ಒಬ್ಬ ಭಿಕ್ಷುಕ ಭಿಕ್ಷೆ ಬೇಡಲೆಂದು ಮನೆಯಿಂದ ಹೊರಟ. ತನ್ನ ನಂಬಿಕೆಯ ಪ್ರಕಾರ ಖಾಲಿ ಕೈಯಲ್ಲಿ ಹೊರಡಬಾರದೆಂದು ಜೋಳಿಗೆಯಲ್ಲಿ ಒಂದೆರಡು ಬೊಗಸೆ ಜೋಳ ಹಾಕಿಕೊಂಡು ಹೊರಟ. ಎದುರುಗಡೆಯಿಂದ ರಾಜನ ಸವಾರಿ ಬರುತ್ತಿತ್ತು. ತನಗೆ ಒಳ್ಳೆಯ ಭಿಕ್ಷೆ ಸಿಗಬಹುದೆಂಬ ಆಶಾಭಾವನೆ ಭಿಕ್ಷುಕನಲ್ಲಿ ಮೂಡಿತು. ಆದರೆ ನಡೆದದ್ದೇನು? ಭಿಕ್ಷುಕನ ಎದುರಿನಲ್ಲಿಯೇ ರಾಜ ತನ್ನ ಜೋಳಿಗೆಯನ್ನು ಹಿಡಿದ. ಭಿಕ್ಷುಕನಿಗೆ ಏನು ಮಾಡಬೇಕೆಂದು ಒಂದು ಕ್ಷಣ ತೋಚಲೇ ಇಲ್ಲ. ಅವನು ಎಂದೂ ಯಾರಿಗೂ ಭಿಕ್ಷೆ ಹಾಕಿದವನಲ್ಲ. ಬೇರೆಯವರಿಂದ ತೆಗೆದುಕೊಂಡೇ ರೂಢಿ. ಇಂದು ರಾಜನೇ ಅವನೆದುರು ಜೋಳಿಗೆ ಹಿಡಿದು ನಿಂತಿದ್ದ. ಕೊನೆಗೆ ಮನಸ್ಸಿಲ್ಲದ ಮನಸ್ಸಿನಿಂದ ಅವನು ತನ್ನ ಜೋಳಿಗೆಗೆ ಕೈ ಹಾಕಿ ಎರಡೇ ಎರಡು ಕಾಳು ಧಾನ್ಯವನ್ನು ರಾಜನ ಜೋಳಿಗೆಗೆ ಹಾಕಿದ. ಅವನಿಗೆ ಆ ಎರಡು ಕಾಳು ಹಾಕಿದ್ದಕ್ಕೆ ಇಡೀ ದಿನ ಖೇದ ಆಗುತ್ತಲೇ ಇತ್ತು.

ಅಂದಹಾಗೆ, ಇಡೀ ದಿನ ಅವನು ಅಲ್ಲಿ ಇಲ್ಲಿ ಸುತ್ತಾಡಿ ಭಿಕ್ಷೆ ಬೇಡಿಕೊಂಡು ಸುಸ್ತಾಗಿ ಮನೆಗೆ ಬಂದ. ಮನೆಯಲ್ಲಿ ಜೋಳಿಗೆ ಬಗ್ಗಿಸಿ ಪಾತ್ರೆಗೆ ಹಾಕುವಾಗ ಅವನ ಕಣ್ಣನ್ನು ಅವನಿಗೆ ನಂಬಲು ಆಗಲಿಲ್ಲ. ಧಾನ್ಯಗಳ ಮಧ್ಯೆ 2 ಬಂಗಾರದ ಜೋಳದ ಕಾಳುಗಳು ಅವನ ಕಣ್ಣು ಕುಕ್ಕುತ್ತಿದ್ದವು. ಅವನು ರಾಜನಿಗೆ ಹಾಕಿದ್ದು ಒಂದೆರಡು ಕಾಳು ಜೋಳ. ಕಥೆಯ ನೀತಿ : ದಾನದ ಮಹಿಮೆ.

ದಾನಶೂರ ಕರ್ಣನ ಪ್ರಕರಣ ನಿಮಗೆ ಗೊತ್ತೇ ಇದೆ. ದಾನವೇ ಕರ್ಣನ ಪ್ರಾಣವನ್ನು ಕಿತ್ತುಕೊಂಡಿತು. ಮಹಾಭಾರತದ ಯುದ್ಧದಲ್ಲಿ ಅರ್ಜುನನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದೇವರಾಜ ಇಂದ್ರ ಕರ್ಣನಿಂದ ಆ ಕವಚವನ್ನು ಕೇಳಿ ಪಡೆದುಕೊಂಡ. ಇದಕ್ಕೆ ಪ್ರತಿಯಾಗಿ ಇಂದ್ರ ಕರ್ಣನಿಗೆ 5 ಬಾಣಗಳನ್ನು ಕೊಟ್ಟ. ಬಳಿಕ ಕೃಷ್ಣ ಯೋಜನೆ ರೂಪಿಸಿ ಅಲ್ಲಿಗೆ ಕುಂತಿಯನ್ನು ಕಳುಹಿಸಿಕೊಟ್ಟ. ಕುಂತಿ ಕರ್ಣನಿಂದ ಆ ಬಾಣಗಳನ್ನು ಕೇಳಿ ಪಡೆದುಕೊಂಡಳು. ಇದೇ ದಾನದ ಕಾರಣದಿಂದ ಕರ್ಣ ಸಾವನ್ನಪ್ಪುತ್ತಾನೆ. ಹಾಗೆ ನೋಡಿದರೆ ಕರ್ಣ ಅರ್ಜುನನಿಗಿಂತಲೂ ಬಹುದೊಡ್ಡ ವೀರ.

ದಾನ ದಕ್ಷಿಣೆಯ ಬಗ್ಗೆ ಪ್ರಸ್ತಾಪಿಸಿದಾಗ ಏಕಲವ್ಯನ ಬಗ್ಗೆ ಉಲ್ಲೇಖ ಮಾಡದೇ ಇರಲು ಆಗುವುದಿಲ್ಲ. ನಿಷಾರದ ಪುತ್ರನಾಗಿರುವ ಕಾರಣ ದ್ರೋಣಾಚಾರ್ಯರು ಅವನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಲು ನಿರಾಕರಿಸಿದರು. ಆಗ ಏಕಲವ್ಯ ದೂರದಿಂದಲೇ ಬಾಣ ಬಿಡುವುದನ್ನು ನೋಡಿದ. ಅವರನ್ನೇ ತನ್ನ ಗುರುಗಳೆಂದು ಭಾವಿಸಿ ಅಭ್ಯಾಸ ಮುಂದುವರಿಸಿ ಬಿಲ್ವಿದ್ಯೆಯಲ್ಲಿ ಪ್ರಾವೀಣ್ಯತೆ ಪಡೆದ. ಅದೊಂದು ದಿನ ದ್ರೋಣಾಚಾರ್ಯರ ಎದುರು ಏಕಲವ್ಯನ ಧನುರ್ವಿದ್ಯೆಯ ಕಲೆ ಬೆಳಕಿಗೆ ಬರುತ್ತದೆ. ಧನುರ್ವಿದ್ಯೆಯ ಬಗೆಗಿನ ಅವನ ಸಮರ್ಪಣೆ ಕಂಡು ದ್ರೋಣಾಚಾರ್ಯರಿಗೆ ನಡುಕ ಉಂಟಾಗುತ್ತದೆ. ಅವರು ಅವನಿಂದ ಗುರುದಕ್ಷಿಣೆಯಾಗಿ ಅವನ ಹೆಬ್ಬೆರಳನ್ನೇ ಕೇಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಅರ್ಜುನನ ಹೊರತಾಗಿ ಧನುರ್ವಿದ್ಯೆಯಲ್ಲಿ ಬೇರಾರೂ ಮಿಂಚಬಾರದೆಂಬುದು ಅವರ ಇಚ್ಛೆಯಾಗಿರುತ್ತದೆ. ಏಕಲವ್ಯ ತೋರು ಬೆರಳು ಮತ್ತು ಮಧ್ಯ ಬೆರಳಿನ ಸಹಾಯದಿಂದ ಬಿಲ್ಲು ವಿದ್ಯೆಯ ಅಭ್ಯಾಸ ಮುಂದುವರಿಸುತ್ತಾನೆ ಎನ್ನುವುದು  ಬೇರೆ ಮಾತು. ಏಕಲವ್ಯನಿಗೆ ಒಂದಿಷ್ಟೂ ವಿದ್ಯೆ ಕಲಿಸದ ದ್ರೋಣಾಚಾರ್ಯರು ಅವನ ಹೆಬ್ಬೆರಳನ್ನು ಹೇಗೆ ಕೇಳಿ ಪಡೆದರು ಎಂಬುದೇ ಆಶ್ಚರ್ಯದ ಸಂಗತಿ.

ದಾನ ಪರಂಪರೆಯ ಆರಂಭ

ಸನಾತನ ಹಿಂದೂ ಧರ್ಮದಲ್ಲಿ ಹಲವು ಮೂಢನಂಬಿಕೆ, ಕಂದಾಚಾರಗಳು ಇದ್ದೇ ಇವೆ. ಅದರಲ್ಲಿ ದಾನದ್ದು ಅತಿ ದೊಡ್ಡ ಮೂಢನಂಬಿಕೆ. ಹಿಂದೂ ಧರ್ಮದಲ್ಲಿ ದಾನವನ್ನು ಮಹಾಪುಣ್ಯ ಎಂದು ಬಣ್ಣಿಸಲಾಗಿದೆ. ವೇದಗಳಲ್ಲೂ ಕೂಡ ದಾನದ ಮಹಿಮೆಯನ್ನು ಬಗೆಬಗೆಯ ರೀತಿಯಲ್ಲಿ ವರ್ಣಿಸಲಾಗಿದೆ. ಋಗ್ವೇದದ 10ನೇ ಅಧ್ಯಾಯದ 117 ವಿಭಿನ್ನ ಸೂಕ್ತಿಗಳಲ್ಲಿ ದಾನದ ಮಹಿಮೆಯ ಉಲ್ಲೇಖ ದೊರೆಯುತ್ತದೆ. ಅಥರ್ವಣ ವೇದದ 3ನೇ ಅಧ್ಯಾಯದಲ್ಲಿ ಸಹಸ್ರ ಕೈಗಳಿಂದ ದಾನ ಮಾಡುವ ಬಗ್ಗೆ ಹೇಳಲಾಗಿದೆ.

ಐತರೇಯ ಬ್ರಾಹ್ಮಣ, ಶತಪಥ ಬ್ರಾಹ್ಮಣ, ಮನು ಸಂಹಿತೆಯಲ್ಲಿ ಬ್ರಾಹ್ಮಣರ ಮಹತ್ವ ಮತ್ತು ದಾನದಿಂದ ದೊರೆಯುವ ಪುಣ್ಯದ ಬಗ್ಗೆ ಸಾಕಷ್ಟು ಉಲ್ಲೇಖಿಸಲಾಗಿದೆ. ಆದರೆ ಇದೆಲ್ಲ ಹಣ ಗಳಿಸುವ ಮತ್ತು ಹಂಚಿಕೊಳ್ಳುವ ಬ್ರಾಹ್ಮಣರ ತಂತ್ರವಾಗಿದೆ. ಅಂದಹಾಗೆ ಇವರಿಗೆ ಧರ್ಮದಿಂದ ಅಷ್ಟೇನೂ ಕೊಡು ತೆಗೆದುಕೊಳ್ಳುವುದೇನೂ ಇಲ್ಲ. ದಾನದ ಪರಂಪರೆ ಏಕೆ ಶುರುವಾಯಿತು ಎಂದರೆ ವರ್ಣ ವ್ಯವಸ್ಥೆಯಲ್ಲಿ ಎಲ್ಲಕ್ಕೂ ಮೇಲೆ ಇರುವುದರ ಹೊರತಾಗಿಯೂ ಆರ್ಥಿಕವಾಗಿ ಬ್ರಾಹ್ಮಣರ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಅವರ ದಿನಗಳು ಕೆಟ್ಟದ್ದಾಗಿ ಸಾಗುತ್ತಿದ್ದವು. ಆಗ ಬ್ರಾಹ್ಮಣರು ತಮ್ಮ ದೈನಂದಿನ ಹೊಟ್ಟೆಪಾಡಿಗಾಗಿ ದಾನದ ಪರಂಪರೆಯನ್ನು ಆರಂಭಿಸಿದರು. ಅದಕ್ಕಾಗಿ ಬಗೆಬಗೆಯ ಧಾರ್ಮಿಕ ಕಂದಾಚಾರ ಹುಟ್ಟುಹಾಕಲಾಯಿತು.

ಕೃಷ್ಣನ ದ್ವಾಪರಯುಗ ಬಹುತೇಕವಾಗಿ ಬ್ರಾಹ್ಮಣ ವಾದಿ ವ್ಯವಸ್ಥೆಯ ವಿರುದ್ಧವಾಗಿತ್ತು. ಅನುಭವ, ಜ್ಞಾನ ಮತ್ತು ಕೌಶಲದ ಕಾರಣದಿಂದ ಕೃಷ್ಣನ ವ್ಯವಸ್ಥೆಯಲ್ಲಿ ವೃದ್ಧರಿಗೆ ಸಾಕಷ್ಟು ಮಹತ್ವವಿತ್ತು. ಒಂದು ಉಲ್ಲೇಖದ ಪ್ರಕಾರ, ಕೃಷ್ಣನು ದ್ವಾರಕೆಯನ್ನು ವಿಶ್ವಕರ್ಮನ ಮುಖಾಂತರ ನಿರ್ಮಾಣ ಮಾಡಿಸಿದ್ದ. ವಿಶ್ವಕರ್ಮನನ್ನು ಯಾವಾಗಲೂ ವೃದ್ಧನ ರೂಪದಲ್ಲಿ ಬಿಂಬಿಸಲಾಗುತ್ತದೆ.

ಕಲಿಯುಗದ ಭಯ

ಇತಿಹಾಸಕಾರ ಆರ್‌ಎನ್‌ ನಂದಿ ಹೀಗೆ ಹೇಳುತ್ತಾರೆ, ನಾಲ್ಕನೇ ಶತಮಾನದ ಆರಂಭದಿಂದ 5ನೇ ಶತಮಾನದ ಅಂತ್ಯದ ತನಕ ಬ್ರಾಹ್ಮಣರು  ಪುರೋಹಿತಶಾಹಿ, ದಾನ ದಕ್ಷಿಣೆಯ ಹೊರತಾಗಿ ಜೀವನೋಪಾಯಕ್ಕಾಗಿ ಹತ್ತು ಹಲವು ಬಗೆಯ ದಾರಿಗಳನ್ನು  ಶೋಧಿಸಲು ಆರಂಭಿಸಿದರು. ಈ ಅವಧಿಯಲ್ಲಿ ಬ್ರಾಹ್ಮಣರು ಹೊಸ ರೀತಿಯಲ್ಲಿ ಯಜಮಾನರಾಗಲು ಶುರು ಮಾಡಿದರು. ಸ್ವಯಂ ಉದ್ಯೋಗದ ಹಲವು ವಿಧಾನಗಳು ಆರಂಭವಾದವು. ಹಾಗೆ ನೋಡಿದರೆ ಅವು ಪರಂಪರೆಗನುಗುಣವಾಗಿ ಇರಲಿಲ್ಲ. ಜೀವನ ನಿರ್ವಹಣೆಗಾಗಿ ಹೊಸ ರೀತಿಯ ಫಲ ಜ್ಯೋತಿಷ್ಯ, ಭವಿಷ್ಯ ಹೇಳುವಂತಹ ವಿಧಾನಗಳು ಕಂಡುಹಿಡಿಯಲ್ಪಟ್ಟವು. ಶೂದ್ರರ ಮೇಲೆ ಪ್ರತ್ಯೇಕವಾಗಿ ಧಾರ್ಮಿಕ ಕರ್ಮಕಾಂಡಗಳು ಹೇರಲ್ಪಟ್ಟವು. ಇದೇ ಅವಧಿಯಲ್ಲಿ ವೇದಾಧ್ಯಯನ, ಮೂರ್ತಿಪೂಜೆಗಳು ಶುರುವಾದವು. ಇದರ ಭಾಗವೆಂಬಂತೆ ಮೂರರಿಂದ 5ನೇ ಶತಮಾನದ ಅವಧಿಯಲ್ಲಿ ಪುರಾಣ ಸಾಹಿತ್ಯ ರಚಿಸಲ್ಪಟ್ಟಿತು. ಅದರಲ್ಲಿ ವಿಷ್ಣುಪುರಾಣ, ವಾಯುಪುರಾಣ ಹಾಗೂ ಮತ್ಸ್ಯ ಪುರಾಣಗಳು ವಿಶೇಷವಾಗಿ ಉಲ್ಲೇಖಿಸಲ್ಪಟ್ಟಿವೆ. ಈ ಪುರಾಣಗಳಲ್ಲಿ ದಾನದ ಮಹತ್ವ ಹಾಗೂ ದಾನಕ್ಕೆ ಸಂಬಂಧಪಟ್ಟ ಕರ್ಮಕಾಂಡಗಳನ್ನು ಭಾರಿ ಎನ್ನುವಂತೆ ವರ್ಣಿಸಲಾಗಿದೆ. ಈ ಎಲ್ಲದರ ಹಿಂದೆ ಬ್ರಾಹ್ಮಣರ ಉದ್ದೇಶ ಧರ್ಮ ಹಾಗೂ ಕರ್ಮಕಾಂಡದಿಂದ ವಿರಕ್ತರಾಗಿರುವ ಯಜಮಾನರಿಗೆ ಪಾಪದ ಭಯ ಹುಟ್ಟಿಸಿ, ಅವರಿಂದ ಹಿಂದೆ ಸರಿಸುವ ಉಪಾಯ ಹೇಳಿ ತಮ್ಮ ಜೀವನ ನಿರ್ವಹಣೆಯ ಸಾಧನೆ ಹೊಂದಿಸಿ ಕೊಳ್ಳಬೇಕಾಗಿತ್ತು. ತಮ್ಮ ಇದೇ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಕಲಿಯುಗದ ಭಯ ಹುಟ್ಟಿಸಲಾಯಿತು. ಜೊತೆಗೆ ಈ ಅವಧಿಯಲ್ಲಿ ಪುಣ್ಯದ ಪ್ರಮಾಣ ಕಡಿಮೆಯಾಗಿ ಪಾಪದ ಪ್ರಮಾಣ ಹೆಚ್ಚಾಗುತ್ತದೆ, ಅಶುಭ ಪ್ರಭಾವದಿಂದ ಪಾರಾಗಲು ದಾನ ಮಾಡಲು ಹೇಳಲಾಯಿತು.

ಅದೇ ರೀತಿ ಅಕ್ಷಯ ತೃತೀಯ ದಿನವನ್ನು ದಾನದ ದಿನವೆಂದೇ ಪರಿಗಣಿಸಲಾಗುತ್ತದೆ. ಬ್ರಾಹ್ಮಣರು ಜನರ ಮನಸ್ಸಿನಲ್ಲಿ ತುಂಬಿದ ಒಂದು ಮೂಢನಂಬಿಕೆಯೆಂದರೆ ಅಕ್ಷಯ ತೃತೀಯದಂದು ಮಾಡಿದ ದಾನ ಎಂದೂ ಕ್ಷಯಿಸದು, ಅಂದರೆ ಕಡಿಮೆಯಾಗದು ಎಂದು ಹೇಳಿದ್ದಾರೆ. ಇದೇ ಪರಂಪರೆಗನುಗುಣಾಗಿ ಕನ್ಯಾದಾನದ ಪರಂಪರೆಯೂ ಅನುಷ್ಠಾನಕ್ಕೆ ಬಂತು. ಬಾಲ್ಯವಿವಾಹ ಕೂಡ ಜಾರಿಗೆ ಬಂದಿದ್ದು ಹೀಗೆಯೇ. ಅಕ್ಷಯ ತೃತೀಯಾದಂದು ರಾಜಸ್ಥಾನ ಸಹಿತ ಉತ್ತರ ಭಾರತದ ಅನೇಕ ಕಡೆ ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತವೆ.

ದಾನ ದಕ್ಷಿಣೆಯ ಮಹಿಮೆ

ದಾನದ ಮಹಿಮೆಯ ಬಗ್ಗೆ ಒಮ್ಮೆ ಗಮನಹರಿಸಿ. ಅದರ ದೊಡ್ಡ ಪಟ್ಟಿಯೇ ಇದೆ. ಆ ಪಟ್ಟಿಯಲ್ಲಿ ಶ್ರೇಷ್ಠ ದಾನದ ಹತ್ತು ಹಲವು ಹಂತ ಗಳನ್ನು ತಿಳಿಸಲಾಗಿದೆ. ಗೋದಾನವನ್ನು ಶ್ರೇಷ್ಠ ದಾನವೆಂದು ಹೇಳಲಾಗಿದೆ. ಆ ಬಳಿಕ ಅನ್ನದಾನ, ವಸ್ತ್ರದಾನ, ಸ್ವರ್ಣದಾನ ಹಾಗೂ ಭೂದಾನ ಕೂಡ ಇವೆ. ಧರ್ಮಶಾಸ್ತ್ರಗಳಲ್ಲಿ ಅಷ್ಟದಾನದ ವಿಷಯ ಪ್ರಸ್ತಾಪಿಸಲಾಗಿದೆ. ಅದರಲ್ಲಿ ತಿಲಕ, ಲೋಹ, ಚಿನ್ನ, ಹತ್ತಿ, ಉಪ್ಪು, ಸಪ್ತಧಾನ್ಯ, ಭೂ ಮತ್ತು ಗೋದಾನವನ್ನು ಸೇರ್ಪಡೆಗೊಳಿಸಲಾಗಿದೆ. ಅಷ್ಟದಾನದ ಮಹಿಮೆಯನ್ನು ಈ ರೀತಿ ವಿವರಿಸಲಾಗಿದೆ. ತಿಲ ದಾನ ಎಂದರೆ ಎಳ್ಳಿನ ದಾನದಿಂದ ದೈತ್ಯರು ಮತ್ತು ದಾನವರು ತೃಪ್ತರಾಗುತ್ತಾರೆ. ಲೋಹದ ದಾನದಿಂದ ಯಮ ಖುಷಿಗೊಳ್ಳುತ್ತಾನೆ. ಚಿನ್ನದ ದಾನದಿಂದ ಧರ್ಮರಾಜನ ಸಭೆಯ ಬ್ರಹ್ಮ ಮುಂತಾದ ದೇವತೆಗಳು ಮತ್ತು ಋಷಿಮುನಿಗಳು ಪ್ರಸನ್ನರಾಗುತ್ತಾರೆ. ಚಿನ್ನದ ದಾನದಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಉಲ್ಲೇಖಿಸಲಾಗಿದೆ. ಹತ್ತಿಯ ದಾನದಿಂದ ಯಮನ ದೂತ ಶಾಂತಗೊಳ್ಳುತ್ತಾನೆ. ಅಕ್ಕಿ, ಗೋಧಿ, ಜೋಳ, ಉದ್ದು, ಕಡಲೆ ಮುಂತಾದ ದಾನಗಳಿಂದ ಯಮಲೋಕದ ಖುಷಿ ದೊರೆಯುತ್ತದೆ. ಭೂದಾನದಿಂದ ಸ್ವರ್ಗದ ದ್ವಾರ ತೆರೆದುಕೊಳ್ಳುತ್ತದೆ. ಗೋದಾನದಿಂದ ಸ್ವರ್ಗದ ನದಿ ವೈತರಣಿಯನ್ನು ದಾಟಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲ, ಒಂದು ವೇಳೆ ಬ್ರಾಹ್ಮಣನೊಬ್ಬ ಅಕಾಲಿಕವಾಗಿ ನಿಧನ ಹೊಂದಿದರೆ, ಆತನ ಮಗಳ ಕನ್ಯಾದಾನ ಮಾಡುವ ಹೊಣೆಯನ್ನು ನಿಭಾಯಿಸಬೇಕು. ಯಾರಾದರೂ ಹಾವು ಕಡಿತದಿಂದ ತೀರಿಕೊಂಡಿದ್ದರೆ ಬ್ರಾಹ್ಮಣನಿಗೆ ಬಂಗಾರದ ಸರ್ಪವನ್ನು ಮಾಡಿ ದಾನವಾಗಿ ಕೊಡಬೇಕು. ಆನೆಯಿಂದ ಸತ್ತಿದ್ದಲ್ಲಿ ಸ್ವರ್ಣ ಆನೆಯನ್ನು, ರಾಜನ ಮುಖಾಂತರ ಸತ್ತು ಹೋದಲ್ಲಿ ಸ್ವರ್ಣ ಪುರುಷನನ್ನು, ಶತ್ರುವಿನಿಂದ ಹತನಾಗಿದ್ದಲ್ಲಿ ಸ್ವರ್ಣ ಎತ್ತು, ಹಾಸಿಗೆಯ ಮೇಲೆ ಮೃತ್ಯುವಿಗೀಡಾದಲ್ಲಿ ಸ್ವರ್ಣ ವಿಷ್ಣು, ಹಂದಿಯಿಂದ ಮೃತನಾಗಿದ್ದಲ್ಲಿ ಎಮ್ಮೆ ದಾನ, ಮರ ಬಿದ್ದು ಸಾವಿಗೀಡಾದ್ದಲ್ಲಿ ವಸ್ತ್ರದಾನ, ಅನ್ನದಾನದ ಜೊತೆಗೆ ಸ್ವರ್ಣ ವೃಕ್ಷವನ್ನು ದಾನವಾಗಿ ನೀಡಬೇಕೆಂಬ ಪದ್ಧತಿ ತರಲಾಯಿತು.

ಪರ್ವತದ ತುದಿಯಿಂದ ಬಿದ್ದು ಸತ್ತು ಹೋಗಿದ್ದರೆ ಧಾನ್ಯದ ಗುಡ್ಡ ಸೃಷ್ಟಿಸಿ ಅದನ್ನು ದಾನವಾಗಿ ನೀಡಬೇಕೆಂದು ಹೇಳಲಾಗಿದೆ. ಬೆಂಕಿಯಿಂದ ಸುಟ್ಟು ಸಾವಿಗೀಡಾದಲ್ಲಿ ಸಾಧ್ಯವಿದ್ದಷ್ಟು ಬಾವಿ ಕೊರೆದು ಬ್ರಾಹ್ಮಣನಿಗೆ ಭೋಜನ ಮಾಡಿಸುವ ಬಗ್ಗೆ ಉಲ್ಲೇಖವಿದೆ.

ಯಾವ ವ್ಯಕ್ತಿ ಪರಲೋಕದಲ್ಲೂ ಸುಖ ಸಂತೃಪ್ತಿಯ ಅಭಿಲಾಷೆ ಇಟ್ಟುಕೊಳ್ಳುತ್ತಾನೊ, ಅವನು ತನಗೆ ಅತ್ಯಂತ ಇಷ್ಟವಾದ ವಸ್ತುವನ್ನು ಗುಣವಂತ ಬ್ರಾಹ್ಮಣನಿಗೆ ದಾನವಾಗಿ ನೀಡಬೇಕು. ಸಾಮಾನ್ಯ ಪ್ರಕಾರದ ದಾನವಾಗಿದ್ದರೆ, ಅದನ್ನು ಯಾರಿಗೇ ಆದರೂ ದಾನ ಮಾಡಿ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬಹುದಾಗಿದೆ. ಉದಾಹರಣೆಗೆ ವಿದ್ಯಾದಾನ, ಕನ್ಯಾದಾನ, ಜಲದಾನದಿಂದ ತೃಪ್ತಿ, ಅನ್ನದಾನದಿಂದ ಎಂದೂ ಮುಗಿಯದ ಸುಖದ ಪ್ರಾಪ್ತಿ ಆಗುತ್ತದೆ. ತಿಲ ದಾನದಿಂದ ಸಂತಾನ ಪ್ರಾಪ್ತಿ, ದೀಪ ದಾನದಿಂದ ಕಣ್ಣುಗಳು ನಿರೋಗಿಯಾಗಿರುತ್ತವೆ ಎಂದು ಹೇಳಲಾಗಿದೆ. ದಾನ ನೀಡಬೇಕೆಂಬ ಉಪದೇಶ ನೀಡುವುದರ ಹಿಂದೆ ಅನೇಕ ಉದ್ದೇಶಗಳಿವೆ. ಒಟ್ಟಾರೆ ಆಶಯ, ಬರೀ ಜೀವಿತವಾಗಿರುವಾಗಷ್ಟೇ ಅಲ್ಲ, ಸತ್ತ ಬಳಿಕ ಕೂಡ ಬ್ರಾಹ್ಮಣರ ಸುಖ ಸೌಲಭ್ಯಗಳ ಬಗ್ಗೆ ಗಮನ ಕೊಡಬೇಕೆಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ತಂದೆಯ ಸಾವಿನ ಬಳಿಕ ಮಗನಿಗೆ ದಶಕ್ರಿಯೆಯ ನಿಯಮ ರೂಪಿಸಿ ತಂದೆಯ ಋಣದಿಂದ ಮುಕ್ತನಾಗುವ ಮಾತು ಹೇಳಲಾಗಿದೆ. ಪಿಂಡದಾನದ ಜೊತೆಗೆ 7 ಅಥವಾ 9 ಜನ ಬ್ರಾಹ್ಮಣರಿಗೆ ದಾನದಕ್ಷಿಣೆ ನೀಡುವುದರ ಜೊತೆ ಜೊತೆಗೆ ಅವರಿಗೆ ಜೀವನಾವಶ್ಯಕ ವಸ್ತುಗಳನ್ನು ನೀಡುವ ಬಗ್ಗೆ ಪ್ರಸ್ತಾಪವಿದೆ.

ಅಂದಹಾಗೆ, ಧರ್ಮಗ್ರಂಥಗಳಲ್ಲಿ ಬೇರೆ ಬೇರೆ ರೀತಿಯ ದಾನಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಭೂದಾನದಿಂದ ಎಲ್ಲ ಬಗೆಯ ಇಷ್ಟಾರ್ಥಗಳು ಈಡೇರುತ್ತವೆ. ಸ್ವರ್ಣ ದಾನದಿಂದ ದೀರ್ಘಾಯುಷ್ಯ, ಬೆಳ್ಳಿದಾನದಿಂದ ಉತ್ತಮ ರೂಪದ ಪ್ರಾಪ್ತಿ, ಅಶ್ವದಾನದಿಂದ ಅಶ್ವಿನಿ ಕುಮಾರನ ಲೋಕ, ಗೋದಾನದಿಂದ ಸೂರ್ಯ ಲೋಕ ಪ್ರಾಪ್ತಿ, ಗೃಹದಾನದಿಂದ ಉತ್ತಮ ಮನೆ ಇಂತಹ ಆಮಿಷ ತೋರಿಸಲಾಗಿದೆ.

– ಎಸ್‌. ಸಾಧನಾ   

Tags:
COMMENT