ಕಷ್ಟಪಟ್ಟರೆ ಲಕ್ಷ್ಮಿ ಒಲಿಯುತ್ತಾಳೆ ನಿಜ. ಆದರೆ ಸರಸ್ವತಿ ಒಲಿಯುವುದು ಅಷ್ಟು ಸುಲಭದ ಮಾತಲ್ಲ, ಅವಳು ಆಯ್ಕೆ ಮಾಡಿಕೊಂಡ ಕೆಲವೇ ಕೆಲವರಲ್ಲಿ ಮಾತ್ರ ನಿಲ್ಲುತ್ತಾಳೆ. ನಿಂತರೆ ಸಾಕೇ? ಉಹೂಂ….. ಮನೆ ಮಾಡಿಕೊಂಡು ನೆಲೆಸಬೇಕು. ಆಗ ಸರಸ್ವತಿ ಅವರ ನಾಲಿಗೆಯಲ್ಲಿ ನಲಿದಾಡುತ್ತಾಳೆ.  ಅಂತಹ ಭಾಗ್ಯ ದೊರೆಯೋದು ಕೆಲವರಿಗೆ  ಮಾತ್ರ. ಆ ಭಾಗ್ಯವಂತೆ ಈ ಪ್ರತಿಭೆಯಲ್ಲೂ ಮನೆ ಮಾಡಿ ನಿಂತಿದ್ದಾಳೆ. ಅವಳಿಗೆ ಒಲಿದಿದ್ದಾಳೆ! ಇವರೇ ತುಮಕೂರಿನಲ್ಲಿ ನೆಲೆಸಿ ದಿನಂಪ್ರತಿ ವಿದ್ಯಾಭ್ಯಾಸಕ್ಕಾಗಿ ಸಾಧನೆಯ ಹಾದಿಗಾಗಿ ಹಲವು ಕಾರ್ಯಕ್ರಮಗಳಿಗಾಗಿ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸುವ ಶ್ರಮಜೀವಿ ಸಾಧಕಿ ಕುಸುಮಾ ಜೈನ್‌.

ಇವರೆಷ್ಟು ಕಷ್ಟಪಡುತ್ತಾರೊ, ಅದಕ್ಕಿಂತ ದುಪ್ಪಟ್ಟು ಕಷ್ಟಪಡುತ್ತಿರುವವರು ವಕೀಲರಾದ ತಾಯಿ ವಿ. ಜಲಜಾಕ್ಷಿ, ತಂದೆ ಟಿ.ಪಿ. ಲಕ್ಷ್ಮಿಪ್ರಸಾದ್‌ ವ್ಯಾಪಾರಿ. ಈ ದಂಪತಿಗಳಿಗೆ 23 ಮಾರ್ಚ್‌, 1991ರಂದು ಕುಸುಮಾ ಜನಿಸಿದರು. ಜನಿಸಿದಾಗಿನಿಂದಲೂ ಬಾಹ್ಯ ದೃಷ್ಟಿಯಿಲ್ಲ! ಮನಸ್ಸಿನ ದೃಷ್ಟಿ ಅಗಾಧ! ಕಲಾದೇವತೆಯ ಆಗರ! ಮಗಳ ಜೀವನಕ್ಕಾಗಿ ವೃತ್ತಿಯನ್ನೇ ತೊರೆದ ತಾಯಿಯ ತ್ಯಾಗ ಅಪಾರ!

ಮನೆಯೇ ಮೊದಲ ಶಾಲೆ ತಾಯಿಯೇ ಮೊದಲ ಗುರು….

ಮೂರೂವರೆ ವರ್ಷದವಳಿದ್ದಾಗಲೇ ತಾಯಿಯಿಂದ ಭಾವಗೀತೆ, ಜಾನಪದ, ಚಿತ್ರಗೀತೆಗಳನ್ನು ಹಾಡಲು ಪ್ರಾರಂಭಿಸಿದಳು. ಧಾರ್ಮಿಕ ಸಮಾರಂಭಗಳಾದ ವಾಸವಿ, ಬಸವ, ಮಹಾವೀರ್‌, ಶಂಕರ ಜಯಂತಿಗಳಲ್ಲಿ ಭಾಗವಹಿಸಿ ಹೆಚ್ಚಿನ ಬಹುಮಾನಗಳನ್ನು ಪಡೆಯುತ್ತಾ ಬೆಳೆದವಳು. ತುಮಕೂರಿನ ಅತ್ತಿಮಬ್ಬೆ ವಿದ್ಯಾಮಂದಿರ ಮತ್ತು ವಾಸವಿ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿ. ಹತ್ತನೇ ತರಗತಿಯಲ್ಲಿ 83% ತೆಗೆದು ನೆಚ್ಚಿನ ವಿದ್ಯಾರ್ಥಿಯಾದಳು. ತದನಂತರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪಿಯುಸಿ, ಜೈನ್‌ ಕಾಲೇಜಿನಲ್ಲಿ ಸಂಗೀತದಲ್ಲಿ ಬಿ.ಎ., ಎಂ.ಎ. ಓದಿರುವರು.

1995ರ ಆಸುಪಾಸಿನಲ್ಲಿ ಸಾಧನೆಗಳ ಹಾದಿಯು ತೆರೆದುಕೊಂಡಿತು. 1995 ಡಿಸೆಂಬರ್‌ 20 ಪ್ರಪ್ರಥಮವಾಗಿ, ಕರ್ನಾಟಕ ನೃತ್ಯ ಮತ್ತು ಸಂಗೀತ ಅಕಾಡೆಮಿಯವರ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದು ಎಲ್ಲರ ಮುದ್ದಿನ ಕಣ್ಮಣಿಯಾದಳು ಈ ಮೂರರ ಪೋರಿ!

1996ರಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯವರು ಏರ್ಪಡಿಸಿದ್ದ ರಾಜ್ಯ ಮಟ್ಟದ ಬಾಲಪ್ರತಿಭೆ ಮತ್ತು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಸ್ತ್ರೀಯ, ಜಾನಪದ, ಭಾವಗೀತೆ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಬಹುಮಾನಗಳನ್ನು ಪಡೆದರು.

ಶಾಸ್ತ್ರೀಯ ಸಂಗೀತ ಜ್ಯೂನಿಯರ್‌ ಹಾಗೂ ಸೀನಿಯರ್‌ ವಿಭಾಗಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವರು. ಟಿ.ಎಚ್‌. ತ್ಯಾಗರಾಜ್‌ರವರಲ್ಲಿ ಸಂಗೀತಾಭ್ಯಾಸ ಪ್ರಾರಂಭಿಸಿ ಬೆಂಗಳೂರಿನ ಸರಸ್ವತಿ ಸಂಗೀತ ಶಾಲೆಯ ಶ್ಯಾಮಲಾ ಜಿ ಭಾವೆಯವರಲ್ಲಿ ಸೀನಿಯರ್‌ ಶಾಸ್ತ್ರೀಯ, ರಮಾ ಕೃಷ್ಣಸ್ವಾಮಿ ಸೀನಿಯರ್‌ ಶಾಸ್ತ್ರೀಯ ಸಂಗೀತ, ಬಿ.ಆರ್‌. ಗೀತಾ ಆಕಾಶವಾಣಿ ಕಲಾವಿದೆ. ಜೊತೆಗೆ ಹಿಂದೂಸ್ಥಾನಿ ಪ್ರಕಾರವನ್ನೂ ಕಲಿಯುತ್ತಿರುವರು. ತುಮಕೂರಿನ ಪಂಚಾಕ್ಷರಿ ಹಿರೇಮಠ್‌ರವರಲ್ಲಿ  ಬಸವರಾಜ್‌ ಕಡಕೋಟಿಯವರ ಬಳಿ ಕಲಿಕೆ.

ಸುಗಮ ಸಂಗೀತವನ್ನು ಬಿ.ಆರ್‌. ಗೀತಾ ಹಾಗೂ ಇಂದೂ ವಿಶ್ವನಾಥ್‌ರಲ್ಲಿ ಕಲಿತಿರುವರು. ಬಿ.ಕೆ. ಸುಮಿತ್ರಾ, ಯಶವಂತ್‌ ಹಳಿಬಂಡಿ ಹಾಗೂ ಡಾ. ಜಯಶ್ರೀ ಅರವಿಂದ್‌ರವರು ನಡೆಸಿಕೊಟ್ಟ ಸಂಗೀತ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದು ಒಂದು ವಿಶೇಷ ಅನುಭವ ನೀಡಿತು. ಸಂಗೀತಾ ಕಟ್ಟಿಯವರ ಮಾರ್ಗದರ್ಶನ ದೊರೆತದ್ದೂ ಒಂದು ವಿಶೇಷವೇ ಹೌದು. ಕುಮಾರ ಪಾರ್ಕ್‌ನಲ್ಲಿರುವ ರಿಧಂ ಸ್ಕೂಲ್ ‌ಆಫ್‌ ಮ್ಯೂಸಿಕ್‌ನ ವಿಶ್ವನಾಥ್‌ ಪ್ರಸಾದ್‌ರ ಬಳಿ ಕೀಬೋರ್ಡ್‌ ಹಾಗೂ ಪಾಶ್ಚಾತ್ಯ ಸಂಗೀತ ಕಲಿಯುತ್ತಿದ್ದಾರೆ. ಹಿಂದಿ ಚಿತ್ರಗೀತೆಗಳನ್ನು ಖ್ಯಾತ ಮ್ಯಾಂಡೋಲಿನ್‌ ವಾದಕ ಎನ್‌.ಎಸ್‌. ಪ್ರಸಾದ್‌ ಮತ್ತು ಖ್ಯಾತ ಶಾಸ್ತ್ರೀಯ ಮತ್ತು ಗಜಲ್ ಎಚ್‌.ಕೆ. ಹರಿಕೃಷ್ಣಪಾದ ಮತ್ತು ಬಾಂಬೆ ಗಾಯಕರಾದ ಮೋಹನ್‌ ಲಾಲ್‌ರವರಿಂದ ಕಲಿಕೆ.

ಉದಯ ಟಿವಿ, ಈ ಟಿವಿಗಳಲ್ಲಿ ಹಾಡಿದ ಅನುಭವಿರುವುದು. ಇದಲ್ಲದೆ ಮೂಗಿನಲ್ಲಿ ಹಾಡುವುದು ಮತ್ತು ಜುಗಲ್ ಬಂಧಿ ಇವರ ಹವ್ಯಾಸ. ತೆಲುಗು, ತಮಿಳು ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲರು, ಚಲನಚಿತ್ರದಲ್ಲಿ ಹಿನ್ನೆಲೆ ಸಂಗೀತ ಮತ್ತು ಟ್ರ್ಯಾಕ್‌ಸಿಂಗರ್‌, ಶಂಕರ ಚಾನಲ್‌ನ ಅಡುಗೆಮನೆ ಕಾರ್ಯಕ್ರಮದ ಬ್ಯಾಕ್‌ ಗ್ರೌಂಡ್‌ ಸಿಂಗರ್‌ ಆಗಿಯೂ ತಮ್ಮ ಪ್ರತಿಭೆಯನ್ನು ತೋರುತ್ತಿದ್ದಾರೆ.

ತುಮಕೂರಿನ ಖ್ಯಾತ ಸಾಹಿತಿ ಸರ್ವೋತ್ತಮ ಆಚಾರ್ಯ ಕವಿತಾ ಕೃಷ್ಣರವರು ರಚಿಸಿದ ಭಾವಗೀತೆಗಳನ್ನು ಸಹ ಕಲಿಯುತ್ತಿದ್ದಾರೆ. ಇವರಿಂದ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಹಿರಿಯ ನಟಿ ಜಯಂತಿಯವರಿಂದ ಪ್ರಶಂಸೆಯನ್ನೂ ಪಡೆದಿರುವರು.

2001ರ ತುಮಕೂರಿನ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಬಿರ್ಲಾ ಆಡಿಟೋರಿಯಂನಲ್ಲಿ ನಡೆದ ಸ್ಪಂದನ ಕಾರ್ಯಕ್ರಮದಡಿಯಲ್ಲಿ ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆ ವಿಭಾಗಗಳಲ್ಲಿ ಹಾಡಿ ಪ್ರಥಮ ಬಹುಮಾನ ಪಡೆದಿರುವರು.

2002ರ 69ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಭಾಗವಹಿಸಿ ಇಡೀ ಕರ್ನಾಟಕದ ಜನತೆಯಿಂದ ಪ್ರಶಂಸಗೊಳಪಟ್ಟವರು.

2004ರಲ್ಲಿ ನಡೆದ ನಾಲ್ಕನೇ ಅಖಿಲ ಕರ್ನಾಟಕ ಮಕ್ಕಳ ಸಮ್ಮೇಳನದ ಸಮಯದಲ್ಲಿ ಭಕ್ತಿಗೀತೆ, ಭಗವದ್ಗೀತೆ ಶ್ಲೋಕಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುವರು. ಅದೇ ವರ್ಷ ಅಕ್ಟೋಬರ್‌ 30ರಂದು ಬೆಂಗಳೂರಿನ ಸಹೇಲಿ ಸಮನ್ವಯ ಸಮಿತಿಯವರು ಏರ್ಪಡಿಸಿದ್ದ ಬೃಹತ್‌ ಸಂಗೀತ ಕಾರ್ಯಕ್ರಮದಲ್ಲಿ ಡಾ. ಪಿ.ಬಿ. ಶ್ರೀನಿವಾಸ್‌ರವರಿಂದ ಅತ್ಯುತ್ತಮ ಬಾಲಪ್ರತಿಭೆ ಎಂದು ಬಿರುದು ನೀಡಿ ಗೌರವಿಸಲ್ಪಟ್ಟರು. ತುಮಕೂರಿನ ಪದ್ಮಾಂಬ ಮಹಿಳಾ ಸಂಘದಿಂದ ಇವರ ಸಾಧನೆಗಳಿಗೆ ಸನ್ಮಾನಿಸಿರುವರು.

2006ರ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ ಹಾಡಿ `ಗೊಮ್ಮಟ ಸ್ತುತಿ’ ಕ್ಯಾಸೆಟ್‌ನ್ನೂ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಖ್ಯಾತ ಹಾಡುಗಾರರಾದ ರವೀಂದ್ರ ಜೈನ್‌ರೊಂದಿಗೆ ಹಾಡಿ ಜನ ಮೆಚ್ಚುಗೆ ಪಡೆದಿರುವರು.

2012ರ ಜೂನ್‌ 28 ಮುಂಬೈನ `ಪರಮಾರ್ಥ್‌ ಪರಿವಾರ್‌’ ಶ್ವೇತಾಂಬರ ಜೈನ್‌ ಸಂಘದಲ್ಲಿ ನಡೆದ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಗಾನ ಕೋಗಿಲೆ ಬಿರುದು ನೀಡಿ ಗೌರವಿಸಲಾಯಿತು.

2012ರ ನವೆಂಬರ್‌ 8 ರಂದು ಸಮುದ್ರಾ ಫೌಂಡೇಶನ್‌ರವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಘನವೆತ್ತ ರಾಜ್ಯಪಾಲರಾದ ಹಂಸರಾಜ್‌ ಭಾರಧ್ವಾಜ್‌ರವರಿಂದ `ಯುವ ಪುರಸ್ಕಾರ’ ಪ್ರಶಸ್ತಿ ನೀಡಿಕೆ ಮತ್ತು ಸನ್ಮಾನ.

2012ರ ಡಿಸೆಂಬರ್‌ನಲ್ಲಿ ಮುಂಬೈಯಲ್ಲಿ ಝೀ ಟಿ.ವಿ.ಯವರು ನಡೆಸಿದ `ಇಂಡಿಯನ್‌ ಐಡಲ್’ನಲ್ಲಿ ಭಾಗವಹಿಸಿದ್ದರು.

2012ರಲ್ಲಿ ಬೆಂಗಳೂರಿನ ಸೇಂಟ್‌ ಫಿಲೋಮಿನಾ ಕಾಲೇಜಿನಲ್ಲಿ ನಡೆದ ಅಂತರ ಕಾಲೇಜು ಸಂಗೀತ ಸ್ಪರ್ಧೆಯಲ್ಲಿ ಅನೇಕ ಬಹುಮಾನಗಳ ಗಳಿಕೆ.

2013ರ ಫೆಬ್ರರಿಯಲ್ಲಿ ಉಜಿರೆಯ ಕಾಲೇಜಿನ ವಾರ್ಷಿಕೋತ್ಸದ ಸಮಾರಂಭದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಂದ ಪ್ರಶಂಸೆಗೆ ಪಾತ್ರರಾದರು.

2013ರ ಕುಪ್ಪಳ್ಳಿಯ ಕವಿಶೈಲದಲ್ಲಿ ಕುವೆಂಪು ರಚಿತ ಗೀತೆಗಳನ್ನು ಹಾಡಿ ಪುರಸ್ಕಾರ ಪಡೆದಿದ್ದಾರೆ.

2013ರ ಚಂದನ ಟಿ.ವಿ.ಯ ಮಧುರಮಧುರವೀ ಮಂಜುಳಗಾನದಲ್ಲಿ ಹಾಡಿ ಖ್ಯಾತ ಕಲಾವಿದರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

2016ರಲ್ಲಿ  ಚಾಂಟ್‌ ಇಂಡಿಯಾ ಸಂಸ್ಥೆಯವರು ಶಂಕರ ಚಾನೆಲ್‌ನಲ್ಲಿ ಆಯೋಜಿಸಿದ್ದ ಸಂಗೀತ ಸ್ಪರ್ಧೆಯಲ್ಲಿ ಎಲ್ಲಾ ಸುತ್ತುಗಳಲ್ಲಿ ಆಯ್ಕೆಯಾಗಿ ಫೈನಲ್ ಸುತ್ತಿಗೆ ಬಂದಿದ್ದರು.

ಸರ್ಕಾರದ ವಿವಿಧ ಸಂಘ ಸಂಸ್ಥೆಗಳಿಂದ 279 ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.

ಬೆಂಗಳೂರಿನ ಕಲಾಮಂಚ್‌ನ ಶ್ವೇತಾಂಬರ ಯುವಜನ ಸಂಘದಿಂದ ಜೈನೋತ್ಸವದಲ್ಲಿ ಹಾಡಿ ದ್ವಿತೀಯ ಬಹುಮಾನ ಪಡೆದ ಸಂದರ್ಭ, ಹಿಂದಿ ಚಿತ್ರರಂಗದ ಖ್ಯಾತ ಗಾಯಕರಾದ ರವೀಂದ್ರ ಜೈನ್‌, ಸಂದೇಶ್‌ ವಾಡೇಕರ್‌ ಮತ್ತು ಖ್ಯಾತ ಘಜಲ್ ಗಾಯಕ ಅನೂಪ್‌ ಜೋಟರವರಿಂದ ಜ್ಯೂನಿಯರ್‌ ವಾಣಿ ಜಯರಾಂ ಎಂದು ಬಿರುದು ನೀಡಿ ಶ್ಲಾಘಿಸಿದರು. ಶಿವವೊಗ್ಗದ ಕಾರ್ಯಕ್ರಮವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್‌, ಯಡಿಯೂರಪ್ಪ, ಈಶ್ವರಪ್ಪ ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ ಮುಂತಾದ ಗಣ್ಯಾತಿಗಣ್ಯರ ಮುಂದೆ ಒಂದು ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ನೀಡಿ ಶಹಭಾಷ್‌ ಗಿರಿ ಪಡೆದಿದ್ದಾರೆ. ಶೇಷಾದ್ರಿಪುರಂ ಪಿ.ಯು.ಸಿ. ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಿವರಾಜ್‌ ಕುಮಾರ್‌ರವರು ಅತಿಥಿಯಾಗಿದ್ದ ಸಂದರ್ಭದಲ್ಲಿ ಅವರದೇ ಚಿತ್ರವಾಗಿದ್ದ `ಜನುಮದ ಜೋಡಿ’ ಹಾಗೂ `ಜೋಗಿ’ ಚಿತ್ರದ ಹಾಡುಗಳನ್ನು ಹಾಡಿದಾಗ ಸ್ವತಃ ತಾವೇ ಎದ್ದು ಬಂದು ಇವರೊಂದಿಗೆ ದನಿಗೂಡಿಸಿ ಹಾಡಿ ಕುಸುಮಾರಿಗೆ ಪ್ರೋತ್ಸಾಹ ನೀಡಿದರು, ಅವರ ದನಿಯ ಪ್ರಶಂಸೆ ಮಾಡಿದರು.

ಸಂಗೀತ ನಿರ್ದೇಶಕರಾದ ಕೃಪಾಕರ್‌ರವರು ಹಿನ್ನಲೆ ಸಂಗೀತ ನೀಡಿರುವ `ಸ್ವತಂತ್ರಪಾಳ್ಯ’ ಮತ್ತು `ಈಶ್ವರ್‌’ ಚಿತ್ರಗಳಲ್ಲಿ ಹಾಡಿರುವರು. ಹಂಸಲೇಖರವರು ಇವರ ಕಂಠ ಪರೀಕ್ಷೆ ಮಾಡಿ ಗಾಯನವನ್ನು ಮೆಚ್ಚಿ ಹೊಗಳಿದ್ದು ವಿಶೇಷ ಎನ್ನುತ್ತಾರೆ. ಟಿ.ಎನ್‌. ಸೀತಾರಾಂ ನಿರ್ದೇಶನದ `ಮುಕ್ತ ಮುಕ್ತ’ ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವರು.

ಒಟ್ಟಿನಲ್ಲಿ ಕುಸುಮಾ ಹೋದೆಡೆ ಬಹುಮಾನ ಗಟ್ಟಿ. ಸಂಗೀತದ ನಾನಾ ಪ್ರಕಾರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇನ್ನೂ ಹೆಚ್ಚಿನ ಸಾಧನೆಗಳಿಗೆ ಶ್ರವಿಸುತ್ತಿರುವ ಈ ಯುವ ಪ್ರತಿಭೆಯ ಭವಿಷ್ಯ ಉಜ್ವಲವಾಗಿರಲಿ. ಇನ್ನೂ ಹೆಚ್ಚಿನ ಪ್ರಶಸ್ತಿ ಸನ್ಮಾನಗಳು ದೊರೆಯುವಂತಾಗಲೆಂದು ಆಶಿಸೋಣ….. ಈ ಪ್ರತಿಭಾನ್ವಿತಾಳ ಹಿಂದಿರುವ ಆ ತಾಯಿಯ ಶ್ರಮಕ್ಕೊಂದು ಸಲಾಮ್!

 – ಸವಿತಾ ನಾಗೇಶ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ