ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಗ ಆಕೆಯ ಮೊದಲ ಕವನ ಸಂಕಲನ ಪ್ರಕಟವಾಯಿತು!

ನಾಲ್ಕನೇ ತರಗತಿ ವಿದ್ಯಾರ್ಥಿನಿಯಿಂದ `ಮಂದಾನಿಲ’ ಹೆಸರಿನ ಕೈಬರಹದ ಪತ್ರಿಕೆ ಪ್ರಕಟವಾಯಿತು. ದ್ವಿತೀಯ ಪಿಯು ಮುಗಿಸುವ ವೇಳೆಗಾಗಲೇ ರಾಜ್ಯದ ಸಾಹಿತ್ಯ ವಲಯದಲ್ಲಿ ಮಹತ್ವದ ಹೆಸರು ಗಳಿಸಿರುವ ನಮ್ಮ ನಾಡಿನ ಪ್ರತಿಭಾವಂತ ಬರಹಗಾರ್ತಿ ಎನಿಸಿದರು ವಿತಾಶಾ ರಿಯಾ (ಮುದ್ದು ತೀರ್ಥಹಳ್ಳಿ)!

ಪಶ್ಚಿಮ ಘಟ್ಟದ ಹಚ್ಚ ಹಸಿರಿನ ನಡುವೆ ನೆಲೆಯಾದ ತೀರ್ಥಹಳ್ಳಿಯ ಸಮೀಪ ಬೆಟ್ಟಮಕ್ಕಿಯರಾದ ಮುದ್ದು ತೀರ್ಥಹಳ್ಳಿ ಇದುವರೆಗೂ ಮೂರು ಕವನಸಂಗ್ರಹ, ಒಂದು ಲಲಿತ ಪ್ರಬಂಧ, ಒಂದು ಕಾದಂಬರಿ ಸೇರಿದಂತೆ ಹತ್ತು ಹಲವು ಅಂಕಣ ಬರಹಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ `ಪ್ರವೇಶ ಭಾರತಿ,` `ಕಲಾ,’ ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಇವರು ಈಗಾಗಲೇ ರಾಜ್ಯ ಸಾಹಿತ್ಯ ಅಕಾಡೆಮಿ, ಅರಳು ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಕಾಸರಗೋಡು ಸಾಂಸ್ಕೃತಿಕ ಪ್ರತಿಷ್ಠಾನದ ಗೌರವ ಸೇರಿದಂತೆ ನಾನಾ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ. ನಾಡು, ಭಾಷೆ ಕುರಿತಂತೆ ಯಾವ ಹಿರಿಯ ಸಾಹಿತಿಗಳಿಗೂ ಕಡಿಮೆ ಇಲ್ಲದಂತೆ ಮಂಡಿಸುವ ಈಕೆಯ ಜೊತೆಗೆ `ಗೃಹಶೋಭಾ’ ನಡೆಸಿದ ವಿಶೇಷ ಸಂದರ್ಶನವಿದು. ಎಲ್ಲಾ ಪ್ರಶ್ನೆಗಳಿಗೆ ಅರಳು ಹುರಿದಂತೆ ಪಟಪಟನೆ ಉತ್ತರಿಸಿದ್ದ ಮುದ್ದು ಅವರ ಮುದ್ದಾದ ನುಡಿಗಳನ್ನು ಅವರ ಮಾತುಗಳಲ್ಲಿಯೇ ನಿಮ್ಮ ಮುಂದಿಡುತ್ತಿದ್ದೇವೆ.

ನನ್ನ ಹೆಸರು ವಿತಾಶಾ ರಿಯಾ. ಮನೆಯಲ್ಲಿ ಮುದ್ದು ಅಂತ ಕರೆಯುತ್ತಿದ್ದರಿಂದ ಅದನ್ನೇ ಕಾವ್ಯನಾಮ ಮಾಡಿಕೊಂಡೆ. ನನ್ನ ತಂದೆ ಮೆರೈನ್‌ ಎಂಜಿನಿಯರ್‌, ತಾಯಿ ಗೃಹಿಣಿ. ನನ್ನ ಅಕ್ಕ ವಿನಿಶಾ ಸಹ ಬಹುಮುಖ ಪ್ರತಿಭಾವಂತೆ. ಹಾಸ್ಯ ಲೇಖನ ಚೆನ್ನಾಗಿ  ಬರೆಯುವ ಅವಳು, `ಎತ್ತಿನಗಾಡಿ ಎಕ್ಸ್ ಪ್ರೆಸ್‌’ ಎನ್ನುವ ಹಾಸ್ಯ ಲೇಖನ ಸಂಗ್ರಹವನ್ನೂ ಹೊರತಂದಿದ್ದಾಳೆ.

ನಾನು ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಯನ್ನು ನಮ್ಮ ಅಜ್ಜಿಯ ಊರಾದ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಮುಗಿಸಿ ತೀರ್ಥಹಳ್ಳಿಯ ಸಹ್ಯಾದ್ರಿ ಕೇಂದ್ರೀಯ ವಿದ್ಯಾಲಯದಲ್ಲಿ ಐದನೇ ತರಗತಿಯವರೆಗೆ ಓದಿದೆ. ಆನಂತರ ಏಕೋ ಕನ್ನಡ ಶಾಲೆಯಲ್ಲೇ ಓದಬೇಕೆನಿಸಿತು. ಅದಕ್ಕೆ ಕಾರಣ ನಾನು ಯಾವುದಾದರೂ ಕಾರ್ಯಕ್ರಮಗಳಿಗೆ ಹೋದಾಗ ಅಲ್ಲಿ ಕನ್ನಡದಲ್ಲೇ ಕನ್ನಡದ ಪರವಾಗಿ ಮಾತನಾಡುತ್ತಿದ್ದೆ. ಇಂಗ್ಲಿಷ್‌ ಮಾಧ್ಯಮದಲ್ಲಿ ಓದುತ್ತಿದ್ದರೂ ಕನ್ನಡ ಭಾಷೆಯ ಮೇಲೆ ಒಳ್ಳೆ ಹಿಡಿತವಿದೆ ಭೇಷ್‌! ಎನ್ನುತ್ತಿದ್ದರು. ನಮ್ಮ ಕಡೆ ಎಲ್ಲರೂ ಬಹಳ ಸುಂದರವಾಗಿ ಕನ್ನಡ ಮಾತನಾಡುತ್ತಾರೆ. ಅದೂ ಅಲ್ಲದೆ, ನಾನು ಒಂದು, ಎರಡನೇ ತರಗತಿ ಓದುವಾಗಲೇ  ಚಿಕ್ಕ ಚಿಕ್ಕ ಕವಿತೆ, ಕಥೆ ಬರೆಯುತ್ತಿದ್ದೆ. ಅಲ್ಲದೆ, ಮೂರನೇ ತರಗತಿಯಲ್ಲಿ ನನ್ನ ಮೊದಲ ಸಂಕಲನ `ಹೂಗೊಂಚಲು’ ಪ್ರಕಟವಾಯಿತು. ನಾಲ್ಕು, ಐದನೇ ತರಗತಿಯಲ್ಲಿದ್ದಾಗ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ `ಪ್ರವೇಶ ಭಾರತಿ’ ಮತ್ತು `ಕಲಾ’ ಪರೀಕ್ಷೆಗಳನ್ನು ಬರೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದೆ. ನಾಲ್ಕನೇ ತರಗತಿ ಓದುವಾಗ ನನ್ನ ಎರಡನೇ ಸಂಕಲನ `ಕಾನನ ಕಲರವ’ ಪ್ರಕಟವಾಯಿತು. ಅಲ್ಲದೆ ನನ್ನ ಅಕ್ಕನ ಜೊತೆ ಸೇರಿ `ಮಂದಾನಿಲ’ ಎನ್ನುವ ಕೈ ಬರಹದ ಪತ್ರಿಕೆ ನಡೆಸಲು ಆರಂಭ ಮಾಡಿದ್ದೆ. ಹೀಗಾಗಿ ಕನ್ನಡವೇನೋ ಚೆನ್ನಾಗಿಯೇ ಬರುತ್ತಿತ್ತು. ಆದರೆ ಇಂಗ್ಲಿಷ್‌ ಮಾಧ್ಯಮದಲ್ಲಿ ಓದುತ್ತಾ ಕನ್ನಡದ ಪರ ಮಾತನಾಡುವಾಗ ಒಳಗೆ ಏನೋ ಇರಿದ ಅನುಭವವಾಗುತ್ತಿತ್ತು. ಅದಕ್ಕೆ ಹಟ ಹಿಡಿದು ನಮ್ಮ ಮನೆಯ ಹತ್ತಿರದಲ್ಲೇ ಇದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಕೊಂಡೆ. ಅಲ್ಲಿ ಸೇರಿದ ನಂತರ ನನಗೆ ನಿಜಕ್ಕೂ ಸಮೃದ್ಧ ಬಾಲ್ಯ, ಮಕ್ಕಳ ಹಕ್ಕುಗಳು, ಬಡತನ, ಕಷ್ಟ ಇವೆಲ್ಲದರ ಅರಿವು ಆಗತೊಡಗಿತು. ಏಕೆಂದರೆ ಆ ಸರ್ಕಾರಿ ಶಾಲೆಯಲ್ಲಿ ಇದ್ದವರೆಲ್ಲ ಬಡವ, ದಲಿತ ಮಕ್ಕಳು. ನನ್ನ ತರಗತಿಯಲ್ಲಿ ಒಬ್ಬ ಪೋಲಿಯೋ ಪೀಡಿತ ಹುಡುಗನೂ ಇದ್ದ. ನನ್ನ ಮನೋವಿಕಾಸ ಅಂತೇನಾದ್ರೂ ಆಗಿದೆ ಎಂದರೆ ಅದು ಸರ್ಕಾರಿ ಶಾಲೆ ಸೇರಿದ ಮೇಲೆ ಆಗಿದ್ದು ಎನ್ನಬಹುದು. ಅಲ್ಲಿ ಒಂದು ಕವನ ಸಂಕಲನ `ಎಷ್ಟು ಬಣ್ಣದ ಇರುಳು!’ ಪ್ರಕಟಿಸಿದೆ. ಮಂದಾನಿಲ ಪತ್ರಿಕೆಯಲ್ಲಿ ಶಾಲೆಯ ಅನುಭಗಳನ್ನೆಲ್ಲ ಬರೆಯುತ್ತಾ ಇದ್ದೆ. ಏಳನೇ ತರಗತಿಯಲ್ಲಿ ನಮ್ಮ ಸರ್ಕಾರಿ ಶಾಲೆಯಿಂದ ಇನ್‌ಸ್ಪೈರ್‌ ಅವಾರ್ಡ್‌ಗೆ ಪ್ರಾಜೆಕ್ಟ್ ವಿಭಾಗದಲ್ಲಿ ಆಯ್ಕೆಯಾಗಿ ರಾಷ್ಟ್ರ ಮಟ್ಟಕ್ಕೆ ದೆಹಲಿಯವರೆಗೂ ಹೋಗಿ ಬಂದೆ. ಎಂಟನೇ ತರಗತಿಗೆ ಬಂದಾಗ ನನ್ನ ಬಿಡಿಬಿಡಿ ಲಲಿತ ಪ್ರಬಂಧಗಳನ್ನೆಲ್ಲ `ಒಂದು ಚಂದ್ರನ ತುಂಡು’ ಪುಸ್ತಕವಾಗಿ ಪ್ರಕಟಿಸಿದ್ದಾಯ್ತು.

ಆನಂತರ ಒಂಬತ್ತನೇ ತರಗತಿಯ ರಜೆಯಲ್ಲಿ `ಕಾಡ ಹಾದಿಯ ಹೂಗಳು’ ಕಾದಂಬರಿ ಬರೆದೆ. ಈಗ ಕೊಂಕಣಿ ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಎರಡು ಮೂರು ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದೇನೆ. ಹತ್ತನೇ ತರಗತಿಯಲ್ಲಿ ಡಿಸ್ಟಿಂಕ್ಶನ್‌ನಲ್ಲಿ ಪಾಸಾಗಿ ತೀರ್ಥಹಳ್ಳಿಯ ಸರ್ಕಾರಿ  ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗ  ಆಯ್ಕೆ ಮಾಡಿಕೊಂಡು ಇದೀಗ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಸಹ ಡಿಸ್ಟಿಂಕ್ಶನ್‌ನಲ್ಲಿ ಪಾಸಾಗಿರುತ್ತೇನೆ.

ಸಾಹಿತ್ಯಾಸಕ್ತಿಗೆ ಕಾರಣ

ನಾನು ಹುಟ್ಟಿದಾಗಿನಿಂದ ಯು.ಕೆ.ಜಿ.ಯ ತನಕ ನಮ್ಮಜ್ಜಿಯ ಮನೆಯಲ್ಲೇ ಇದ್ದೆ. ನಮ್ಮ ಅಜ್ಜಿ ಅಜ್ಜ ಒಳ್ಳೆ ಕೊಂಕಣಿ ಜಾನಪದ ಹಾಡು, ಕಥೆಗಳನ್ನೂ ಹೇಳುತ್ತಿದ್ದರು. ಕಥೆ ಕೇಳದೆ ಊಟ ನಿದ್ದೆ ಏನೂ ಮಾಡ್ತಿರಲಿಲ್ಲ. ನಮ್ಮ ಅಜ್ಜ ತುಂಬ ಹಾಸ್ಯದ ಕಥೆ ಹೇಳುತ್ತಿದ್ದರು. ನಮ್ಮ ಅಜ್ಜಿ ಹಾಗಲ್ಲ ಅವರು ಭಾರೀ ಸೆಂಟಿಮೆಂಟ್ಸ್ ಇರುವ ಮನ ಕಲಕುವ ಕಥೆಗಳನ್ನು ಕಣ್ಣಲ್ಲಿ ನೀರು ಧಾರೆಯಾಗಿ ಇಳಿಯಬೇಕು ಹಾಗೆ ವರ್ಣಿಸುತ್ತಾ ಹೇಳುತ್ತಿದ್ದರು.

ನಮ್ಮ ಅಜ್ಜನಿಗೆ ಮಲೆನಾಡಿನ ಇಂಚಿಂಚೂ ಗೊತ್ತಿತ್ತು. ಅವರೊಂದು ಅನುಭವದ ಮೂಟೆ. ಅದನ್ನೆಲ್ಲಾ ಹೇಳುತ್ತಾ ಇದ್ದರು. ಇದನ್ನೆಲ್ಲಾ ಕೇಳುತ್ತಾ ನನ್ನ ಒಳಗೆ ಒಂದು ಕಲ್ಪನಾ ಲೋಕ ಅರಳುತ್ತಿತ್ತು. ನನಗೆ ಹಾಡುಗಳು ಇಷ್ಟ. ನನಗೆ ನಾನೇ ಏನೇನೋ ಕಥೆ ಕಟ್ಟಿ ಹಾಡಿಕೊಳ್ಳೋದು ಮಾಡುತ್ತಿದ್ದೆ.  ಮುಂದೆ ಒಂದನೇ ತರಗತಿಗೆ ಸೇರಲು ಅಮ್ಮ ಅಪ್ಪನ ಜೊತೆ ಬಂದಾಗ ಅಲ್ಲಿ ಅಜ್ಜ ಅಜ್ಜಿ ಹೇಳುವ ಕಥೆಗಳು ಇಲ್ಲ. ಅದಕ್ಕೇ ಅಕ್ಕನಿಗೆ ಅಂತ ತರಿಸುತ್ತಿದ್ದ ಕಥೆ ಪುಸ್ತಕಗಳು, ನಿಯತಕಾಲಿಕೆಗಳು ಇದನ್ನೆಲ್ಲ ಓದುವ ಗೀಳು ಹಿಡಿಸಿಕೊಂಡೆ. ಮೌನ ಪ್ರಿಯವಾಯಿತು. ಮೌನದೊಳಗೆ ಏನೇನೋ ಮಾತು, ಮತ್ತೆ ಅದನ್ನು ಅಕ್ಷರಕ್ಕೆ ಇಳಿಸುವುದು ಇದೇ ಕೆಲಸವಾಯ್ತು. ಅಮ್ಮನಿಗೆ ಅಲ್ಲಿ ಇಲ್ಲಿ ನಾನು ಗೀಚಿದ್ದ ಕವಿತೆಗಳು ಸಿಕ್ಕಿ ಎಲ್ಲವನ್ನೂ ಜೋಡಿಸಿ ಇಟ್ಟುಕೊಳ್ಳೋಕೆ ಪ್ರಾರಂಭಿಸಿದರು. ನಾನು ಒಂದನೇ ತರಗತಿ ಮುಗಿಸಿದ ರಜೆಯಲ್ಲಿ, ತೀರ್ಥಹಳ್ಳಿ ತಾಲ್ಲೂಕು ಸಾಹಿತ್ಯ ಪರಿಷತ್ತಿನಿಂದ ಒಂದು ಸಂತ ಕವಿಗೋಷ್ಠಿ ಏರ್ಪಡಿಸಿದ್ದರು. ಅಲ್ಲಿ ನನಗೆ ಕವಿತೆ ಓದುವ ಅವಕಾಶ ದೊರೆಯಿತು. ಹೊರಲೋಕಕ್ಕೆ ನಾನಿಟ್ಟ ಮೊದಲ ಹೆಜ್ಜೆ ಇದಾಗಿತ್ತು. ಎಲ್ಲರೂ ನನ್ನ ಕವಿತೆ ಮೆಚ್ಚಿ ಪ್ರೋತ್ಸಾಹಿಸಿದರು.

ತಂದೆ ತಾಯಿ ಬೆಂಬಲ

ನಮ್ಮ ಮನೆಯಲ್ಲಿ ಯಾರೂ ಸಾಹಿತಿಗಳಿಲ್ಲ. ಹಾಗಾಗಿ ಏನು ಮಾಡಿದರೂ ಮೊದಲು ಬೈಯೋದೇ. ಆಮೇಲೆ ಯಾರಾದರೂ ಮನೆಗೆ ಬಂದರು ನನ್ನನ್ನು ಹೊಗಳಿದ್ದೇ ನನ್ನ ಅಮ್ಮ ಅಪ್ಪ  ಮೆತ್ತಗಾಗಿ ನಿಧಾನಕ್ಕೆ `ನೀನು ಬರಿ ಓದು, ಅಂದ್ರೆ ಶಾಲೆ ಪಾಠ ಮೊದಲು. ಇದೆಲ್ಲ ಆಮೇಲೆ,’ ಅನ್ನೋರು.  ಆಮೇಲಾಮೇಲೆ ಪತ್ರಿಕೆಗಳಲ್ಲಿ ನನ್ನ ಹೆಸರು ಬರತೊಡಗಿದ್ದೇ ಹೆಮ್ಮೆಪಡತೊಡಗಿದರು. ಆದರೆ ಬಹಳ ಜನ ನನಗೆ “ಇದು ನೀನೇ ಬರೆದಿದ್ದಾ? ನಿಮ್ಮ ಅಪ್ಪ ಅಮ್ಮ ಬರೆದು ಕೊಡ್ತಾರಾ?” ಅಂತೆಲ್ಲ ಕೇಳುವಾಗ ನಮ್ಮಮ್ಮ ಸಿಟ್ಟು ಮಾಡಿಕೊಂಡು ಅಳುತ್ತಿದ್ದರು, ಮತ್ತೆ ಸಮಾಧಾನ ಮಾಡಿಕೊಳ್ಳುತ್ತಿದ್ದರು. ಇಷ್ಟಾದ್ರೂ ಎಷ್ಟೇ ಕಷ್ಟವಾದರೂ ಸಾಹಿತ್ಯದ ಕಾರ್ಯಕ್ರಮಗಳಿಗೆ, ನನಗೆ ಕವಿತೆ ಬರೆಯೋದಕ್ಕೆ ಪ್ರೇರಣೆ ಸಿಗುವ ಜಾಗಗಳಿಗೆ ಕರೆದುಕೊಂಡು ಹೋಗೋದು, ಬೇಕಾದ ಪುಸ್ತಕಗಳನ್ನು ತರಿಸಿಕೊಡೋದು ಸಹ ಮಾಡುತ್ತಿದ್ದರು. ಈಗ ಪರಿಸ್ಥಿತಿ ಸುಧಾರಿಸಿದೆ. ಆದರೂ ಅಪ್ಪ ಅಮ್ಮ ತಮ್ಮ ಮಗಳು ಇಷ್ಟೆಲ್ಲ ಮಾಡಿದ್ದಾಳೆ ಅಂತ ಯಾವತ್ತೂ ಬೀಗಿದ್ದೇ ಇಲ್ಲ. ಖುಷಿ ನೋವು ಏನಿದ್ರೂ ಒಳಗೇ ಅಡಗಿಸಿಕೊಳ್ಳುತ್ತಾರೆ.

ಶಾಲೆ, ಕಾಲೇಜು, ಮೇಷ್ಟ್ರು ಇತ್ಯಾದಿ

ನಾನು ಯಾವಾಗಲೂ ಶಾಲೆಯಲ್ಲಿ ನಾನೊಬ್ಬ ಸಾಹಿತ್ಯಾಸಕ್ತೆ ಅಂತ ತೋರಿಸಿಕೊಳ್ಳಲು ಹೋಗೋದೇ ಇಲ್ಲ. ಎಲ್ಲ  ವಿದ್ಯಾರ್ಥಿಗಳ ಜೊತೆ ಅವರಂತೆ ಸಿಂಪಲ್ ಆಗಿ ಇರುತ್ತೇನೆ. ನನ್ನ ತಂದೆ ತಾಯಿ ನನ್ನನ್ನು ಅಡ್ಮಿಷನ್‌ ಮಾಡಿಸುವಾಗಲೇ ಶಾಲೆಯ  ಮುಖ್ಯೋಪಾಧ್ಯಾಯರ ಹತ್ತಿರ `ನಮ್ಮ ಮಗಳನ್ನು ಎಲ್ಲ ಮಕ್ಕಳ ತರಹ ಸಹಜವಾಗಿ ನೋಡಿಕೊಳ್ಳಿ. ಅವಳನ್ನು ತರಗತಿಯಲ್ಲಿ ಹೊಗಳೋದು, ಇತರ ಮಕ್ಕಳನ್ನು ಇವಳ ಜೊತೆ ಹೋಲಿಸಿ ಮಾತಾಡೋದು ಮಾಡೋದ್ರಿಂದ ಇತರ ಮಕ್ಕಳಿಗೆ ಕೀಳರಿಮೆ ಬರುವಂತಾಗಬಾರದು. ನಮ್ಮ ಮಗಳಿಗೂ ಅಹಂಕಾರ ಮೂಡುವ ಹಾಗಾಗಬಾರದು,’ ಅಂತ ಹೇಳುತ್ತಿದ್ದರು. ಶಾಲೆಯಲ್ಲಿ ನನ್ನ ಸಹಪಾಠಿಗಳು, ಶಿಕ್ಷಕರು ಎಲ್ಲರೂ ನನ್ನನ್ನು ತುಂಬ ಪ್ರೀತಿಸುತ್ತಿದ್ದರು. ಶಾಲೆ, ಕಾಲೇಜಲ್ಲಿ ಭಾಷಣ ಮುಂತಾದ ಜವಾಬ್ದಾರಿಗಳನ್ನು ಕೊಡುತ್ತಿದ್ದು, ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆ ಇರಲಿ ನಮ್ಮ ವಿತಾಶಾ ಇದ್ದಾಳಲ್ಲಾ ಅಂತ ಆ ಕೆಲಸ ನನಗೇ ವಹಿಸುತ್ತಿದ್ದರು. ಸರ್ಕಾರಿ ಶಾಲೆಗಳಲ್ಲಿ ಓದಿದ್ದರಿಂದ ಅಲ್ಲಿನ ಶಿಕ್ಷಕರ ಗಾಢ ಪ್ರಭಾವ ನನ್ನ ಮೇಲಾಗಿದೆ.

ಕಾದಂಬರಿ ಕುರಿತು

ನಾನು ತೀರಾ ಸಣ್ಣ ವಯಸ್ಸಿನಲ್ಲೇ ತೇಜಸ್ವಿಯವರು ಬರೆದು, ಅನುವಾದಿಸಿದ ಬಹುತೇಕ ಎಲ್ಲಾ ಕೃತಿಗಳು, ಕುವೆಂಪು ಅವರ ಎರಡೂ ಕಾದಂಬರಿಗಳು, ಶಿವರಾಮ ಕಾರಂತರ ಬೆಟ್ಟದ ಜೀವ, ಮೂಕಜ್ಜಿಯ ಕನಸುಗಳು, ಕುಡಿಯವರ ಕೂಸು, ಸರಸಮ್ಮನ ಸಮಾಧಿ, ಆರ್‌.ಕೆ. ನಾರಾಯಣ್‌ ಅವರ ಸ್ವಾಮಿ ಅಂಡ್‌ ಹಿಸ್‌ ಫ್ರೆಂಡ್ಸ್, ಜಪಾನಿನ ತೆತ್ಸುಕೋ, ಕೊರಿಯಾನಾಗಿಯ ತೊತ್ತೋಚಾನ್‌, ರಸ್ಕಿನ್‌ ಬಾಂಡ್‌ ಇವರ ಬಹುತೇಕ ಎಲ್ಲ ಕೃತಿಗಳು… ಹೀಗೆ ಭಾರತೀಯ ಪಾಶ್ಚಾತ್ಯ ದೇಶಗಳ ಖ್ಯಾತನಾಮರ ಅನೇಕ ಕೃತಿಗಳನ್ನು ಓದಿದ್ದೆ.

ಹಾಗಾಗಿ ದೊಡ್ಡ ಕಾದಂಬರಿ ಬರೀಬೇಕು ಅನ್ನೋ ಹುಚ್ಚು ತಲೆಗೆ ಹತ್ತಿ ಏನೇನೋ ಒಂದಷ್ಟು ಬರೆಯೋದು ಎರಡು ಮೂರು ಅಧ್ಯಾಯ ಮಾಡಿ ಕೈಬಿಡೋದು ಹೀಗೆಯೇ ಆಗುತ್ತಿತ್ತು. ನಮ್ಮ ಅಜ್ಜ ಹೇಳುತ್ತಿದ್ದ ಮಲೆನಾಡಿನ ಅತ್ಯಂತ ಕುತೂಹಲಕಾರಿ ಅನುಭವಗಳನ್ನು ಪೋಣಿಸಿ ಹೇಗಾದ್ರೂ ಕಾದಂಬರಿ ಬರೆದು ಅದರಲ್ಲಿ ಹಿಡಿದಿಡಬೇಕು ಅಂತ ಹಟ. ಅದಕ್ಕೆ ಈ ಸರ್ಕಾರಿ ಶಾಲೆಯ ವಾತಾವರಣ ನನಗೆ ಇನ್ನಷ್ಟು ಪೂರಕವಾಗಿತ್ತು ಅನಿಸುತ್ತೆ. ಒಟ್ಟಿನಲ್ಲಿ  `ಹುಚ್ಚು ಬಳ್ಳಿಯ ಹಾದಿಯಲ್ಲಿ’ ಕಾದಂಬರಿ ರಚಿಸೋದು, ಅಧ್ಯಾಯಗಳನ್ನು ಹೀಗೆಯೇ ವಿಂಗಡಿಸಬೇಕು, ಇಂತಿಂಥ ಸಂಗತಿಗಳನ್ನು ಅದರಲ್ಲಿ ತರಲೇಬೇಕು ಅಂತೆಲ್ಲ ಅಂದುಕೊಂಡು ತೀರ್ಥಹಳ್ಳಿಯ ಸುತ್ತಮುತ್ತಲಿನ ಕಾಡು, ಹಳ್ಳಿ ಎಲ್ಲ ಸುತ್ತುಹಾಕಿ ಬಂದಿದ್ದಾಗಿತ್ತು. ಬರೆಯಲು ಕೂತಾಗೆಲ್ಲ ಸಮಯಾಭಾವದ ಏನೇನೋ ಅಡಚಣೆಗಳು. ಹೀಗಿರುವಾಗ ನನ್ನ `ಒಂದು ಚಂದ್ರನ ತುಂಡು’ ಲಲಿತ ಪ್ರಬಂಧ ಓದಿದ ಪ್ರೊ. ಎಲ್.ಎನ್‌. ಮುಕುಂದರಾಜ್‌ರವರು, ಮುದ್ದು ಈ ನಿನ್ನ ಸರ್ಕಾರಿ ಶಾಲೆಯ ಅನುಭವಗಳನ್ನು ಒಂದು ಕಾದಂಬರಿಯಾಗಿ ಬರೆದುಕೊಡ್ತೀಯಾ? ಚೆನ್ನಾಗಿದ್ದರೆ ಸಿನಿಮಾ ಮಾಡ್ತೇವೆ ಅಂದರು. ಆಗ ಇದೇ `ಹುಚ್ಚುಬಳ್ಳಿಯ ಹಾದಿಯಲ್ಲಿ’ ಶೀರ್ಷಿಕೆಯನ್ನು ಬದಲಿಸಿ ಕಥೆಯನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡು `ಕಾಡ ಹಾದಿಯ ಹೂಗಳು’ ಕಾದಂಬರಿ ಬರೆದೆ. ಮುಂದೆ ಅದು ಅದೇ ಹೆಸರಿನಲ್ಲಿ ಸಿನಿಮಾ ಆಯ್ತು.

ನನ್ನ ಮಟ್ಟಿಗೆ ಒಳ್ಳೆ ಕೃತಿ

ನನ್ನ ಮಟ್ಟಿಗೆ ಒಳ್ಳೆ ಕೃತಿ ಎಂದರೆ ಅದು ಮಾನವೀಯತೆ, ಸಮಾನತೆ, ಸಾಮರಸ್ಯ, ಪ್ರೀತಿ ಇಂತಹ ಜೀವನ ಮೌಲ್ಯಗಳನ್ನು ಎತ್ತಿಹಿಡಿಯುವಂಥದ್ದಾಗಿರಬೇಕು. ಒಂದು ಕೃತಿ ನಮ್ಮ ಅರಿವನ್ನು ವಿಸ್ತಾರಗೊಳಿಸುವಂತಿರಬೇಕು. ಕತ್ತಲಿಂದ ಬೆಳಕಿನ ಕಡೆ, ಹಿಂದಿನಿಂದ ಮುಂದಕ್ಕೆ ಕರೆದುಕೊಂಡು ಹೋಗುವಂಥದ್ದಾಗಿರಬೇಕು. ಅದು ಹಳೆಯ ಹುಣ್ಣುಗಳನ್ನು ಕೆದಕಿ ಇಂದಿನ ಹಾಗೂ ಮುಂದಿನ ಬಾಳಿನ ಗ್ಯಾಂಗ್ರಿನ್‌ ಆಗಿಸುವಂತಿರಬಾರದು. ಸಾಮಾಜಿಕ ನ್ಯಾಯ, ನೆಲ, ಜಲ, ನಾಡು ನುಡಿಯ ಪ್ರೇಮ, ಮನುಜಕುಲದ ಏಳಿಗೆಯನ್ನೂ ಎಲ್ಲಕ್ಕಿಂತ ಮುಖ್ಯವಾಗಿ ಆ ಕೃತಿ ನಮಗೆ ಪ್ರಶ್ನಿಸುವ ಮನೋಭಾವವನ್ನೂ, ವೈಜ್ಞಾನಿಕ ನೋಟವನ್ನೂ ಕಲಿಸಿ ಬೆಳೆಸುವಂಥದ್ದಿರಬೇಕು. ನನಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾಗೋದು ಕುವೆಂಪು ಕಾವ್ಯ. ಇಲ್ಲಿ `ಓ ನನ್ನ ಚೇತನ ಆಗು ನೀ ಅನಿಕೇತನ’ ಎನ್ನುವ ಮೂಲಕ ವಿಶ್ವಮಾನವ ಸಂದೇಶವನ್ನು ಸಾರುತ್ತಾರೆ. ಈ `ಮನುಜ ಮತ ವಿಶ್ವ ಪಥ’ ಅನ್ನುವ ವಿಶ್ವಮಾನವ ಸಂದೇಶವೇ ಅತ್ಯಂತ ಮಹೋನ್ನತವಾದದ್ದು, ಅವರು `ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ,’ ಅಂತ ಕರೆ ಕೊಡುತ್ತಾರೆ. `ಬಾರಿಸು ಕನ್ನಡ ಡಿಂಡಿಮ’ ಅಂತ ಕನ್ನಡ ಪ್ರೇಮವನ್ನು ಜಾಗೃತಗೊಳಿಸುತ್ತಾರೆ. ನಮ್ಮ ನಾಡಗೀತೆಯನ್ನು ಅವರದೆಷ್ಟು ಪರಿಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ! ನಮ್ಮ ದೇಶದ ಬೆನ್ನೆಲುಬು ಅಂತ ಕರೆಸಿಕೊಳ್ಳುವ ಅನ್ನದಾತನ ಕುರಿತು `ಉಳುವ ಯೋಗಿಯ ನೋಡಲ್ಲಿ’ ಎಂಬ ಅದ್ಭುತ ಗೀತೆಯದು. ಹೀಗೆ ಅವರ ಯಾವುದೇ ಕವಿತೆಯನ್ನು  ತೆಗೆದುಕೊಂಡರೂ ನಮ್ಮ ವೈಚಾರಿಕತೆಯನ್ನು ಉದ್ದೀಪಿಸುವ ಕಾವ್ಯ ಅವರದು. ಅಷ್ಟೇ ಅಲ್ಲ, ಅವರ ಕಾವ್ಯ ಕಟ್ಟುವ ಶೈಲಿ, ಸಮೃದ್ಧ ಭಾಷಾ ಬಳಕೆ, ಪ್ರಕೃತಿಯ ವೈಭವದ ವರ್ಣನೆ ಹೀಗೆ ಎಲ್ಲಾ ದೃಷ್ಟಿಯಿಂದಲೂ ನನಗೆ ಕುವೆಂಪು ಕಾವ್ಯ ಬಹಳ ಉನ್ನತ ಮಟ್ಟದ್ದು ಎನಿಸುತ್ತದೆ.

ಇಂದಿನ ಕನ್ನಡ ಸಾಹಿತ್ಯ ಮತ್ತು `ಇಸಂ’ಗಳು ಇಂದು ಸಾಕಷ್ಟು ಸಂಖ್ಯೆಯಲ್ಲಿ ಕೃತಿಗಳ ರಚನೆಯಾಗುತ್ತಿವೆ. ಪುಸ್ತಕ ವ್ಯಾಪಾರ ಜೋರಾಗಿಯೇ ಇದೆ. ಸಾಮಾಜಿಕ ಜಾಲತಾಣಗಳೂ ಮುದ್ರಣ ಮಾಧ್ಯಮದಿಂದ ಅಸಡ್ಡೆಗೆ, ನಿರ್ಲಕ್ಷ್ಯಕ್ಕೆ ಗುರಿಯಾದ ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆಗಳಾಗಿವೆ. ದಿನೇ ದಿನೇ ಈ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವವರ ಕೈಗಳು ಮಾಗುತ್ತಿವೆ. ಅಲ್ಲಿ ನಡೆಯುವ ಸಾಕಷ್ಟು ವೈಚಾರಿಕ ಚರ್ಚೆಗಳು ಅರಿವಿನ ವಿಸ್ತಾರವನ್ನು ಹೆಚ್ಚಿಸುತ್ತಿವೆ. ಒಂದು ಪತ್ರಿಕೆಗೆ ಕವಿತೆಯನ್ನು ಕಳಿಸಿ ತಿಂಗಳುಗಟ್ಟಲೆ ಕಾಯುತ್ತ ಕೂತು ಪ್ರಕಟವಾಗದ್ದಿದ್ದಾಗ ನೊಂದುಕೊಳ್ಳುವ ಪರಿಸ್ಥಿತಿ ಈಗಿಲ್ಲ. ಈ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬರಹ ಹಾಕಿ ತಕ್ಷಣಕ್ಕೇ ತನ್ನ ವಿಚಾರವನ್ನು ತಲುಪಿಸಿ ಅದಕ್ಕೆ ತಕ್ಕ ಪ್ರತಿಕ್ರಿಯೆ ಪಡೆಯುವ ಅವಕಾಶದಿಂದ ಇನ್ನಷ್ಟು ಉಮೇದಿನಿಂದ ಬರೆದುಕೊಳ್ಳುವುದು ಕಾಣುತ್ತಿದೆ.  ಸಾಹಿತ್ಯ ಲೋಕದಲ್ಲಿ `ಇಸಂ’ಗಳು ಹೊಸದಾಗಿ ಹುಟ್ಟಿ ಕೊಂಡಿದ್ದೇನಲ್ಲ. ಅವು ಮೊದಲಿನಿಂದಲೇ ಇದ್ದ. ಈಗ ಅವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ. ಈ `ಇಸಂ’ಗಳು ಪಂಗಡಗಳಾಗಿ ನಮ್ಮನ್ನು ಒಡೆಯುತ್ತಿವೆ. ಆದರೆ ಈಗ ನಮ್ಮ ದೇಶದ ಸಂವಿಧಾನ, ಕಾನೂನು, ಏಕತೆ, ಸಮಾನತೆ, ಸೌಹಾರ್ದ, ದೂರದೃಷ್ಟಿ, ಸಾಮಾಜಿಕ ನ್ಯಾಯ, ದೇಶದ ಏಳಿಗೆ ಇಂಥ ಮೌಲ್ಯಗಳನ್ನು ಎದುರಿಗಿಟ್ಟುಕೊಂಡು ಈ `ಇಸಂ’ಗಳನ್ನು ತಿಳಿಗೊಳಿಸಿ ಒಂದುಗೂಡಿಸುವ ಕೆಲಸವಾಗಬೇಕಿದೆ. ಹೀಗೆ ಒಂದುಗೂಡಿ ಈ ದುರಿತ ಕಾಲವನ್ನು ಎದುರಿಸುವ ಬಗೆಯನ್ನು ಸಾಹಿತಿಗಳಾದರು ಸಮಾಜಕ್ಕೆ  ಮಾರ್ಗದರ್ಶನ ಮಾಡಬೇಕಾಗಿದೆ.

ರೋಲ್ ಮಾಡೆಲ್

ನನಗೆ ಈ ರೋಲ್ ‌ಮಾಡೆಲ್ ‌ಅನ್ನುವ ಪದಗಳಲ್ಲಿ ಹೆಚ್ಚು ನಂಬಿಕೆ ಇಲ್ಲ. ಒಬ್ಬರಿಗೆ ಒಬ್ಬರೇ ರೋಲ್ ‌ಮಾಡೆಲ್ ‌ಎಂದು ಹೇಳುವುದೂ ಕಷ್ಟ. ನನಗೆ ಲಿಯೋ ಟಾಲ್‌ಸ್ಟಾಯ್‌, ಅಂಬೇಡ್ಕರ್‌, ಗಾಂಧೀಜಿ, ಕುವೆಂಪು, ಚೆಗಾರಾ, ಮದರ್‌ ಥೆರೇಸಾ, ಲಂಕೇಶ್‌, ತೇಜಸ್ವಿ ಇವರೆಲ್ಲಾ ಒಂದೊಂದು ಕಾರಣಕ್ಕೆ ಆದರ್ಶಪ್ರಾಯರಾಗಿ ಹತ್ತಿರಾದರು.

ಈಗಿನ ನನ್ನ ಬರವಣಿಗೆ

ಸಾಕಷ್ಟು ಪ್ರಕಟಿತ ಬಿಡಿ ಕಥೆ, ಕವಿತೆಗಳಿವೆ. ಸಮಯಾಭಾವದಿಂದ ಪುಸ್ತಕ ಪ್ರಕಟಣೆಗೆ ಕಳಿಸಲು ಸಾಧ್ಯವಾಗುತ್ತಿಲ್ಲ. ಶಿವಮೊಗ್ಗದ `ಎಚ್ಚರಿಕೆ’ ಎನ್ನುವ ಪತ್ರಿಕೆಗೆ ಸುಮಾರು 13 ತಿಂಗಳ ಕಾಲ ವಾರದ ಅಂಕಣ ಬರೆದೆ. ಈ ಅಂಕಣ ಬರಹಗಳನ್ನೆಲ್ಲ ಸಂಕಲನವಾಗಿ ತರಲು ಬಾಕಿ ಇದೆ. ನಾನು ಕೊಂಕಣಿ ಭಾಷೆಯಲ್ಲೂ ಬರೆಯುತ್ತೇನೆ. ಕೊಂಕಣಿಯ `ನಮಾನ್‌ ಬಾಳೋಕ್‌ ಜೆಜು’ ಪತ್ರಿಕೆಗೆ ಕಳೆದ ಎರಡು ವರ್ಷಗಳಿಂದ ಮಾಸಿಕ ಅಂಕಣ ಬರೆಯುತ್ತಾ ಇದ್ದೇನೆ. ಒಂದು ಕಾದಂಬರಿ ಬರೆದಾಗಿದೆ. ಪ್ರಕಟಣೆಗೆ ಕಳಿಸುವುದು ಬಾಕಿ ಇದೆ. ಮತ್ತೆ ಕೆಲವು ವೆಬ್‌ ಪತ್ರಿಕೆಗಳಿಗೆ ಆಗಾಗ ಬರೆಯುವುದೂ ಇದೆ.

ಯುವ ಬರಹಗಾರರಿಗೆ ಸಂದೇಶ

ಈಗಿರುವ ಯುವ ಬರಹಗಾರರಲ್ಲಿ ಬಹುಶಃ ನಾನೇ ಕಿರಿಯಳು. ಅವರೆಲ್ಲ ನನಗಿಂತ ಹೆಚ್ಚು ಸಾಧಿಸಿದರು, ಬಹಳ ಜವಾಬ್ದಾರಿಯಿಂದ ನನಗಿಂತ ಚೆನ್ನಾಗಿ ಬರೆಯುತ್ತಾರೆ. ನನಗಿಂತ ಹೆಚ್ಚು ಒಳ್ಳೊಳ್ಳೆ ಸಂಗತಿಗಳನ್ನು ಚರ್ಚಿಸುತ್ತಾರೆ. ನಾನು ತಿಳಿದ ದೊಡ್ಡ ಸಂಖ್ಯೆಯ ಯುವ ಬರಹಗಾರರು ಸರಿಯಾದ ದಿಸೆಯಲ್ಲಿ ಯೋಚಿಸುತ್ತಿದ್ದಾರೆ. ಅವರು ಸಮರ್ಥವಾಗಿ ದೇಶ ಕಟ್ಟುವ ಹಾಗೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ  ಈಗಾಗಲೇ ತೊಡಗಿದ್ದಾರೆ. ನಾನು ಅವರಿಗೆಲ್ಲ ಶುಭ ಹಾರೈಸುತ್ತೇನೆ. ಅವರಿಗೆಲ್ಲ ಸಂದೇಶ ಕೊಡುವಷ್ಟು ದೊಡ್ಡ ವ್ಯಕ್ತಿ ನಾನು ಅಲ್ಲಿಂದಲೇ ನನ್ನ ಭಾವನೆ.

ರಾಘವೇಂದ್ರ ಅಡಿಗ ಎಚ್ಚೆನ್

ಪ್ರಕಟಿಸಿದ ಕೃತಿಗಳು

ಹೂ ಗೊಂಚಲು (ಕಥೆ ಮತ್ತು ಕವನಗಳು 2006).

ಕಾನನ ಕಲರವ (ಕನಗಳು 2008). ಎಷ್ಟು ಬಣ್ಣದ ಇರುಳು! (ಕವನಗಳು 2010). ಒಂದು ಚಂದ್ರನ ತುಂಡು (ಲಲಿತ ಪ್ರಬಂಧಗಳು 2011). ಕಾಡ ಹಾದಿಯ ಹೂಗಳು (ಕಾದಂಬರಿ 2013) (ಪ್ರೊ. ಎಲ್.ಎಸ್‌. ಮುಕುಂದರಾಜ್‌ ನಿರ್ದೇಶನದಲ್ಲಿ ಈ ಕಾದಂಬರಿ ಆಧಾರಿತ `ಕಾಡ ಹಾದಿಯ ಹೂ’ ಎಂಬ ಚಲನಚಿತ್ರ ನಿರ್ಮಾಣವಾಗಿದೆ).

ಹೊರಡಿಸುತ್ತಿದ್ದ ಪತ್ರಿಕೆ

ಮಂದಾನಿಲ ಮಾಸ ಪತ್ರಿಕೆ (2008ರಲ್ಲಿ ಆರಂಭವಾಗಿ 5 ವರ್ಷಗಳ ಕಾಲ ನಡೆಸಿದ್ದು)

ಪ್ರಶಸ್ತಿಗಳು

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ವಾಪಸ್‌ ಮಾಡಿದ ಪ್ರಶಸ್ತಿ). ಅರಳು ಪ್ರಶಸ್ತಿ (ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು). ಕೇರಳ ಕಾಸರಗೋಡು ಸಾಂಸ್ಕೃತಿಕ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ, ಅಡ್ವೈಸರ್‌ ಪ್ರಶಸ್ತಿ (ಮಂಡ್ಯ ಅಡ್ವೈಸರ್‌ ಪತ್ರಿಕೆಯ ಪ್ರಶಸ್ತಿ).

ಕಾವ್ಯಾನಂದ ಪುರಸ್ಕಾರ (ಕನ್ನಡ ಸಾಹಿತ್ಯ ಸಂರ್ಧಕ ಟ್ರಸ್ಟ್, ಬೆಂಗಳೂರು).

ಬೇಂದ್ರೆ ಪುಸ್ತಕ ಬಹುಮಾನ (ಬೇಂದ್ರೆ ಪ್ರತಿಷ್ಠಾನ ಧಾರವಾಡ), ಶಾರದಾ ಆರ್‌. ರಾವ್ ದತ್ತಿ ಪ್ರಶಸ್ತಿ (ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು), ವಿದ್ಯಾ ಸಾಗರ ಬಾಲ ಪುರಸ್ಕಾರ (ಸಂಧ್ಯಾ ಸಾಹಿತ್ಯ ವೇದಿಕೆ, ಗುಲ್ಬರ್ಗಾ) ಕನ್ನಡಶ್ರೀ ಪ್ರಶಸ್ತಿ (ಜನರಲ್ ನಾಲೆಜ್‌ಅಕಾಡೆಮಿ ವತಿಯಿಂದ 2013ರಲ್ಲಿ ಪ್ರದಾನ ಮಾಡಿದ್ದು), 2014ರ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ `ಜ್ಯೋತಿ ಪುರಸ್ಕಾರ’ ಯುವ ಪ್ರಶಸ್ತಿ, ಸಾಧಾರಣ ಪ್ರತಿಭೆ ಪ್ರಶಸ್ತಿ 2008ರಲ್ಲಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಪ್ರಶಸ್ತಿ).

Tags:
COMMENT