ರಾಜಾಸ್ಥಾನದ ಪ್ರವಾಸ ಮಾಡಬೇಕೆಂಬ ಯೋಚನೆ ಬಂದರೆ ಅಲ್ಲಿನ ಮರಳಿನ ದಿಬ್ಬಗಳು, ಶುಷ್ಕ ಸ್ಥಳಗಳು, ಮುಳ್ಳುಕಂಟಿಗಳ ಕಾಡುಗಳೇ ನಮಗೆ ನೆನಪಿಗೆ ಬರುತ್ತವೆ. ಆದರೆ ಅಲ್ಲಿ ಎಂತಹದೊಂದು ರಮ್ಯ ಸ್ಥಳವಿದೆಯೆಂದರೆ, ಅಲ್ಲಿ ಬೆಟ್ಟ ಗುಡ್ಡಗಳು, ಝರಿಗಳು, ಕೋಟೆಕೊತ್ತಲುಗಳೂ ಕೂಡ ಇವೆ, ಅದೇ ಕುಂಭಲಗಢ! ಇಲ್ಲಿಗೆ ವರ್ಷವಿಡೀ ಪ್ರವಾಸಿಗರು ಬರುತ್ತಿರುತ್ತಾರೆ. ಮಳೆಗಾಲದಲ್ಲಿ ಇಲ್ಲಿನ ಹಸಿರು ಸಿರಿ ಕಾಣಲು ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ.
ಬೆಂಗಳೂರಿನಿಂದ ನೇರ ವಾಯುಮಾರ್ಗ ಅಥವಾ ರೈಲಿನಲ್ಲಿ ಉದಯಪುರ ತಲುಪಿ ಅಲ್ಲಿಂದ ಬಸ್ ಅಥವಾ ಖಾಸಗಿ ಟ್ಯಾಕ್ಸಿ ಮೂಲಕ ಇಲ್ಲಿಗೆ ತಲುಪಬಹುದು.
ನೋಡಲೇಬೇಕಾದ ಸ್ಥಳಗಳು
ಕುಂಭಲಗಢದಲ್ಲಿ ಕುಂಭಲಗಢ ಕೋಟೆ, ಪ್ರಾಣಿ ಸಂಗ್ರಹಾಲಯ, ಪಕ್ಷಿಧಾಮ, ಅರಾವಳಿಯ ಎತ್ತರೆತ್ತರದ ಪರ್ವತಗಳು, ಹಲ್ದೀಘಾಟಿ ಮ್ಯೂಸಿಯಂ ನೋಡಬಹುದಾದ ಸ್ಥಳಗಳು. ಇವುಗಳಲ್ಲಿ ಕುಂಭಲಗಢದ ಕೋಟೆ ತನ್ನದೇ ಆದ ವಿಶೇಷತೆ ಹೊಂದಿದೆ. ರಾಜಾಸ್ಥಾನದ ದಕ್ಷಿಣ ಭಾಗದಲ್ಲಿರುವ ಈ ಕೋಟೆ ಚೀನಾದ ಮಹಾಗೋಡೆಯ ಬಳಿಕ ಜಗತ್ತಿನ ಅತಿ ಉದ್ದನೆಯ ಗೋಡೆ ಎನಿಸಿಕೊಂಡಿದೆ. ಇಲ್ಲಿನ ಹವಾಮಾನ ಪ್ರವಾಸಿಗರಿಗೆ ಅನುಕೂಲಕರ ಅನಿಸುವುದರಿಂದ ವರ್ಷವಿಡೀ ಪ್ರವಾಸಿಗರು ಇಲ್ಲಿಗೆ ಬರುತ್ತಿರುತ್ತಾರೆ.
ಮೇವಾಡದ ರಾಜ ರಣಕುಂಭಾ ತನ್ನ ಅದ್ಭುತ ಪ್ರತಿಭೆಯಿಂದ ಇದನ್ನು ನಿರ್ಮಿಸಿದ್ದ. ಇದು ಮೇವಾಡ ರಾಜರ ಸಂಕಷ್ಟ ಕಾಲದಲ್ಲಿ ನೆರವಾಗುವ ಕೋಟೆ ಎಂಬ ಖ್ಯಾತಿ ಪಡೆದಿತ್ತು. ಇದಕ್ಕೆ `ಅಜೇಯಗಢ’ ಎಂದು ಕೂಡ ಕರೆಯಲಾಗುತ್ತದೆ. ಏಕೆಂದರೆ ಇದನ್ನು ಗೆಲ್ಲುವುದು ಅಷ್ಟು ಸುಲಭವಾಗಿರಲಿಲ್ಲ. ಈ ಕೋಟೆಯ ನಿರ್ಮಾಣಕ್ಕೆ 15 ವರ್ಷ ತಗುಲಿತ್ತು. ಅದರಲ್ಲಿ ಪ್ರವೇಶದ್ವಾರ, ಜಲಾಶಯ, ಹೊರಗೆ ಹೋಗಲು ಗುಪ್ತ ಮಾರ್ಗ, ಮಹಲುಗಳು, ಸ್ತಂಭಗಳು ಮುಂತಾದವು ಇವೆ. ಈ ಕೋಟೆಯ ಹೊರಗಿನ ಗೋಡೆ 36 ಕಿ.ಮೀ.ನಷ್ಟು ಉದ್ದವಿದೆ. ಇದನ್ನು `ಗ್ರೇಟ್ ವಾಲ್ ಆಫ್ ಇಂಡಿಯಾ’ ಎಂದು ಕರೆಯಲಾಗುತ್ತದೆ. ಈ ಕೋಟೆ ವೀಕ್ಷಣೆಗೆ 15 ರೂ., ವಿದೇಶೀಯರಿಗೆ 100 ರೂ. ಶುಲ್ಕವಿದೆ. 2013ರಲ್ಲಿ ಇದನ್ನು ಯುನೆಸ್ಕೊ `ವಿಶ್ವ ಪಾರಂಪರಿಕ ಸ್ಥಳ’ವೆಂದು ಘೋಷಿಸಿತು. ಇಲ್ಲಿ ಸಂಜೆ 7-8ರವರೆಗೆ ಧ್ವನಿ ಹಾಗೂ ಬೆಳಕಿನ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅದರಿಂದ ಕೋಟೆಯ ಸಂಪೂರ್ಣ ಇತಿಹಾಸವನ್ನು ಅರಿಯಬಹುದು.
ಕುಂಭಲಗಢ ಕೋಟೆಯಿಂದ 15 ಕಿ.ಮೀ. ದೂರದಲ್ಲಿ ಹಲ್ದೀಘಾಟಿ ಹಾಗೂ 68 ಕಿ.ಮೀ. ದೂರದಲ್ಲಿ ರನಕ್‌ಪುರ ಜೈನ ಮಂದಿರ ಅಮೃತಶಿಲೆಯಲ್ಲಿ ನಿರ್ಮಾಣಗೊಂಡಿದೆ. ಇವೆರಡೂ ರಮಣೀಯ ಸ್ಥಳಗಳನ್ನು ಬಿಡುವಂತಿಲ್ಲ.
ವೈಲ್ಡ್ ಲೈಫ್ ಸಫಾರಿ
ಜಂಗಲ್ ಸಫಾರಿಗಾಗಿ ಇಲ್ಲಿ 15-20 ಜೀಪ್‌ಗಳ ವ್ಯವಸ್ಥೆ ಇದ್ದು, 2-3 ಗಂಟೆ ಅವಧಿಯಲ್ಲಿ ಇಡೀ ಕಾಡಿನ ಸುತ್ತಾಟದ ಆನಂದ ಪಡೆಯಬಹುದು. ಇಲ್ಲಿ ಚಿರತೆ, ಜಿಂಕೆ, ಕಾಡುಬೆಕ್ಕು, ಕರಡಿ, ಮುಳ್ಳುಹಂದಿ, ಲಂಗೂರ್ ಮುಂತಾದವುಗಳನ್ನು ಕಾಣಬಹುದು. ಬಗೆಬಗೆಯ ಪಕ್ಷಿಗಳು ಕೂಡ ಇಲ್ಲಿವೆ. ಮೊದಲು ರಾಜಮಹಾರಾಜರು ಇಲ್ಲಿಗೆ ಬೇಟೆಗೆ ಬರುತ್ತಿದ್ದರು. ಈಗ ಬೇಟೆಗೆ ನಿಷೇಧ ಹೇಳಿ ಇದನ್ನು ಸುಪ್ರಸಿದ್ಧ ಪ್ರವಾಸಿ ತಾಣವಾಗಿಸಲಾಗಿದೆ.
ಕುಂಭಲಗ್ ಕೋಟೆಗುಂಟ ವ್ಯಾಪಿಸಿಕೊಂಡ ಕಾಡಿನಲ್ಲಿ ಅತ್ಯಂತ ವಿಶಿಷ್ಟ ಪ್ರಕಾರದ ಮರಗಳನ್ನು ಕಾಣಬಹುದಾಗಿದೆ. ಇಲ್ಲಿ ವೈವಿಧ್ಯಮಯ ಕಾಡುಮರಗಳಿದ್ದು, ವನಸಿರಿ ಸಮೃದ್ಧವಾಗಿದೆ.
ಸಫಾರಿ ಸಮಯ ಮುಂಜಾನೆ 6 ರಿಂದ 9, ಮಧ್ಯಾಹ್ನ 3 ರಿಂದ 5 ಹಾಗೂ ನೈಟ್ ಸಫಾರಿ ರಾತ್ರಿ 9 ರಿಂದ 11. ಹೆಚ್ಚಿನ ಜನರು ನೈಟ್ ಸಫಾರಿಗೆ ಹೋಗಲು ಇಷ್ಟಪಡುತ್ತಾರೆ. ಏಕೆಂದರೆ ತಂಪು ಹೊತ್ತಿನಲ್ಲಿ ಪ್ರಾಣಿಗಳು ಹೆಚ್ಚಾಗಿ ಸಂಚರಿಸುತ್ತಿರುತ್ತವೆ.
ನೈಟ್ ಸಫಾರಿ ಸಮಯದಲ್ಲಿ ಫಾರೆಸ್ಟ್ ಗೈಡ್ ಡ್ರೈವರ್ ಪಕ್ಕದಲ್ಲಿ ಕುಳಿತು ಲೆಡ್ ಟಾರ್ಚ್‌ನ ಸಹಾಯದಿಂದ ಪ್ರಾಣಿಗಳ ಚಲನವಲನವನ್ನು ತೋರಿಸುತ್ತಾರೆ. ರಾತ್ರಿ ಸಫಾರಿ ಸಮಯದಲ್ಲಿ ಸದ್ದು ಮಾಡದೇ ಇರಲು ಸೂಚಿಸಲಾಗುತ್ತದೆ. ಮೊಬೈಲ್ ರಿಂಗ್ ಕೂಡ ಸೈಲೆಂಟ್ ಇಡಲು ಹೇಳಲಾಗುತ್ತದೆ.
ಇತಿಹಾಸ ತಿಳಿಯಲು ಸಹಾಯ
`ಹಮೀರ್ ಕೀ ತಾಲಾಬ್’ನಲ್ಲಿ ಸಾವಿರಾರು ಕ್ಯಾಟ್‌ಫಿಶ್‌ಗಳಿವೆ. ಗ್ರಾಮಸ್ಥರು ಇದರ ರಕ್ಷಣೆಯ ಹೊಣೆ ಹೊತ್ತಿದ್ದಾರೆ. ಹಮೀರ್ ಎಂಬ ರಾಜ ಆಗ 1 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಿದ್ದ. ಹೀಗಾಗಿ ಇದಕ್ಕೆ ಅವನದೇ ಹೆಸರು ಇಡಲಾಗಿದೆ.
ಹಲ್ದೀಘಾಟಿ ಮ್ಯೂಸಿಯಂ ಮಹಾ ರಾಣಾ ಪ್ರತಾಪನ ಇತಿಹಾಸವನ್ನು ತಿಳಿಸಿಕೊಡುತ್ತದೆ. ಆಗಿನ ಕಾಲದ ಪುಸ್ತಕ, ಚಿತ್ರ, ಶಸ್ತ್ರಾಸ್ತ್ರಗಳನ್ನು ಸುಂದರವಾಗಿ ಪೇರಿಸಿ ಇಡಲಾಗಿದೆ. ಪ್ರತಿ 15 ನಿಮಿಷಗಳಿಗೊಮ್ಮೆ ಇಲ್ಲಿ ಮಹಾರಾಣಾ ಪ್ರತಾಪನ ಜೀವನಕ್ಕೆ ಸಂಬಂಧಪಟ್ಟ ಕಿರುಚಿತ್ರವೊಂದನ್ನು ತೋರಿಸಲಾಗುತ್ತದೆ.
ವೈವಿಧ್ಯಮಯ ತಿನಿಸುಗಳು
ರಾಜಾಸ್ಥಾನದ ಮೇವಾಡ್‌ನ ಸಸ್ಯಾಹಾರಿ ವ್ಯಂಜನಗಳು ದಾಲ್‌ಬಾಟಿ, ಕೇರ್ ಸಾಂಗಡಿ, ಗಟ್ಟೆ ಕೀ ಖಿಚಡಿ, ಬೂಂದಿ ರಾಯ್ತಾ, ಬಾಜರ್ ಕೀ ರೋಟಿ, ಮೆಕ್ಕೆ ಕೀ ರೋಟಿ ಮುಂತಾದವು ಮುಖ್ಯ ಆಹಾರಗಳಾಗಿವೆ. ನಾನ್‌ವೆಜ್‌ನಲ್ಲಿ ರೆಡ್‌ಮೀಟ್ ತುಂಬಾ ಜನಪ್ರಿಯವಾಗಿದೆ. ಇಲ್ಲಿನ ರಾಜಾಸ್ಥಾನಿ ಥಾಲಿಯಲ್ಲಿ ಹಲವು ಬಗೆಯ ರುಚಿ ರುಚಿಯಾದ ಆಹಾರವನ್ನು ಬಟ್ಟಲುಗಳಲ್ಲಿ ನೀಡಲಾಗುತ್ತದೆ. ಇಲ್ಲಿನ ಆಹಾರಗಳ ಬೆಲೆ ಅಷ್ಟೇನೂ ದುಬಾರಿ ಆಗಿರುವುದಿಲ್ಲ.
ಕುಂಭಲಗಢದ ಪ್ರತಿಯೊಂದು ರೆಸ್ಟೋರೆಂಟ್‌ನಲ್ಲಿ ಇಲ್ಲಿನ ವಿಶೇಷ ಊಟದ ಸೊಬಗನ್ನು ಆನಂದಿಸಬಹುದು. ಎಲ್ಲ ಬಗೆಯ ದಾಲ್‌ಗಳನ್ನು ದೇಶಿ ತುಪ್ಪದೊಂದಿಗೆ ಬಡಿಸುವುದು ಇಲ್ಲಿನ ವಿಶೇಷತೆ. ಹೆಚ್ಚು ಚಳಿಯಿರುವಾಗ ಕಡಲೆಕಾಯಿಯ ಹಸಿ ಎಣ್ಣೆಯ ಜೊತೆಗೆ ದಾಲ್ ಡೋಕ್ಲಿ, ಕೇರ್ ಸಾಂಗರಿ ತಯಾರಿಸಲಾಗುತ್ತದೆ.
ಎಲ್ಲಿ ಏನು ಖರೀದಿಸಬೇಕು?
ಕುಂಭಲಗಢದಲ್ಲಿ ದೊರೆಯುವ ಹೆಚ್ಚಿನ ವಸ್ತುಗಳು ಉದಯಪುರ ಹಾಗೂ ನಾಥ್‌ದ್ವಾರದಿಂದ ತರಿಸಲಾಗುತ್ತದೆ. ಅದರ ಹೊರತಾಗಿ ಸ್ಥಳೀಯರು ಕೂಡ ಕೆಲವು ಹೊಲಿಗೆ, ಹೆಣಿಗೆ ಹಾಕಿದ ವಸ್ತುಗಳನ್ನು ಮಾರಾಟಕ್ಕೆ ತರುತ್ತಾರೆ. ಬಗೆಬಗೆಯ ಡ್ರೆಸ್, ಆಭರಣ, ಆಟಿಕೆಗಳು ಇಲ್ಲಿ ಸಿಗುತ್ತವೆ.
ವಾಸದ ವ್ಯವಸ್ಥೆ ಹೇಗೆ?
ಕುಂಭಲಗಢದಲ್ಲಿ ಚಿಕ್ಕದು ದೊಡ್ಡದು ಸೇರಿ 30-35 ಹೋಟೆಲ್‌ಗಳಿವೆ. ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಹೋಟೆಲ್‌ಗಳ ದರ ಹೆಚ್ಚಿಗೆ ಇರುತ್ತದೆ. ಉಳಿದ ಸೀಸನ್‌ನಲ್ಲಿ ಕಡಿಮೆ ದರದಲ್ಲಿ ರೂಮ್ ಗಳು ಸಿಗುತ್ತವೆ. ಹಲವು ರೆಸಾರ್ಟ್‌ಗಳು ಕೂಡ ಇವೆ.
ಪ್ರವಾಸಕ್ಕೆ ಹೋಗಲು ಸೂಕ್ತ ಸಮಯ
ಕುಂಭಲಗಢಕ್ಕೆ ವರ್ಷವಿಡೀ ಪ್ರವಾಸಿಗರು ಬರುತ್ತಿರುತ್ತಾರೆ. ಆದರೆ ಅಕ್ಟೋಬರ್‌ನಿಂದ ಮಾರ್ಚ್ ಅಲ್ಲಿಗೆ ಹೋಗಲು ಸೂಕ್ತ ಸಮಯವಾಗಿರುತ್ತದೆ. ಮಳೆಗಾಲದಲ್ಲಿ ಬಂದರೆ ಇಲ್ಲಿನ ಹಸಿರು ಸಿರಿಯನ್ನು ಕಣ್ತುಂಬಿಸಿಕೊಳ್ಳಬಹುದು. ಆದರೆ ಆಗ ಜಂಗಲ್ ಸಫಾರಿ ಸೇವೆ ಇರುದಿಲ್ಲ.
– ಸುಮತಿ ಪ್ರಭು