ಸುಶಿಕ್ಷಿತರಿರಬಹುದು, ಅನಕ್ಷರಸ್ಥರಾಗಿರಬಹುದು, ರಾಜಕಾರಣಿ ಇರಬಹುದು ಅಥವಾ ಉನ್ನತ ಅಧಿಕಾರಿ ಹೀಗೆ ಪ್ರತಿಯೊಬ್ಬರು ಅದೃಷ್ಟ, ಜ್ಯೋತಿಷ್ಯ, ಜಾತಕದ ಸುಳಿಗೆ ಸಿಲುಕಿ ಕರ್ತವ್ಯ ಪ್ರಧಾನ ಧೋರಣೆಯನ್ನು ಮಣ್ಣುಪಾಲು ಮಾಡುವಲ್ಲಿ ನಿರತರಾಗಿದ್ದಾರೆ. ಧರ್ಮಪುರಾಣ ಮತ್ತು ಗ್ರಂಥಗಳ ಆಶ್ರಯದಲ್ಲಿ ಅದೃಷ್ಟ ಮತ್ತು ಜ್ಯೋತಿಷ್ಯದ ಅಂಗಡಿಗಳು ಹೇಗೆ ವ್ಯಾಪಾರದಲ್ಲಿ ನಿರತವಾಗಿವೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಕೆಲವು ಭಾರತೀಯ ವಿದ್ವಾಂಸರು ಜ್ಯೋತಿಷ್ಯವನ್ನು ವಿಜ್ಞಾನವೆಂದು ಭಾವಿಸುತ್ತಾರೆ ಹಾಗೂ ಇದನ್ನು ಸಾವಿರಾರು ವರ್ಷ ಪುರಾತನ ಎಂದು ಹೇಳುತ್ತಾರೆ. ಬ್ರಹ್ಮ ಜ್ಞಾನ ದೇವತೆ. ಈ ವಿದ್ಯೆ ಅಲ್ಲಿಂದಲೇ ಆರಂಭವಾಯಿತು. ಅದು ಭಾಸ್ಕರಾಚಾರ್ಯರನ್ನು ಕೂಡ ತಲುಪಿತು. ಭಾರತೀಯ ಜ್ಯೋತಿಷ್ಯ ತ್ರಿಕಾಲದರ್ಶಿಯಾಗಿದೆ. ಅದು ಭೂತ, ವರ್ತಮಾನ ಹಾಗೂ ಭವಿಷ್ಯದ ಬಗ್ಗೆ ಹೇಳಬಲ್ಲರು.

ಟಿ.ವಿ. ಚಾನೆಲ್‌ಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ಹಾಗೂ ದಿನಪತ್ರಿಕೆಗಳಲ್ಲಿ ಬಹಳ ವರ್ಷಗಳಿಂದ ಪ್ರಕಟವಾಗುತ್ತಿರುವ `ರಾಶಿ ಫಲ,’ `ಇಂದಿನ ಭವಿಷ್ಯ’ದಂತಹ ಕಾಲಂಗಳು ಬರುತ್ತಿವೆ. ಲಕ್ಷಾಂತರ ಸುಶಿಕ್ಷಿತ, ಅನಕ್ಷರಸ್ಥ, ಬಡವರು, ಶ್ರೀಮಂತರು, ಹಳ್ಳಿಯವರು ಹೀಗೆ ಎಲ್ಲರೂ ಜ್ಯೋತಿಷಿಗಳ ಆಸುಪಾಸು ತಿರುಗುತ್ತಿರುತ್ತಾರೆ.

ರಾಜಕಾರಣಿಗಳಿಂದ ಹಿಡಿದು ಸರ್ಕಾರಿ ನೌಕರರ ತನಕ ಬಹುತೇಕ ಜನರು ಹಲವು ಬಗೆಯ ಹರಳುಗಳ ಉಂಗುರಗಳನ್ನು ಧರಿಸಿರುವುದು ಕಂಡುಬರುತ್ತದೆ. ಅವರು ಕೂಡ  ತಾವು ಎಲ್ಲಿಗೆ ಹೋಗಬೇಕಾದರೂ ಜ್ಯೋತಿಷಿಗಳ ಸಲಹೆ ಕೇಳುತ್ತಾರೆ.

ಅಷ್ಟೇ ಅಲ್ಲ, ಜ್ಯೋತಿಷಿಯೊಬ್ಬನ ಪ್ರವೇಶ ಮಗು ಹುಟ್ಟಿದ ದಿನದಿಂದಲೇ ಶುರುವಾಗುತ್ತದೆ. ಆಗ ಮಗುವಿನ ಜಾತಕ ಬರೆಸಲಾಗುತ್ತದೆ. ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ಜಾತಕ ಬರೆಯುವ ಜ್ಯೋತಿಷಿಗಳ ಸಂಖ್ಯೆ 10 ಲಕ್ಷಕ್ಕಿಂತ ಹೆಚ್ಚು.

ಕೆ.ಎನ್‌. ರಾವ್‌ಎಂಬ ಜ್ಯೋತಿಷಿಗಳಿದ್ದಾರೆ. ಅವರು ಜ್ಯೋತಿಷಿಗಳು ಹೇಳುವ ಬಹುತೇಕ ವಿಷಯವನ್ನು ಒಪ್ಪಲು ಹೋಗುವುದಿಲ್ಲ. `ಕಾಲಯೋಗ’ವನ್ನು ಅವರು ಸ್ಪಷ್ಟವಾಗಿ ತಳ್ಳಿಹಾಕುತ್ತಾರೆ. ಆದರೆ ಜ್ಯೋತಿಷ್ಯ ಶಿಕ್ಷಣದ ಪರವಾಗಿದ್ದಾರೆ. ಭಾಜಪಾ ಮುಖಂಡರೊಬ್ಬರು ಜ್ಯೋತಿಷ್ಯ ವಿಷಯವನ್ನು ವಿಶ್ವವಿದ್ಯಾಲಯದಲ್ಲಿ ಅಳವಡಿಸಬೇಕೆಂಬುದರ ಕಟ್ಟಾ ಸಮರ್ಥಕರು. ವೈದಿಕ ಕಾಲದಿಂದ ಮುಂದುವರಿದುಕೊಂಡು ಬರುತ್ತಿರುವ ವಿದ್ಯೆ ಎಂದು ಹೇಳುತ್ತಾರೆ.

ಭಾರತದ 4-5 ವಿಶ್ವವಿದ್ಯಾಲಯಗಳು ಜ್ಯೋತಿಷ್ಯ ಶಿಕ್ಷಣವನ್ನು ಬಿ.ಎ. ಹಾಗೂ ಎಂ.ಎ. ತನಕ ಕೊಡಲು ಸಿದ್ಧವಾಗಿದ್ದವು. ಎಂದೂ ಕೂಡ ಹೇಳಲಾಗುತ್ತದೆ. ಪ್ರಸಿದ್ಧ ವಿಜ್ಞಾನಿ ಡಾ. ಯಶಪಾಲ್‌ಅವರು ಹೇಳುವುದೇನೆಂದರೆ, ಟೈಮ್ ಪಾಸ್‌ಮಾಡಲು ಜ್ಯೋತಿಷ್ಯ ಶಿಕ್ಷಣ ಹಾನಿಕಾರಕವೇನೂ ಅಲ್ಲ. ಏಕೆಂದರೆ ಇದರಿಂದ ಜನರ ಅಭಿರುಚಿ ಸ್ಪಷ್ಟವಾಗಿ ಬಿಂಬಿಸಲ್ಪಡುತ್ತದೆ.

ಪ್ರಸಿದ್ಧ ವಿಜ್ಞಾನಿ ಡಾ. ರಾಜೇಶ್‌ಕೋಚರ್‌ಹಾಗೂ ಡಾ. ಎನ್‌. ಕುಮಾರ್‌ಅವರು ಜ್ಯೋತಿಷ್ಯವನ್ನು ವಿಜ್ಞಾನವೆಂದು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಾರೆ. ಜ್ಯೋತಿಷ್ಯದ ಕುರಿತಂತೆ ಜನರ ಅಭಿರುಚಿಯ ಕಾರಣದಿಂದ ಇದರಲ್ಲಿ ವ್ಯಾಪಾರೀಕರಣ ಬಂದಿದೆ. ಮಾರುಕಟ್ಟೆಯಲ್ಲಿ ಗಿಳಿ ಹಾಗೂ ಎತ್ತು ಕೂಡ ಮಾನವನ ಅದೃಷ್ಟದ ಬಗ್ಗೆ ಹೇಳುತ್ತಿವೆ.

ಶತಶತಮಾನಗಳಿಂದ ನಮ್ಮ ಧರ್ಮಗುರುಗಳು ಹಾಗೂ ನಮ್ಮ ಶಾಸ್ತ್ರಜ್ಞರು ಹೇಳುವುದೇನೆಂದರೆ, ಪ್ರತಿಯೊಬ್ಬ ವ್ಯಕ್ತಿಯ ಜೀವನ ಅದೃಷ್ಟದ ಜೊತೆಗೆ ಥಳುಕು ಹಾಕಿಕೊಂಡಿದೆ. ಬಡವನಾಗಿದ್ದರೆ ಅದು ಅವನ ಅದೃಷ್ಟ, ಶ್ರೀಮಂತನಾಗಿದ್ದರೆ ಅದು ಅವನ ಅದೃಷ್ಟ ಎಂದು ತಿಳಿಯಬೇಕು ಎನ್ನುತ್ತಾರೆ ಅವರು. ನಾವು ಈಗಲೂ ಜಾತಕಗಳನ್ನು ಹಿಡಿದುಕೊಂಡು ಜ್ಯೋತಿಷಿಗಳ ಬಳಿ ಹೋಗುತ್ತೇವೆ.  ಅವರ ಬಳಿ ನಾವು ಹೋಗುವ ಮುಖ್ಯ ಕಾರಣ ನಮ್ಮ ಅದೃಷ್ಟದಲ್ಲಿ ಏನಿದೆ ಎಂದು ತಿಳಿಯಲು, ನನಗೆ ಉದ್ಯೋಗದಲ್ಲಿ ಬಡ್ತಿ ಸಿಗುತ್ತಾ? ನನ್ನ ವ್ಯಾಪಾರ ಪ್ರಗತಿ ಕಾಣುತ್ತಾ? ನಾನು ಚುನಾವಣೆಯಲ್ಲಿ ಗೆಲ್ಲಬಹುದಾ? ಮತ್ತೆ ಕೆಲವು ಜನರು ತಮ್ಮ ಹಸ್ತರೇಖೆಗಳನ್ನು ತೋರಿಸಿ ತಮ್ಮ ಅದೃಷ್ಟ ತಿಳಿದುಕೊಳ್ಳಬಯಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಟೆರ್ರೊ ಕಾರ್ಡ್‌ಗಳ ಮುಖಾಂತರ ಭವಿಷ್ಯ ಹೇಳಾಗುತ್ತಿದೆ. ದೆಹಲಿಯಲ್ಲಿ ಜ್ಯೋತಿಷಿಗಳು, ಮಾಂತ್ರಿಕರು ಹಾಗೂ ಹಲವು ಚತುರರು ಒಂದೇ ಕಡೆ ಸೇರಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಯಾವುದೇ ನಗರದಲ್ಲೂ ಇಲ್ಲ. ಅವರು ಎಲ್ಲರ ಭವಿಷ್ಯ ಹೇಳಿ ಹಣ ವಸೂಲು ಮಾಡುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ಕೆಲವು ರಾಜಕಾರಣಿಗಳು ಯಜ್ಞ ಕೂಡ ಮಾಡುತ್ತಾರೆ.

ಮಾಂತ್ರಿಕರ ಬಳಿ ಜನ ಹೋಗುವುದು ತಮಗೆ ಯಾವುದೇ ಹಾನಿ ಆಗದಿರಲಿ ಹಾಗೂ ಯಶಸ್ಸು ಸಿಗಲಿ ಎಂದು. ಬಹಳಷ್ಟು ಜನರಿಗೆ ಅದೃಷ್ಟವೇ ಎಲ್ಲ ಆಗಿದೆ. ಇಂಥವರಲ್ಲಿ ಪುರುಷಾರ್ಥವಾದರೂ ಎಲ್ಲಿದೆ? ನಮ್ಮಲ್ಲಿ ಈಗಲೂ ಬಹಳಷ್ಟು ಜನ ಅದೃಷ್ಟದ ಮೇಲೆಯೇ ನಂಬಿಕೆ ಇಟ್ಟಿದ್ದಾರೆ.

ಡಾ. ಪಿ.ಸಿ. ಗೋಯಲ್ 1961-62ನೇ ಸಾಲಿನ ಒಂದು ಘಟನೆ ಹೇಳುತ್ತಾ ನಾನು ಆಗ ಕ್ವೀನ್ಸ್ ಮೇರಿ ಹಾಸ್ಪಿಟಲ್‌ನಲ್ಲಿ ಮೆಟರ್ನಿಟಿ ವಾರ್ಡ್‌ನಲ್ಲಿ ಡ್ಯೂಟಿ ಮಾಡುತ್ತಿದ್ದೆ. ಲೇಬರ್‌ರೂಮ್ ನಲ್ಲಿ ಏಕಕಾಲಕ್ಕೆ ಇಬ್ಬರು ಮಹಿಳೆಯರು ಡೆಲಿವರಿಗೆಂದು ಅಡ್ಮಿಟ್‌ಆಗಿದ್ದರು. ಒಬ್ಬಳು ದೊಡ್ಡ ವ್ಯಾಪಾರಿಯೊಬ್ಬನ ಹೆಂಡತಿಯಾಗಿದ್ದರೆ, ಇನ್ನೊಬ್ಬಳು ರಸ್ತೆಬದಿ ಸೈಕಲ್ ಪಂಕ್ಟರ್‌ತೆಗೆಯುವ ವ್ಯಕ್ತಿಯ ಹೆಂಡತಿ.

ಇಬ್ಬರ ಹೆಂಡತಿಯರು ಹೆಚ್ಚು ಕಡಿಮೆ ಒಂದೇ ಸಮಯಕ್ಕೆ ಗಂಡುಮಕ್ಕಳಿಗೆ ಜನ್ಮ ನೀಡಿದರು. ಅದರಲ್ಲಿ ಒಂದು ಮಗು ಕೋಟಿ ರೂ.ಗಳ ಆಸ್ತಿಯ ವಾರಸುದಾರನಾದರೆ, ಇನ್ನೊಂದು ಮಗು 5000 ರೂ. ಸಾಲದ ಹೊಣೆ ಹೊರಬೇಕಾಯಿತು. ಏಕೆಂದರೆ ಆ ಪುಟ್ಟ ಮಗುವಿನ ತಂದೆ ಸಾಲ ಮಾಡಿ ತೀರಿಹೋಗಿದ್ದ. ಒಂದೇ ಕೋಣೆಯಲ್ಲಿ ಒಂದೇ ಸಮಯದಲ್ಲಿ ಹುಟ್ಟಿದ ಮಕ್ಕಳ ಅದೃಷ್ಟದಲ್ಲಿ ಏಕೆ ಈ ವ್ಯತ್ಯಾಸ? ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಬ್ಬರೂ ಮಕ್ಕಳ ಭವಿಷ್ಯ, ಅದೃಷ್ಟ ಒಂದೇ ತೆರನಾಗಿ ಇರಬೇಕು ಅಂದರೆ ಹಾಗಾಗಿಲ್ಲ.

ಸೃಷ್ಟಿಕರ್ತ ನಮ್ಮ ಅದೃಷ್ಟದಲ್ಲಿ ಬರೆದಿಟ್ಟಿದ್ದಾನೆ. ಹೀಗಾಗಿ ನಮಗೆ ಪುರುಷಾರ್ಥ ಮಾಡುವುದರಲ್ಲಿ ಏನು ಅರ್ಥ. ಹೀಗೆ ಹೇಳುವವರು, ನಂಬುವವರು ಅಂದರೆ ಅದೃಷ್ಟದ ಮೇಲೆ ನಂಬಿಕೆ ಇಡುವವರು ಸೋಮಾರಿಗಳು. ಅವರು ನಮಗೆ ಏನೂ ಮಾಡುವ ಅಗತ್ಯವಿಲ್ಲ. ಎಂದು ಹೇಳುವುದನ್ನು ನಾವೆಲ್ಲ ಕೇಳುತ್ತೇವೆ. ಮನುಷ್ಯನಿಗೆ ಅದೃಷ್ಟದ ಮೇಲೆ ನಂಬಿಕೆ ಇಡುವುದು ಸುಗಮ ಎನಿಸುತ್ತದೆ. ಇಲ್ಲದಿದ್ದರೆ ಪುರುಷಾರ್ಥದ ಜವಾಬ್ದಾರಿ ಹೊರಬೇಕಾಗುತ್ತದೆ. ಕಷ್ಟಪಡಬೇಕಾಗುತ್ತದೆ, ಹೋರಾಡಬೇಕಾಗುತ್ತದೆ. ನಿಸರ್ಗದೊಂದಿಗೆ ಸೆಣಸಾಡಲು ದೈಹಿಕ ಶ್ರಮದ ಅಗತ್ಯ ಉಂಟಾಗುತ್ತದೆ.

ಚಿಕ್ಕಪುಟ್ಟ ಜ್ಯೋತಿಷಿಗಳಷ್ಟೇ ಅದೃಷ್ಟದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ಸ್ವತಃ ಕೃಷ್ಣನೇ ಅರ್ಜುನನಿಗೆ ಹೇಳುತ್ತಾನೆ, “ಹೆದರಬೇಡ, ಯುದ್ಧ ಮಾಡು. ಯಾರ ಅದೃಷ್ಟದಲ್ಲಿ ಸಾವನ್ನು ಬರೆದಿದೆಯೋ ಅವರು ಸಾಯುತ್ತಾರೆ. ಇದು ಕಾಲ ನಿಯಮ. ಇದರಲ್ಲಿ ನಮ್ಮದೇನಿದೆ?”

ಮನುಷ್ಯ ಖಾಲಿ ಕಾಗದದೊಂದಿಗೆ ಹುಟ್ಟುತ್ತಾನೆ. ಅವನ ಜೀವನ ಖಾಲಿ ಕಾಗದವೇ ಆಗಿದೆ. ಅದರ ಮೇಲೆ ಏನಾದರೂ ಬರೆಯಬೇಕಾಗುತ್ತದೆ. ಅದರಲ್ಲಿ ಬೈಗುಳವನ್ನಾದರೂ ಬರೆಯಿರಿ, ಭಜನೆಯನ್ನಾದರೂ ಬರೆಯಿರಿ.

ಮನುಷ್ಯ ಅದೃಷ್ಟದೊಂದಿಗೆ ಹುಟ್ಟುವುದಿಲ್ಲ. ಪ್ರತಿಯೊಂದು ಮಗು ಶೂನ್ಯದಂತೆ ಇರುತ್ತದೆ. ಕ್ರಮೇಣ ಅದು ಆಕಾರ ಪಡೆದುಕೊಳ್ಳುತ್ತ ಹೋಗುತ್ತದೆ. ಸಮಾಜದಲ್ಲಿ ಬೆರೆತು ಅದು ಬಗೆಬಗೆಯ ವಿಷಯಗಳನ್ನು ಕಲಿತು ತನ್ನನ್ನು ತಾನು ರೂಪಿಸಿಕೊಳ್ಳುತ್ತದೆ. ಇದರಲ್ಲಿ ಯಾವುದೇ ಅದೃಷ್ಟದ ಪಾಲು ಇಲ್ಲ. ಅದರ ಅದೃಷ್ಟ ಅದರ ಕೈಯಲ್ಲೇ ಇರುತ್ತದೆ. ಒಂದು ವೇಳೆ ನೀವು ಪ್ರತಿಯೊಂದು ಕೆಲಸದಲ್ಲಿ ಶಕ್ತಿ ಹಾಗೂ ಸಹಾಯ ಬಯಸುವಿರಾದರೆ, ಅದು ನಿಮ್ಮ ಕೈಯಲ್ಲೇ ಇದೆ. ಹೀಗಾಗಿ ನಿಮ್ಮ ಅದೃಷ್ಟನ್ನು ನೀವೇ ರೂಪಿಸಿಕೊಳ್ಳಿ. ಪ್ರತಿಯೊಬ್ಬ ವ್ಯಕ್ತಿಗೂ ಸಮಾಜದಲ್ಲಿ ದೊರೆಯುವ ಶಿಕ್ಷಣದ ಮುಖಾಂತರ ತನ್ನ ಕಾಲ ಮೇಲೆ  ತಾನೇ ನಿಂತುಕೊಳ್ಳಬೇಕಾಗುತ್ತದೆ.

ಕರ್ತವ್ಯ ನಿರ್ವಹಿಸುವ ಈ ಜಗತ್ತೇ ಕರ್ತವ್ಯ ಪ್ರಧಾನವಾಗಿದೆ. ಕರ್ತವ್ಯದಿಂದಲೇ ಇಂದು ಜೀವನ ಯೋಗ್ಯವಾಗಿದೆ. ಯಾವ ಮನುಷ್ಯ ಕರ್ತವ್ಯ ನಿರ್ವಹಿಸುತ್ತಾನೊ, ಆತನ ಎಲ್ಲ ಅಂಗಗಳು ಆರೋಗ್ಯಕರವಾಗಿರುತ್ತವೆ. ಕರ್ತವ್ಯ ನಿಜವಾದ ಪೂಜೆ. ಮನಸ್ಸಿನ ಹಿಂಜರಿಕೆಯನ್ನು ನಿವಾರಿಸದಯೇ ಹೆಜ್ಜೆ ಮುಂದಿಡಲಾಗದು. ನಮ್ಮೊಂದಿಗೆ ನಾವು ಹೋರಾಡದೆ ಜೀವನ ಸಂಘರ್ಷದಲ್ಲಿ ಯಶಸ್ಸು ದೊರೆಯುವುದಿಲ್ಲ.

ಕರ್ತವ್ಯ ಜೀವನ. ಮಾನವನ ಕರ್ತವ್ಯ ಧರ್ಮ. ಕರ್ತವ್ಯ ಅಥವಾ ಕರ್ಮದ ಕುರಿತಂತೆ ನಮ್ಮಲ್ಲಿ ಅನೇಕ ಧರ್ಮೋಪದೇಶಗಳು ಕೇಳಿ ಬರುತ್ತವೆ. ಶ್ರೀಮದ್‌ಭಾಗವತದಲ್ಲಿ ಕೃಷ್ಣ ಹೇಳುತ್ತಾನೆ, “ಕರ್ಮ ಮಾಡು. ಆದರೆ ಫಲದ ಅಪೇಕ್ಷೆ ಮಾಡಬೇಡ. ಹೀಗೆ ಮಾಡುವುದರಿಂದ ಕರ್ಮ ಬಂಧನಹೀನ ಆಗಿರುತ್ತದೆ.” ಇದು ತಪ್ಪು. ಕರ್ಮ ಅಥವಾ ಕರ್ತವ್ಯ ಮಾಡಿದಾಗ ಫಲ ದೊರೆತೇ ದೊರೆಯುತ್ತದೆ. ಆದರೆ ಹೇಗೆ ಎನ್ನುವುದನ್ನು ಯಾರೂ ಅಂದಾಜು ಮಾಡಿರುವುದಿಲ್ಲ. ಕರ್ತವ್ಯದಲ್ಲೇ ಆತ್ಮಬಲ ಇದೆ. ಬುದ್ಧಿಯ ಕರ್ಮ ಜ್ಞಾನಾರ್ಜನೆ ಮಾಡುವುದಾಗಿದೆ. ಪ್ರಕೃತಿಗನುಗುಣವಾಗಿ ಜೀವನ ನಡೆಸುವುದು, ಎಲ್ಲರ ಕಲ್ಯಾಣಕ್ಕಾಗಿ ಕರ್ತವ್ಯ ಮಾಡುವುದರಿಂದ ಅಹಂ ತಂತಾನೇ ಕೊನೆಗೊಳ್ಳುತ್ತದೆ.

ಈ ಭೂಮಿ ನಮ್ಮ ಕರ್ಮಭೂಮಿಯಾಗಿದೆ. ಹೀಗಾಗಿ ಕರ್ಮ ಎನ್ನುವುದು ಸೃಷ್ಟಿಯ ಆಧಾರವಾಗಿದೆ. ಶರೀರದ ಕರ್ಮ ಆಹಾರ ಸೇವಿಸುವುದಾಗಿದೆ. ಬುದ್ಧಿಯ ಕರ್ಮ ಜ್ಞಾನ ಹೆಚ್ಚಿಸಿಕೊಳ್ಳುವುದಾಗಿದೆ ಹಾಗೂ ಮನಸ್ಸಿನ ಕರ್ಮ ಪ್ರವೃತ್ತಿ ಮತ್ತು ನಿವೃತ್ತಿ ಯಶಸ್ಸಿಗಾಗಿ ಕರ್ತವ್ಯ ಭಾವಕ್ಕಿಂತ ಕರ್ಮ ಪ್ರವೃತ್ತಿಯೇ ಏಕೈಕ ಉಪಾಯವಾಗಿದೆ. ಮನುಷ್ಯನ ಕರ್ಮವೇ ಅವನ ವಿಚಾರಗಳ ಅತ್ಯುತ್ತಮ ವ್ಯಾಖ್ಯೆಯಾಗಿದೆ. ವಾಸ್ತವದಲ್ಲಿ ಕರ್ಮವೇ ಜೀವನವನ್ನು ರೂಪಿಸುತ್ತಾರೆ. ಅದನ್ನು ಭಾಗ್ಯ ಎಂದು ಹೇಳುವುದು ತಪ್ಪು.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ