ಅಡುಗೆ ಮನೆ (Kitchen Room) ಕೇವಲ ಮನೆಯ ಒಂದು ಕೋಣೆಯಲ್ಲ. ಅದು ಇಡೀ ಕುಟುಂಬದ (Family) ಸದಸ್ಯರನ್ನು ಬೆಸೆದಿಟ್ಟುಕೊಳ್ಳುವ ಕೊಂಡಿ, ಮನೆಯ ಆರೋಗ್ಯದ ಕೇಂದ್ರ & ಶಕ್ತಿ ಕೇಂದ್ರವೂ ಹೌದು. ಮನೆಯ ಅಡುಗೆ ಮನೆಯಲ್ಲಿ ನಿತ್ಯವೂ ಮೂರು ಬಾರಿ ಒಲೆ ಉರಿಯುತ್ತಿದೆ ಎಂದರೆ ಆದೊಂದು ಆರೋಗ್ಯಕರ ಕುಟುಂಬ ಎಂದರು ತಪ್ಪಾಗದು.

ಇತ್ತೀಚಿನವರೆಗೂ ಅಡುಗೆ ಮನೆಯ ಡಬ್ಬಿಗಳೇ ಭಾರತೀಯ ಗೃಹಿಣಿಯರ ಉಳಿತಾಯದ ಕೇಂದ್ರವೂ ಆಗಿದ್ದು, ಕುಟುಂಬಕ್ಕೆ ಅತ್ಯಾವಶ್ಯಕತೆ ಬಿದ್ದಾಗ ಅಲ್ಲಿನ ಸಾಸಿವೆ ಡಬ್ಬಿ, ಗಸಗಸೆ ಡಬ್ಬಿಯಲ್ಲಿ ಉಳಿಸಿ ಭದ್ರವಾಗಿ ಮುಚ್ಚಿಟ್ಟಿದ್ದ ಹಣ ಹೊರೆಗೆ ಬಂದು ಕುಟುಂಬದ ಮಾನವನ್ನು ಉಳಿಸುತ್ತಿದ್ದವು. ನೋಟ್ ಬ್ಯಾನ್ ಆಗಿ ಬಹುತೇಕ ಡಿಜಿಟಲ್ ಆಗುವವರೆಗೂ ಬಹುತೇಕ ಭಾರತೀಯರ ಮನೆ ಇದಕ್ಕೆ ಹೊರತಾಗಿರಲಿಲ್ಲ.

ಇನ್ನು ಮಾನವ ದೇಹದಲ್ಲಿನ ಟ್ರಿಲಿಯನ್ಗಟ್ಟಲೆ ಜೀವಕೋಶಗಳಿಗೆ ವಿವಿಧ ಆಹಾರಗಳು ಮತ್ತು ಪೋಷಕಾಂಶಗಳು ಬೇಕಾಗುತ್ತವೆ. ಹಾಗಾಗಿ ಅದರ ಅವಶ್ಯಕತೆಯನ್ನು ಪೂರೈಸುವ ಸಲುವಾಗಿಯೇ ಭಾರತೀಯ ಆಡುಗೆಯಲ್ಲಿ ವಿವಿಧ ಮಸಾಲೆಗಳನ್ನು ಒಳಗೊಂಡಿದ್ದು ಅವುಗಳು ಆಹಾರದಲ್ಲಿ ವೈವಿಧ್ಯತೆಯನ್ನು ಒದಗಿಸುವುದಲ್ಲದೇ, ಅದರಲ್ಲಿರುವ ಪ್ರತಿಯೊಂದು ಮಸಾಲೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು ಅವರುಗಳ ಜೊತೆ ವಿವಿಧ ತರಕಾರಿಗಳನ್ನು ಸೇರಿಸುವುದರ ಮೂಲಕ ಆರೋಗ್ಯಕರ ಜೀವನವನ್ನು ಮಾಡಬಹುದಾಗಿದೆ.
ಹಾಗಾಗಿಯೇ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವ ಗಾದೆ ಮಾತು ಬಂದಿದೆ ಎಂದರು ತಪ್ಪಾಗದು. ಆದರೆ ಆದೇ ಗಾದೆ ಮಾತು ಸ್ವಲ್ಪ ಬದಲಾಗಿದ್ದು ಪ್ರತೀ ಪಿಜ್ಜಾ ಬರ್ಗರ್, ಸ್ವಿಗ್ಗಿ ಝಮ್ಯಾಟೋ ಕಂಪನಿಗಳ ಯಶಸ್ಸಿನ ಹಿಂದೆ ಲಕ್ಷಾಂತರ ಅಡುಗೆ ಮಾಡದ ಮಹಿಳೆಯರು ಇದ್ದಾರೆ ಎನ್ನುವಂತಾಗಿರುವುದು ನಿಜಕ್ಕೂ ದುರಾದೃಷ್ಟಕರವೇ ಸರಿ.
ಕೇವಲ 2-3 ದಶಕಗಳ ಹಿಂದೆ ಇಡೀ ಮನೆಯವರೆಲ್ಲರೂ ಒಟ್ಟಿಗೆ ಬೆಳಿಗ್ಗೆ, ಮಧ್ಯಾಹ್ನ, ಮತ್ತು ರಾತ್ರಿ ಒಟ್ಟಿಗೆ ಸೇರುವ ತಾಣವೇ ಅಡುಗೆ ಮನೆಯಾಗಿತ್ತು. ಮನೆಯಾಗಿ ಮನೆಯವರ ಇಷ್ಟಕ್ಕೆ ತಕ್ಕಂತೆ ಪ್ರೀತಿಯಿಂದ ಆಸ್ಥೆವಹಿಸಿ ಶುಚಿ ಮತ್ತು ರುಚಿಯಾಗಿ ಅಡುಗೆಯನ್ನು ಮಾಡಿ ಸಾಲಾಗಿ ಮಂದಲಿಗೆ (ಚಾಪೆ)ಯನ್ನು ಹಾಕಿ ಆದರ ಮುಂದೆ ಎಲೆ ಇಲ್ಲವೇ ತಟ್ಟೆ, ಲೋಟಾಗಳನ್ನು ಹಾಕಿ ಎಲ್ಲರೂ ತಿಂಡಿ/ಊಟಕ್ಕೆ ಬನ್ನಿ ಎಂದು ಕರೆದ ಕೂಡಲೇ ಮನೆಯ ಆಬಾಲವೃಧ್ಧರಾದಿಯಾಗಿ ಎಲ್ಲರೂ ಕೊಂಚವೂ ಮರು ಮಾತನಾಡದೇ, ಕೈ ಕಾಲು ತೊಳೆದುಕೊಂಡು ಅವರವರಿಗೆ ನಿಗಧಿ ಪಡಿಸಿದ್ದ ಜಾಗಗಳಲ್ಲಿ ಕುಳಿತುಕೊಂಡ ನಂತರ ಎಲ್ಲರಿಗೂ ಒಟ್ಟಿಗೆ ಮಾಡಿದ ಅಡುಗೆಯನ್ನು ಬಡಿಸಿ, ಎಲ್ಲರೂ ಒಟ್ಟಿಗೆ ತಾಯಿ ಅನ್ನಪೂರ್ಣೆಗೆ ಭಕ್ತಿ ಪೂರ್ವಕ ವಂದಿಸಿದ ನಂತರ ಮನೆಯ ಹಿರಿಯರು ಊಟ ಆರಂಭಿಸಿದ ನಂತರ ಎಲ್ಲರೂ ಒಟ್ಟಿಗೆ ಊಟ ಮಾಡುತ್ತಿದ್ದರು.

ಹಾಗೆ ಊಟ ಮಾಡುತ್ತಿದ್ದ ಸಮಯದಲ್ಲಿ ಇಡೀ ಕುಟುಂಬವೇ ಅಲ್ಲಿ ಇರುತ್ತಿದ್ದ ಕಾರಣ ಬಹುತೇಕ ಕುಟುಂಬದ ವಿಷಯಗಳು ಒಂದು ರೀತೀ ಲೋಕಸಭೆ ಇಲ್ಲವೇ ವಿಧಾನಸಭೆಯ ರೀತಿಯಲ್ಲಿ ಅಲ್ಲಿ ಚರ್ಚಿತವಾಗಿ ಪ್ರಜಾಪ್ರಭುತ್ವದ ರೀತಿಯಲ್ಲೇ ಬಹುಮತದೊಂದಿಗೆ ಅನುಮೋದನೆಗೊಂಡು ಕಾರ್ಯರೂಪಕ್ಕೆ ಬರುತ್ತಿದ್ದವು. ಮನೆಯವರದ್ದೆಲ್ಲಾ ಊಟವಾದ ನಂತರ ಉಳಿದುಪಳಿದದ್ದನ್ನೇ ತಿಂದರೂ ಮನೆಯೊಡತಿಗೆ ಕೊಂಚವೂ ಬೇಸರವನ್ನಾಗಲೀ, ಕೋಪವನ್ನಾಗಲೀ ಮಾಡಿಕೊಳ್ಳದೇ, ಸದ್ಯ ಮಾಡಿದ್ದೆಲ್ಲವೂ ಖರ್ಚಾಯಿತಲ್ಲಾ ಎಂದು ಸಂತೋಷ ಪಡುತ್ತಿದ್ದರು. ಇನ್ನು ಮನೆಯಲ್ಲಿ ಎಷ್ಟೇ ಜನರಿದ್ದರೂ ಅಥವಾ ಅಚಾನಕ್ಕಾಗಿ ಮನೆಗೆ ಬಂಧು-ಮಿತ್ರರು ಬಂದರೂ, ಎಷ್ಟೇ ಹೊತ್ತಾದರೂ, ಮನೆಯಾಕಿ ಕೊಂಚವು ಬೇಸರಿಸಿಕೊಳ್ಳದೆ ಸಂತೋಷದಿಂದಲೇ ಅಡುಗೆ ಮಾಡುತ್ತಿದ್ದರಿಂದ ಆ ಅಡುಗೆಯ ರುಚಿ ಮತ್ತಷ್ಟೂ ಹೆಚ್ಚುತ್ತಿತ್ತು ಎಂದರು ಅತಿಶಯವಲ್ಲ.





