ನಮ್ಮ ಭಾಷೆಯನ್ನು ಪ್ರೀತಿಸಬೇಕು. ಆದರೆ ಎಷ್ಟು ಸಾಧ್ಯವೋ ಅಷ್ಟೂ ಭಾಷೆಗಳನ್ನು ಕಲಿಯುವುದು ಮುಖ್ಯ ಎಂದು ನಮ್ಮ ಪತ್ರಿಕೋದ್ಯಮದ ಮೊದಲ ತರಗತಿಯಲ್ಲಿ ಉಪನ್ಯಾಸಕರು ಹೇಳಿದ ಮೊದಲ ಮಾತು. ಅದರಲ್ಲೂ ಯಾವುದೇ ದೇಶ ವಿದೇಶಗಳಿಗೆ ಹೋಗಲಿ ಅಥವಾ ಭಾರತದಲ್ಲೇ ಇರಲಿ ಎಲ್ಲಕ್ಕೂ ಆಂಗ್ಲ ಭಾಷೆ ಬೇಕು, ಅದು ನಮಗೆ ಜೀವನದಲ್ಲಿ ಬಹಳ ಮುಖ್ಯ ಹೌದು.
`ಆರೋಗ್ಯಕರ ಜೀವನ ನಡೆಸಬೇಕೆಂದರೆ, ಔಷಧಿಗಳಿಗಿಂತ ಹೆಚ್ಚಾಗಿ ನಿಮ್ಮ ಮನೋಬಲ ಮುಖ್ಯವೆನಿಸುತ್ತದೆ. ತನ್ನಂತೆ ಪರರ ಬಗೆದೊಡೆ... ಅಂದರೆ ಇತರರನ್ನೂ ತನ್ನಂತೆ ಭಾವಿಸಿ ಸಂತಸದಿಂದಿರುವಂತೆ ಮಾಡಿದಾಗ ಸಂತಸ ತಾನಾಗಿ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ತೃಪ್ತಿಕರ ಜೀವನ ನಿಮ್ಮದಾಗುತ್ತದೆ,' ಎನ್ನುತ್ತಾರೆ ಪದ್ಮಶ್ರೀ ಪ್ರಶಸ್ತಿ ವಿಜೇತ ಪ್ರೊಫೆಸರ್ ಡಾ. ಬಿ.ಎಂ. ಹೆಗಡೆ. ಅಂತೆಯೇ ಪ್ರತಿಯೊಬ್ಬರಿಗೂ ತಮ್ಮ ಜೀವನದ ಸಾಧನೆಗಳನ್ನು ಹೊರತುಪಡಿಸಿ ಮನಸ್ಸಿಗೆ ತೃಪ್ತಿಯ ಕೆಲಸವನ್ನು ಮಾಡಬೇಕೆನ್ನುವ ತುಡಿತ ಖಂಡಿತ ಇರುತ್ತದೆ. ಆದರೆ ಮಾರ್ಗ ಸ್ಪಷ್ಟವಾಗಿರುವುದಿಲ್ಲ. ಈ ಎರಡೂ ತತ್ವಗಳನ್ನು ಒಂದುಗೂಡಿಸಿದ್ದಾರೆ ಮೀರಾ ರಮಣ್.
ಪತ್ರಿಕೋದ್ಯಮದ ಹಿನ್ನೆಲೆಯನ್ನು ಹೊಂದಿರುವ ಮೀರಾರಿಗೆ ಟೀಚಿಂಗ್ ಎಂದರೆ ಬಲು ಪ್ರೀತಿ, ಆಂಗ್ಲ ಭಾಷೆ ಅವರ ಪ್ರೀತಿಯ ವಿಷಯ. ಜೊತೆಗೆ ಏನನ್ನಾದರೂ ಒಳ್ಳೆಯದನ್ನು ಮಾಡಬೇಕೆನ್ನುವ ತುಡಿತ. ಇದು ಮೊಳಕೆಯೊಡೆದದ್ದು ಮೊಟ್ಟ ಮೊದಲಿಗೆ ತಮ್ಮ ಮನೆಯಲ್ಲಿ ಕೆಲಸ ಮಾಡುವವರ ಮಕ್ಕಳಿಗೆ ಆಂಗ್ಲ ಭಾಷೆಯನ್ನು ಉಚಿತವಾಗಿ ಕಲಿಸುವ ಮೂಲಕ, ನಂತರ ಅವರು ಗಲ್ಫ್ ದೇಶಕ್ಕೆ ಹೋದರೂ ಅಲ್ಲಿಯೂ ಕೆಲಸದವರ ಮಕ್ಕಳು, ತಮ್ಮ ಕಾರಿನ ಚಾಲಕನ ಮಕ್ಕಳು, ಅಂತೆಯೇ ಅಗತ್ಯವಿರುವವರೆಲ್ಲರಿಗೂ ಆಂಗ್ಲ ಭಾಷೆಯನ್ನು ಕಲಿಸುತ್ತಿದ್ದರು. ಬೆಂಗಳೂರಿನ ವಿದ್ಯಾರ್ಧಕ ಶಾಲೆ, ಎಂ.ಇ.ಎಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದ ಮೀರಾರ ವ್ಯಕ್ತಿತ್ವ ನಿಜಕ್ಕೂ ವಿಭಿನ್ನ.
ಮೊದಲಿನಿಂದಲೂ ಏನಾದರೂ ಮಾಡುವ ಆಸೆ, ಮದುವೆಯ ನಂತರ ಬೆಂಗಳೂರಿನಿಂದ ರಿಯಾಧ್‌ಗೆ ಹೋದಾಗ, ಅಲ್ಲಿದ್ದಾಗಲೂ ಮಕ್ಕಳಿಗೆ ಪರಿಸರದ ಪಾಠ ಹೇಳಿಕೊಟ್ಟರು. ಸದಾ ಟಿಶ್ಯೂವನ್ನೇ ಬಳಸುವ ಶ್ರೀಮಂತ ಮಕ್ಕಳಿಗೆ ಒಂದು ಚಿಕ್ಕ ಪೇಪರ್ ಮಾಡಲು ಕಾಡು ಬೇಕು, ಕಾಡು ಕಡಿಮೆಯಾದರೆ ಮಳೆ ಕಡಿಮೆಯಾಗುತ್ತದೆ ಎನ್ನುವ ನೀತಿಯ ಪಾಠಗಳನ್ನು ತಿಳಿಸಿ ಅವರದೇ ಒಂದು ಕ್ಲಬ್ ಮಾಡಿದ್ದರು. ಅಲ್ಲಿ ಐದು ವರ್ಷವಿದ್ದು ಮುಂಬೈಗೆ ಬಂದಾಗ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಮಾಡುವಾಗಲೂ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುವವರ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ನಿರ್ಧಾರ ಮಾಡಿ ವಾರದಲ್ಲೊಮ್ಮೆ ಅವರಿಗೆ ಉಚಿತವಾಗಿ ಕಲಿಸಲು ಪ್ರಾರಂಭಿಸಿದರು. ಅಲ್ಲಿಂದ ಹೊಸ ಮನೆಗೆ ಬಂದಾಗ ಇವರ ಆಸೆಗೆ ಒಂದು ಹೊಸ ರೂಪ ದೊರೆಯಿತು.
ಮಾನ್ಯ ಮೋದಿಯವರು ಶಿಕ್ಷಕರ ದಿನಾಚರಣೆಯಂದು ತಮ್ಮ ಭಾಷಣದಲ್ಲಿ, `ನಮ್ಮ ದೇಶದಲ್ಲಿ ಶಿಕ್ಷಕರ ಕೊರತೆ ಬಹಳಷ್ಟಿದೆ. ಎಲ್ಲಾ ವಿದ್ಯಾವಂತರೂ ವಾರದಲ್ಲಿ ಒಂದು ಗಂಟೆಯಾದರೂ ಸರ್ಕಾರಿ ಶಾಲೆಗೆ ಹೋಗಿ, ಆ ಮಕ್ಕಳ ಜೊತೆ ಕಾಲ ಕಳೆದು ಬಂದರೆ, ಒಂದು ಮಗುವಿನ ಭವಿಷ್ಯದ ಭಾಷ್ಯ ಬದಲಾಯಿಸಲು ಸಾಧ್ಯ,' ಎಂದು ಹೇಳಿದ ಮಾತು ಮೀರಾರಿಗೆ ಸ್ಛೂರ್ತಿ ನೀಡಿತಂತೆ. `ನಾನು ನನ್ನ ಕೆಲವು ಗೆಳತಿಯರು ಸೇರಿ ಸ್ಲಮ್ ನಲ್ಲಿರುವ ಮಕ್ಕಳಿಗೆ ಆಂಗ್ಲ ಭಾಷೆಯ ಪಾಠ ಹೇಳಲು ಪ್ರಾರಂಭ ಮಾಡಿದೆವು. ನಿರ್ಧಾರವೇನೋ ಸರಿ, ಆದರೆ ಸ್ಥಳವೆಲ್ಲಿ? ಪಕ್ಕದಲ್ಲೇ ಪಾರ್ಕಿನಲ್ಲಿ, ಅಲ್ಲಿನ ಅಧಿಕಾರಿಗಳ ಪರವಾನಗಿ ಪಡೆದು ಪಾಠ ಹೇಳಲು ಪ್ರಾರಂಭಿಸಿದೆವು. ಮೊದಲಿಗೆ ಹತ್ತು ಮಕ್ಕಳಿಗೆ ವಾರಕ್ಕೆ ಒಂದು ಬಾರಿ ಒಂದೂವರೆ ಗಂಟೆ, ಸಂಜೆ ನಾಲ್ಕೂವರೆಯಿಂದ ಆರರವರೆಗೆ ತರಗತಿ ಶುರು ಮಾಡಿದೆವು. ನಾಲ್ಕಾರು ಮಕ್ಕಳೊಡನೆ ಆರಂಭವಾದದ್ದು, ಈಗ ಐವತ್ತು ಮಕ್ಕಳಿದ್ದಾರೆ. ವಾರಕ್ಕೆ ಒಂದು ಬಾರಿ ಮಾಡುತ್ತಿದ್ದದ್ದು ಈಗ ಪ್ರತಿ ದಿನ ನಡೆಸುತ್ತಿದ್ದೇವೆ. ನಾಲ್ಕಾರು ಗೆಳತಿಯರಿಂದ ಶುರುವಾದದ್ದು ಈಗ ದಿನಕ್ಕೆ ಮೂರು ವಾಲೆಂಟಿಯರ್ಸ್ ಸಿದ್ಧವಿದ್ದಾರೆ. 21 ವಾಲೆಂಟಿಯರ್ಸ್‌ನ ಜೊತೆ ಮತ್ತೆ ಹದಿನೈದು ಜನರು ಆಗಾಗ ಭೇಟಿ ನೀಡುವವರಿದ್ದಾರೆ,' ಎನ್ನುತ್ತಾರೆ.