– ಭರತ್‌ ಭೂಷಣ್‌

ಭಾರತವನ್ನು ವ್ಯಂಜನಗಳ ಮಹಾದೇಶ ಎನ್ನಲಾಗುತ್ತದೆ. ನಮ್ಮ ದೇಶವಂತೂ, 5 ಕೋಸು (3-   ಮೈಲಿ) ದೂರಕ್ಕೆ ನೀರು ಬದಲಾಗುವುದಕ್ಕೂ 4 ಕೋಸುಗಳಿಗೆ ಭಾಷಾ ಶೈಲಿ ಬದಲಾಗುವುದಕ್ಕೂ, ಮೊದಲಿನಿಂದ ಹೆಸರು ಗಳಿಸಿದೆ. ಅದರಲ್ಲೂ ಮುಖ್ಯವಾಗಿ ಬಗೆಬಗೆಯ ವ್ಯಂಜನಗಳು, ಅಡುಗೆಗಳ ವಿಚಾರವಾಗಿ ನೋಡಿದರೆ ಅದು ಎಂಥ ವಿಶ್ವವಿಖ್ಯಾತ ಎಂಬುದು ಗೊತ್ತಿರುವ ವಿಚಾರ. ಅದರಲ್ಲೂ ಒಂದೇ ವ್ಯಂಜನವಾದರೂ ಪ್ರತಿ ಮನೆಯಲ್ಲೂ ಅದು ವಿಭಿನ್ನ ರೀತಿ ರುಚಿ ಗಳಿಸಿರುತ್ತದೆ ಎಂಬುದು ನಿಜಕ್ಕೂ ಸೋಜಿಗ. ಒಂದೇ ತರಹದ ವಸ್ತುವಿನಿಂದ ನಮ್ಮ ದೇಶದಲ್ಲಿ ಪ್ರತಿ ಮನೆಯಲ್ಲೂ ವೈವಿಧ್ಯಮಯ ವ್ಯಂಜನಗಳು ತಯಾರಾಗುವುದು ವಿಸ್ಮಯಕಾರಿ ವಿಷಯ. ಇದರಿಂದ ನಮ್ಮಲ್ಲಿ ಆಹಾರದ ಸಮೃದ್ಧಿ, ವ್ಯಂಜನಗಳ ವೈವಿಧ್ಯತೆಗಳನ್ನು ಗುರುತಿಸಬಹುದಾಗಿದೆ.

ಕೆಲವು ವರ್ಷಗಳ ಹಿಂದೆ ಡಿಸ್ಕವರಿ ಚ್ಯಾನೆಲ್‌ ಭಾರತೀಯ ಆಹಾರ ಪದ್ಧತಿಗಳ ಕುರಿತಾದ ಡಾಕ್ಯುಮೆಂಟರಿಯ ಒಂದು ಶೃಂಖಲೆ ಪ್ರಸಾರಿಸಿತು. ಇದರಲ್ಲಿ ಪ್ರಪಂಚದಲ್ಲಿ ಒಟ್ಟು ಲಭ್ಯವಿರುವ ಸುಮಾರು 82 ಸಾವಿರ ಬಗೆಯ ವ್ಯಂಜನಗಳಲ್ಲಿ ಕೇವಲ ಭಾರತ ದೇಶ ಒಂದರಿಂದಲೇ 77 ಸಾವಿರ ವ್ಯಂಜನಗಳು ತಯಾರಾಗುತ್ತವೆ, ಎಂದ ಮೇಲೆ  ಇದು ವ್ಯಂಜನಗಳ ಮಹಾದೇಶ ಅಲ್ಲದೆ ಮತ್ತೇನು? ಚೀನಾದಿಂದ 2 ಸಾವಿರ ಹಾಗೂ ಉಳಿದ 3 ಸಾವಿರ ವಿಶ್ವದ ಬೇರೆಲ್ಲ ದೇಶಗಳ ಕೊಡುಗೆ ಎನಿಸಿದೆ. ಈ ಅಂಕಿಸಂಖ್ಯೆಗಳಿಂದ ನಮ್ಮ ದೇಶ ಆಹಾರದಲ್ಲಿ ಎಂಥ ಸಮೃದ್ಧಿ ಸಾಧಿಸಿದೆ ಎಂಬುದು ತಿಳಿಯುತ್ತದೆ.

ಆದರೆ ಇದೆಂಥ ವಿಡಂಬನೆ….? ಯಾವ ದೇಶದಲ್ಲಿ ಆಹಾರದ ಕುರಿತಾಗಿ ಇಂಥ ಅಖಂಡ ವೈವಿಧ್ಯಗಳಿದ್ದು, ಮೌಲಿಕ ಸ್ವಾದದ ಭಂಡಾರ ಎನಿಸಿವೆ. ರುಚಿಗಳ ಮಹಾಸಾಗರ ಎನಿಸಿರುವ ಈ ನಮ್ಮ ದೇಶದಲ್ಲೇ ಇತ್ತೀಚೆಗೆ ಕೆಲವೇ ವಿದೇಶಿ ವ್ಯಂಜನಗಳು ಹಿಂದಿನದೆಲ್ಲಾ ರುಚಿಗಳನ್ನು ಮೂಲೆಗುಂಪಾಗಿಸುವಂತೆ ಜನಪ್ರಿಯತೆ ಗಳಿಸುತ್ತಿರುವುದು ಪರಮಾಶ್ಚರ್ಯಕರ ಸತ್ಯವೇ ಹೌದು! ಇತ್ತೀಚೆಗಂತೂ ನಮ್ಮ ದೇಶದಲ್ಲಿ ಎಲ್ಲೆಲ್ಲೂ ಚೈನೀಸ್‌, ಥಾಯ್‌, ಇಟ್ಯಾಲಿಯನ್‌, ಮೆಕ್ಸಿಕನ್‌, ಸ್ಪೇನ್ ವ್ಯಂಜನಗಳ ಚಮತ್ಕಾರ ಇಡೀ ದೇಶದ ತುಂಬಾ ಹರಡಿಹೋಗಿದೆ. ಭಾರತದ ಮಹಾನಗರಗಳು ಅಥವಾ ತಾಲ್ಲೂಕು ಕೇಂದ್ರಗಳಿರಲಿ…. ಚಾಉಮೀನ್‌, ಚಿಲಿ ಪೊಟೇಟೋ, ಮಂಚೂರಿಯನ್‌, ಪಿಜ್ಜಾ, ಬರ್ಗರ್‌, ಫ್ರೆಂಚ್‌ಫ್ರೈ, ಪಾಸ್ತಾ, ನೂಡಲ್ಸ್……. ಇತ್ಯಾದಿ ಹಲವು ಹನ್ನೊಂದು ಬಗೆಯ ಖಾದ್ಯಗಳು ಇಂದಿನ ಯುವಜನತೆಯನ್ನು ಹುಚ್ಚೆದ್ದು ಕುಣಿಸುತ್ತವೆ. ಈ ಜಾಗತೀಕರಣದ ಯುಗದಲ್ಲಿ ಭಾರತೀಯ ವ್ಯಂಜನಗಳು ವಿದೇಶೀ ವ್ಯಂಜನಗಳ ಮುಂದೆ ಸೋತುಹೋಗಿವೆಯೇ?

videshi-vyanjan

ಭಾರತೀಯ ಮಾರುಕಟ್ಟೆಯಲ್ಲಿ ವ್ಯತ್ಯಯ

90ರ ದಶಕದಲ್ಲಿ ಜಾಗತೀಕರಣದ ಪ್ರಭಾವದ ಕುರಿತಾಗಿ ನಮ್ಮಲ್ಲಿ ಎಲ್ಲೆಲ್ಲೂ ಚರ್ಚೆಗಳಾಗುತ್ತಿದ್ದಾಗ, ಅದನ್ನು ಸಮರ್ಥಿಸುತ್ತಿದ್ದವರಿಗೂ ಸಹ ಮುಂದಿನ ಕೆಲವೇ ವರ್ಷಗಳಲ್ಲಿ ನಮ್ಮ ಆಹಾರ ಕ್ರಮದಲ್ಲಿ ವಿದೇಶೀ ಪ್ರಭಾವ ಇಷ್ಟು ಗಾಢವಾಗುತ್ತದೆಂದು ಗೊತ್ತಿರಲಿಲ್ಲ. ಜಾಗತೀಕರಣದ ಕಟ್ಟಾ ಸಮರ್ಥಕರೂ ಸಹ, ಭಾರತೀಯರು ತಮ್ಮ ಆಹಾರಾಭ್ಯಾಸ, ತಮ್ಮ ಸಂಬಂಧಗಳು, ತಮ್ಮ ರೀತಿ ರಿವಾಜುಗಳನ್ನು ಎಂದೂ ಬಿಟ್ಟುಕೊಡುವುದಿಲ್ಲ ಎಂದೇ ವಾದಿಸುತ್ತಿದ್ದರು. ಹೀಗಾಗಿ ನಮ್ಮ ದೇಶದಲ್ಲಿ ಪಿಜ್ಜಾ, ಬರ್ಗರ್‌, ಹಾಟ್‌ಡಾಗ್‌, ಚಾಉಮೀನ್‌ಗಳ ಅಬ್ಬರ ಕನಿಷ್ಠ ಅಪ್ಪಟ ದೇಶೀ ರೆಸ್ಟೋರೆಂಟ್‌ಗಳನ್ನೇನೂ ಮಾಡದು ಎನ್ನುತ್ತಿದ್ದರು. ಆದರೆ ಕಳೆದ 2 ದಶಕಗಳ ವ್ಯಾವಹಾರಿಕ ಅನುಭವ ಈ ಅಭಿಪ್ರಾಯ ಬದಲಾಯಿಸಿದೆ. 1996ರಲ್ಲಿ ದೇಶದ ಮೊದಲ ವಿದೇಶೀ ಫಾಸ್ಟ್ ಫುಡ್ ಔಟ್‌ಲೆಟ್‌, ಡಾಮಿನೋಸ್‌ ಪಿಜ್ಜಾ, ರಾಷ್ಟ್ರ ರಾಜಧಾನಿಯಾದ ನವದೆಹಲಿಯಲ್ಲಿ ತೆರೆಯಲ್ಪಟ್ಟಿತು.

ನಂತರ ಅದೇ ವರ್ಷ ಪಿಜ್ಜಾ ಕಾರ್ನರ್‌, ಪಿಜ್ಜಾ ಹಟ್‌, ವರ್ಷಾಂತ್ಯದಲ್ಲಿ ಮ್ಯಾಕ್‌ಡೊನಾಲ್ಡ್ಸ್ ಭಾರತೀಯ ಆಹಾರೋದ್ಯಮದಲ್ಲಿ ದೊಡ್ಡ ಕ್ರಾಂತಿಯನ್ನೇ ಉಂಟಮಾಡಿಬಿಟ್ಟಿತು.  ಆಗಲೂ ಸಹ ದೇಶೀ ರೆಸ್ಟೋರೆಂಟ್‌ಗಳ ಮಾಲೀಕರು ಒಂದಿಷ್ಟೂ ಚಿಂತಿಸಲು ಹೋಗಲಿಲ್ಲ. ಸದಾ ಪಾರಂಪರಿಕ ಆಹಾರಕ್ಕೇ ಮಹತ್ವ ನೀಡುವ ಭಾರತೀಯರು ಈ ವಿದೇಶೀ ಮಾಲಿಗೆ ಮಾರುಹೋಗಲಾರರು ಎಂದೇ ಅವರು ಭಾವಿಸಿದ್ದರು.

ದಿನೇದಿನೇ ಹೆಚ್ಚುತ್ತಿರುವ ಜನಪ್ರಿಯತೆ

ಆದರೆ ಮುಂದೆ ನಡೆದದ್ದೇನು…..? ಕೇವಲ 2 ದಶಕಗಳ ಕಾಲಾವಧಿಯಲ್ಲಿ ಇಂದು ಭಾರತದಲ್ಲಿ ವಿದೇಶೀ ಫುಡ್‌ ಚೇನ್ಸ್ ನ ಚಿತ್ರ ಸಂಪೂರ್ಣವಾಗಿ ಬದಲಾಗಿದೆ. ಇಂದು ನಮ್ಮ ದೇಶದ ಮಹಾನಗರಗಳು ಮಾತ್ರವಲ್ಲದೆ, 300ಕ್ಕೂ ಹೆಚ್ಚು ಸಣ್ಣಪುಟ್ಟ ನಗರಗಳಲ್ಲೂ ವಿದೇಶೀ ಫಾಸ್ಟ್ ಫುಡ್‌ನ ಔಟ್‌ಲೆಟ್ಸ್ ರಾರಾಜಿಸುತ್ತಿವೆ. ದಿನೇದಿನೇ ಇವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇವುಗಳಿಗಾಗಿ ಮುಗಿಬೀಳುತ್ತಿರುವ ಭಾರತೀಯರ ಹುಚ್ಚಿಗೆ ಏನು ಹೇಳುವುದು? ಕೆಲವು ವರ್ಷಗಳ ಹಿಂದೆ ಕಾನ್ಪುರದಲ್ಲಿ ಪಿಜ್ಜಾ ಕಾರ್ನರ್‌ ಔಟ್‌ಲೆಟ್‌ ತೆರೆಯಲ್ಪಟ್ಟಾಗ, ಅಲ್ಲಿ ಎಷ್ಟು ಗ್ರಾಹಕರು ಸೇರಿದ್ದರೆಂದರೆ, ಆ ಜನದಟ್ಟಣೆ ನಿಯಂತ್ರಿಸಲು ಅನಿವಾರ್ಯವಾಗಿ ಪೊಲೀಸರನ್ನು ಕರೆಸಬೇಕಾಯಿತಂತೆ!

ಇಂದು ದೇಶಾದ್ಯಂತ ಪರಿಶೀಲಿಸಿದಾಗ, ದಿನವೊಂದಕ್ಕೇನೇ ಎಷ್ಟೋ ಕೋಟ್ಯಂತರ ರೂ.ಗಳ ವಿದೇಶೀ ಫಾಸ್ಟ್ ಫುಡ್‌ ಸೇಲ್‌ ಆಗುತ್ತಿರುವುದು ತಿಳಿಯುತ್ತದೆ. ಮುಖ್ಯವಾಗಿ ಇದರಲ್ಲಿ ದೇಶೀ ರೆಸ್ಟೋರೆಂಟ್‌ ಹಾಗೂ ದರ್ಶಿನಿಗಳ ಪಾತ್ರವೇನೂ ಚಿಕ್ಕದಲ್ಲ. ಹೀಗೆ ವಿದೇಶೀ ಫಾಸ್ಟ್ ಫುಡ್‌ ಮಹಾನಗರಗಳಾದ ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್‌, ಕೊಚ್ಚಿನ್‌ಗಳಲ್ಲಿ ಇಂದು ಎಲ್ಲೆಲ್ಲೂ ವಿದೇಶೀ ಫಾಸ್ಟ್ ಫುಡ್‌ ರಾರಾಜಿಸುತ್ತದೆ. ಇಂಥ ಕಡೆಯಲ್ಲಿ ಮಾತ್ರವಲ್ಲದೆ, ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಮ್ಯಾಕ್‌ಡೊನಾಲ್ಡ್ಸ್, ಪಿಜ್ಜಾ ಕಾರ್ನರ್‌, ಡಾಮಿನೋಸ್‌ ಪಿಜ್ಜಾ, ಕೆಎಫ್‌ಸಿಗಳ ಔಟ್‌ಲೆಟ್ಸ್ ಮೆರೆಯುತ್ತಿವೆ.

Pizza-Roll-Ups

ಭಾರತೀಯ ಗ್ರೂಪ್‌ಗಳ ಯೋಜನೆ

1996ರಲ್ಲಿ ಮ್ಯಾಕ್‌ಡೋನಾಸಲ್ಡ್ಸ್ ಕಾರ್ಪೊರೇಷನ್‌ ಯುಎಸ್‌ಎ, ಭಾರತದಲ್ಲಿ ತನ್ನ 2 ಮಾಸ್ಟರ್‌ ಫ್ರಾಂಚೈಸಿಗಳಾದ ಹಾರ್ಡ್‌ಕೇಸ್‌ ರೆಸ್ಟೋರೆಂಟ್ಸ್ ಪ್ರೈ ಲಿ., ಮೂಲಕ ಭಾರತದಲ್ಲಿ ದಾಂಗುಡಿಯಿಟ್ಟಾಗ, ಭಾರತೀಯ ರೆಸ್ಟೋರೆಂಟ್‌ ಗಳ ಮಾಲೀಕರ ಅಭಿಪ್ರಾಯವೆಂದರೆ, ಮ್ಯಾಕ್‌ಡೊನಾಲ್ಡ್ಸ್ ಕೆಲವು ದಿನ ಕುಣಿದು ಕುಪ್ಪಳಿಸಿ ವಾಪಸ್‌ ಹೋಗಿಬಿಡುತ್ತವೆ ಅಂತ. ಏಕೆಂದರೆ ಭಾರತೀಯರಿಗೆ ಎಂದಿದ್ದರೂ ತಮ್ಮ ಸಾಂಪ್ರದಾಯಿಕ ಹಾಗೂ ಆಧುನಿಕರಿಗೆ ಕಷ್ಟವೆನಿಸುವಂಥ ತಿನಿಸುಗಳನ್ನೇ ಬಯಸುತ್ತಾರೆ, ಎಂದೂ ಬಿಟ್ಟುಕೊಡುವುದಿಲ್ಲ. ಅಂಥವನ್ನು ವಿದೇಶೀ ರೆಸ್ಟೋರೆಂಟ್‌ಗಳು ಎಂದೂ ತಯಾರಿಸಲಾರವು ಎಂಬುದು ಬಲವಾದ ನಂಬಿಕೆಯಾಗಿತ್ತು. ಆದರೆ ಪ್ರಸ್ತುತ ಮ್ಯಾಕ್‌ಡೊನಾಲ್ಡ್ಸ್, ಫುಡ್‌ ಚೇನ್ಸ್, ವಿಶ್ವದ ಅತಿ ಹೆಚ್ಚು ದೇಶಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಇಂದಿಗೂ ಭಾರತೀಯ ರೆಸ್ಟೋರೆಂಟ್‌ನ ಮಾಲೀಕರು ತಮ್ಮ ವಿಸ್ತೃತ ಫುಡ್‌ ಚೇನ್ಸ್ ಎಂದಿಗೂ ಮುಗ್ಗರಿಸದು ಎಂದೇ ನಂಬುತ್ತಾರೆ.

ಆದರೆ ಅದು ತಪ್ಪು ಎಂದು ಕ್ರಮೇಣ ಸಾಬೀತಾಯಿತು. ಇಂದಿಗೂ ಭಾರತೀಯರು ತಮ್ಮ ಮೂಲ ಅಡುಗೆಗಳಿಗೆ, ಖಾದ್ಯಗಳಿಗೆ ಬಹು ಬೆಲೆ ಕೊಡುತ್ತಾರೆ ಎಂಬುದು ಸರಿ. ಆದರೆ ಅವರು ಅಷ್ಟೇ ಯಶಸ್ವೀ ಪ್ರಯೋಗಶೀಲರು ಎಂಬುದೂ ನಿಜ. ಹೀಗಾಗಿ ವಿದೇಶಿ ವ್ಯಂಜನಗಳು ಅವರಿಗೆ ಅಪಥ್ಯವಲ್ಲ. ಪರಿಣಾಮ, ಯಾವ ಮ್ಯಾಕ್‌ಡೊನಾಲ್ಡ್ಸ್ ಕೇವಲ 6 ತಿಂಗಳಲ್ಲೇ ಕುಸಿಯುತ್ತದೆ ಎಂದು ನಂಬಿದ್ದರೋ, ಅದು ಹುಸಿಯಾಗಿ ಓಹೋ ಎಂದು ಸಾಗುತ್ತಿದೆ.

ಇಂದು ಇಡೀ ಭಾರತದಾದ್ಯಂತ ಮ್ಯಾಕ್‌ಡೊನಾಲ್ಡ್ಸ್ ನ 220ಕ್ಕೂ ಹೆಚ್ಚಿನ ಔಟ್‌ಲೆಟ್ಸ್ ಗಳಿದ್ದು, ಅದರಲ್ಲಿ 120ಕ್ಕೂ ಹೆಚ್ಚು ಕೇವಲ ಉತ್ತರ ಹಾಗೂ ಪೂರ್ವ ಭಾರತದಲ್ಲಿ ಹಾಗೂ 48 ದಕ್ಷಿಣದಲ್ಲಿ ಮತ್ತು 60 ಪಶ್ಚಿಮ ಭಾರತದಲ್ಲಿ ನಡೆಯುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ಈ ಸಂಖ್ಯೆ ಹೆಚ್ಚಾಗಿ 500 ದಾಟಿದರೂ ಆಶ್ಚರ್ಯವಿಲ್ಲ. ಆದರೆ ಯಾವ ದೇಶೀ ರೆಸ್ಟೋರೆಂಟ್‌ ಕೂಡ ಅಖಿಲ ಭಾರತೀಯ ಮಟ್ಟದಲ್ಲಿ ಹರಡಿದ್ದಿಲ್ಲ. ಅಖಿಲ ಭಾರತೀಯ ಒಂದೆಡೆ ಇರಲಿ, ಯಾವ ಫುಡ್‌ ಜೇನ್ಸ್ ಕೂಡ ಒಟ್ಟೊಟ್ಟಿಗೆ 5-6 ರಾಜ್ಯಗಳಲ್ಲಿ ಕಾಣಿಸಿದ್ದಿಲ್ಲ. ಹೀಗಾಗಿ ಮ್ಯಾಕ್‌ಡೊನಾಲ್ಡ್ಸ್ ಮತ್ತಿತರ ವಿದೇಶಿ ಫುಡ್‌ ಚೇನ್ಸ್ ನಿಂದ ಪಾಠ ಕಲಿತು ಇದೀಗ ನಿರುಲಾಸ್‌, ಹಲ್ದೀರಾಮ್, ಸಾಗರ್‌ ರತ್ನಾ ಮುಂತಾದ ಭಾರತೀಯ ಗ್ರೂಪ್‌ಗಳು ತಮ್ಮ ರೇಂಜ್‌ ವಿಸ್ತರಿಸಲು ಯತ್ನಿಸುತ್ತಿವೆ. ಆದರೆ ಇದುವರೆಗೂ ಇದರಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ವಿಸ್ತೃತ ಭಾರತ ಶಾಮೀಲಾಗಿಲ್ಲ.

ಯಶಸ್ಸಿನ ಗಾಥೆ

ಮ್ಯಾಕ್‌ಡೊನಾಲ್ಡ್ಸ್ ನ ಯಶಸ್ಸಿನ ಕಥೆ ಒಂಟಿ ಏನಲ್ಲ. ಅದೇ ವರ್ಷ ಪಿಜ್ಜಾ ಕಾರ್ನರ್‌ ಸಹ ಇದರೊಟ್ಟಿಗೆ ಬಂದಿತ್ತು. ಅದೂ ಸಹ ಬೇಗ ಬೇಗ ತನ್ನ ವಿಸ್ತೃತ ಶಾಖೆಗಳನ್ನು ತೆರೆಯಿತು. ಇಂದು ಪಿಜ್ಜಾ ಕಾರ್ನರ್‌ ದೇಶದ 50ಕ್ಕೂ ಹೆಚ್ಚು ಸಣ್ಣಪುಟ್ಟ ಊರುಗಳನ್ನೂ ಸೇರಿಸಿಕೊಂಡು, 150ಕ್ಕೂ ಹೆಚ್ಚಿನ ಔಟ್‌ಲೆಟ್ಸ್ ಹೊಂದಿದೆ. ಮುಂದಿನ 5 ವರ್ಷಗಳಲ್ಲಿ ಇದು ದೇಶಾದ್ಯಂತ 500ಕ್ಕೂ ಹೆಚ್ಚಿನ ಊರುಗಳಿಗೆ ಹರಡಲಿದೆ. ಡಾಮಿನೋಸ್‌ ಪಿಜ್ಜಾ ಮತ್ತು ಪಿಜ್ಜಾ ಹಟ್‌ ಸಹ ದೇಶದ ಮಹಾನಗರಗಳಲ್ಲಿ ಹೆಚ್ಚೆಚ್ಚು ಹರಡಿಕೊಂಡಿವೆ. ದೇಶದ ಅತಿ ದೊಡ್ಡ ಫುಡ್‌ ಚೇನ್‌ಗಳಲ್ಲಿ ಒಂದೆನಿಸಿದ ನಿರುಲಾಸ್‌, ಕೇವಲ ಉ.ಭಾರತದಲ್ಲಿ ಸುಮಾರು 86 ಔಟ್‌ಲೆಟ್ಸ್ ಹೊಂದಿದೆ. 1934ರಲ್ಲಿ ದೆಹಲಿಯ ಕನಾಟ್‌ ಪ್ಲೇಸ್‌ನಲ್ಲಿ ಶುರುವಾದ ನಿರುಲಾಸ್‌, ಕ್ರಮೇಣ ಹೆಚ್ಚು ಔಟ್‌ಲೆಟ್ಸ್ ಹೊಂದತೊಡಗಿತು. ಈಗಲೂ ಇದು 100% ಅಪ್ಪಟ ಭಾರತೀಯ ಎನಿಸಿಲ್ಲ. ಏಕೆಂದರೆ ಕೆಲವು ವರ್ಷಗಳ ಹಿಂದೆ ಮಲೇಷಿಯಾದ ನೇವಿಸ್‌ ಕ್ಯಾಪಿಟಲ್ ಮತ್ತು ಎಂಡಿ ಸಮೀರ್‌ ಕುಕರೇಜ್‌ ಇದನ್ನು ಅಧಿಕೃತವಾಗಿ ತಮ್ಮದಾಗಿಸಿಕೊಂಡಿದ್ದವು.

ಹಿಂದುಳಿಯುತ್ತಿದೆಯೇ….?

ಎಲ್ಲಕ್ಕೂ ದೊಡ್ಡ ಸವಾಲು ಎಂದರೆ, ನಮ್ಮ ಭಾರತದಲ್ಲಿ ಈ ತರಹ ವಿದೇಶೀ ರೆಸ್ಟೋರೆಂಟ್ಸ್ ಹೀಗೆ ಜನಪ್ರಿಯವಾಗಿ ಹರಡುತ್ತಿರುವುದಾದರೂ ಹೇಗೆ? ತಮ್ಮ ಊಟ ತಿಂಡಿ ವಿಚಾರದಲ್ಲಿ ಬಲು ಸಾಂಪ್ರದಾಯಿಕ ನಿಷ್ಠೂರರೆನಿಸಿದ್ದ ಭಾರತೀಯರು, ಈ ಮಟ್ಟದಲ್ಲಿ ವಿದೇಶಿ ವ್ಯಂಜನಗಳಿಗೆ ಮಾರುಹೋದದ್ದು ಹೇಗೆ? ಇದಕ್ಕೆ ಹಲವು ಕಾರಣಗಳಿವೆ. ಎಲ್ಲಕ್ಕೂ ಮೂಲಕಾರಣ ಎಂದರೆ, ಭಾರತೀಯರು ಭೋಜನಪ್ರಿಯರು. ಊಟ ತಿಂಡಿಯಲ್ಲಿ ಸದಾ ವೈವಿಧ್ಯತೆ ಬಯಸುವವರು.

ಇಂದು ಗಮನಿಸಿದರೂ ಸಹ, ಕಳೆದ 2 ದಶಕಗಳಲ್ಲಿ ಭಾರತೀಯರ ಒಂದು ವರ್ಗದ ವಾರ್ಷಿಕ ಸರಾಸರಿ ಆದಾಯ 2-3 ಪಟ್ಟು ಹೆಚ್ಚಾಗಿದೆ. ಜೊತೆಗೆ ಭಾರತೀಯರ ಸರಾಸರಿ ಖರ್ಚು ಮಾಡುವ ವೈಖರಿ ಗಮನಿಸಿದರೆ, ಇಂದಿಗೂ 1 ರೂಪಾಯಿಗೆ 57 ಪೈಸೆಯಷ್ಟು ಹಣವನ್ನು ಊಟ ತಿಂಡಿಗೆಂದೇ ಖರ್ಚು ಮಾಡುತ್ತಾರೆ.

ಒಂದು ಸಮೀಕ್ಷೆಯ ಪ್ರಕಾರ, 1 ರೂ.ನಲ್ಲಿ ಊಟ ತಿಂಡಿಗಾಗಿ ಖರ್ಚು ಮಾಡುವ 57 ಪೈಸೆಗಳಲ್ಲಿ, 6 ಪೈಸೆ ಮನೆಯ ಹೊರಗೆ ಹೋಟೆಲ್ ರೆಸ್ಟೋರೆಂಟ್‌ಗಳಲ್ಲಿ ಖರ್ಚು ಮಾಡುತ್ತಾರೆ. ಅದೇ 10 ವರ್ಷಗಳ ಹಿಂದೆ ಇದನ್ನು ಗಮನಿಸಿದಾಗ, ಹೋಟೆಲ್‌ಗಳಿಗೆ ಖರ್ಚು ಮಾಡುತ್ತಿದ್ದ ಹಣ 1 ರೂ.ನಲ್ಲಿ ಕೇವಲ 1.5 ಪೈಸೆ ಅಷ್ಟೇ ಇತ್ತು. ಅಂದರೆ ಕಳೆದ 1-2 ದಶಕಗಳಲ್ಲಿ ಭಾರತದಲ್ಲಿ ಯಾವ ಯಾವ ವೇಗದಲ್ಲಿ ಆರ್ಥಿಕ ವ್ಯವಸ್ಥೆ ಹೆಚ್ಚಿದವೋ ಅದೇ ವೇಗದಲ್ಲಿ ಈ ಫುಡ್‌ ಚೇನ್ಸ್ ಕೂಡ ಏಳಿಗೆ ಕಂಡಿದೆ. ಇಂದಿನ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಭಾರತೀಯನೊಬ್ಬನ ಸರಾಸರಿ ವಾರ್ಷಿಕ ಆದಾಯ ರೂ.2 ಲಕ್ಷಕ್ಕೂ ಹೆಚ್ಚು. ಆದರೆ ವಾಸ್ತವಿಕ ಅಂಕಿಅಂಶಗಳು ಇದಕ್ಕೂ ಹೆಚ್ಚೇ ಇವೆ. ಇಷ್ಟು ಮಾತ್ರವಲ್ಲ, ಅರ್ಥ ಶಾಸ್ತ್ರಜ್ಞರ ಪ್ರಕಾರ 2022ರ ಹೊತ್ತಿಗೆ ಶೇ.80ರಷ್ಟು ಭಾರತೀಯರ ವಾರ್ಷಿಕ ಆದಾಯ ರೂ.5 ಲಕ್ಷ ದಾಟುತ್ತದೆ. ಜೊತೆಗೆ ನಮ್ಮ ದೇಶದಲ್ಲಿ ಮಧ್ಯಮ ವರ್ಗ ತುಸು ನೆಮ್ಮದಿ ಕಾಣುವಂತಾಗಿದ್ದರೆ ಬಡವರು ಇನ್ನೂ ಹೀನಸ್ಥಿತಿಗೆ ಇಳಿಯುತ್ತಿದ್ದಾರೆ ಎಂಬುದು ನಿಜ.

ಏನೇ ಇರಲಿ, ಭಾರತೀಯರ ಆದಾಯ ಹೆಚ್ಚುತ್ತಿದೆ, ಇದರರ್ಥ ಭವಿಷ್ಯದಲ್ಲಿ ಯಾವ ವಿದೇಶೀ ರೆಸ್ಟೋರೆಂಟ್‌ ಕೂಡ ಖಾಲಿ ಇರುವುದಿಲ್ಲ. ಜೊತೆಗೆ ದೇಶೀ ಕೂಡ ಎಂಬುದು ದಿಟ.

ಬದಲಾವಣೆಯೇ ಕಾರಣ

ವಿದೇಶೀ ರೆಸ್ಟೋರೆಂಟ್‌ಗಳು ನಮ್ಮ ದೇಶದಲ್ಲಿ ಈ ಪರಿಯಲ್ಲಿ ಹರಡಿಕೊಳ್ಳಲು ಕಾರಣ, ಕಳೆದ 2 ದಶಕಗಳಲ್ಲಿ ಆದ ಸತತ ಆರ್ಥಿಕ ಅಭಿವೃದ್ಧಿ, ಹೆಚ್ಚುತ್ತಿರುವ ನಗರೀಕರಣ ಹಾಗೂ ಮಧ್ಯಮ ವರ್ಗಗಳ ಆದಾಯದಲ್ಲಿ ಆದ ಹೆಚ್ಚಳ. ಮತ್ತೊಂದು ಕಾರಣ, ವಿದೇಶಿಗರು ಕೆಲಸ ಮಾಡುವ ಪರಿ. ಆರಂಭದಲ್ಲಿ ವಿದೇಶೀಯರು ಭಾರತೀಯರನ್ನು ತಮ್ಮ ರೆಸ್ಟೋರೆಂಟ್‌ಗಳಿಗೆ ಸೆಳೆಯಲು ಆಗದಿದ್ದರೂ, ತಮ್ಮ ಆದರೋಪಚಾರದ ಗುಣಗಳಿಂದ ಬೇಗನೇ ಭಾರತೀಯರ ಮನಗೆದ್ದರು. ಅಸಲಿಗೆ 1996ರಲ್ಲಿ ಮ್ಯಾಕ್‌ಡೊನಾಲ್ಡ್ಸ್ ನಮ್ಮ ದೇಶದಲ್ಲಿ ಇದನ್ನು ಆರಂಭಿಸಿದಾಗ, ಇತರ ಎಲ್ಲಾ ಹೋಟೆಲ್‌/ರೆಸ್ಟೋರೆಂಟ್‌ಗಳ ಸಂಸ್ಕೃತಿಯಲ್ಲಿ ಆಮೂಲಾಗ್ರ ಪರಿವರ್ತನೆ ಮೂಡಿತು. ರೆಸ್ಟೋರೆಂಟ್‌ನ ಮೆನು ಕಾರ್ಡುಗಳಲ್ಲಿ ಈ ವ್ಯಾಪಕ ಪರಿವರ್ತನೆ ಕಾಣಿಸದಿದ್ದರೂ, ವಿದೇಶೀ ರೆಸ್ಟೋರೆಂಟ್‌ಗಳು ಇಲ್ಲಿಗೆ ಬಂದ ಮೇಲೆ ನಮ್ಮಲ್ಲಿನ ಊಟ ತಿಂಡಿಯ ಅಭ್ಯಾಸದಲ್ಲಿ ದೊಡ್ಡ ಬದಲಾವಣೆ ಆಗಿರುವುದಂತೂ ನಿಜ.

ಬದಲಾದ ಸ್ಟೈಲ್

ಹಿಂದೆಲ್ಲ ನೀವು ಹೋಟೆಲ್‌ನಲ್ಲಿ ಕುಳಿತು ಮೆನುಕಾರ್ಡ್‌ ನೋಡಿ ಯಾವುದಕ್ಕೆ ಆರ್ಡರ್‌ ಕೊಟ್ಟಿದ್ದಿರೋ ಅದೇ ಬರುತ್ತಿತ್ತು ಎಂಬ ಗ್ಯಾರಂಟಿ ಇಲ್ಲ. ಆರ್ಡರ್‌ ನೀಡಿದ ಎಷ್ಟೋ ಹೊತ್ತಿನ ನಂತರ ಅದು ನಿಮ್ಮ ಟೇಬಲ್ ತಲುಪುತ್ತಿತ್ತು. ಎಷ್ಟೋ ಕಡೆ ಹೊಸ ಪಲ್ಯದ ಜೊತೆ ಹಳೆ ಪಲ್ಯ ಬೆರೆತಿರುವುದು ತಿಳಿಯುತ್ತಿತ್ತು. ನೀವು ಆರ್ಡರ್‌ ನೀಡಿದ ಟೇಬಲ್ ಬದಿಗೆ `ದಯವಿಟ್ಟು ಖಾಲಿ ಕೂರಬೇಡಿ’ ಎಂದು ಸಣ್ಣ ಸೂಚನೆ ಸಹ ಇರುತ್ತಿತ್ತು. ಆರ್ಡರ್‌ ಪಡೆಯಲು ಬಂದ ಮಾಣಿ, ನೀವು ಹೇಳಿದ ವಸ್ತುಗಳು ಇಲ್ಲ ಎಂದು ಪಟ್ಟಿ ಒಪ್ಪಿಸಲೆಂಬಂತೆ ಅಲ್ಲೇ ನಿಂತಿರುತ್ತಿದ್ದ.

ಆದರೆ ವಿದೇಶೀ ರೆಸ್ಟೋರೆಂಟ್ಸ್ ಈ ಆಹಾರ ಸೇವನೆಯ ಸಂಸ್ಕೃತಿಯನ್ನೇ ಪೂರ್ತಿ ಬದಲಾಯಿಸಿವೆ. ಕುಳಿತುಕೊಳ್ಳಲು ವೈಭವೋಪೇತ ಸೋಫಾ, ಶುಚಿತ್ವ, ಫ್ಯಾನ್‌/ಎ.ಸಿ, ಶಿಸ್ತುಬದ್ಧ ವೇಟರ್‌, ಮೆನುಕಾರ್ಡ್‌ನಲ್ಲಿ ನಮೂದಿಸಿದ ಎಲ್ಲಾ ವಸ್ತುಗಳೂ ಸಕಾಲದಲ್ಲಿ ಲಭಿಸುವಿಕೆ, ಸಮಯಕ್ಕೆ ಸರಿಯಾಗಿ ಡೆಲಿವರಿ…. ಇತ್ಯಾದಿ ಅಂಶಗಳು ಭಾರತೀಯರನ್ನು ಪರವಶಗೊಳಿಸಿ, ಇವುಗಳಿಗೆ ಮಾರುಹೋಗುವಂತೆ ಮಾಡಿವೆ.

ಹೆಚ್ಚುತ್ತಿರುವ ಜನಪ್ರಿಯತೆ

ಹಿಂದೆಲ್ಲ ಸಾಮಾನ್ಯವಾಗಿ ಭಾರತೀಯ ರೆಸ್ಟೋರೆಂಟ್ಸ್ ತನಗೆ ಹತ್ತಿರುವಿರುವ ಕಡೆ ಮಾತ್ರ ಹೋಂ ಡೆಲಿವರಿ ನೀಡುತ್ತಿತ್ತು. ಅದರಲ್ಲೂ ಸಮಯದ ಗ್ಯಾರಂಟಿ ಇಲ್ಲ. ಎಷ್ಟೋ ಸಲ ಆರ್ಡರ್‌ ನೀಡಿದ ಮಂದಿ, ಸಮಯಕ್ಕೆ ಸರಿಯಾಗಿ ಅದು ಸಿಗದಿದ್ದಾಗ, ಹಸಿವು ತಡೆಯಲಾರದೆ ಏನನ್ನೋ ಒಂದಿಷ್ಟು ತಿಂದುಕೊಂಡು ಕೈ ತೊಳೆದಾಗ, ಹೇಳಿದ ಆರ್ಡರ್‌ ಬರುತ್ತಿತ್ತು.

ಆದರೆ ವಿದೇಶೀ ರೆಸ್ಟೋರೆಂಟ್‌ಗಳು ಹೋಂ ಡೆಲಿವರಿಯ ಈ ಪರಂಪರೆಯನ್ನೇ ಬದಲಾಯಿಸಿವೆ. ಇಂದು ಭಾರತದ ಯಾವುದೇ ಮಹಾನಗರಗಳಲ್ಲಿ ಕುಳಿತು ಪಿಜ್ಜಾ ಹಟ್‌ ಇತ್ಯಾದಿಗಳಿಗೆ ಆರ್ಡರ್‌ ನೀಡಿದರೆ, ನಿಗದಿತ ಸಮಯದಲ್ಲಿ ಠಾಣ್‌ ಎಂದು ಅದು ಬಂದು ತಲುಪುತ್ತದೆ. ಇದಕ್ಕಾಗಿ ಯಾವ ಸೆಂಟ್ರಲೈಸ್ಡ್ ಫೋನ್‌ ನಂಬರ್‌ಗೆ ಗ್ರಾಹಕರು ಆರ್ಡರ್‌ ನೀಡಿದ್ದರೋ, ಅಂಥವನ್ನು ಮಹಾನಗರದ ಹೊರವಲಯದಿಂದಲೇ ನಿಯಂತ್ರಿಸಿ, ಬೇಕಾದ ಸೇವೆ ಒದಗಿಸುತ್ತಾರೆ. ಹೋಂ ಡೆಲಿವರಿ ಕುರಿತಾಗಿ ಈ ವಿದೇಶೀ ರೆಸ್ಟೋರೆಂಟ್‌ಗಳು ಎಷ್ಟು ಕಾಳಜಿ ವಹಿಸುತ್ತಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಹಿಂದೆಲ್ಲ ಭಾರತೀಯ ರೆಸ್ಟೋರೆಂಟ್‌ಗಳಲ್ಲಿ ಹೋಂ ಡೆಲಿವರಿಗಾಗಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದರು. ಜೊತೆಗೆ ಡೆಲಿವರಿ ಬಾಯ್‌ಗೆ ಟಿಪ್ಸ್ ಕೊಡಬೇಕಾದ್ದು ಬೇರೆ ವಿಷಯ. ಆರ್ಡರ್‌ ಚಾರ್ಜಸ್‌ ಮಾತ್ರ ನೀಡಿ, ಟಿಪ್‌ ಕೊಡದಿದ್ದರೆ, ಅವನು ಕೆಟ್ಟದಾಗಿ ಮುಖ ತಿರುವುತ್ತಿದ್ದ, ಗ್ರಾಹಕರಿಗೆ ಮುಜುಗರ ತಪ್ಪಿದ್ದಲ್ಲ. ಅಕಸ್ಮಾತ್‌ ಅವನೇ ಮುಂದಿನ ಸಲ ನಿಮ್ಮ ಮನೆಗೆ ಬರಬೇಕಾಗಿದ್ದರೆ, ಒರಟಾಗಿ ವ್ಯವಹರಿಸುತ್ತಿದ್ದ. ಆದರೆ ವಿದೇಶೀ ರೆಸ್ಟೋರೆಂಟ್ಸ್ ಈ ಪರಂಪರೆಯನ್ನು ಸಂಪೂರ್ಣ ತೊಡೆದುಹಾಕಿವೆ.

ಇಂದು ಈ ವಿದೇಶೀ ರೆಸ್ಟೋರೆಂಟ್‌ಗಳು ಹೇಳಿದ ಸಮಯಕ್ಕೆ ಸರಿಯಾಗಿ ಆರ್ಡರ್‌ ತಲುಪಿಸುವುದಲ್ಲದೆ, ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದಿಲ್ಲ!

ಮಹಾನಗರಗಳಲ್ಲಿ ಮ್ಯಾಕ್‌ಡೊನಾಲ್ಡ್ಸ್ ಮತ್ತು ಪಿಜ್ಜಾ ಕಾರ್ನರ್‌ನ ರಿಟೇಲ್‌ ಔಟ್‌ಲೆಟ್ಸ್ ಕೇವಲ ಈಟರಿ ಜಾಗಗಳಾಗಿ ಉಳಿಯುವುದು ಮಾತ್ರವಲ್ಲ, ಇವು ಮೀಟಿಂಗ್‌ ಪಾಯಿಂಟ್ಸ್ ಆಗಿವೆ. ಅದರಲ್ಲೂ ಯುವ ಜೋಡಿಗಳು 1-1 ಕಪ್‌ ಕಾಫಿ, ಬರ್ಗರ್‌/ಪಿಜ್ಜಾ ಆರ್ಡರ್‌ ಮಾಡಿ ಹಾಯಾಗಿ ಅರ್ಧ ಗಂಟೆ ಕಾಲ ಕಳೆಯುತ್ತಾರೆ. ಆದರೆ ಇಲ್ಲಿ `ಖಾಲಿ ಕೂರಬೇಡಿ’ ಎಂಬ  ವ್ಯಂಗ್ಯೋಕ್ತಿಗಳ ಸೂಚನಾ ಫಲಕ ಇರುವುದಿಲ್ಲ. ಈ ಕಾರಣದಿಂದಲೇ ವಿದೇಶೀ ಔಟ್‌ಲೆಟ್ಸ್ ಯುವಜನತೆ ಮಧ್ಯೆ ಹೆಚ್ಚು ಜನಪ್ರಿಯವಾಗುತ್ತಿದೆ. ನಮ್ಮ ಭಾರತೀಯ ಮೂಲದ ಹೋಟೆಲುಗಳಲ್ಲಿ ಗೋಡೆಗೆ ತೂಗುಹಾಕಿರುವ `ದಯವಿಟ್ಟು ಖಾಲಿ ಕೂರಬೇಡಿ’ ಹರಟೆಪ್ರಿಯರ ಕೆಂಗಣ್ಣಿಗೆ ಮೂಲವಾಗಿ, ಅವರು ಅಲ್ಲಿಗೆ ಬರುವುದನ್ನೇ ಬಿಟ್ಟಿದ್ದಾರೆ.

ಕೇವಲ ಮಹಾನಗರಗಳಿಗೆ ಮಾತ್ರ ಸೀಮಿತವಾಗದೆ, ತಾಲ್ಲೂಕು ಮಟ್ಟದಲ್ಲೂ ಈ ಪಿಜ್ಜಾ ಹಟ್‌ಗಳ ಔಟ್‌ಲೆಟ್ಸ್, ಸದಾ ತುಂಬಿ ತುಳುಕುತ್ತವೆ. ಏನೋ ಮಾಡಿ ವಿದೇಶಿಗರು ಭಾರತೀಯರ ಮನಸ್ಸು ತೃಪ್ತಿಪಡಿಸುವ ಸೂತ್ರ ಕಂಡುಕೊಂಡಿದ್ದಾರೆ. ಹೀಗಾಗಿಯೇ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ, ವಾರ್ಷಿಕ 75-85 ಸಾವಿರ ಕೋಟಿ ರೂ.ಗಳನ್ನು ಸುಲಭವಾಗಿ ಬಾಚಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಬೆಳವಣಿಗೆ ಆದಮೇಲೂ ಭಾರತೀಯ ರೆಸ್ಟೋರೆಂಟ್ಸ್ ನವರು ಎಚ್ಚೆತ್ತುಕೊಳ್ಳದಿದ್ದರೆ, ಅಲ್ಲಿಗೆ ಬರುತ್ತಿರುವ ಜನರು ವಿಮುಖರಾಗುವ ದಿನ ದೂರವಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ