ವನಸಿರಿ, ಕೋಟೆಕೊತ್ತಲು, ಕಾಡು ಮೇಡು ಹಾಗೂ ನೈಸರ್ಗಿಕ ಸೌಂದರ್ಯವನ್ನು ಅಸ್ವಾದಿಸುವವರಿಗೆ ಮಾತ್ರ ಈ ಪ್ರದೇಶ ಇಷ್ಟ ಆಗಬಹುದು. ಮೈಸೂರಿನಿಂದ ಕೇವಲ 22 ಕಿ.ಮೀ. ದೂರದಲ್ಲಿರುವ ಕರಿಘಟ್ಟ ಮೈಸೂರು ಬೆಂಗಳೂರು ಹೆದ್ದಾರಿಯಲ್ಲೇ ಇದೆ. ಲೋಕಪಾವನಿ ಹಾಗೂ ಕಾವೇರಿ ನದಿಗಳ ಸಂಗಮ ಇಲ್ಲಿನ ವಿಶೇಷ ಪ್ರಾಕೃತಿಕ ಆಕರ್ಷಣೆಗಳಲ್ಲೊಂದು.
ಕರಿಘಟ್ಟ ಸಮುದ್ರ ಮಟ್ಟದಿಂದ ಸುಮಾರು 2,697 ಅಡಿ ಎತ್ತರದಲ್ಲಿದ್ದು, ಇಡೀ ಬೆಟ್ಟ ಹಸಿರು ಹೊದ್ದುಕೊಂಡು ಮಲಗಿರುವ ಹಾಗಿದೆ. ಬೆಟ್ಟ ಹಾಗೂ ಸುತ್ತಮುತ್ತಲು ಕಪ್ಪು ಕಲ್ಲುಗಳೇ ಹೆಚ್ಚಾಗಿ ಕಂಡುಬರುವುದರಿಂದ ಇದಕ್ಕೆ `ಕರಿಗಿರಿ’ ಎಂದೂ ಘಟ್ಟದ ತುತ್ತ ತುದಿಯನ್ನು ಚುಂಬಿಸುವಂತೆ ಮೋಡಗಳು ಸದಾ ಹಾದು ಹೋಗುವುದರಿಂದ `ನೀಲಾಂಚಲ’ ಎಂಬ ಹೆಸರೂ ಇದೆ.
ಸದಾ ಹಚ್ಚ ಹಸಿರಾದ ಕಾಡು, ಕಪ್ಪು ಹಾಗೂ ಕೆಂಪು ಬಣ್ಣದ ಕೋಡುಗಲ್ಲು, ಟಿಪ್ಪು ಸುಲ್ತಾನ್ ಕಾಲದ ಕೋಟೆಯ ಅವಶೇಷ, ಶ್ರೀನಿವಾಸ ದೇಗುಲ, ಪ್ರಾಣಿ ಪಕ್ಷಿಗಳು ಕರಿಘಟ್ಟದ ಪ್ರಮುಖ ಆಕರ್ಷಣೆ.
ಮೈಸೂರು ಹುಲಿ ಟಿಪ್ಪು ಕಾಲದಲ್ಲಿ ಶತ್ರುಗಳ ಚಲನವಲನ ವೀಕ್ಷಿಸಲು ಈ ಬೆಟ್ಟಗಳ ಮೇಲೆ ಕೋಟೆಯೊಂದನ್ನು ನಿರ್ಮಾಣ ಮಾಡಲಾಗಿತ್ತು. ಇಲ್ಲಿ ಪಹರೆ ಕಾಯಲು ಶಸ್ತ್ರಸಜ್ಜಿತ ಸೈನಿಕರ ಒಂದು ತುಕಡಿಯನ್ನು ಇಡಲಾಗಿತ್ತು ಎಂದು ಇತಿಹಾಸ ತಿಳಿಸುತ್ತದೆ. ಹಿಂದೆ ಇದನ್ನು ಕಾವಲುಗೋಪುರ ಹಾಗೂ ಕೋಟೆ ಬೆಟ್ಟ ಎಂದೂ ಕರೆಯುತ್ತಿದ್ದರು. ಇಂದು ಕರಿಘಟ್ಟ ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ತಾಣ.
ಇಲ್ಲಿನ ಕಾಲುಗೋಪುರ ಗುಡ್ಡ, ಶ್ರೀನಿವಾಸನ ಗುಡ್ಡ ಹಾಗೂ ಚಿನ್ನಾಯಕನಹಳ್ಳಿ ಗುಡ್ಡಗಳನ್ನು ಕರಿಘಟ್ಟ ಒಳಗೊಂಡಿದೆ. ಇವುಗಳಲ್ಲಿ ಕಾವಲುಗೋಪುರ ಗುಡ್ಡ ಎತ್ತರ ಪ್ರದೇಶದಲ್ಲಿದ್ದು, ಇಲ್ಲಿ ನಿಂತು ನೋಡಿದರೆ ಮೈಸೂರು, ಶ್ರೀರಂಗಪಟ್ಟಣ, ಪಾಂಡವಪುರ, ಮೇಲುಕೋಟೆ ಹಾಗೂ ಕುಂತಿಬೆಟ್ಟ ಸೇರಿದಂತೆ ಅನೇಕ ಹಳ್ಳಿ ಗ್ರಾಮ ಹಾಗೂ ನದಿಗಳ ಸಂಗಮ ಕಣ್ಮನ ಸೆಳೆಯುತ್ತದೆ. ಅದರಲ್ಲೂ ಬೆಟ್ಟದ ಮೇಲಿನಿಂದ ನೋಡುವಾಗ ಕಾವೇರಿ ನದಿ ಹಸಿರು ವನಸಿರಿಗಳ ನಡುವೆ ಬಳುಕುತ್ತಾ ಹರಿದು ಸಾಗುವ ದೃಶ್ಯ ರುದ್ರರಮಣೀಯವಾಗಿದೆ.
ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ಶ್ರೀನಿವಾಸ ದೇವಾಲಯ ಅನೇಕರನ್ನು ತನ್ನತ್ತ ಸೆಳೆಯುತ್ತದೆ. ಕಾವೇರಿ ಲೋಕಪಾವನಿ ನದಿಗಳ ಸಂಗಮ ಸ್ಥಳದಿಂದ ಈ ದೇವಾಲಯಕ್ಕೆ ಮೈಸೂರಿನ ಅರಸರಾದ ಚಿಕ್ಕ ದೇವರಾಜ ಒಡೆಯರ್ ಹಾಕಿಸಿದ 450 ಮೆಟ್ಟಿಲುಗಳ ಮೂಲಕ ಹತ್ತಿ ಹೋಗಬಹುದು. ಭಕ್ತರು ದಣಿವಾರಿಸಿಕೊಳ್ಳಲು ಅಲ್ಲಲ್ಲಿ ನಿರ್ಮಿಸಿರುವ ಅರಳಿ ಕಟ್ಟೆಗಳು ಇಂದಿಗೂ ನೆರಳು ನೀಡುತ್ತಿವೆ.
ಕರಿಘಟ್ಟದ ತುತ್ತತುದಿಯಲ್ಲಿ ಟಿಪ್ಪು ಕಾಲದ ಕೋಟೆಯ ಅವಶೇಷಗಳು ಸುಮಾರು 60-70 ಮೀಟರ್ ಉದ್ದ ಇವೆ. ಕಡಿದಾದ ಹಾದಿಯಲ್ಲಿ ಸಾಗುವಾಗ ಕೆಂಬಣ್ಣದ ಕೋಡುಗಲ್ಲು ಕಾಣುವ ಸ್ಥಳದಲ್ಲಿ ಇಂಗ್ಲಿಷ್ `ಸಿ’ ಅಕ್ಷರದಾಕಾರದಲ್ಲಿ ಸುಮಾರು 5 ಅಡಿ ಎತ್ತರದ ನಾಲ್ಕು ಕೋಟೆ ಗೋಡೆಗಳಿವೆ. ಇಲ್ಲಿ ಲಭ್ಯವಿರುವ ಕಲ್ಲುಗಳಿಂದಲೇ ಈ ಕೋಟೆ ನಿರ್ಮಿಸಿದ್ದು ಇದರ ಮೇಲ್ಭಾಗದ ವಿಸ್ತೀರ್ಣ ಅಂದಾಜು ಒಂದು ಮೀಟರ್ ಅಗಲ ಇದೆ.
ಕರಿಘಟ್ಟ ವನ್ಯಧಾಮವಾಗಿಯೂ ಜನಪ್ರಿಯತೆ ಹೊಂದಿದೆ. ಇಲ್ಲಿನ ಕುರುಚಲು ಕಾಡಿನಲ್ಲಿ ಮೊಲ, ಉಡ, ಬಗೆ ಬಗೆಯ ಹಾವುಗಳು, ನರಿ, ಚಿರತೆಗಳು ವಾಸವಾಗಿವೆ. ಅನೇಕ ವಿವಿಧ ಜಾತಿಯ ಪಕ್ಷಿಗಳ ಜೊತೆಗೆ ನವಿಲು, ಗರುಡ, ಕೆಂಬೂತ, ಗಿಡುಗ, ಮೈನಾ, ಗುಬ್ಬಚ್ಚಿ ಮುಂತಾದ ಅನೇಕ ಬಗೆಯ ಸಣ್ಣ ಜಾತಿಯ ಪಕ್ಷಿಗಳೂ ಇಲ್ಲಿ ಹೇರಳವಾಗಿದ್ದು, ಸದಾ ಪಕ್ಷಿಗಳ ಕಲರವ ಇಂಪಾಗಿ ಕೇಳಿ ಬರುತ್ತಿರುತ್ತದೆ.
ಮೈಸೂರಿಗೆ ಹೋದಾಗ ಕರಿಘಟ್ಟಕ್ಕೆ ಭೇಟಿ ನೀಡಲು ಮರೆಯದಿರಿ. ಮೈಸೂರಿನಿಂದ ಮೆಟಡೋರ್ನಂಥ ದುಬಾರಿಯಲ್ಲದ ಬಾಡಿಗೆ ವಾಹನಗಳು ಸುಲಭ ಲಭ್ಯ. ಸ್ವಂತ ವಾಹನಗಳಲ್ಲಿ ಹೋದರೆ ಅನುಕೂಲ ಹೆಚ್ಚು.
– ಸಾಲೋಮನ್