– ಭಾವನಾ ಪ್ರಕಾಶ್‌

ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿ ಇವರು ಜನರಿಂದ ಕಾನೂನುರೀತ್ಯ ಆಸ್ತಿಯ ಹಕ್ಕು ಪಡೆಯುವ ಕುರಿತಂತೆ ನ್ಯಾಯಾಲಯಗಳಲ್ಲಿ ವಕಾಲತ್ತು ವಹಿಸುತ್ತಿರುವ ಬಗ್ಗೆ ಸುದ್ದಿಯಾಗಿದೆ. ಇದರಲ್ಲಿ ಕೆಲವರಿಗೆ ಜಯ ದೊರೆತರೆ, ಮತ್ತೆ ಕೆಲವರು ಯಶಸ್ಸು ಕಂಡಿಲ್ಲ. ನ್ಯಾಯಾಲಯಗಳು ಈ ಕುರಿತಂತೆ ಮೃದು ಧೋರಣೆ ತಳೆಯುತ್ತಿವೆ. ಕೆಲವು ಪ್ರರಣಗಳಲ್ಲಿ ಈ ಬೇಡಿಕೆ ಸರಿಯಾಗಿದ್ದಿರಬಹುದು. ಹಾಗಾಗಿ ನ್ಯಾಯಾಲಯ ಈ ರೀತಿಯ ತೀರ್ಪು ನೀಡಿರಬಹುದು. ಆದರೆ ಇದರ ಇನ್ನೊಂದು ಮುಖ ಇದೆ. ಕಾನೂನಿನಲ್ಲಿ ಉಂಟಾಗುವ ಈ ಬದಲಾವಣೆಯಿಂದ ಸಮಾಜದಲ್ಲಿ ಬಗೆಬಗೆಯ ಸಮಸ್ಯೆಗಳನ್ನು ತಂದೊಡ್ಡಬಹುದು.

ಮದುವೆ ಮತ್ತು ಸಹಜೀವನದಲ್ಲಿ ವ್ಯತ್ಯಾಸ

ಮದುವೆ ಹಾಗೂ ಸಹಜೀವನದ ಮುಖ್ಯ ವ್ಯತ್ಯಾಸವೆಂದರೆ, ಜವಾಬ್ದಾರಿಗಳನ್ನು ಸ್ವೀಕರಿಸುವುದು ಹಾಗೂ ಸ್ವೀಕರಿಸದೇ ಇರುವುದಾಗಿದೆ. ಮದುವೆ ನಮಗೆ ಕರ್ತವ್ಯಗಳನ್ನು ನಿಗದಿಪಡಿಸುತ್ತದೆ. ಹೆಚ್ಚಿನ ಹಕ್ಕುಗಳು ಕರ್ತವ್ಯಗಳನ್ನು ನಿಭಾಯಿಸಿದ ಬಳಿಕವೇ ದೊರಕುತ್ತವೆ. ಹೀಗಾಗಿ ಕರ್ತವ್ಯ ಹಾಗೂ ಹಕ್ಕು ಒಂದೇ ನಾಣ್ಯದ ಎರಡು ಮುಖಗಳಂತೆ ಎಂದು ಹೇಳಲಾಗುತ್ತದೆ. ಆಂಗ್ಲ ಭಾಷೆಯಲ್ಲಿ `ಡ್ಯೂಟಿಸ್‌ ಅಂಡ್‌ ರೈಟ್ಸ್ ಗೋಸ್‌ ಟುಗೆದರ್‌’ ಎಂಬ ಮಾತು ಕೂಡ ಕೇಳಿಬರುತ್ತದೆ.

ಮದುವೆಯ ಕಾನೂನು ವ್ಯಾಖ್ಯೆ ಸಾಮಾನ್ಯವಾಗಿ  ಒಬ್ಬ ಪುರುಷ ಮತ್ತು ಮಹಿಳೆಯ ದೈಹಿಕ ಸಂಬಂಧಕ್ಕೆ ಸೀಮಿತವಾಗಿರಬಹುದು. ಆದರೆ ಧರ್ಮ ಹಾಗೂ ಸಮಾಜದ ಪ್ರಕಾರ, ದೈಹಿಕ ಸುಖ ನೀಡುವುದೊಂದೇ ವೈವಾಹಿಕ ಹೊಣೆಗಾರಿಕೆ ಅಲ್ಲ. ಮದುವೆಯ ಆರ್ಥಿಕ ಬದ್ಧತೆ ಹಾಗೂ ಭರವಸೆ. ಇದಕ್ಕೆ ಸಂಬಂಧಪಟ್ಟ ಕಾನೂನು ಹಕ್ಕುಗಳು ಧರ್ಮದ ಮುಖಾಂತರ ನೀಡಲ್ಪಟ್ಟ ಹಕ್ಕುಗಳ ರೂಪವಾಗಿದೆ. ಹೀಗಾಗಿ ಈ ಭರವಸೆಯ ಕಾರಣದಿಂದ ಇದು ಅಸ್ತಿತ್ವಕ್ಕೆ ಬಂದಿದೆ. ಈ ಭರವಸೆ ಇಡೀ ಕುಟುಂಬಕ್ಕೆ ಭಾವನಾತ್ಮಕ ಸುರಕ್ಷತೆ ದೊರಕಿಸಿಕೊಡುವುದಾಗಿ ಬರುತ್ತದೆ. ಬಹುಶಃ ಒಬ್ಬರು ಬದುಕಿರದಿದ್ದರೂ ಇನ್ನೊಬ್ಬರು ಆ ಹೊಣೆಗಾರಿಕೆಯನ್ನು ನಿಭಾಯಿಸುತ್ತಾರೆ. ಅವರಿಗೆ ಆಸ್ತಿಯ ಹಕ್ಕು ಕೂಡ ಸಹಜವಾಗಿ ದೊರೆಯುತ್ತದೆ.

ಭಾರತೀಯ ಸಂಸತ್ತಿನಲ್ಲಿ ವಿವಾಹವನ್ನು ಪವಿತ್ರ ಗೃಹಸ್ಥಾಶ್ರಮದ ಪ್ರವೇಶ ಎಂದು ಏಕೆ ಭಾವಿಸಲಾಗಿದೆ? ಇಲ್ಲಿ ಎರಡು ಕುಟುಂಬಗಳ ಮಿಲನವಾಗುತ್ತದೆ. ವಿವಾಹದ ಮುಖಾಂತರ ಗಂಡಹೆಂಡತಿ ಪರಸ್ಪರರ ಕುಟುಂಬದೊಂದಿಗೆ ಜೋಡಿಸಲ್ಪಡುತ್ತಾರೆ. ಅಂದಹಾಗೆ ಆರಂಭದಲ್ಲಿ ಅವರಲ್ಲಿ ಕೆಲವು ವೈಚಾರಿಕ ಅಥವಾ ಅಹಂಕಾರಕ್ಕೆ ಸಂಬಂಧಪಟ್ಟ ತಾಕಲಾಟ ಉಂಟಾಗುತ್ತದೆ.     ಆದರೆ ಕೆಲವು ಸಮಯದ ಬಳಿಕ ರೀತಿರಿವಾಜುಗಳ ಮುಖಾಂತರ ಅಥವಾ ಪರಸ್ಪರರ ಗೌರವ ಕಾಪಾಡಲು ಒಳ್ಳೆಯ ಮನಸ್ಸಿನಿಂದ ತನ್ನ ಗಂಡ ಅಥವಾ ಹೆಂಡತಿಯ ಸಂಬಂಧಿಗಳ ಜೊತೆ ನಿಕಟತೆ ಬೆಳೆಸಿಕೊಳ್ಳುತ್ತ ಹೆಚ್ಚಿನ ಜನರ ಜೊತೆ ಆತ್ಮೀಯತೆ ಬೆಳೆಯುತ್ತದೆ. ಕರ್ತವ್ಯವನ್ನು ಒಳ್ಳೆಯ ಮನಸ್ಸಿನಿಂದ ನಿಭಾಯಿಸುತ್ತಾ ಸ್ನೇಹ ಬೆಳೆಸುವ ಈ ಪ್ರಕ್ರಿಯೆಯೇ ನಮ್ಮ ಸಂಸ್ಕೃತಿಯ ಆಧಾರಸ್ತಂಭವಾಗಿದೆ. ಅದನ್ನು ನಿರಾಕರಿಸುವುದೇ ಸಹಜೀವನದ ಒಂದು ಪ್ರಮುಖ ಉದ್ದೇಶವಾಗಿದೆ. ಮನುಷ್ಯನ ಒಳ್ಳೆಯ ಗುಣಗಳು ಹಾಗೂ ದೌರ್ಬಲ್ಯಗಳೊಂದಿಗೆ ಅದನ್ನು ಸ್ವೀಕರಿಸುವುದೇ ಪ್ರೀತಿಯಾಗಿದೆ. ಹೀಗಾಗಿ ವೈದಿಕ ಸಮಾಜದಲ್ಲಿ ಹೆಂಡತಿಯನ್ನು ಗಂಡನ ಅರ್ಧಾಂಗಿನಿಯೆಂದು ಭಾವಿಸಲಾಗುತ್ತದೆ. ಇದರ ಜೊತೆಜೊತೆಗೆ  ಗಂಡನ ಜವಾಬ್ದಾರಿಗಳ ಜೊತೆಗೆ ಆತನ ಆಸ್ತಿಯ ಮೇಲೂ ಸಮಾನ ರೂಪದಲ್ಲಿ ಹಕ್ಕು ಇದೆ ಎನ್ನುವುದನ್ನು ನಿರ್ಧರಿಸಲಾಯಿತು.

ಕಾಲದ ಓಟಕ್ಕೆ ತಕ್ಕಂತೆ ಧರ್ಮದ ಕೈಯಲ್ಲಿದ್ದ ಆ ಸ್ಥಾನವನ್ನು ಕಾನೂನು ಕೈಗೆತ್ತಿಕೊಂಡಿತು ಹಾಗೂ ವೈದಿಕ ಸಮಾಜದ ಅದೇ ನಿಯಮ ಕಾನೂನುಗಳು ಆಧಾರಸ್ತಂಭವಾದವು. ಸಮಯದ ಚಕ್ರ ಹಾಗೆಯೇ ಸುತ್ತುತ್ತಲಿತ್ತು. ಮನುಷ್ಯ ಜಾಣ ಹಾಗೂ ತನ್ನಷ್ಟಕ್ಕೆ ತಾನು ಎಂಬಷ್ಟರ ಮಟ್ಟಿಗೆ ಆಗಿಹೋದ. ಇದರಿಂದ ಹುಟ್ಟಿಕೊಂಡ ಪರ್ಯಾಯವೆಂದರೆ ಸಮಾಜದ ಬಂಧನ ಕನಿಷ್ಠ ಮಟ್ಟದಲ್ಲಿರಬೇಕು. ಈ ಕಾರಣದಿಂದಾಗಿ ಮೊದಲು ಅವಿಭಕ್ತ ಕುಟುಂಬದ ಪರಂಪಾರಗತ ರಚನೆ ಒಡೆದುಹೋಯಿತು. ಬಳಿಕ ದಾಂಪತ್ಯ ಸಹಜೀವನದ ಪರ್ಯಾಯ ಬೆಳಕಿಗೆ ಬಂತು. ಆದರೆ ಇಲ್ಲಿ ಕಂಡುಬಂದ ಒಂದು ಸಂಗತಿ ಎಂದರೆ, ಕರ್ತವ್ಯರಹಿತ ಮತ್ತು ಬಂಧಮುಕ್ತ ಜೀವನವನ್ನು ಅತ್ಯಂತ ಖುಷಿಯಿಂದ ಕಳೆದರೂ, ಒಂದು ಹಂತದ ಬಳಿಕ ತಮ್ಮನ್ನು ತಾವು ಏಕಾಂಗಿ ಎಂದು ಭಾವಿಸುತ್ತಾರೆ. ತಮ್ಮದು ಅಸುರಕ್ಷಿತ ಜೀವನವೆಂದು ಅವರಿಗೆ ಅನಿಸುತ್ತಿರುತ್ತದೆ. ಇಂತಹ ಸ್ಥಿತಿಯಲ್ಲಿ ಕೆಲವರು ನ್ಯಾಯಾಲಯದ ಬಾಗಿಲು ತಟ್ಟಿರಬಹುದು.

ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಜೊತೆ ಹೆಚ್ಚು ದಿನಗಳ ಕಾಲ ಜೊತೆಜೊತೆಗೆ ಇದ್ದುದರಿಂದ ಹಕ್ಕಿನ ಭಾವನೆ ಜಾಗೃತಗೊಂಡಿರಬಹುದು. ಆದರೆ ಮುಖ್ಯ ಸತ್ಯ ಏನೆಂದರೆ, ಭಾರತೀಯ ಸಮಾಜದಲ್ಲಿ ಕೇವಲ ದೈಹಿಕ ಸುಖವೊಂದೇ ವೈವಾಹಿಕ ವ್ಯವಸ್ಥೆಯ ಅರ್ಥ ಅಲ್ಲ. ಇಂತಹದರಲ್ಲಿ ದೀರ್ಘ ಅವಧಿಯ ತನಕ ಒಬ್ಬ ವ್ಯಕ್ತಿಯ ಜೊತೆಗೆ ದೈಹಿಕ ನಿಷ್ಠೆ ತೋರಿಸಿದ್ದರಿಂದಾಗಿ ಆಸ್ತಿಯ ಹಕ್ಕು ದೊರೆಯುವುದು ವೈವಾಹಿಕ ಕರ್ತವ್ಯಗಳ ಬಂಧನದ ಅಡಿಪಾಯವನ್ನು ದುರ್ಬಲಗೊಳಿಸುವುದಿಲ್ಲವೇ?

ಆದರೆ ಈ ನಾಣ್ಯದ ಮತ್ತೊಂದು ಮುಖದ ಬಗ್ಗೆ ಗಮನಿಸುವುದು ಅತ್ಯವಶ್ಯ. ಕಾಲಕ್ಕೆ ತಕ್ಕಂತೆ ಸ್ತ್ರೀಯರು ಎಲ್ಲ ಬಗೆಯ ರಂಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಮಾಜದ ದೃಷ್ಟಿಯಲ್ಲಿ ಇದು ಗೌರವದ ಸಂಗತಿಯೇ ಹೌದು. ಕೆಲವು ರಂಗಗಳು ಹೇಗಿರುತ್ತವೆಂದರೆ, ಅಲ್ಲಿ ಗೃಹಸ್ಥ ಜೀವನದ ಯಾವ ಅವಕಾಶಗಳೂ ಇರುವುದಿಲ್ಲ. ಇನ್ನು ಕೆಲವರು ಹೇಗಿರುತ್ತಾರೆಂದರೆ, ಅವರಿಗೆ ಸಂಬಂಧಗಳಿಂದ ಯಾವ ಬಂಧನ ಬೇಕಿರುವುದಿಲ್ಲ.

ಮತ್ತೆ ಕೆಲವರು ಹೇಗಿರುತ್ತಾರೆಂದರೆ, ಅವರಿಗೆ ಸಂಬಂಧಗಳ ಪರವಾಗಿ ಬಂಧಮುಕ್ತ ಅಥವಾ ಜವಾಬ್ದಾರಿರಹಿತ ಜೀವನ ಅವಶ್ಯಕವಾಗಿರುತ್ತದೆ. ಈ ರೀತಿಯ ಜೀವನವನ್ನು ಆಯ್ಕೆ ಮಾಡಿಕೊಳ್ಳುವವರಿಗೆ ವಿರುದ್ಧ ಲಿಂಗಿಯ ಸಹವಾಸದ ನೈಸರ್ಗಿಕ ಅಪೇಕ್ಷೆಯನ್ನು ಇಟ್ಟುಕೊಳ್ಳುವ ಹಕ್ಕು ಇಲ್ಲವೆ? ನಿಜವಾಗಿಯೂ ಇದೆ. ಸಾಮಾಜಿಕ ರಚನೆ ಹಾಗೂ ವಿಚಾರಧಾರೆಗಳು ಸತತ ಪರಿವರ್ತನೆಯ ಲಕ್ಷಣಗಳಾಗಿವೆ. ಅವನ್ನು ಪ್ರತಿಬಂಧ ಮಾಡಲು ಆಗುವುದಿಲ್ಲ.

ಹಾಗಾಗಿ ಸಮಾಜದಲ್ಲಿ ಇದರ ಸ್ವಾಗತ ಅವಶ್ಯಕವಾಗಿ ಆಗಬೇಕು. ಆದರೆ ಇದಕ್ಕೆ ಕಾನೂನಿನ ಹಕ್ಕು ಕೊಡುವುದು ಮನುಷ್ಯನನ್ನು ಕರ್ತವ್ಯಹೀನ ಜೀವನಕ್ಕೆ ಪ್ರೇರಣೆ ಮಾಡಬಹುದು. ಒಂದು ವೇಳೆ ಯಾವುದೇ ಒಂದು ಜೋಡಿ ಸ್ವೇಚ್ಛೆಯಿಂದ ಬಂಧಮುಕ್ತ ಜೀವನ ನಡೆಸುತ್ತಿದ್ದರೆ, ಇವತ್ತಲ್ಲ ನಾಳೆ ಪಾಶ್ಚಾತ್ಯ ಸಮಾಜದ ಹಾಗೆ ನಮ್ಮ ಸಮಾಜಕ್ಕೂ ಕೂಡ ಅದನ್ನು ಗೌರವದಿಂದ, ತಮ್ಮದೇ ಆದ ಕರಾರಿನ ಮೇರೆಗೆ ಜೀವನ ನಡೆಸುವ ಹಕ್ಕು ಕೊಡಲೇ ಬೇಕಾಗುತ್ತದೆ. ಆದರೆ ಇಂತಹ ಜೀವನ ನಡೆಸುವವರಿಗೆ ಕರ್ತವ್ಯದಿಂದ ವಿಮುಖರಾಗುವುದು ಎಂದರೆ ಹಕ್ಕುಗಳಿಂದ ವಂಚಿತರಾಗುವುದು ಎಂಬುದು ಕೂಡ ಗೊತ್ತಾಗಬೇಕು.

Tags:
COMMENT