ಮಾನವ ನಿರ್ಮಿತ ಸೆಂಟೋಸ ದ್ವೀಪ ಮನರಂಜನೆಗಳ ಮಹಾಪೂರವನ್ನೇ ಹೊಂದಿದೆ. ಸಿಂಗಪೂರಿನ ಚಿಕ್ಕ ಸೇತುವೆಯನ್ನು ದಾಟಿದರೆ ಸೆಂಟೋಸ ತಲುಪಿಯೇ ಬಿಡುತ್ತೇವೆ. ವಿಶಾಲವಾದ ಆ ದ್ವೀಪದಲ್ಲಿ ಬರಿ ಮನರಂಜನೆಯೇ, ಕುಟುಂಬ ಸಮೇತ ಹೋದಾಗ ಎಲ್ಲರಿಗೂ ಆನಂದ ನೀಡುವುದರಲ್ಲಿ ಎರಡು ಮಾತಿಲ್ಲ. ಮೊದಲಿಗೆ ನಾವು ಅಲ್ಲಿನ ಮುಖ್ಯ ಮನರಂಜನೆಯಾದ ಕ್ಯಾಸಿನೋವನ್ನು ಹಾದುಹೋದೆವು. 15,000 ಚದರ ಮೀಟರ್‌ಗಳಷ್ಟು ಸ್ಥಳವನ್ನು ಆಕ್ರಮಿಸಿದ ಕ್ಯಾಸಿನೋ ಒಳಗೆ ಝಗಝಗಿಸುವ ದೀಪಗಳು, ಮನಮೋಹಕ ವಿನ್ಯಾಸದ ಒಳಾಂಗಣದಲ್ಲಿ ಆವೃತವಾಗಿದ್ದ ಜೂಜಿನ ಮೆಷಿನ್‌ಗಳ ಮುಂದೆ ಜನ ಕುಳಿತು ತಮ್ಮ ಅದೃಷ್ಟ ಪರೀಕ್ಷಿಸುತ್ತಿದ್ದರು. ಹೊಳೆಯುವ ಬೆಳಕು ಕಣ್ಣನ್ನು ಚುಚ್ಚುತ್ತಿತ್ತು. ಇದು ವಿಶ್ವದ ಅತ್ಯಂತ ವೈಭಯುತ ಕ್ಯಾಸಿನೋ ಆಗಿದ್ದು, ಉನ್ನತ ಗುಣಮಟ್ಟದ್ದಾಗಿದೆಯೆಂದು ಅವರ ಅನಿಸಿಕೆ. ಏನೇ ಆಗಲಿ ಜೂಜಾಡಲು ಮನಸಿರಬೇಕು, ಜೇಬು ತುಂಬ ಹಣವಿರಬೇಕು. ಅದನ್ನು ಕಳೆದುಕೊಳ್ಳಲೂ ಸಿದ್ಧರಿರಬೇಕು. ಒಳಹೊಕ್ಕು ವಿವರವಾಗಿ ನೋಡುವ ಆಶೆ ಇದ್ದರೂ ನಮ್ಮ ಜೊತೆ ಮೊಮ್ಮಕ್ಕಳೂ ಇದ್ದು, ಅವರನ್ನು ಒಳಗೆ ಬಿಡಲಿಲ್ಲವಾದ್ದರಿಂದ ನಾವು ಹೊರಗಿನಿಂದ ಇಣುಕಿ ನೋಡಿದ್ದಷ್ಟೇ ಆಯಿತು.

ಅಲ್ಲಿಂದ ಮುಂದೆ ಸಾಗಿದಾಗ ಕಡಲಿನಲ್ಲಿ ಸಾಗುವ ಹಡಗಿನೊಳಗಿನ ಜೀವನವನ್ನು ಪ್ರತಿಬಿಂಬಿಸುವ ಚಲನಚಿತ್ರ ನೋಡಿದೆವು. ಹೊರಗೆ ಬಂದರೆ ವಿಭಿನ್ನ ದೇಶಗಳ ಕುಸುರಿ ಕೆಲಸದ ಪ್ರದರ್ಶನ ಕಂಡೆ. ಕೇರಳದ ಕ್ಯಾಲಿಕಟ್‌, ಬಂಗಾಲ, ಶ್ರೀಲಂಕಾ, ಮಸ್ಕಟ್‌ಇತ್ಯಾದಿ ದೇಶಗಳಲ್ಲಿನ ಕುಶಲ ಕಾರ್ಯಾಗಾರಗಳನ್ನು ಕಂಡೆವು.

ಅಂಡರ್ವಾಟರ್ವರ್ಲ್ಡ್ ಮುಂದೆ

ಸೆಂಟೋಸಾದ ಮುಖ್ಯ ಆಕರ್ಷಣೆ ಅಂಡರ್‌ ವಾಟರ್‌ ವರ್ಲ್ಡ್ ಅರ್ಥಾತ್‌ ಜಲಜೀವ ರಾಶಿಯನ್ನು ವಿವರವಾಗಿ ನೋಡಿದೆವು. ಒಂದಕ್ಕಿಂತ ಒಂದು ಚೆನ್ನ, ನೋಡುತ್ತಾ ನಿಂತರೆ ಮುಂದೆ ಸಾಗಲು ಮನಸ್ಸೇ ಬರುತ್ತಿರಲಿಲ್ಲ. ಆದರೆ ಮುಂದೆ ಸಾಗಿದಾಗ ಮತ್ತೂ ಚಂದದ, ದೊಡ್ಡ ಗಾತ್ರದ, ವಿಚಿತ್ರ, ವಿಭಿನ್ನ, ಜಲಚರಗಳನ್ನು ನೋಡಲು ಕಣ್ಣುಗಳೆರಡು ಸಾಲದು.

250 ಪ್ರಬೇಧದ 2500 ಜಾತಿಯ ಮೀನುಗಳನ್ನು ಹೊಂದಿರುವ ಈ ಅಕ್ವೇರಿಯಂ ಇಡೀ ಏಷ್ಯಾದ ಪ್ರಮುಖ ಮತ್ತು ಅತಿ ದೊಡ್ಡ ಅಕ್ವೇರಿಯಂಗಳಲ್ಲಿ ಮುಖ್ಯವೆನಿಸಿಕೊಂಡಿದೆ. ಎಷ್ಟೊಂದು ಜಲಚರಗಳು, ಬಣ್ಣ ಬಣ್ಣದ ಹೊಳೆಯುವ ಮೀನುಗಳನ್ನು ಕಂಡರೆ ಸಾಕೆ, ಮುಟ್ಟ ಬೇಕೆಂಬ ತವಕ ಎಲ್ಲರದು, ಅಂತಹರಿಗೆಂದೇ ಮುಟ್ಟಲನುವಾಗುವಂತಹ ವಿಭಾಗವಿತ್ತು. ಅಲ್ಲಿ ನೀವು ಮುಟ್ಟಿದರೆ ಜಾರುವ ಮೀನುಗಳನ್ನು ಸವರಿ ಆನಂದ ಪಡಬಹುದಿತ್ತು. ಮೊಮ್ಮಕ್ಕಳೆಲ್ಲಾ ಮೀನುಗಳನ್ನು ಮುಟ್ಟಿದ್ದೇ ಮುಟ್ಟಿದ್ದು. ನಕ್ಷತ್ರ ಮೀನು, ಸೀ ಕುಕುಂಬರ್‌, ನೀಲಿಯ ಆಕರ್ಷಕ ಚುಕ್ಕಿಗಳನ್ನು ಹೊಂದಿರುವ ಸ್ಟಿಂಗ್‌ರೇ. ಹೀಗೆ ಇನ್ನೂ ಅನೇಕ ಮೀನುಗಳನ್ನು ಮುಟ್ಟಿ ಆನಂದಿಸಬಹುದು.

ಅಲ್ಲಿಂದ ಪಕ್ಕಕ್ಕೆ ಬಂದರೆ ಶಾರ್ಕ್‌ಗಳಿಗೆ ಆಹಾರ ನೀಡುವ ತಾಣದಲ್ಲಿ ಮರಿ ಶಾರ್ಕ್‌ಗಳಿಗೆ ನೀವು ಆಹಾರ ನೀಡಬಹುದು. ಮತ್ತೊಂದು ಮುಖ್ಯ ವಿಭಾಗವೆಂದರೆ ಟರ್ಟಾಯ್ ಅರ್ಥಾತ್‌ ಆಮೆಗಳದು. ಇಲ್ಲಿ ವಿಭಿನ್ನ ಜಾತಿಯ ಆಮೆಗಳು ಕಾಣ ಸಿಗುತ್ತದೆ.

83 ಮೀ. ಉದ್ದದ ಅಂಡರ್‌ ವಾಟರ್‌ ಟನ್‌ ಅಂದರೆ ಸುತ್ತಲೂ ನೀರಿದ್ದು ಮಧ್ಯದ ಗಾಜಿನ ಕೊಳಿಯೊಳಗೆ ನಾವು ಹೋಗುತ್ತಿದ್ದರೆ ನಮ್ಮ ಸುತ್ತಲೂ ಜಲಚರಗಳು ನಲಿದಾಡುತ್ತಿದ್ದವು. ಪೂರ್ಣ ನೀರಿನೊಳಗೆ, ನೀರಿನ ಮಧ್ಯದಲ್ಲಿದ್ದಂತೆ ಭಾಸವಾಗುತ್ತಿತ್ತು. ಆ ಜಲಚರಗಳು ನಮ್ಮ ಸುತ್ತಲೂ ಅಕ್ಕಪಕ್ಕ ಓಡಾಡಿದಂತೆ ಭಾಸವಾಗುತ್ತಿತ್ತು. ಕೈಗೇ ಸಿಕ್ಕುವಷ್ಟು ಹತ್ತಿರವಿದ್ದವು. ಆದರೆ ನಮಗೂ ಅವುಗಳಿಗೂ ಪಾರದರ್ಶಕ ಗಾಜಿನ ಮರೆವೊಂದಿತ್ತು. ಹೀಗಾಗಿ ನೋಡಲು ಹತ್ತಿರವಿದ್ದರೂ ಕೈಗೆಟುಕಲಾರದ ಜೀವಿಗಳನ್ನು ಕಣ್ಣಿನಲ್ಲೇ ನೋಡಿ ಆನಂದಿಸಿದೆವು. ಈ ಗಾಜಿನ ಕೊಳಿಯೊಳಗಿನ ಪಯಣದಲ್ಲಿ ಅನೇಕ ಅಪರೂಪದ ಜಲಚರಗಳನ್ನು ನೋಡಬಹುದು. ಚೀನಾದ ಡ್ರಾಗನ್‌ನಂತೆಯೇ ಇವು ಡ್ರಾಗನ್‌ ಮೀನು, ವಿಭಿನ್ನ ರೀತಿಯ ಜೆಲ್ಲಿ  ಫಿಶ್‌, ಆಮೆಗಳು, ಬಲೆಯಲ್ಲಿ ನೇಯ್ದಂತಿರುವ ಏಡಿಗಳು, ಉಚ್ಚರಿಸಲು ಕಷ್ಟವೆನಿಸುವ ವಿಧ ವಿಧದ ಜಲಚರಗಳನ್ನು ಕಂಡಾಗ ನಮ್ಮ ಕಣ್ಣುಗಳು ಅಚ್ಚರಿಯಿಂದ ಅರಳದೆ ಇರದು. ಇಲ್ಲಿ ಒಳಗಿರುವ ತಂಪು ನೀಲಿ ನೀರಿನೊಳಗಿರುವ ಮೀನು ವಂಶಸ್ಥರನ್ನು ಕಂಡರೆ, ಹೊರಗೆ ಬಂದಮೇಲೆ ಡಾಲ್ಛಿನ್‌ ಮತ್ತು ಸೀಲ್‌ಗಳ ಆಟ ನೋಡಲು ಮತ್ತೂ ಚೆನ್ನ. ಡಾಲ್ಛಿನ್‌ಗಳ ಕಸರತ್ತನ್ನು ನೋಡಿದ ನಂತರ ಆಸೆಯೆನಿಸಿದರೆ ಅವುಗಳ ಜೊತೆ ನೀವು ಆಟಾಡಬಹುದು. ಅವುಗಳಿಗೆ ಆಹಾರ ನೀಡುವುದು ಮತ್ತಿತರ ಚಟುವಟಿಕೆಗಳಲ್ಲಿ ಗೈಡ್‌ನ ಸಹಕಾರದಿಂದ ಭಾಗವಹಿಸಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೀನುಗಳಿಂದ ನಿಮ್ಮ ಪಾದಗಳನ್ನು ಸ್ವಚ್ಛಗೊಳಿಸಿಕೊಳ್ಳಬಹುದು. ಅರ್ಥಾತ್‌ ಪೆಡಿಕ್ಯೂರ್‌ ಮತ್ತು ಪಾದಗಳಿಗೆ ಮಸಾಜ್‌ ಮಾಡಿಸಿಕೊಳ್ಳಬಹುದು.

ಲ್ಯೂಜ್ಮತ್ತು ಸ್ಕೈ ಲೈನ್ರೈಡ್

ಸೆಂಟೋಸಾದ ಮತ್ತೊಂದು ಮುಖ್ಯ ಆಕರ್ಷಣೆ ಎತ್ತರದ ಸ್ಥಳದಿಂದ ಲ್ಯೂಜ್‌ನಲ್ಲಿ ಜಾರುತ್ತಾ ಕೆಳಗಿಳಿಯುವುದು. ಮೂರು ಚಕ್ರದ ಸ್ವಯಂಚಾಲಿತ ಅರ್ಥಾತ್‌ ನೀವೇ ಡ್ರೈವ್ ‌ಮಾಡುವ ಬೂಟಿನಾಕಾರದ ಬೋಟಿನಂತಹ ವಾಹನದಲ್ಲಿ 650 ಮೀಟರ್‌ ಉದ್ದದ್ದ ದಾರಿಯನ್ನು ಎತ್ತರದಿಂದ ತಗ್ಗಿಗೆ ಸವೆಸುತ್ತಾ ನಿಮಗಿಷ್ಟ ಬಂದಂತೆ ಬೇಕಾದಲ್ಲಿ ವೇಗವಾಗಿ ಅಥವಾ ನಿಧಾನವಾಗಿ ಸಾಗಲನುವಾಗುವಂತಹ ಬ್ರೇಕ್‌ ಅನ್ನು ಬಳಸುತ್ತಾ ಅಕ್ಕಪಕ್ಕದ ಹಸಿರನ್ನು ಸವಿಯುತ್ತಾ  ಸೈಲೋಸೋ ಬೀಚ್‌ನ್ನು ತಲುಪಬಹುದು. ನಿಮಗೆ ಮತ್ತಷ್ಟು ಥ್ರಿಲ್ ಬೇಕೆನಿಸಿದರೆ ಹೆಚ್ಚಿನ ತಿರುವು ಮತ್ತು ಮೂಲೆಗಳನ್ನು ಹೊಂದಿರುವ 688 ಮೀಟರ್‌ಉದ್ದದ ಮತ್ತು ದೀಪಗಳಿಂದಾವೃತ ಮತ್ತೊಂದು ವಿಶೇಷ ಡ್ರಾಗನ್‌ ಟ್ರಯಲ್‌ನ್ನು ಸಹ ಮಾಡಬಹುದು. ಭೂಮಿಯಲ್ಲಿ ಜಾರುತ್ತಾ ಸಾಗಿದ ನಂತರ ಆಕಾಶದಲ್ಲಿ ಸ್ಕೈ ಲೈನ್‌ನಲ್ಲೂ ಸಾಗಲು ಅವಕಾಶವಿದೆ. ಒಟ್ಟಿನಲ್ಲಿ ವಿದೇಶ ಪ್ರವಾಸವೆಂದಾಗ ಯುವ ಜನತೆ ಬಯಸುವ ಮಹಾ ಪ್ಯಾಕ್ಟರ್‌ನ್ನು ಎಲ್ಲೆಡೆ ತುಂಬಿಸುತ್ತಾರೆ.

ಟೈಗರ್ಸ್ಕೈ ಟವರ್

ಸಿಂಗಪೂರ್‌ನ ಸಂಕೇತವಾದ ಈ ಆಕಾಶ ಗೋಪುರ ಐವತ್ತು ಅಂತಸ್ತುಗಳಿಗೆ ಸಮನವಾದ 131 ಮೀಟರ್‌ ಎತ್ತರದಲ್ಲಿದೆ. ವೀಕ್ಷಕರು ಒಂದು ಕೋಣೆಯ ಒಳಹೊಕ್ಕರೆ ನಿಧಾನವಾಗಿ ಎತ್ತರಕ್ಕೆ ಏರಿಸುತ್ತಾರೆ. ಏರುವಾಗ ಸ್ಥಳದ ಇತಿಹಾಸವನ್ನು ಕೇಳಬಹುದು. ಅಲ್ಲಿಂದ ಮೇಲೇರಿ ಅಲ್ಲೊಂದು ಸುತ್ತು ಹಾಕಿದಾಗ ಉತ್ತರಕ್ಕಿರುವ ಸಮುದ್ರ ದಕ್ಷಿಣದಲ್ಲಿ ಇಂಡೋನೇಷ್ಯಾದ ದ್ವೀಪಗಳ ದರ್ಶನವಾಗುತ್ತದೆ. ಇಡೀ ಸಿಂಗಪೂರ್‌ನ ಪಕ್ಷಿನೋಟ ಸಿಗುತ್ತದೆ. ಅಲ್ಲಿಗೆ ಹೋದವರಿಗೆ ನೆನಪಿನ ಕಾಣಿಕೆಯಾಗಿ ಅಲ್ಲಿನ ಸಿಂಹದ ಸಂಕೇತವಿರುವ ಒಂದು ಚಿನ್ನದ ಬಣ್ಣದ ಹೊಳೆಯುವ ನಾಣ್ಯ ಮತ್ತು ಕಾರ್ಡನ್ನು ನೀಡುತ್ತಾರೆ.

ಚಿಟ್ಟೆಗಳ ಉದ್ಯಾನವನ

ಮಾನವ ನಿರ್ಮಿತ ದ್ವೀಪವೆಂದಾಕ್ಷಣ ಅಲ್ಲಿ ಹಸಿರು, ಪ್ರಾಣಿ, ಕೀಟ ಸಸ್ಯಗಳೇನೂ ಇಲ್ಲ ಎಂದು ನೀವಂದುಕೊಂಡರೆ ತಪ್ಪಾಗುತ್ತದೆ. ಇಲ್ಲಿ ಕೀಟಗಳೂ ಇವೆ, ಸಸ್ಯಗಳೂ ಇವೆ. ಸಾವಿರಾರು ವಿಭಿನ್ನ ಜಾತಿಯ ಕೀಟಗಳನ್ನು ಒಂದೆಡೆ ನೋಡಲು ಇಲ್ಲಿ ಸಾಧ್ಯವಿದೆ. ಸುತ್ತಲೂ ದಟ್ಟ ಹಸಿರು, ಜೊತೆಗೆ ಅಲ್ಲಲ್ಲಿ ಬಣ್ಣಬಣ್ಣದ ಹೂಗಳು, ಜುಳುಜುಳು ನಾದದಿಂದ ಹರಿಯುವ ತೊರೆ ಮತ್ತು ಬೋರ್ಗರೆದು ಧರೆಗಿಳಿಯುವ ಜಲಪಾತಗಳಿಂದ ಸುತ್ತುವರೆದ ಈ ಉದ್ಯಾನವನದಲ್ಲಿ 3000ಕ್ಕಿಂತ ಹೆಚ್ಚಿನ ಅಪರೂಪದ ಜಾತಿಯ ಕೀಟಗಳಿವೆ. ಪಾತರಗಿತ್ತಿ ಮತ್ತು ಕೀಟಗಳ ಈ ಸೂಕ್ಷ್ಮ ಜಗತ್ತಿನಲ್ಲಿ 50ಕ್ಕಿಂತ ಹೆಚ್ಚು ಜಾತಿಯ 1500 ಜೀವಂತ ಚಿಟ್ಟೆಗಳು ಸ್ವಚ್ಛಂದವಾಗಿ ಹಾರಾಡುವುದನ್ನು ನೋಡಬಹುದು.

ಬಣ್ಣ ಬಣ್ಣದ ಚಿಟ್ಟೆಗಳನ್ನು `ಪಾತರಗಿತ್ತಿ ಪಕ್ಕ ನೋಡಿದಯೇನೇ ಅಕ್ಕಾ’ ಎಂದು ಹಾಡುತ್ತಾ ಅವುಗಳ ನೋಟವನ್ನು ಸವಿಯಬಹುದು. ಮೊಟ್ಟೆಯಿಂದ ಚಿಟ್ಟೆಯಾಗುವ ತನಕದ ಜೀವನವನ್ನು ಪ್ರತಿಬಿಂಬಿಸುವ ಚಿಟ್ಟೆಯ ಜೀವನ ಚರಿತ್ರೆಯನ್ನು ವಿವರಿಸುವ ಪ್ಯೂಪಾಗಳನ್ನು ಕಾಪಾಡಲು ಗಾಜಿನ ಮನೆಯನ್ನು  ರೂಪಿಸಲಾಗಿದೆ. 70 ಮೀಟರ್‌ ಉದ್ದದ ಗುಹೆಯಂತಹ ತಾಣದಲ್ಲಿ ವಿಭಿನ್ನ ಕೀಟಗಳ ನೋಟ ನಿಮ್ಮ ಕಣ್ಣುಗಳಿಗೆ ಔತಣವನ್ನೀಯುತ್ತದೆ. ಮಿಣುಕು ಹುಳುಗಳು ನಿಮ್ಮನ್ನು ಮಿನುಗುತ್ತಾ ಸ್ವಾಗತ ಗೀತೆ ಹಾಡುತ್ತವೆ. ಪ್ರತ್ಯೇಕ ಮಿಣುಕು ಹುಳುಗಳ ಪ್ರದರ್ಶನ ನಿಮ್ಮನ್ನು ಆಕರ್ಷಿಸುತ್ತದೆ.

ಈ ಪಾತರಗಿತ್ತಿಯ ಉದ್ಯಾನವನದಲ್ಲಿ ಚಿಟ್ಟೆಗಳು ಮತ್ತು ಕೀಟಗಳೇ ಅಲ್ಲದೆ ಸುಂದರ ಗಿಣಿಗಳು, ಹಾವು ಮತ್ತು ಹಲ್ಲಿಗಳಂತಹ ಜಲಚರಗಳೂ ನೋಡಸಿಗುತ್ತವೆ. ಸಸ್ಯಗಳ ವಿಕಾಸವಾದವನ್ನು ವಿವರಿಸುವ ಸಾವಿರಾರು ವರ್ಷಗಳ ಹಿಂದಿನ ಕೀಟಗಳ ಪಳೆಯುಳಿಕೆಗಳನ್ನು (ಫಾಸಿ್ಸ್‌) ಒಳಗೊಂಡ ಪ್ರದರ್ಶನವಿರುತ್ತದೆ. ಜೊತೆಗೆ ಕೀಟಗಳು, ಚಿಟ್ಟೆಗಳ ಜೊತೆಗೆ ಗಿಣಿಗಳು ಮತ್ತು ಹಾವು ಮತ್ತು ಹಲ್ಲಿಗಳ ಪ್ರದರ್ಶನಗಳನ್ನೂ ವೇದಿಕೆಯಲ್ಲಿ ಏರ್ಪಡಿಸಲಾಗಿರುತ್ತದೆ. ಒಟ್ಟಿನಲ್ಲಿ ಒಳಹೊಕ್ಕರೆ ಹೊರಬರುವತನಕ ನಿಮ್ಮ ಕಣ್ಣು ಮನಸ್ಸನ್ನು ತನ್ಮಯಗೊಳಿಸುವುದರಲ್ಲಿ ಎರಡು ಮಾತಿಲ್ಲ.

ಇವುಗಳೇ ಅಲ್ಲದೆ, ವಿಶ್ವ ದರ್ಜೆಯ ಗಾಲ್ಫ್ ಕ್ಲಬ್‌ ಮತ್ತು ಸಮುದ್ರ ದಂಡೆ ಅರ್ಥಾತ್‌ ಸುಂದರ ಹೊಳೆಯುವ ಮರಳಿನ ಬೀಚುಗಳಿವೆ. ಸಂಜೆಯ ನಂತರ ಸಂಗೀತ ಕಾರಂಜಿ ಮತ್ತು ಲೇಸರ್‌ ಶೋ ಕಣ್ಮನ ತಣಿಸುತ್ತದೆ. ಸಿಂಗಪೂರ್‌ನಲ್ಲಿ ಒಟ್ಟು ಮೂರು ಸಂಜೆಯ ಮನರಂಜನಾ ಕೂಟಗಳಿವೆ. ಗಾರ್ಡನ್‌ ಬೈ ದ ಬೇ ನಲ್ಲಿ ಸೂಪರ್‌ ಟ್ರೀಗಳು ಬೆಳಕಿನಿಂದ ಅಲಂಕೃತವಾಗಿ ಹೊಳೆಯುತ್ತಿದ್ದರೆ ಮುದಗೊಳಿಸುವ ಸಂಗೀತ, ಮರೀನಾ ದಂಡೆಯ ಉದ್ದಕ್ಕೂ ಬೆಳಗುವ ದೀಪಗಳು ಮತ್ತು ಸೆಂಟೋಸಾದಲ್ಲಿ ಕೊಕ್ಕರೆ ಮತ್ತು ಬಕಪಕ್ಷಿಗಳ ನೃತ್ಯ, ಮರೀನಾ ದಂಡೆಯಲ್ಲಿನ ಲೇಸರ್‌ ಶೋ ನಿಜಕ್ಕೂ ಒಂದಕ್ಕಿಂತ ಮತ್ತೊಂದು ಚೆನ್ನ.

ನಾವು ಇಪ್ಪತ್ತು ವರ್ಷಗಳ ಹಿಂದೆ ಸಿಂಗಪೂರ್‌ಗೆ ಹೋದಾಗ ಬರಿ ಸಂಗೀತ ಕಾರಂಜಿ ಇತ್ತು. ಈಗ ಅದರ ಜೊತೆಗೆ ವಿಭಿನ್ನ  ಪ್ರದರ್ಶನಗಳು ನೋಡುಗರನ್ನು ಸೆಳೆಯುತ್ತವೆ. ಒಟ್ಟಿನಲ್ಲಿ ಸಿಂಗಪೂರ್‌ನ ಸೆಂಟೋಸಾ ದ್ವೀಪದಲ್ಲಿ ಮನರಂಜನೆಯ ಮಹಾಪೂರವೇ ಇದೆ ಎನ್ನಬಹುದು.

ಮಂಜುಳಾ ರಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ