ಬಹಳಷ್ಟು ದೇವಾಲಯ, ಪ್ರೇಕ್ಷಣೀಯ ಸ್ಥಳಗಳು ಪ್ರಚಾರಕ್ಕೆ ಸಿಲುಕದೆ ಇರುವುದರಿಂದ ಅವು ಬೆಳಕಿಗೆ ಬರುವುದಿಲ್ಲ. ವಿಜಯಪುರ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಹುಲಿಗೆಮ್ಮನ ಕೊಳ್ಳ ಒಂದು ಅದ್ಭುತ ಪ್ರೇಕ್ಷಣೀಯ ತಾಣವಾಗಿದ್ದರೂ ಜನರಿಗೆ ಗೊತ್ತಿಲ್ಲದೇ ಅದು ಅನಾಮಿಕ ತಾಣವಾಗಿ ಉಳಿದಿದೆ.

ವಿಜಯಪುರ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಭದ್ರನಾಯಕನ ಜಾಲಿಹಾಳ (ಬಿ.ಎನ್‌. ಜಾಲಿಹಾಳ) ಗ್ರಾಮದಿಂದ ಒಳಗಡೆ ಸುಮಾರು 12 ಕಿ.ಮೀ. ದೂರದಲ್ಲಿ ಗುಡ್ದದ ಕಡೆಗೆ ಸಾಗಿದರೆ ಅದ್ಭುತ ತಾಣ ಅನಾವರಣಗೊಳ್ಳುತ್ತದೆ. ಬಿ.ಎನ್‌. ಜಾಲಿಹಾಳ ಗ್ರಾಮಕ್ಕೆ ಸೇರಿದ ಈ ತಾಣ ಕೊಳ್ಳದಲ್ಲಿದ್ದು, ಇದನ್ನು ಜನರು `ಹುಲಿಗೆಮ್ಮನ ಕೊಳ್ಳ' ಎಂದು ಕರೆಯುತ್ತಾರೆ. ಈ ಕೊಳ್ಳದ ಸನಿಹಕ್ಕೆ ಹೋಗುತ್ತಿರುವಂತೆ ಬಹು ಎತ್ತರದಿಂದ ನೀರು ಜಲಪಾತದಂತೆ ಬೀಳುವುದು ಕಾಣಿಸುತ್ತದೆ. ಗುಡ್ಡದ ತಪ್ಪಲಿನಲ್ಲಿರುವ ಈ ಪ್ರಶಾಂತ ಸ್ಥಳದಲ್ಲಿ ಹುಲಿಗೆಮ್ಮ ಎಂಬ ದೇವತೆಯಿಂದ ಈ ಹೆಸರು ಬಂದಿದೆ. ಆದರೆ ಇಲ್ಲಿನ ವಿಶೇಷತೆ ಎಂದರೆ ಇಲ್ಲಿರುವುದು ಮೂಲದಲ್ಲಿ ಲಜ್ಜಾ ಗೌರಿ. ಬಹುಶಃ ಕಾಲಾಂತರದಲ್ಲಿ ಈ ದೇವತೆಯನ್ನು ನೋಡಿದ ಜನರು ಅಸಹ್ಯಪಟ್ಟುಕೊಂಡು ಅದನ್ನು ಹುಲಿಗೆಮ್ಮನೆಂದು ಕರೆದಿರಬಹುದು. ಇಲ್ಲಿರುವ ಲಜ್ಜಾಗೌರಿಯ ಮೂರ್ತಿಯೂ ಈಗ ಭಗ್ನಗೊಂಡಿದ್ದರಿಂದ ಇದನ್ನು ದೇವಾಲಯದ ಆವರಣದ ಒಂದು ಭಾಗದಲ್ಲಿ ಇಟ್ಟಿದ್ದಾರೆ. ಇಂತಹ ಮೂರ್ತಿಗಳು ಇಲ್ಲಿ ಸಾಕಷ್ಟು ಇವೆ. ಮಹಿಷಾಸುರ ಮರ್ದಿನಿ, ಸಪ್ತ ಮಾತೃಕೆಯರು, ನಟರಾಜ, ವಿನಾಯಕ ಮೂರ್ತಿಗಳು, ಹನುಮಂತ, ಲಿಂಗವುಳ್ಳ ದೇವಾಯಗಳೂ ಇವೆ. ದೇವಾಲಯದ ಮೇಲ್ಭಾಗದಿಂದ ನೀರು ಹರಿದು ಕೆಳಗೆ ಬೀಳುತ್ತದೆ. ಇದಕ್ಕೆ ಮೈ ಒಡ್ಡಿದರೆ ಸಾಕು, ಮೈನೋವು ವಾಸಿಯಾಗುವಷ್ಟು ರಭಸದಲ್ಲಿ ಸುಮಾರು 300-400 ಅಡಿ ಎತ್ತರದಿಂದ ಬೀಳುತ್ತದೆ. ಸ್ನಾನಕ್ಕಾಗಿ ಇಲ್ಲಿ ವಿಶಾಲವಾದ ಸ್ಥಳವಿದೆ. ಈ ನೀರು ಹರಿದು ಮುಂದೆ ಹೋಗುತ್ತದೆ. ದೇವಾಲಯದ ಅನತಿ ದೂರದಲ್ಲಿ ಕೋಣಮ್ಮದೇವಿ ದೇವಾಲಯವಿದ್ದು, ಇದರ ಸನಿಹದಲ್ಲಿ ಸಿಹಿ ಬೇವಿನ ಗಿಡವಿದೆ.

ಈ ಪ್ರಶಾಂತ ತಾಣದಲ್ಲಿ ಸಮೀಪದಲ್ಲಿರುವ ಬಾದಾಮಿ ಚಾಲುಕ್ಯ ಅರಸ ಎರಡನೆಯ ಪುಲಿಕೇಶಿಯು ಆಗಾಗ ಬಂದು ಇದ್ದು ಹೋಗುತ್ತಿದ್ದನಂತೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ಅಂತಹ ಯಾವುದೇ ಶಾಸನಗಳು ಇಲ್ಲ. ಇದು ಮೂಲತಃ ಲಜ್ಜಾ ಗೌರಿಯ ತಾಣ. ಜನರು ಈ ಹೆಸರನ್ನು ಕಾಲಾಂತರದಲ್ಲಿ ಬದಲಾವಣೆ ಮಾಡಿಕೊಂಡಂತೆ ಕಾಣುತ್ತದೆ. ಜನಸಂಚಾರ ವಿರಳವಾಗಿರುವ ಇಲ್ಲಿ ಹುಣ್ಣಿಮೆ, ಅಮಾವಾಸ್ಯೆಗಳಲ್ಲಿ ಮತ್ತು ಕೆಲವು ವಿಶಿಷ್ಟ ದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆಗ ದಟ್ಟಜನಸಂದಣಿ ಇರುತ್ತದೆ. ಇಲ್ಲಿ ಪೂಜಾ ಕೈಂಕರ್ಯಗಳನ್ನು ಬಿ.ಎನ್‌. ಜಾಲಿಹಾಳ ಗ್ರಾಮಸ್ಥರು ಮಾಡುತ್ತಾರೆ. ದೇವಾಲಯವನ್ನು ಈಗ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಬದುಕಿನ ಜಂಜಾಟದಿಂದ ಬಳಲುವವರ ಮನಸ್ಸಿಗೆ ಮುದ ನೀಡುವ ಈ ತಾಣ, ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ.

ಬರುವ ದಾರಿ

ಈ ತಾಣಕ್ಕೆ ಬಾದಾಮಿಯಿಂದ ಪಟ್ಟದಕಲ್ಲಿಗೆ ಹೋಗುವ ಮಾರ್ಗದಲ್ಲಿ ಬರುವ ಬಿ.ಎನ್‌. ಜಾಲಿಹಾಳ ಗ್ರಾಮದಿಂದ ಒಂದೆರಡು ಕಿ.ಮೀ. ಒಳದಾರಿಯಲ್ಲಿ ಹೋದರೆ ಸಾಕು. ಇಲ್ಲಿಂದ ಉತ್ತಮವಾದ ಟಾರ್‌ ರಸ್ತೆಯನ್ನು ನಿರ್ಮಿಸಲಾಗಿದೆ. ಗದಗದಿಂದ ಬರುವುದಾದರೆ ಗಜೇಂದ್ರಗಡದಿಂದ ಗುಡೂರ, ಪಟ್ಟದಕಲ್ಲು ಮೂಲಕ. ಇಲ್ಲವೇ ಗದಗದಿಂದ ರೋಣ, ಬನಶಂಕರಿ ಕ್ಷೇತ್ರದಿಂದ ಶಿವಯೋಗ ಮಂದಿರದಿಂದ ಬಿ.ಎನ್‌. ಜಾಲಿಹಾಳ ಮೂಲಕ. ಹುನಗುಂದದ ಮೂಲಕ ಬರುವುದಾದರೆ ಗುಡೂರದಿಂದ ಇಲ್ಲಿ ಕೆಲೂರ ಗ್ರಾಮದ ಮೂಲಕ ಪಟ್ಟದಕಲ್ಲಿನಿಂದ ಬಾದಾಮಿ ದಾರಿಯಲ್ಲಿ ಸಾಗಿದರೆ ಬಿ.ಎನ್‌. ಜಾಲಿಹಾಳ ಗ್ರಾಮ ಸಿಗುತ್ತದೆ. ಬಾದಾಮಿ, ಪಟ್ಟದಕಲ್ಲುಗಳ ಮೂಲಕ ಬಿ.ಎನ್‌. ಜಾಲಿಹಾಳ ಗ್ರಾಮಕ್ಕೆ ಸಾಕಷ್ಟು ಬಸ್ಸುಗಳಿವೆ.  ಆದರೆ ಅಲ್ಲಿಂದ ಕಾಲ್ನಡಿಗೆಯಿಂದ ಹೋಗಬೇಕು. ಸ್ವಂತ ವಾಹನವುಳ್ಳವರು ದೇವಾಲಯದವರೆಗೆ ಹೋಗಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ