಸಮೂಹಕ್ಕೆ ಯಾರ ಭಯ ಇಲ್ಲ

ಪರಶುರಾಮನ ತಂದೆಯ ಪುತ್ರರಿಗೆ ತಾಯಿಯನ್ನು ವಧೆ ಮಾಡುವ ಸಂದರ್ಭವೇ ಆಗಿರಬಹುದು. ಅಹಲ್ಯೆ ಇಂದ್ರನ ಮೋಸದ ಕಾರಣದಿಂದ ಪತಿಯನ್ನು ಮೋಸಗೊಳಿಸುವ ಅಥವಾ ಶಂಬೂಕ ಹೆಸರಿನ ಶೂದ್ರನು ತಪಸ್ಸು ಮಾಡಿದಾಗ, ರಾಮನ ಕೈಯಿಂದ ವಧೆ ಮಾಡಿರುವುದೇ ಆಗಿರಬಹುದು. ನಮ್ಮ ಧರ್ಮ ಗ್ರಂಥಗಳು ತ್ವರಿತ ನ್ಯಾಯವನ್ನು ಸರಿಯೆಂದು ಹೇಳಿವೆ. ಅದರ ಮೇಲೆ ಧಾರ್ಮಿಕ ಮೊಹರು ಹಾಕಲಾಗಿದೆ. ಈ ಮೊಹರಿಗೆ ತಗುಲಿರುವ ಮಸಿ ಎಷ್ಟು ಗಾಢವಾಗಿದೆ ಎಂದರೆ, ಅದೊಂದು ಸಮೂಹ ಸನ್ನಿಯಂತೆ ಕೆಲಸ ಮಾಡುತ್ತದೆ.

ಅಸ್ಸಾಂನ ತಿನ್‌ಸುಖಿಯಾ ಜಿಲ್ಲೆಯಲ್ಲಿ ಜನ ಸಮೂಹವೊಂದು ಗಂಡ ಮತ್ತು ಅವನ ತಾಯಿಯನ್ನು ಹೊಡೆದು ಸಾಯಿಸಿತು. ಏಕೆಂದರೆ ಅವನು ತನ್ನ 20 ವರ್ಷದ ಹೆಂಡತಿ ಮತ್ತು 2 ತಿಂಗಳ ಹೆಣ್ಣುಮಗುವನ್ನು ಸಾಯಿಸಿದ್ದ ಎಂಬ ಸಂದೇಹ ಅವರಿಗಿತ್ತು.

ಆಶ್ಚರ್ಯದ ಸಂಗತಿಯೆಂದರೆ, ಅಕ್ಕಪಕ್ಕದವರು ಹಾಗೂ ಹೆಂಡತಿಯ ಸಂಬಂಧಿಕರು ಅಮ್ಮ-ಮಗನನ್ನು ಕೋಲಿನಿಂದ ಹೊಡೆಯುತ್ತಿದ್ದಾಗ ಜನ ಅದರ ವಿಡಿಯೋ ಮಾಡುವ ಪುಣ್ಯದ ಕೆಲಸದಲ್ಲಿ ಮಗ್ನರಾಗಿದ್ದರು.

ದೇಶಾದ್ಯಂತ ಈ ರೀತಿ ಜನಸಮೂಹಗಳು ಕಾನೂನನ್ನು ಕೈಗೆತ್ತಿಕೊಳ್ಳುವುದು ಹಾಗೂ ಅಲ್ಲಿ ಉಪಸ್ಥಿತರಿರುವ ಜನರು ವಿಡಿಯೋ ಮಾಡುವ ಖಯಾಲಿ ಹೆಚ್ಚುತ್ತಾ ಹೊರಟಿದೆ. ಏಕೆಂದರೆ ಸರ್ಕಾರ ಆ ತರಾತುರಿಯ ನ್ಯಾಯವನ್ನು ಪ್ರಶ್ನಿಸುವುದಿಲ್ಲ. ಗೋರಕ್ಷಕರ ಗುಂಪುಗಳನ್ನಂತೂ ಸರ್ಕಾರಿ ಆಡಳಿತ ವಿಶೇಷ ಅತಿಥಿಗಳಂತೆ ಉಪಚರಿಸುತ್ತದೆ. ಜನರು ಹಾಗೂ ಸಮಾಜ ಅವರನ್ನು ಧರ್ಮರಕ್ಷಕರೆಂದು ಮನ್ನಿಸುತ್ತದೆ.

`ತ್ವರಿತ ನ್ಯಾಯ’ ಹೇಳಲು ಕೇಳಿಸಿಕೊಳ್ಳಲು ಬಹಳ ಒಳ್ಳೆಯದೆಂಬಂತೆ ಅನಿಸುತ್ತದೆ. ಆದರೆ ಇದು ಪ್ರಬಲರು ದುರ್ಬಲರ ಮೇಲೆ ಅಧಿಕಾರ ಚಲಾಯಿಸುವ ಸುಲಭ ವಿಧಾನ ಎನಿಸುತ್ತದೆ. ಗಲಾಟೆಕೋರರ ಗುಂಪು ದೇಶದ ಕಾನೂನು ಹಾಗೂ ಪೊಲೀಸ್‌ ವ್ಯವಸ್ಥೆಗಿಂತ ಮಿಗಿಲು ಎಂಬುದನ್ನು ಇದು ತೋರಿಸಿಕೊಡುತ್ತದೆ. ಅವರವರೇ ತೀರ್ಮಾನ ತೆಗೆದುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಇದು ಮನೆ ಮನೆಗೂ ಭಯೋತ್ಪಾದನೆ ಹಬ್ಬಿಸುವ ಕೆಲಸ ಮಾಡುತ್ತದೆ. ಇದೇ ಈ ಭಯೋತ್ಪಾದನೆಯ ಬಲದ ಮೇಲೆ ಮಹಿಳೆಯರು, ಮಕ್ಕಳ ಮೇಲೆ ತಮ್ಮ ದರ್ಪ ತೋರಿಸುತ್ತಿದ್ದಾರೆ. ಅದು ಈಗಲೂ ಮುಂದುವರಿದಿದೆ.

ಮದುವೆಯ ಹೊಸದರಲ್ಲಿ ಹೆಂಡತಿ ಸಾವಿಗೀಡಾದರೆ, ಗಂಡನ ಮೇಲೆ ಸಂದೇಹ ಪಡುವ ಕಾನೂನು ರೂಪುಗೊಂಡಿರುವಾಗ, ಜನಸಮೂಹಕ್ಕೆ ಯಾವುದೇ ಕೆಲಸ ಇರುತ್ತಿರಲಿಲ್ಲ. ತಿನ್‌ಸುಖಿಯಾ ಜಿಲ್ಲೆಯಲ್ಲಿ ಮಹಿಳೊಬ್ಬಳ ಶವ ಟ್ಯಾಂಕ್‌ವೊಂದರಲ್ಲಿ ದೊರೆತಾಗ, ಸಂದೇಹಪಟ್ಟು ಆಕೆಯ ಗಂಡ ಹಾಗೂ ತಾಯಿಯನ್ನು ಹೊಡೆಯುವ ಹಕ್ಕು ಯಾರಿಗೂ ಇಲ್ಲವೆಂಬ ವಿಷಯ ಚರ್ಚೆಗೆ ಬಂತು. ಅಕ್ಕಪಕ್ಕದವರು ತಾಯಿ-ಮಗನ ನೆರವಿಗೆ ಬರದೇ ಇರುವುದು ಅಚ್ಚರಿಯ ಸಂಗತಿ.

ನಮ್ಮ ಸಮಾಜಕ್ಕೆ ತಪ್ಪುಸರಿಯ ಯೋಚನೆ ಮರೆತೇಬಿಟ್ಟಂತೆ ಅನಿಸುತ್ತದೆ. ಹುಡುಗ-ಹುಡುಗಿಯನ್ನು ಜೊತೆ ಜೊತೆಗೆ ನೋಡಿ ಅವರನ್ನು ಹೊಡೆಯುವುದು, ಹುಡುಗನ ಕಣ್ಣೆದುರೇ ಹುಡುಗಿಯನ್ನು ರೇಪ್‌ ಮಾಡುವ ಹಾಗೂ ಅದರ ವಿಡಿಯೋ ಮಾಡುವ ಹಕ್ಕು ದೊರೆತಿರುವಂತೆ ಸಮಾಜ ವರ್ತಿಸುತ್ತದೆ.

ಕಾನೂನು ಈಗ ಪೊಲೀಸರು ಹಾಗೂ ನ್ಯಾಯಾಲಯಗಳಿಂದ ಪುಂಡಪೋಕರಿಗಳ ಕೈಗೆ ಸಿಕ್ಕು ನರಳುತ್ತಿದೆ. ಅವರು ತಮಗೆ ತೋಚಿದಂತೆ ಮಾಡುತ್ತಾರೆ. ಕಳೆದ 100-150 ವರ್ಷಗಳ ಸಮಾಜ ಸುಧಾರಣೆ ಮತ್ತು ಕಾನೂನಿನ ಮುಖಾಂತರ ಸಮಾಜವನ್ನು ಮುನ್ನಡೆಸುವ ಪ್ರವೃತ್ತಿಯ ಅಂತ್ಯ ಸಂಸ್ಕಾರವನ್ನು ಜನಸಮೂಹಗಳು ಅಲ್ಲಲ್ಲಿ ನಡೆಸುತ್ತಿರುವುದು ಗೋಚರಿಸುತ್ತದೆ. ಅದು ಅವರಿಗೆ ತಿರುಗಿ ಬೀಳುತ್ತದೆ. ಆದರೆ ಅದರ ಚಿಂತೆ ಯಾರಿಗಿದೆ? ಈಗಂತೂ ಅವರಿಗೆ ಪುಣ್ಯ ಸಂಪಾದನೆ ಮಾಡಬೇಕಿದೆ.

ಎಚ್ಚರಿಕೆಯಿಂದಿರುವುದು ಯುವತಿಯ ಮೊದಲ ಕೆಲಸ

ಮದ್ಯ, ಬಲಾತ್ಕಾರಗಳ ಬಾಗಿಲನ್ನು ತೆರೆಯುತ್ತದೆ. ಏಕೆಂದರೆ ಮದ್ಯದ ಅಮಲಿನಲ್ಲಿ ತಮ್ಮೊಂದಿಗೆ ಏನಾಗುತ್ತಿದೆ ಎಂಬ ಪ್ರಜ್ಞೆ ಹುಡುಗಿಯರಿಗೆ ಇರುವುದಿಲ್ಲ. ಅದೇ ರೀತಿ ಬಲಾತ್ಕಾರಿಗಳಿಗೂ ಕೂಡ. ದೇಶಿ ಏರ್‌ಲೈನ್ಸ್ ನಲ್ಲಿ ಕೆಲಸ ಮಾಡುವ ಗಗನಸಖಿಯರು ಸಾಕಷ್ಟು ದೃಢ ಮನಸ್ಸಿವನರಾಗಿರುತ್ತಾರೆ. ಪ್ರಯಾಣಿಕರನ್ನು ನಿರ್ವಹಣೆ ಮಾಡುತ್ತ ಅವರು ಯಾರು ಯಾರು ಹೇಗ್ಹೇಗೆ ಎನ್ನುವುದನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಅವರು ಖಂಡಿತ ಸೂಕ್ಷ್ಮ ಮನಸ್ಸಿನವರಾಗಿರುವುದಿಲ್ಲ. ಅವರ ಮನಸ್ಸು ಸಾಕಷ್ಟು ಬಲಿಷ್ಠವಾಗಿರುತ್ತವೆ.

ಇಂತಹದರಲ್ಲಿ ಯಾರಾದರೂ ಗಗನಸಖಿ ತನ್ನೊಂದಿಗೆ ಬಲಾತ್ಕಾರ ನಡೆದಿದೆ ಎಂದು ಹೇಳಿದರೆ, ಸಾಕಷ್ಟು ಒತ್ತಾಯ ಒತ್ತಡವಿರಬಹುದು ಅಥವಾ ಮದ್ಯದಲ್ಲಿ ಮತ್ತು ತರಿಸುವ ಔಷಧಿ ಬೆರೆಸಿರಬಹುದು.

ಹೈದರಾಬಾದ್‌ನಲ್ಲಿ ವಾಸಿಸುವ ಯುವತಿಯ ದೂರೇನೆಂದರೆ, ತಾನು ಡ್ರಿಂಕ್ಸ್ ಮಾಡಲು ಸಹೋದ್ಯೋಗಿಯ ಜೊತೆ ಹೋಗಿದ್ದೆ. ಬಳಿಕ ಅವನ ಮನೆಗೆ ಹೋದೆ. ಅವನು ಹಾಗೂ ಇತರೆ ಇಬ್ಬರೂ ತನ್ನನ್ನು ಪ್ರಜ್ಞೆ ತಪ್ಪಿಸಿ ಬಲಾತ್ಕಾರ ಮಾಡಿದರು.

ಈ ಮಧ್ಯೆ ಆಕೆಯ ಭಾವಿ ಪತಿ ಹಾಗೂ ತಂದೆ ಆಕೆಗೆ ಸತತವಾಗಿ ಕರೆ ಮಾಡುತ್ತಲೇ ಇದ್ದರು. ಆದರೆ ಅವಳು ಸಂಪರ್ಕಕ್ಕೆ ಸಿಕ್ಕಿದ್ದು ಮರುದಿನ ಮುಂಜಾನೆ ಪ್ರಜ್ಞೆ ಬಂದು ಎದ್ದಾಗಲೇ. ಅವಳು ತನ್ನೊಂದಿಗೆ ನಡೆದ ಘಟನೆಯನ್ನು ಅವರ ಮುಂದೆ ವಿವರಿಸಿದ ಬಳಿಕವೇ ಪೊಲೀಸರಿಗೆ ದೂರು ನೀಡಲಾಯಿತು.

ಬಲಾತ್ಕಾರದ ಬಗ್ಗೆ ಸಾಮಾನ್ಯವಾಗಿ ಹೇಳುವ ಮಾತೆಂದರೆ, ಅದಕ್ಕೆ ಹುಡುಗಿಯ ಒಪ್ಪಿಗೆ ಇರಬಹುದು. ಬಳಿಕ ಆಕೆ ಅದನ್ನು ತಳ್ಳಿಹಾಕಿರಬಹುದು. ಈ ಕುರಿತಂತೆ ಹೇಳುವ ಮತ್ತೊಂದು ವಿಷಯವೆಂದರೆ, ಆಕೆ ತನ್ನ ಸುಖಕ್ಕಾಗಿ ಸಂಬಂಧ ಬೆಳೆಸಿದ್ದರೆ, ಅವಳು ಮುಂದೆ ಕೂಡ ಸಂಬಂಧ ಮುಂದುವರಿಸುತ್ತಾಳೆ, ಅದನ್ನು ಬಿಟ್ಟು ದೂರು ಕೊಡಲು ಹೋಗುವುದಿಲ್ಲ. ತನ್ನೊಂದಿಗೆ ಬಲಪೂರ್ವಕವಾಗಿ ಸಂಬಂಧ ಮಾಡಲು ಪ್ರಯತ್ನಿಸಿದರೆ ಅವಳು ದೂರು ಕೊಟ್ಟೇ ಕೊಡುತ್ತಾಳೆ.

ಇದೆಲ್ಲ ಹೇಗಿದೆಯೆಂದರೆ, ಇಬ್ಬರಲ್ಲಿ ಒಬ್ಬ ಸ್ನೇಹಿತ, ಬಹಳ ದಿನಗಳ ಕಾಲ ಸಹಾಯ ಮಾಡಿ ಒಂದು ದಿನ ನಿರಾಕರಿಸುತ್ತಾನೆ. ಆಗ ಸಹಾಯ ಪಡೆದವ, ಸಹಾಯ ಮಾಡುವವನ ಪರ್ಸ್‌ ಕದಿಯಲು ಆಗುತ್ತಾ? ಮದ್ಯದ ನಶೆಯಲ್ಲಿ ಒಬ್ಬ ಸ್ನೇಹಿತ ಇನ್ನೊಬ್ಬ ಸ್ನೇಹಿತನ ಪರ್ಸ್‌ ಕಿತ್ತುಕೊಂಡು ಹೋಗುವುದು ಸಾಧ್ಯವಿದೆ. ಆದರೆ ಅದು ಅಪರಾಧ ಕೂಡ. ಹಣದ ಅಪರಾಧ ಚಿಕ್ಕದು, ಆದರೆ ದೈಹಿಕ ಅಪರಾಧ ದೊಡ್ಡದು. ಒಂದು ಸಣ್ಣ ಏಟಿಗೆ ಪ್ರತಿಯಾಗಿ ಜನರು ಗುಂಡು ಸಹ ಹಾರಿಸುತ್ತಾರೆ. ಇದು ಅವರವರ ಹಕ್ಕುಗಳ ಬಳಕೆಯಾಗಿದೆ.

ತನ್ನ ಬಗ್ಗೆ ಎಚ್ಚರದಿಂದಿರುವುದು ಪ್ರತಿಯೊಬ್ಬ ಯುವತಿಯ ಮೊದಲ ಕರ್ತವ್ಯವಾಗಿದೆ. ಅವಳಿಗೆ ಯಾರೊಂದಿಗಾದರೂ ದೈಹಿಕ ಸಂಬಂಧ ಹೊಂದಲು ಆಕ್ಷೇಪ ಇಲ್ಲವೆಂದರೆ ಅವಳು ಅವನ ಜೊತೆ ಎಲ್ಲಿಗಾದರೂ ಹೋಗಬಹುದು, ಏನು ಬೇಕಾದರೂ ಮಾಡಬಹುದು. ಆದರೆ ಯಾವುದೋ ಕಾರಣದಿಂದ ಯುವ ಸ್ನೇಹಿತನ ಜೊತೆ ಹೋದಾಗ ಅವಳು ಮದ್ಯದ ರಿಸ್ಕ್ ತೆಗೆದುಕೊಳ್ಳಲೇಬಾರದು. ತನ್ನ ಸುರಕ್ಷತೆ ತನ್ನ ಕೈಯಲ್ಲಿಯೇ ಇದೆ. ಈಗ ಪುರುಷರು ಕೂಡ ರಾತ್ರಿ ಹೊತ್ತು ಜೇಬಿನಲ್ಲಿ ಪರ್ಸ್‌ ಹಾಗೂ ಮೊಬೈಲ್‌ ತೆಗೆದುಕೊಂಡು ಹೋಗಲು ಹೆದರುತ್ತಾರೆ ಎನ್ನುವುದು ನಿಮಗೆ ನೆನಪಿನಲ್ಲಿರಲಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ