ಕಸೂತಿ ಹೆಣಿಗೆಯ ಮಾಧ್ಯಮದಿಂದಲೇ ಉತ್ತರಾ ಖಂಡದ ಅಲ್ಮೋಡಾ ಜಿಲ್ಲೆಯಲ್ಲಿ `ಮಹಿಳಾ ಸೇವಾಶ್ರಮ' ಸ್ಥಾಪಿಸಿ ಗ್ರಾಮೀಣ ಮಹಿಳೆಯರು ಸ್ವಾವಲಂಬನೆ ಗಳಿಸುವಂತೆ ಮಾಡುವಲ್ಲಿ ಯಶಸ್ವಿಯಾದ 52 ವರ್ಷದ ಸಮಾಜ ಸೇವಕಿ ಕೃಷ್ಣಾ ಬಿಷ್ಟ್ ರ ಸಾಧನೆ ಕಡಿಮೆಯೇನಲ್ಲ. ಅವರಿಗೆ 22ನೇ ಐಎಂಸಿ ಲೇಡೀಸ್ ವಿಂಗ್ ವತಿಯಿಂದ ಗ್ರಾಮೀಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಗುರುತಾಗಿ 2014ರಲ್ಲಿ `ಜಾನಕಿ ದೇವಿ ಬಜಾಜ್' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇದರಲ್ಲಿ 5 ಲಕ್ಷ ರೂ. ನಗದು ಹಣ ಮತ್ತು ಪದಕ ಇರುತ್ತದೆ. ಅವರೊಂದಿಗಿನ ಮಾತುಕಥೆಯ ಮುಖ್ಯಾಂಶ?:
ನೀವು ಈ ಕ್ಷೇತ್ರಕ್ಕೆ ಬರಲು ಮುಖ್ಯ ಪ್ರೇರಣೆ....?
ಇದಕ್ಕೆ ನನ್ನ ಸಮಸ್ಯೆಗಳೇ ಪ್ರೇರಣೆ. ಒಮ್ಮೆ ನನಗೆ ಡೆನ್ಮಾರ್ಕಿಗೆ ಹೋಗುವ ಅವಕಾಶ ಸಿಕ್ಕಿತ್ತು. ಅಲ್ಲಿನ ಮಹಿಳೆಯರ ಧೀಶಕ್ತಿ ಗಮನಿಸಿ ಆಶ್ಚರ್ಯವಾಯ್ತು. ನಮ್ಮ ದೇಶದ ಮಹಿಳೆಯರು ದಿನವಿಡೀ ದುಡಿಯುತ್ತಿರುತ್ತಾರೆ. ಆದರೆ ಅವರಿಗೆ ಸಿಗಬೇಕಾದ ಪ್ರಾಶಸ್ತ್ಯ ಪ್ರಾಮುಖ್ಯತೆಗಳೇನೂ ಸಿಗುತ್ತಿಲ್ಲ. ಜೊತೆಗೆ ಆರ್ಥಿಕವಾಗಿಯೂ ಅವರು ಸಶಕ್ತರಲ್ಲ. ಈ ಕುರಿತಾಗಿ ನಮ್ಮ ಹಳ್ಳಿಯ ಹೆಂಗಸರೊಂದಿಗೆ ಚರ್ಚಿಸಿದೆ. ಅವರುಗಳು ಯಾರೂ ಓದುಬರಹ ಕಲಿತವರಲ್ಲ, ಮೂಢನಂಬಿಕೆಗಳ ಕೂಪದಲ್ಲಿ ಮುಳುಗಿದವರು.
ಇದನ್ನೇ ಗಮನದಲ್ಲಿರಿಸಿಕೊಂಡು ನಾನು 1979ರಲ್ಲಿ `ಮಹಿಳಾ ಸೇವಾಶ್ರಮ' ಆರಂಭಿಸಿದೆ. ಈ ಸಂಸ್ಥೆಯ ಮುಖ್ಯ ಉದ್ದೇಶ ಮಹಿಳೆಯರಿಗೆ ಶಿಕ್ಷಣ ಒದಗಿಸುವುದು, ಅವರ ಕಾರ್ಯದಕ್ಷತೆಯನ್ನು ಹೆಚ್ಚಿಸುವುದು. ಅವರಲ್ಲಿ ಎಷ್ಟೋ ಜನ ಹೆಣಿಗೆ, ಹೊಲಿಗೆ, ಕಸೂತಿಗಳಲ್ಲಿ ನುರಿತವರಿದ್ದಾರೆ. ಅಡುಗೆ, ಹಪ್ಪಳ, ಉಪ್ಪಿನಕಾಯಿ, ತಯಾರಿಯಲ್ಲಿ ಎತ್ತಿದ ಕೈ. ಇವರುಗಳು ಸ್ವಂತ ಪರಿಶ್ರಮದಿಂದ ಏನಾದರೂ ಗಳಿಸಲು ಯತ್ನಿಸಿದರೆ ದಲ್ಲಾಳಿಗಳೇ ಮಧ್ಯದಲ್ಲಿ ಎಲ್ಲಾ ಹೊಡೆದುಕೊಂಡು ಬಿಡುತ್ತಾರೆ. ಹೀಗಾಗಿ ಸೇವಾಶ್ರಮದ ಹೆಸರಿನಲ್ಲಿ ನಾನು ಮಾರ್ಕೆಟಿಂಗ್ ಶುರು ಮಾಡಿಸಿದೆ, ಅಲ್ಲಿ ಈ ಮಹಿಳೆಯರು ತಮ್ಮ ಕೈಕೆಲಸದ ಉತ್ಪನ್ನಗಳನ್ನು ಮಾರಾಟ ಮಾಡಿ ಒಂದಿಷ್ಟು ಲಾಭ ಗಳಿಸುವಂತಾಗಿದೆ. ಇದರಿಂದ ಇವರ ಉತ್ಸಾಹ ಇಮ್ಮಡಿಸಿ, ಉತ್ಪನ್ನಗಳ ತಯಾರಿ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಈಗಂತೂ ಇಂಥ 25 ಸಾವಿರಕ್ಕೂ ಹೆಚ್ಚಿನ ಮಹಿಳೆಯರು ಇದರ ಲಾಭ ಪಡೆಯುತ್ತಿದ್ದಾರೆ.
ಈ ಸೇವಾಶ್ರಮ ಮುನ್ನಡೆಸಲು ಏನೇನು ಕಷ್ಟಗಳು ಎದುರಾದವು?
ಎಲ್ಲಕ್ಕೂ ಮುಖ್ಯವಾದದ್ದು ಎಂದರೆ, ಸಂಸಾರದ್ದು. ಮಹಿಳೆಯ ಮನೆ ಮತ್ತು ಸಮಾಜ ಆಕೆಯ ಏಳಿಗೆಗೆ ಸದಾ ತಡೆಯೊಡ್ಡುತ್ತವೆ. ಅವರು ತಮ್ಮದೇ ಅಂಗಡಿ ನೋಡಿಕೊಳ್ಳಲು ಆಗುತ್ತಿರಲಿಲ್ಲ. ಸಂಜೆ 6 ಗಂಟೆ ದಾಟಿದರೆ ಹೊರಗೆ ಅಡಿ ಇಡುವ ಹಾಗಿಲ್ಲ. ಕೂಲಿಯಾಳುಗಳ ತರಹ ಒಂದೇ ಸಮನೆ ಮನೆಗೆಲಸ ಮಾಡುತ್ತಿದ್ದರು, ಜೊತೆಗೆ ಹೊಲ ಗದ್ದೆಗಳಲ್ಲೂ ದುಡಿಯುತ್ತಿದ್ದರು. ಈ ಮಹಿಳೆಯರು ಆರ್ಥಿಕವಾಗಿ ಸಶಕ್ತರಾದಾಗ ಮಾತ್ರ ಆ ಮನೆಯ ಹಣಕಾಸಿನ ಪರಿಸ್ಥಿತಿ ಸರಿಹೋದೀತೆಂದು ಅವರಿಗೆ ಮತ್ತೆ ಮತ್ತೆ ಮನವರಿಕೆ ಮಾಡಿಕೊಡಬೇಕಾಯ್ತು. ನಿಧಾನವಾಗಿ ಈ ವಿಷಯ ಅರಿವಾದಂತೆ, ಗ್ರಾಮೀಣ ಮಹಿಳೆಯರು ಪ್ರಗತಿ ಸಾಧಿಸಲು ಸಾಧ್ಯವಾಯಿತು.
ನಿಮ್ಮ ಈ ಸಂಸ್ಥೆ ಯಾವ ರೀತಿ ಕೆಲಸ ಮಾಡುತ್ತದೆ?
ನಮ್ಮ ಸಂಸ್ಥೆ ಮಹಿಳೆಯರಿಗೆ ಎಲ್ಲಾ ರೀತಿಯ ಸಹಾಯ ಮಾಡುತ್ತದೆ. ಯಾವ ಮಹಿಳೆಯರು ಏನಾದರೂ ಉತ್ಪನ್ನ ತಯಾರಿಸುತ್ತಾರೋ ಅವರಿಗೆ ವೈಯಕ್ತಿಕ ಸಹಾಯ ನೀಡಿ, ಮನೆಯವರೊಟ್ಟಿಗೆ ಕೂಡಿ ಅವರು ಹೆಚ್ಚಿನ ಮಟ್ಟದಲ್ಲಿ ಆ ಬಿಸ್‌ನೆಸ್‌ಹಿಗ್ಗಿಸಲು ನೆರವು ನೀಡುತ್ತದೆ. ಮಾರ್ಕೆಟಿಂಗ್‌ನ ಗೈಡೆನ್ಸ್ ನೀಡುತ್ತೇವೆ. ಇದರಿಂದ ವ್ಯಾಪಾರದಲ್ಲಿನ ಅವರ ಅಭಿವೃದ್ಧಿ ಗಮನಿಸಿ, ಅವರ ಅಕ್ಕಪಕ್ಕದ, ಪರಿಚಿತ ಮಹಿಳೆಯರೂ ಇಲ್ಲಿಗೆ ಸೇರಿ ಮತ್ತಷ್ಟು ಲಾಭ ಗಳಿಸುತ್ತಾರೆ. ಈ ಮಹಿಳೆಯರಿಗೆ ಪ್ರಾಥಮಿಕ ಶಿಕ್ಷಣ ನೀಡುವ ಮುಖ್ಯ ಉದ್ದೇಶ, ಇವರು ತಾವು ಮಾಡುವ ವ್ಯಾಪಾರದ ಲೆಕ್ಕಾಚಾರ ತಾವೇ ತಿಳಿಯಲಿ ಎಂಬುದು.