ಚಿನ್ನಾಭರಣಗಳ ಯಶಸ್ವಿ ಉದ್ಯಮಿಯಾಗಿ ಹೊರ ಹೊಮ್ಮಿದ ಕಾಂತಿ ಲಕ್ಷ್ಮಿ, ಮುಂದೆ ಮದುವೆಯಾದ ನಂತರ, ವಿವಿಧ ರಂಗಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಇಂದಿನ ಯುವ ಜನತೆಗೆ ಮಾರ್ಗದರ್ಶಿಯಾಗಿದ್ದಾರೆ. ಅವರ ಸಾಧನೆಗಳ ಬಗ್ಗೆ ತಿಳಿಯೋಣವೇ.....?
ಕಾಂತಿ ಲಕ್ಷ್ಮೀ ಹುಟ್ಟಿದ್ದು, ಬಾಲ್ಯ ಕಳೆದದ್ದು, ಬೆಳೆದದ್ದು, ಓದಿದ್ದು ಮುತ್ತಿನ ನಗರಿ ಹೈದರಾಬಾದ್ ನಲ್ಲಿ. ತಂದೆ ಚಿನ್ನಾಭರಣಗಳ ವ್ಯಾಪಾರಿ. ಕಾಂತಿ ಲಕ್ಷ್ಮೀ ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದರೂ ಕುಟುಂಬದಲ್ಲಿ ನಡೆದು ಬಂದಿದ್ದ ವ್ಯಾಪಾರದಲ್ಲಿ ತಂದೆಗೆ ಕೈ ಜೋಡಿಸಿದರು. ವ್ಯವಹಾರದ ಮೊದಲ ಪಟ್ಟುಗಳನ್ನು ಕಲಿತು ಕರತಲಾಮಲಕ ಮಾಡಿಕೊಂಡರು.
ಕುಟುಂಬದಲ್ಲಿ ತಲತಲಾಂತರದಿಂದ ನಡೆದು ಬಂದ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಾಂತಿ ಲಕ್ಷ್ಮೀ ಚಿಕ್ಕ ವಯಸ್ಸಿನಲ್ಲೇ ಕುಟುಂಬದ ಮೊದಲ ಮಹಿಳಾ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇವರ ನಾಯಕತ್ವದಲ್ಲಿ ಆಭರಣೋದ್ಯಮ ಬಹಳ ವೃದ್ಧಿ ಹೊಂದಿತು. ಆದರೆ ವಯಸ್ಸಿನ ಮಧುರ ಘಟ್ಟದಲ್ಲಿ ಅರವಿಂದ ಮೇಡರನ್ನು ಕೈ ಹಿಡಿದು, ಅವರ ಬಾಳ ಸಂಗಾತಿಯಾಗಿ ತಂದೆ ಮನೆಯಾದ ಹೈದರಾಬಾದ್ ತೊರೆದು, ಪತಿಯ ಮನೆ ಬೆಂಗಳೂರಿಗೆ ಬಂದರು. ಗೃಹಿಣಿಯಾಗಿ ಕಾಂತಿ ಲಕ್ಷ್ಮೀ ಮೇಡ ಆದರು.
ಪಾದರಸದಂಥ ವ್ಯಕ್ತಿತ್ವ
ಸದಾ ಪಾದರಸದಂತಹ ವ್ಯಕ್ತಿತ್ವದವರಾಗಿದ್ದ ಕಾಂತಿಗೆ, ಪತಿಯ ಮನೆಗೆ ಹೊಂದಿಕೊಳ್ಳಲು ಬಹಳ ದಿನಗಳು ಬೇಕಾಗಲಿಲ್ಲ. ಸದಾ ಚಟುವಟಿಕೆಯ ಆಗರವಾಗಿದ್ದ ಅವರಿಗೆ ಮನೆಯಲ್ಲಿ ಕುಳಿತಿರಲು ಆಗಲಿಲ್ಲ.
2000ದಲ್ಲಿ ಮೊದಲ ಮಗು ಹುಟ್ಟಿದ ನಂತರ ಸಾಮಾಜಿಕ ಬದುಕಿಗೆ ದುಮುಕಿದರು. ಅಡ್ವಾನ್ಸ್ಡ್ ಡಿಪ್ಲೊಮಾ ಇನ್ ಇಂಗ್ಲಿಷ್, ಡಿಪ್ಲೊಮಾ ಇನ್ ಟೀಚಿಂಗ್ ಫಾರ್ ಟೀಚಿಂಗ್ ಚಿಲ್ಡ್ರನ್ ವಿತ್ ಲರ್ನಿಂಗ್ ಡಿಸ್ ಎಬಿಲಿಟಿ ಪದವಿಗಳನ್ನು ಮುಗಿಸಿ, ಸಮಾಜ ಸೇವೆ ಮಾಡಬೇಕೆಂಬ ತುಡಿತಕ್ಕೆ ಒಳಗಾಗಿ ಆಶಾ ಇನ್ ಫಿನಿಟಿ ಫೌಂಡೇಶನ್ ಸ್ಥಾಪಕ ಸದಸ್ಯರಾಗಿ ತಮ್ಮನ್ನು ತೊಡಗಿಸಿಕೊಂಡರು.
ಆಶಾ ಇನ್ ಫಿನಿಟಿ ಫೌಂಡೇಶನ್
ಆಶಾ ಸಂಸ್ಥೆಯ ಕ್ರಿಯಾಶೀಲ ಸದಸ್ಯರಾಗಿ ಇಂಗ್ಲಿಷ್ ಪದವೀಧರ ವಿದ್ಯಾರ್ಥಿಗಳಿಗೆ ಕೆಲಸ ಗಳಿಸುವ ಕೌಶಲ್ಯ ಕಲಿಸುವಿಕೆ ಮತ್ತು ಕನ್ನಡವನ್ನು ಕನ್ನಡನಾಡಿನಲ್ಲಿ ನೆಲೆಸಿರು ಕನ್ನಡೇತರರಿಗೆ ಕಲಿಸುವಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆಶಾ ಸಂಸ್ಥೆ ಆಸ್ಥಿಯ ಸದಸ್ಯರಾಗಿ ಇಂಗ್ಲಿಷ್ ನಲ್ಲಿ ಪಠ್ಯ ಕ್ರಮ ರೂಪಿಸಿ ಪದವೀಧರರಿಗೆ ತರಬೇತಿ ನೀಡುತ್ತಾ ಅವರುಗಳನ್ನು ಹಲವಾರು ಕೆಲಸಗಳಿಗೆ ಯೋಗ್ಯರನ್ನಾಗಿಸಿ ಹಲವು ಕೌಶಲ್ಯ ಕೆಲಸಗಳನ್ನು ಕಲಿಸುತ್ತಾ, ಕೆಲಸ ಪಡೆದುಕೊಳ್ಳಲು ಸತತವಾಗಿ ಅಣಿಗೊಳಿಸುತ್ತಿದ್ದಾರೆ.
ಇನ್ನೂ ಉತ್ತಮವಾದದ್ದನ್ನು ಸಾಧಿಸಬೇಕೆಂಬ ಹೆಬ್ಬಯಕೆಯಿಂದ ಪತಿಯ ಕುಟುಂಬದ ಎಂ.ಕೆ.ಆರ್ ಗ್ರೂಪ್ ಆಫ್ ಕಂಪನಿಗಳ ಆಡಳಿತದಲ್ಲಿ ತಮ್ಮನ್ನು ಕ್ರಿಯಾಶೀಲರಾಗಿ ತೊಡಗಿಸಿಕೊಂಡರು. ಈ ನಿರ್ಧಾರ ಮಾಡಿದ್ದು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾಗ. ಅಂದು ಮಾಡಿದ ನಿರ್ಧಾರ ಇಂದಿನವರೆಗೂ ದುಡಿಸಿಕೊಂಡು ಬಂದಿದೆ. ಈ ಕಾಲಘಟ್ಟದಲ್ಲಿ ಹಲವಾರು ಸಾಧನೆಯ ಗರಿಮೆ, ಹಿರಿಮೆಗಳು ಇವರ ಪಾಲಾಗಿವೆ.
ಎಂ.ಕೆ.ಆರ್. ಗ್ರೂಪ್ ನ ಆಡಳಿತ ಶಕ್ತಿ
ಇಂದು ಇವರು ಎಂ.ಕೆ.ಆರ್ ಗ್ರೂಪ್ ಆಫ್ ಕಂಪನಿಗಳ ಆಡಳಿತದ ಶಕ್ತಿಯಾಗಿ ಬೆಳೆದು ಆಡಳಿತ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಂತೂ ಗ್ರೂಪ್ ನ ಸಂಪೂರ್ಣ ಆಡಳಿತ ನಿರ್ವಹಣೆಯ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.





