ಕಿಟಿ ಪಾರ್ಟಿಯ ಹೆಸರು ಕೇಳಿದೊಡನೆ ಗೃಹಿಣಿಯರ ಗುಂಪಿನ ಚಿತ್ರ ಕಣ್ಮುಂದೆ ಮೂಡುತ್ತದೆ. ಮಾತಿನ ಗದ್ದಲ, ಕಿಲಕಿಲ ನಗು, ತಮಾಷೆ ಹಾಸ್ಯಗಳು, ಮಾನಿನಿಯರ ಅಲಂಕಾರ, ಮನೆಯ ಅಲಂಕಾರ, ಕ್ರಾಕರಿಯ ಪ್ರದರ್ಶನ ಇವೆಲ್ಲ ಕಿಟಿ ಪಾರ್ಟಿಯ ಅವಿಭಾಜ್ಯ ಅಂಗವೇ ಆಗಿರುತ್ತವೆ. ಆದರೆ ಈಗ, ಕಿಟಿ ಪಾರ್ಟಿಯ ರೂಪು ರೇಖೆಗಳು ಬದಲಾಗತೊಡಗಿವೆ. ಈಚೆಗೆ ಪ್ರತಿಯೊಂದು ಕಿಟಿ ಪಾರ್ಟಿಯೂ ಒಂದೇ ರೀತಿ ಇರುವುದಿಲ್ಲ. ವಿಭಿನ್ನ ಗುಂಪುಗಳು ವಿಭಿನ್ನ ವಿಧಾನಗಳಲ್ಲಿ ಕಿಟಿ ಪಾರ್ಟಿಯನ್ನು ಏರ್ಪಡಿಸುತ್ತವೆ. ಹೀಗಿರುವಾಗ, ನೀವೇಕೆ ಹಿಂದೆ ಉಳಿಯುವಿರಿ? ಹೊಸ ವರ್ಷದಲ್ಲಿ ನೀವು ನಿಮ್ಮ ಕಿಟಿ ಪಾರ್ಟಿಯ ರೂಪವನ್ನು ಬದಲಿಸಿ ಅದಕ್ಕೊಂದು ಹೊಸ ಲುಕ್‌ ನೀಡಿರಿ.

ಪ್ರತಿ ಸಲ ಹೊಸ ಬಗೆ

ಇಂದಿರಾನಗರದ ಶಾರದಾ ಹೌಸಿಂಗ್‌ ಕಾಂಪ್ಲೆಕ್ಸ್ ನ ಮಹಿಳೆಯರು `ಮೊಗಲ್’ ಥೀಮ್ ನಲ್ಲಿ ತಮ್ಮ ಕಿಟಿ ಪಾರ್ಟಿಯನ್ನು ಏರ್ಪಡಿಸಿದ್ದರು. ಎಲ್ಲ ಮಹಿಳೆಯರು ಅನಾರ್ಕಲಿ ಸೂಟ್‌ ಧರಿಸಿ ಪಾರ್ಟಿಗೆ ಬಂದಿದ್ದರು. ಆತಿಥೇಯಳು ತನ್ನ ಡ್ರಾಯಿಂಗ್‌ ರೂಮನ್ನು ಮೊಗಲ್ ಶೈಲಿಯಲ್ಲಿ ಅಲಂಕರಿಸಿ, ಶೇರ್‌ ಶಾಯರೀಗಳನ್ನು ಏರ್ಪಡಿಸಿ ಮೊಗಲರ ಗತ ವೈಭವವನ್ನು ಮೆಲುಕು ಹಾಕುವ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದಳು.

ಕೋರಮಂಗಲದ ಒಂದು ಕಿಟಿ ಪಾರ್ಟಿಯ ಸದಸ್ಯೆಯರು ಪ್ರತಿಸಲ ಬೇರೆ ಒಂದು ರಾಜ್ಯದ ರೀತಿ ನೀತಿಯಂತೆ ತಮ್ಮ ಪಾರ್ಟಿಯನ್ನು ಆಯೋಜಿಸುವುದಾಗಿ ನಿರ್ಧರಿಸಿದರು. ಆಯಾ ರಾಜ್ಯದ ಇತಿಹಾಸ, ವಿಶೇಷ ವಿಷಯಗಳು, ಅಲ್ಲಿನ ತಿಂಡಿ ತಿನಿಸುಗಳು, ಪ್ರೇಕ್ಷಣೀಯ ಸ್ಥಳಗಳು, ಹಾಡು ನೃತ್ಯಗಳು ಇವುಗಳನ್ನೆಲ್ಲ ತಮ್ಮ ಪಾರ್ಟಿಯ ಥೀಮ್ ನಲ್ಲಿ ಸೇರಿಸಿಕೊಂಡಿದ್ದಾರೆ. ಆ ರಾಜ್ಯಕ್ಕೆ ಭೇಟಿ ಕೊಟ್ಟು ಬಂದ ಸದಸ್ಯೆ ಅಲ್ಲಿ ತಾನು ತೆಗೆದ ಫೋಟೋಗಳನ್ನು ಎಲ್ಲರಿಗೂ ತೋರಿಸುವುದು ಅವರ ಕಾರ್ಯಕ್ರಮದ ಒಂದು ಭಾಗವಾಗಿದೆ.

ಇನ್ನೂ ಇತರೆ ಆಕರ್ಷಕ ಥೀಮ್ ಗಳನ್ನು ಸೇರಿಸಿಕೊಳ್ಳಬಹುದು. ಉದಾಹರಣೆಗೆ ರೆಟ್ರೊ ಲುಕ್‌ ಎಂದರೆ ಹಿಂದಿನ ಕಾಲದ ಸಿನಿಮಾ ತಾರೆಯರಂತೆ ಅಲಂಕರಿಸಿಕೊಳ್ಳುವುದು ಅಥವಾ ಡಿಸ್ಕೋ ಲುಕ್‌ ಅಂದರೆ ಡಿಸ್ಕೊ ಡ್ಯಾನ್ಸರ್‌ನಂತೆ ರಂಗುರಂಗಿನ ಥಳಥಳಿಸುವ ಉಡುಪು, ಮುಖಾಲಂಕಾರಗಳಿಂದ ಶೃಂಗಾರಗೊಳ್ಳುವುದು ಅಥವಾ ಬರಲಿರುವ ಹಬ್ಬವನ್ನು  ಗಮನದಲ್ಲಿಟ್ಟುಕೊಂಡು ಅದಕ್ಕೆ ಸಂಬಂಧಿಸಿದಂತೆ ಒಂದು ಲುಕ್‌, ಇತ್ಯಾದಿ. ವಿದೇಶೀ ಹಬ್ಬಗಳಾದ ವ್ಯಾಲೆಂಟೈನ್‌ ಡೇ ಮತ್ತು ಹ್ಯಾಲೋವೀನ್‌ ಡೇ ಕೂಡ ಈಗ ನಮ್ಮ ಜನರಲ್ಲಿ ಬಳಕೆಗೆ ಬರುತ್ತಿವೆ. ವ್ಯಾಲೆಂಟೈನ್‌ ಡೇಗೆ ಕೆಂಪು ಬಣ್ಣದ ಡ್ರೆಸ್‌ ಕೋಡ್‌, ಬಲೂನ್‌ಗಳು ಮತ್ತು ಹೃದಯಾಕಾರದ ಅಲಂಕಾರವನ್ನು ಮಾಡಬಹುದು. ಹಾಗೆಯೇ ಹ್ಯಾಲೋವಿನ್‌ ಡೇಗೆ ಭಯ ಹುಟ್ಟಿಸುವ ಮಾಸ್ಕ್ ಅಥವಾ ಮುಖದ ಅಲಂಕಾರ ಮಾಡಿಕೊಳ್ಳಬಹುದು. ನಿಮ್ಮ ಕಿಟಿಯ ಸದಸ್ಯರೆಲ್ಲರ ಅಭಿಪ್ರಾಯವನ್ನು ಪಡೆದು ಹೀಗೆ ಭಿನ್ನವಾಗಿ ಕಿಟಿ ಪಾರ್ಟಿಯನ್ನು ಏರ್ಪಡಿಸಿ.

ಕಿಟಿಗಾಗಿ ಹೊಸ ವೆನ್ಯೂ ಹುಡುಕಿ

ಕಿಟಿ ಪಾರ್ಟಿಗಳು ಮಧ್ಯಾಹ್ನದ ವೇಳೆಯಲ್ಲೇ ಏರ್ಪಾಡಾಗುತ್ತವೆ. ಪ್ರತಿ ಬಾರಿಯೂ ಹೊಸ ಹೊಸ ಸ್ಥಳಗಳಲ್ಲಿ ಪಾರ್ಟಿ ನಡೆಸಬಹುದು. ಈ ನೆಪದಿಂದ ನೀವು ನಗರದ ಹೊಸ ಸ್ಥಳಗಳು ಮತ್ತು ಹೊಸ ರೆಸ್ಟೋರೆಂಟ್‌ಗಳಿಗೆ ಹೋಗಲು ಅವಕಾಶವಾಗುತ್ತದೆ. ಹೀಗೆ ಜೀವನದಲ್ಲಿ ನಿಮ್ಮ ಗೆಳತಿಯರನ್ನು ಭೇಟಿ ಮಾಡುವುದರ ಜೊತೆಗೆ ಹೊಸ ಸ್ಥಳದಲ್ಲಿ ಸುತ್ತಾಡುವ ಆನಂದ ದೊರೆಯುತ್ತದೆ.

ಪ್ರತಿ ತಿಂಗಳೂ ಕಿಟಿ ಪಾರ್ಟಿಯನ್ನು ವ್ಯವಸ್ಥೆ  ಮಾಡುವ ಜವಾಬ್ದಾರಿ ಒಬ್ಬೊಬ್ಬ ಸದಸ್ಯೆಯದಾಗಿರುತ್ತದೆ. ಸರದಿ ಯಾವ ಸದಸ್ಯೆಯದಾಗಿರುತ್ತದೋ ಆಕೆಯ ಇಷ್ಟದಂತೆ ಸ್ಥಳ ಮತ್ತು ಥೀಮ್ ನ್ನು ನಿಶ್ಚಯಪಡಿಸಲಾಗುತ್ತದೆ.

ಮಾಸ್ಟರ್ಶೆಫ್

ಕೆಲವು ಮಹಿಳೆಯರು ಸ್ವತಃ ಅಡುಗೆ ಮಾಡಿ, ಅದನ್ನೆಲ್ಲ ಟೇಬಲ್ ಮೇಲೆ ಅಲಂಕರಿಸಿ, ಬಡಿಸುವುದರಲ್ಲಿ ಸಂತೋಷಪಡುತ್ತಾರೆ. ಆರ್‌.ಟಿ ನಗರದ ಕೋಮಲ್‌ಗೆ ತನ್ನನ್ನು ಮಾಸ್ಟರ್‌ ಶೆಫ್‌ ಎಂದು ಕರೆಸಿಕೊಳ್ಳುವುದರಲ್ಲಿ ಆನಂದ. ಅವಳು ತನ್ನ ಮನೆಯಲ್ಲೇ ಏರ್ಪಡಿಸುವ ಪಾರ್ಟಿಯಲ್ಲಿ ಗೆಳತಿಯರು ಅವಳ ಸ್ವಯಂಪಾಕದ ವಿಭಿನ್ನ ತಿನಿಸುಗಳ ರುಚಿಯನ್ನು ಆಸ್ವಾದಿಸಿ ಅವಳಿಗೆ ಮಾಸ್ಟರ್‌ಶೆಫ್‌ ಪದವಿಯನ್ನು ನೀಡಿ ಅವಳನ್ನು ಖುಷಿಪಡಿಸಿ, ತಾವು ಖುಷಿಪಡುತ್ತಾರೆ.

ಆದರೆ ಇದೇ ಪಾರ್ಟಿಯ ಮಾನಸಾಳಿಗೆ ಹೀಗೆ ಅಡುಗೆ ಮಾಡುವುದೆಂದರೆ ಅಲರ್ಜಿ, “ದಿನ ಮನೆಯವರಿಗೆಲ್ಲ ಅಡುಗೆ ಮಾಡಿ ಮಾಡಿ ಬೇಸರವಾಗಿರುತ್ತದೆ. ಕಿಟಿ ಪಾರ್ಟಿಯ ನನ್ನ ಸರದಿ ಬಂದಾಗ, ಹೊರಗೆ ಕರೆದುಕೊಂಡು ಹೋಗುವುದೇ ನನ್ನ ಮೊದಲ ಆಯ್ಕೆ,” ಎನ್ನುತ್ತಾಳೆ ಮಾನಸಾ.

ಮಾನಸಾ ತನ್ನ ಗೆಳತಿಯರನ್ನೆಲ್ಲ ಯಾವುದಾದರೂ ರೆಸ್ಟೋರೆಂಟ್‌ಗೆ ಕರೆದೊಯ್ದು ಇಷ್ಟವಾದ ತಿನಿಸುಗಳನ್ನು ಕೊಡಿಸುತ್ತಾಳೆ. ವಯಸ್ಸಾದ ಮಹಿಳೆಯರೂ ಸಹ ಈ ಏರ್ಪಾಡು ಅನುಕೂಲಕರವೆಂದು ಇದನ್ನೇ ಇಷ್ಟಪಡುತ್ತಾರೆ.

ಮನೋರಂಜಕ ಗೇಮ್ಸ್

ಅಂತ್ಯಾಕ್ಷರಿ, ತಂಬೋಲಾ, ಹೌಸಿಗಳಂತಹ ಆಟಗಳು ಸಾಕಾದರೆ ಹೊಸ ಬಗೆಯದನ್ನು ಪ್ರಾರಂಭಿಸಿ. ಸದಸ್ಯೆಯರಿಗೆ ತಮ್ಮ ಫ್ಯಾಷನೆಬಲ್ ಡ್ರೆಸ್‌ ಧರಿಸಿ ಬರಲು ತಿಳಿಸಿ ಮತ್ತು ಒಂದು ರಾಂಪ್‌ ವಾಕ್‌ ಏರ್ಪಡಿಸಿ. ಮಕ್ಕಳ ಆಟಗಳಾದ ಲೂಡೊ. ಹಾವು ಏಣಿ ಮುಂತಾದ ಆಟಗಳು ಮುದ ನೀಡುತ್ತವೆ. ಆಟಗಳನ್ನಾಡಿ ಮನಃಪೂರ್ತಿಯಾಗಿ ನಕ್ಕು ನಲಿಯಿರಿ, 4 ಗಂಟೆಗಳಲ್ಲಿ ಫ್ರೆಶ್‌ ಆಗಿ ಹಿಂದಿರುಗುವಿರಿ.

ನಿಮ್ಮ ಕಿಟಿ ಸಾಹಿತ್ಯದ ವೇದಿಕೆಯಾಗಲಿ

ಓದುವ ಅಭ್ಯಾಸವೇ ಇಂದು ದೂರವಾಗುತ್ತಿದೆ. ನಿಮ್ಮ ಕಿಟಿ ಪಾರ್ಟಿಯಲ್ಲಿ ಕವಿತೆಯನ್ನು ಓದುವ ಕಾರ್ಯಕ್ರಮ ಇರಿಸಿಕೊಳ್ಳಿ. ಎಲ್ಲ ಸದಸ್ಯೆಯರೂ ತಮ್ಮ ಮೆಚ್ಚಿನ ಕವಿತೆಯನ್ನು ಓದಿ ಹೇಳಲಿ. ಕವಿತೆ ಬರೆಯಬಲ್ಲವರು ಬರೆದು ತಂದು ಓದಲಿ. ಕೆಲವೊಮ್ಮೆ ಸದಸ್ಯೆಯರು ತಮ್ಮ ಮೆಚ್ಚಿನ ಪುಸ್ತಕದ ಬಗ್ಗೆ ಮಾತನಾಡಲಿ. ಆಗ ನೋಡಿ, ನಿಮ್ಮ ಗುಂಪಿನ ಮರೆಯಲ್ಲಿರುವ ಒಬ್ಬ ಕವಿಯಿತ್ರಿ ಹೇಗೆ ಮೈ ಕೊಡಹಿ ಮೇಲೆ ಏಳುತ್ತಾಳೆಂಬುದನ್ನು ನೀವೇ ಕಾಣುವಿರಿ. ಹೀಗೆ ಹೊಸ ವಿಷಯಗಳ ಬಗ್ಗೆ ಚರ್ಚಿಸುವುದರಿಂದ ನಿಮ್ಮ ಮನೋಸಾಮರ್ಥ್ಯ ಮೇಲೇರುವುದೆಂಬುದು ನಿಮಗೇ ಅರಿವಾಗುವುದು. ಹಳೆಯ ಕಾದಂಬರಿಗಳನ್ನು ಇಂದಿನ ಹೊಸ ಸದಸ್ಯೆಯರಿಗೆ ಓದಿ ಹೇಳುವುದೂ ಒಳ್ಳೆಯ ಹವ್ಯಾಸ.

ಪ್ರತಿಸ್ಪರ್ಧಿಯಲ್ಲ, ಪ್ರೇರಣೆ

ಈರ್ಷ್ಯೆಗೆ ಇನ್ನೊಂದು ಹೆಸರು ಸ್ತ್ರೀ ಎಂಬುದು ಜನಜನಿತವಾದ ವಿಷಯ. ಆದರೆ ಇಂದಿನ ಮಹಿಳೆಯರು ಪರಸ್ಪರ ಸಹಾಯ ಮಾಡುತ್ತಾರೆ. ಕಿಟಿ ಪಾರ್ಟಿಯ ಮಹಿಳೆಯರು ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾರೆ, ಹೊಸದನ್ನು ಕಲಿಯಲು ಪ್ರೇರೇಪಿಸುತ್ತಾರೆ. ತಮ್ಮ ಗೆಳತಿಯನ್ನು ಸ್ಮಾರ್ಟ್‌ ಆಗಿಸಲು ಸಹಕರಿಸುತ್ತಾರೆ. ಸುಧಾಳ ತೂಕ ಹೆಚ್ಚಾದಾಗ ಅವಳ ಕಿಟಿಯ ಸ್ಮಿತಾ ದಿನ ಬೆಳಗ್ಗೆ ಮತ್ತು ಸಾಯಂಕಾಲ ವಾಕಿಂಗ್‌ಗೆ ಕರೆದೊಯ್ಯಲು ಪ್ರಾರಂಭಿಸಿದಳು. ಸ್ಥೂಲಕಾಯಳಾದ ಪದ್ಮಾ ಮಾಡರ್ನ್‌ ಡ್ರೆಸ್‌ ಧರಿಸಲಾಗದೆ ಉಳಿದಾಗ ಅವಳ ಕಿಟಿ ಗೆಳತಿಯರ ಜೊತೆ ಜೂಂಬಾ ಮಾಡತೊಡಗಿದಳು. ಈಗ ಅವಳು ಫಿಟ್‌ ಅಂಡ್‌ ಫೈನ್‌ ಆಗಿದ್ದಾಳೆ.

ಪ್ರಮೀಳಾ ಭಾರದ್ವಾಜ್ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ