ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ನಾವಿಂದು ದಕ್ಷಿಣ ಬೆಂಗಳೂರಿನ ಪ್ರಮುಖ ಸ್ಥಳವಾದ ಜಯನಗರದ ಆರಂಭ ಮತ್ತು ಅಲ್ಲಿನ ಪ್ರಮುಖ ಸ್ಥಳಗಳ ಬಗ್ಗೆ ತಿಳಿಸುಕೊಳ್ಳೋಣ. ಬೆಂಗಳೂರಿನ ಜಯನಗರ ಪ್ರದೇಶವು ಮಥ್ಯಮ ವರ್ಗ ಮತ್ತು ಶ್ರೀಮಂತರ ವಸತಿ ಮತ್ತು ವಾಣಿಜ್ಯಗಳನ್ನು ಹೊಂದಿರುವ ಪ್ರದೇಶವಾಗಿದ್ದು ಹಲವಾರು ಮೊದಲುಗಳಿಗೆ ಇದು ಪ್ರಖ್ಯಾತವಾಗಿದೆ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

1948ರಲ್ಲಿ ಆರಂಭವಾದ ಜಯನಗರದ ಇಂದು ಬಸವನಗುಡಿ, ಜೆಪಿ ನಗರ, ವಿಲ್ಸನ್ ಗಾರ್ಡನ್, ಬನಶಂಕರಿ 2 ನೇ ಹಂತ, ಗುರಪ್ಪನಪಾಳ್ಯ, ಸಿದ್ದಗುಂಟೆಪಾಳ್ಯ ಮತ್ತು ಬಿಟಿಎಂ ಬಡಾವಣೆಗಳಿಂದ ಸುತ್ತುವರಿದಿದ್ದು, ಇತಿಹಾಸ ಪ್ರಖ್ಯಾತವಾದ ಲಾಲ್‌ಬಾಗ್ ಸಸ್ಯೋದ್ಯಾನಕ್ಕೆ ಅತ್ಯಂತ ಸಮೀಪದಲ್ಲಿದೆ. ಜಯನಗರ ಬಡಾವಣೆಯು 1 ರಿಂದ 9ನೇ ಬ್ಲಾಕ್ ವರೆಗೂ ಇದ್ದು ಜಯನಗರದ 4 ನೇ ‘ಟಿ’ ಬ್ಲಾಕ್ ಕೂಡಾ ಸೇರಿದಂತೆ ಒಟ್ಟು 10 ಬ್ಲಾಕ್‌ಗಳು ಹೆಚ್ಚಾಗಿ ಜನನಿಬಿಡ ವಸತಿಯ ತಾಣವಾಗಿದ್ದರೆ, 3 ನೇ ಮತ್ತು 4 ನೇ ಬ್ಲಾಕ್‌ಗಳು ಅಂದಿನಿಂದ ಇಂದಿನ ವರೆಗೂ ಸಹಾ ವಾಣಿಜ್ಯ ಕೇಂದ್ರಗಳಾಗಿ ಬೆಂಗಳೂರಿಗರನ್ನು ಆಕರ್ಷಿಸುತ್ತಿದೆ. 2010 ರಲ್ಲಿ ಡಿಎನ್ಎ ನಡೆಸಿದ ಬೆಂಗಳೂರಿನ ಸಮೀಕ್ಷೆಯಲ್ಲಿ ಜಯನಗರವು ಬೆಂಗಳೂರಿನ ಅತ್ಯಂತ ವಾಸಯೋಗ್ಯ ಸ್ಥಳವೆಂದು ಪರಿಗಣಿಸಲ್ಪಟ್ಟು ಈಗಲೂ ಸಹಾ ಕನ್ನಡಿಗರ ಸೊಗಡು ಮತ್ತು ಅಸ್ಮಿತೆಯನ್ನು ಉಳಿಸಿಕೊಂಡಿರುವ ಪ್ರದೇಶವಾಗಿದ್ದು, ಜಾಗತೀಕವಾಗಿ ಬದಲಾಗುತ್ತಿರುವ ಕಾಲದಲ್ಲಿಯೂ ತನ್ನ ಹಳೆಯ ಆಕರ್ಷಣೆಯನ್ನು ಇನ್ನೂ ಉಳಿಸಿಕೊಂಡಿರುವುದು ಹೆಚ್ಚು ಗಮನಾರ್ಹವಾಗಿದೆ.
ಪ್ರತಿಯೊಂದು ಪ್ರದೇಶಗಳಿಗೂ ಅದರದ್ದೇ ಆದ ಐತಿಯಾಸಿಕ ಇಲ್ಲವೇ ಪೌರಾಣಿಕ ಹಿನ್ನಲೆ ಇರುವಂತೆ ಇಂತಹ ಜಯನಗರದ ಆರಂಭಕ್ಕೂ ಒಂದು ಸುಂದರವಾದ ರೋಚಕತೆ ಇದೆ. 1902 ರಿಂದ 1940ರ ವರೆಗೂ ಮೈಸೂರು ಸಂಸ್ಥಾನವನ್ನು ವಿಶ್ವವಿಖ್ಯಾತ ಗೊಳಿಸಿದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಗಸ್ಟ್ 3, 1940ರಲ್ಲಿ ನಿಧನರಾದ ನಂತರ ಮೈಸೂರು ಸಂಸ್ಥಾನಕ್ಕೆ ಮಹಾರಾಜರಾದ ಶ್ರಿಮನ್ಮಾಹಾರಾಜರಾದ ಶ್ರೀ ಚಯಚಾಮರಾಜೇಂದ್ರ ಒಡೆಯರ್ ಅವರು 1948ರಲ್ಲಿ ತಮ್ಮ ಪಟ್ಟಕ್ಕೇರಿದ 8ನೇ ವರ್ಷದ ಸವಿನೆನಪಿಗಾಗಿ, ಅಗಾಧವಾಗಿ ಎಗ್ಗಿಲ್ಲದೇ ದಿನೇ ದಿನೇ ಬೆಳೆಯುತ್ತಿದ್ದ ಬೆಂಗಳೂರಿನಲ್ಲಿ ಒಂದು ಸುಂದರವಾದ ಯೋಜಿತವಾದ ಬಡಾವಣೆಯನ್ನು ನಿರ್ಮಾಣ ಮಾಡಲು ಯೋಜಿಸಿ ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ (CITB) ಎಂಬ ಪ್ರಾಧಿಕಾರವನ್ನು ಸ್ಥಾಪಿಸಿ ಅದಕ್ಕೆ ಸಿ.ನರಸಿಂಗ ರಾವ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಆರ್ ಮಾಧವನ್ ಅವರು ಮುಖ್ಯ ಎಂಜಿನಿಯರ್ ಆಗಿದ್ದರೆ, ಇಡೀ ಬಡಾವಣೆಯ ಕೆಲಸಕ್ಕೆ ಅಧಿಕೃತ ಗುತ್ತಿಗೆದಾರರಾಗಿ ಶ್ರೀ P. C. ರಂಗನಾಥಚಾರ್ ಅವರನ್ನು ನೇಮಿಸಲಾಯಿತು.

ಅಂದಿನ ಮಾವಳ್ಳಿ ಮತ್ತು ಸಿದ್ದಾಪುರಕ್ಕೆ ಸೇರಿದ್ದ ಲಾಲ್ಬಾಗ್ ನಂತರ ಇದ್ದ, ಅರೇ ಕೆಂಪನಹಳ್ಳಿ (ಇಂದಿನ ಸೋಮೇಶ್ವರ ನಗರ), ಸಿದ್ಧಾಪುರದ ಕೆಲವು ಭಾಗ. ಕನಕನಪಾಳ್ಯ, ಬೈರಸಂದ್ರ (ಇಂದಿನ ತಿಲಕ್ ನಗರ), ಗುರಪ್ಪನಪಾಳ್ಯ (ಶಿವಬಾಲ ಯೋಗಿ ಆಶ್ರಮ), ತಾಯಪ್ಪನ ಪಾಳ್ಯ (ಇಂದಿನ ಜಯನಗರ ಟಿ ಬ್ಲಾಕ್), ಟಾಟ ಸಿಲ್ಕ್ ಫಾರ್ಮ್, ಶ್ರೀ ಪಟ್ಟಾಭಿರಾಮ ನಗರ, ಸಾಕಮ್ಮಾ ಗಾರ್ಡನ್, ಯಡಿಯೂರು ಕೆರೆ ಸೇರಿದಂತೆ ಹತ್ತು ಹಲವಾರು ಪ್ರದೇಶಗಳನ್ನು ಒಳಗೊಂಡಂತೆ, ಅಂದಿನ ಕಾಲದಲ್ಲೇ ಏಷ್ಯಾದಲ್ಲೇ ಅತ್ಯಂತ ದೊಡ್ಡದಾದ ಯೋಜಿತ ಬಡಾವಣೆಯನ್ನು ನಿರ್ಮಾಣ ಮಾಡುವ ನೀಲ ನಕ್ಷೆಯನ್ನು ತಯಾರಿಸಲಾಯಿತು

ಇಂತಹ ಸುಂದರ ಕಲ್ಪನೆಯ ಯೋಜನೆಯನ್ನು ಸಿದ್ದಾಪುರ ಮತ್ತು ಲಾಲ್ ಬಾಗ್ ಹಿಂದೆ ಇದ್ದ ಕನಕನಪಾಳ್ಯದಿಂದ ಆರಂಭಿಸಲು ನಿರ್ಧರಿಸಿ ಆಯೋಜನೆಗೆ ಅಡಿಗಲ್ಲನ್ನು ಹಾಕಲು 20 ಆಗಸ್ಟ್ 1948 ರಂದು ನಿಗಧಿಪಡಿಸಿ ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತದ ಕೊನೆಯ ಗವರ್ನರ್ ಜನರಲ್ ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಯನ್ನು ಆಹ್ವಾನಿಸಿದ್ದರು. ಕಾರ್ಯಕ್ರಮದ ಅಡಿಕಲ್ಲು ಹಾಕುವ ಸಲುವಾಗಿ ಹಿಂದಿನ ದಿನ ಅರ್ಥಾತ್ ಆಗಸ್ಟ್ 19 ರಂದು ಕಂಡು ಕೇಳರಿಯದ ಮಳೆಯು ಬೀಳುತ್ತಿದ್ದ ಸಮಯದಲ್ಲಿ ಅಲ್ಲಿನ ಸ್ಮಾರಕ ನಿರ್ಮಾಣದ ಹೊಣೆ ಹೊತ್ತಿದ್ದ ಮೇಸ್ತ್ರಿ ಇದ್ದಕ್ಕಿದ್ದಂತೆಯೇ ಕಾಣದೇ ಹೋದಾಗ, ಎಲ್ಲರ ಮನದಲ್ಲೂ ಆತಂಕ ಮೂಡಿತ್ತು. ಆದರೆ ಸುರಿವ ಮಳೆಯನ್ನೂ ಲೆಖ್ಖಿಸದೇ ಆಂತಹ ಮಧ್ಯರಾತ್ರಿಯಲ್ಲಿಯೂ ಅಂದಿನ ಸಿಐಟಿಬಿಯ ಅಧ್ಯಕ್ಷರಾಗಿದ್ದ ಸಿ.ನರಸಿಂಗ ರಾವ್, ಮುಖ್ಯ ಎಂಜಿನಿಯರ್ ಆರ್ ಮಾಧವನ್ ಮತ್ತು ಗುತ್ತಿಗೆದಾರರಾಗಿದ್ದ ಪಿ.ಸಿ.ರಂಗನಾಥಚಾರ್ ಅರುಣಾಚಲಂ ಎಂಬ ಮತ್ತೊಬ್ಬ ನುರಿತ ಮೇಸ್ತ್ರಿಯನ್ನು ತ್ವರಿತವಾಗಿ ನಿಯೋಜಿಸಿ, ಕೂಡಲೇ ಎತ್ತರದ ಟಾರ್ಪಾಲ್ ಹಾಕಿಸಿ, ಪೆಟ್ರೋಮ್ಯಾಕ್ಸ್ ದೀಪಗಳ ಸಹಾಯದೊಂದಿಗೆ ರಾತ್ರಿಯಿಂದ ಬೆಳಗಾಗುದರ ಒಳಗೆ 20 ಅಡಿ ಎತ್ತರದ ಕಲ್ಲಿನ ರಚನೆಯಾದ ಅಶೋಕ ಸ್ತಂಭವನ್ನು ಅಲ್ಲಿ ಸ್ಥಾಪನೆ ಮಾಡಿ, 1948ರ ಆಗಸ್ಟ್ 20ರಂದು ಸಿ. ರಾಜಗೋಪಾಲಾಚಾರಿ ಅವರ ಅಮೃತ ಹಸ್ತದಿಂದ ಆ ಮಹೋನ್ನತ ಯೋಜನೆಗೆ ಅಡಿಕಲ್ಲನ್ನು ಹಾಕಿಸಿ ಆ ಬಡಾವಣೆಗೆ ಜಯನಗರ ಎಂಬ ಹೆಸರಿಡಲಾಯಿತು. ಕನ್ನಡದಲ್ಲಿ ಜಯ+





