ಚಿಕ್ಕಂದಿನಿಂದಲೂ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸಮಾಜ ಸೇವೆಯನ್ನು ಧ್ಯೇಯವಾಗಿ ಇರಿಸಿಕೊಂಡ ವಿ. ಕೀರ್ತನಾರ ಸಾಧನೆಗಳ ಬಗ್ಗೆ ತಿಳಿಯೋಣವೇ.....?
ಬೆಂಗಳೂರಿನ ಪದ್ಮನಾಭ ನಗರದಲ್ಲಿ ವಾಸಿಸುತ್ತಿರುವ ಗೀತಾ ಮತ್ತು ವ್ಯಾಸ ದಂಪತಿಯರ ಮುದ್ದಿನ ಎರಡನೇ ಮಗಳು ಕೀರ್ತನಾ ವಿ. ಮಗಳ ಎಲ್ಲಾ ಕೆಲಸಗಳಿಗೂ ತಾಯಿ ತಂದೆ ಮತ್ತು ಅಕ್ಕ ರಮ್ಯಾಳ ಪ್ರೋತ್ಸಾಹವಿದೆ. ರಕ್ತ ಬೇಕಾದವರಿಗೆ ರಕ್ತದಾನ, ಕ್ಯಾನ್ಸರ್ ರೋಗಿಗಳಿಗೆ ಉದ್ದನೆ ಕೂದಲನ್ನು ಕಟ್ಟು ಮಾಡಿಕೊಟ್ಟ ದಾನಶೂರೆ ಈಕೆ. ಇವರೊಂದಿಗೆ ಗೃಹಶೋಭಾ ಪರವಾಗಿ ನಡೆಸಿದ ಮಾತುಕಥೆಯ ಸಾರಾಂಶ :
ನಿನ್ನ ಶಿಕ್ಷಣದ ಬಗ್ಗೆ ತಿಳಿಸುವೆಯಾ....?
ನಾನು ನನ್ನ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಬಿ.ಎನ್.ಎಂ. ಶಾಲೆಯಲ್ಲಿ ಮಾಡಿದ್ದೇನೆ. ಪಿಯುಸಿಯನ್ನು ಬಿಎಂಎಸ್ ಕಾಲೇಜಿನಲ್ಲಿ ವಾಣಿಜ್ಯದಲ್ಲಿ ಓದಿದ್ದೇನೆ. ಬಸವನಗುಡಿ ಬಿ.ಎಂ.ಎಸ್ ಮಹಿಳಾ ಕಾಲೇಜಿನಲ್ಲಿ ಮನೋವಿಜ್ಞಾನ, ಪತ್ರಿಕೋದ್ಯಮ, ಇಂಗ್ಲಿಷ್ ನಲ್ಲಿ ಬಿ.ಎ ಪದವಿ ಪಡೆದಿದ್ದೇನೆ.
ಶಿಕ್ಷಣ ಬಿಟ್ಟು ಇನ್ನೇನು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದೆ?
ಬಿ.ಎ ಕಲಿಯುವಾಗ ದೇಶಭಕ್ತಿ ಗೀತೆ, ವಿದ್ಯಾರ್ಥಿ ವೇತನದ ಕಾರ್ಯಕ್ರಮ, ಚಿತ್ರಕಲೆ, ಸಾಮಾಜಿಕ ಕಾರ್ಯಕ್ರಮ ಭಾಗವಾಗಿದ್ದೆ. ಇದರಿಂದ ಭಾಷಣ, ನಿರೂಪಣೆ, ವಿಡಿಯೋ ಚಿತ್ರೀಕರಣ, ಎಡಿಟಿಂಗ್, ಪೋಸ್ಟರ್ ತಯಾರಿಕೆ ಬಗ್ಗೆ ಹೆಚ್ಚಿನ ಅರಿವಾಯಿತು. ನನ್ನ ನಾಯಕತ್ವ ಗುಣ ಪದವಿಯ ಎರಡನೇ ವರ್ಷದಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಮೂರನೇ ವರ್ಷ ಸಾಂಸ್ಕೃತಿಕ ಅಧ್ಯಕ್ಷಳಾಗಿ ಮನ್ನಣೆ ದೊರೆಯಿತು. ಇದರಿಂದ ಇವೆಂಟ್ ಮ್ಯಾನೇಜ್ ಮೆಂಟಿನ ಅನುಭವ ಹೆಚ್ಚಿತು. ಮನೋವಿಜ್ಞಾನದಲ್ಲಿ ಅತ್ಯಧಿಕ ಅಂಕ ಗಳಿಸಿದ್ದಕ್ಕೆ ನರಸಿಂಹರಾಜ ಸ್ಮಾರಕ ವಿತ್ತೀಯ ಪ್ರಶಸ್ತಿ ದೊರೆಯಿತು.
ಸಂಗೀತದ ಬಗ್ಗೆ ಒಲವಿದೆಯೇ?
ಹೌದು ನಾನು ಹತ್ತು ವರುಷ ವಯಸ್ಸಿನಿಂದಲೂ ಕರ್ನಾಟಕ ಸಂಗೀತವನ್ನು ಕಲಿಯುತ್ತಿದ್ದೇನೆ. ಪ್ರಸ್ತುತ ವಿದೂಷಿ ರಂಜನಿಯರಿಂದ ವಿದ್ವತ್ ಅನುಸರಿಸುತ್ತಿದ್ದೇನೆ. ದೇವಸ್ಥಾನಗಳಲ್ಲಿ ಹಬ್ಬ ಹರಿದಿನದಲ್ಲಿ 4 ಕಚೇರಿ ಕೊಟ್ಟಿದ್ದೇನೆ. ಕೆಲವು ಯೂಟ್ಯೂಬ್ ವೀಡಿಯೋ ಮತ್ತು ಕಿರುಚಿತ್ರಕ್ಕಾಗಿ ಹಾಡಿದ್ದೇನೆ.
ಹೆಚ್ಚಿನ ವಿದ್ಯಾಭ್ಯಾಸ?
ಶಿವಮೊಗ್ಗದ ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನಲ್ಲಿ ಕ್ಲಿನಿಕ್ ವಿಶೇಷತೆಯೊಂದಿಗೆ ಮನೋವಿಜ್ಞಾನದಲ್ಲಿ ಎಂ.ಎಸ್ಸಿ ಮಾಡಿದ್ದೇನೆ.
ಇಲ್ಲಿ ಯಾವ ಚಟುವಟಿಕೆ ಇದ್ದವು?
ನನ್ನ ಸ್ನಾತಕೋತ್ತರಾಧಿಯಲ್ಲಿ ನಾನು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದೇನೆ. ಶೈಕ್ಷಣಿಕ ಸಾಧನೆಯ ಭಾಗವಾಗಿ ಬೆಂಗಳೂರಿನ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಮೈಸೂರಿನ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಸ್ಪೀಚ್‌ಹಿಯರಿಂಗ್ ನಲ್ಲಿ ತೊಡಗಿಕೊಂಡಿದ್ದೇನೆ. ಅನೇಕ ಸಂಶೋಧನೆ ನಡೆಸಿ, ಅವುಗಳನ್ನು ವಿವಿಧ ಸಮ್ಮೇಳನಗಳಲ್ಲಿ ಪ್ರಸ್ತುತಪಡಿಸಿದ್ದೇನೆ. ನವೆಂಬರ್ 8, 2025ರಂದು ಅಮಿಟಿ ಯೂನಿವರ್ಸಿಟಿ ನೋಯ್ಡಾದ ಸಹಯೋಗದೊಂದಿಗೆ ಕ್ಲಿನಿಕ್ ಸೈಕಾಲಜಿ ಸೊಸೈಟಿ ಆಫ್ ಇಂಡಿಯಾದ ವಾರ್ಷಿಕ ಅಂತಾರಾಷ್ಟ್ರಿಯ ಸಮ್ಮೇಳನದಲ್ಲಿ ಪ್ರಶಸ್ತಿ ಪಡೆದದ್ದು ನನಗೆ ತುಂಬಾ ಹೆಮ್ಮೆ ತಂದಿದೆ.
ನಿನ್ನ ಇತರ ಹವ್ಯಾಸಗಳು?
ನನಗೆ ನೃತ್ಯ, ಕಲೆ, ತೋಟಗಾರಿಕೆ, ಛಾಯಾಗ್ರಹಣ, ಕೋಚಿಂಗ್, ಕವನ, ಹಾಡುಗಳ ಸಾಹಿತ್ಯ ರಚನೆ, ದಿನಚರಿ ಬರೆಯುವುದು, ನಾಟಕ, ವಸಂತಸೇನೆಯಲ್ಲಿ ಸಣ್ಣಪಾತ್ರ ಮತ್ತು ಹಾಡುಗಾರಿಕೆ ನಿರೂಪಣೆ, ರಕ್ತದಾನ ಶಿಬಿರದಲ್ಲಿ ಭಾಗವಹಿಸುವುದು. ಕಷ್ಟದಲ್ಲಿದ್ದವರಿಗೆ ವೈಯಕ್ತಿಕ ಸಹಾಯ ಅಂದ್ರೆ, ಪಕ್ಕದ ಅಂಗಡಿಯ ಮಹಿಳೆ ಅಸ್ವಸ್ಥಳಾದಾಗ ಆಕೆ ಹುಷಾರಾಗುವವರೆಗೂ ಸಮಯವಿದ್ದಾಗ ಅಂಗಡಿ ನೋಡಿಕೊಂಡಿದ್ದೂ ಉಂಟು.





