ಸುಳ್ಳು ಸುದ್ದಿಗಳು ಕಂದಾಚಾರದ ಭಾಗ

ಈಗ ಸುದ್ದಿಗಳ ಸುರಿಮಳೆಯೇ ಆಗುತ್ತಿದೆ. ಹಾದಿ ಬೀದಿಯ ಸುಳ್ಳು ಸುದ್ದಿಗಳು ಈಗ  ಗೂಗಲ್, ಫೇಸ್‌ಬುಕ್‌ ಮೂಲಕ ಜಗತ್ತಿನಾದ್ಯಂತ ಪಸರಿಸುತ್ತಿವೆ. ಆ ಸುದ್ದಿ ನಿಜವೋ, ಸುಳ್ಳೋ ಎಂದು ನಂಬುವುದು ಕೂಡ ಕಷ್ಟವಾಗುತ್ತದೆ.

ಶತಶತಮಾನಗಳಿಂದ ಈ ತೆರನಾದ ಸುಳ್ಳುಗಳನ್ನು ಜನರು ಧರ್ಮಗ್ರಂಥಗಳಿಂದ ಎರವಲು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಅವನ್ನು ಇತರರಿಗೂ ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಮಧ್ಯ ಕಾಲದಲ್ಲಿ ಮುದ್ರಣ ಸಾಮಗ್ರಿ ಅವರಿಗೆ ಅಷ್ಟಿಷ್ಟು ನೀರಸ ಎನ್ನುವಂತೆ ಮಾಡಿತ್ತು. ಈಗಂತೂ ಅದರ ಹಾವಳಿ ಮಿತಿ ಮೀರಿದೆ. ಇದು ದಿನಕ್ಕೆ 1-2 ಗಂಟೆ ನಡೆಯುವಂಥದ್ದಲ್ಲ, ಹಗಲು-ರಾತ್ರಿ ಎನ್ನದೇ ನಡೆಯುತ್ತಲೇ ಇರುತ್ತದೆ. ಯಾವ ರೀತಿ ಧರ್ಮಗ್ರಂಥಗಳಲ್ಲಿನ ಸುಳ್ಳುಗಳು ಜನರ ಜೇಬು ಖಾಲಿ ಮಾಡಿವೆಯೋ, ಅದೇ ರೀತಿ ಇಂದು ಸುಳ್ಳು ಸುದ್ದಿಗಳು ಜನರನ್ನು ದಾರಿ ತಪ್ಪಿಸುತ್ತಿವೆ. ಚುನಾವಣೆಗೆ ಮುಂಚೆ ರಾಜಕೀಯ ಪಕ್ಷಗಳು ಖೊಟ್ಟಿ ಹೆಸರಿನಲ್ಲಿ ಪ್ರಚಾರಕರನ್ನು ಅಖಾಡಕ್ಕೆ ಇಳಿಸುತ್ತವೆ. ವಿರೋಧಿಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಎಂದು ಸೂಚನೆ ಕೊಡುತ್ತವೆ. `ನಾನೊಂದು ವಿಷಯ ಕೇಳಿದ್ದೆ ಅದು ಸುಳ್ಳೋ ಸತ್ಯವೋ ಗೊತ್ತಿಲ್ಲ, ಆದರೂ ನಿಮ್ಮ ಮುಂದೆ ಹೇಳಿರುವೆ,’ ಎಂಬ ಧಾಟಿಯಲ್ಲಿ ಈಗ ಏನನ್ನಾದರೂ ಹೇಳಿಕೆ ಕೊಡಬಹುದು.

ಸುಳ್ಳು ಸುದ್ದಿಗಳಿಗೆ ಹೆಚ್ಚಾಗಿ ಬಲಿಯಾಗುತ್ತಿರುವವರು ಮಹಿಳೆಯರು. ರಾಜಕೀಯ ಧುರೀಣರು ಸ್ವಲ್ಪ ಭಾವುಕರಾಗಿ ಹೇಳುತ್ತಾರೆ. ಮಹಿಳೆಯರ ವಾಟ್ಸ್ಆ್ಯಪ್‌ಗೆ ಯಾವುದಾದರೊಂದು ಫಾರ್ಮುಲಾ ಅಥವಾ ರೋಚಕ ಸುದ್ದಿ ಬಂದರೆ ಸಾಕು, ಅದು ಕ್ಷಣಾರ್ಧದಲ್ಲಿ 100-200 ಜನರಿಗೆ ರವಾನಿಸಲ್ಪಡುತ್ತದೆ.

ಓದುಬರಹ ಬಲ್ಲ ಮಹಿಳೆಯರ ಮುಂದೆ ಈ ತೆರನಾದ ಸುಳ್ಳು ಸುದ್ದಿಗಳ ಬಗ್ಗೆ ಪ್ರಸ್ತಾಪಿಸಿದರೆ, ಅದರ ಬಗ್ಗೆ ನಮಗೇನೂ ಗೊತ್ತಿಲ್ಲ, ನಾನು ಅದನ್ನು ಜಸ್ಟ್ ಫಾರ್ವರ್ಡ್ ಮಾಡಿದ್ದೇನೆ ಎಂದು ನುಣುಚಿಕೊಳ್ಳಲು ನೋಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಗಳನ್ನು ಭಾರಿ ವೇಗದಲ್ಲಿ ಪಸರಿಸಲಾಗುತ್ತಿದೆ. ಅದರಲ್ಲಿ ಧರ್ಮಾಂಧರೇ ಹೆಚ್ಚಿನ ಪ್ರಮಾಣದಲ್ಲಿರುತ್ತಾರೆ. ಶಿವನಿಗೆ ನಮಿಸು, ಸಾಯಿಬಾಬಾನ ಚಮತ್ಕಾರ, ಚರಣ ಸ್ಪರ್ಶಿಸುವ ಚಿತ್ರಗಳನ್ನು ಹೇರಳವಾಗಿ ಹರಿಬಿಡಲಾಗುತ್ತದೆ. ವಾಟ್ಸ್ಆ್ಯಪ್‌ ಮತ್ತು ಫೇಸ್‌ಬುಕ್‌ ಧರ್ಮದ ಕಂದಾಚಾರಿಗಳ ಭಾಗವೇ ಆಗಿಹೋಗಿವೆ. ಅಜ್ಞಾನ ಹಾಗೂ ತರ್ಕಕುತರ್ಕಗಳ ಭಂಡಾರವೇ ಆಗಿಬಿಟ್ಟಿವೆ. ಅಮೆರಿಕ ಹಾಗೂ ಯೂರೋಪ್‌ ಸುಳ್ಳು ಸುದ್ದಿಗಳ ಹಿಂದೆ ಬಿದ್ದಿವೆ. ಅಲ್ಲೂ ಕೂಡ ಮುಖಂಡರಿಗೆ ತಮ್ಮ ವ್ಯಕ್ತಿತ್ವಕ್ಕೆ ಎಲ್ಲಿ ಕಪ್ಪು ಮಸಿ ಬಳಿಯುತ್ತಾರೋ ಎಂಬ ಚಿಂತೆ ಕಾಡುತ್ತಿದೆ. ಪೀಪಿಂಗ್‌ ಟಾಮ್ಸ್ ನ್ನು ನಿಯಂತ್ರಣ ಮಾಡುವ ಬದಲು ವಾಟ್ಸ್ಆ್ಯಪ್‌ ಹಾಗೂ ಫೇಸ್‌ಬುಕ್‌ನಲ್ಲಿ ಟೆಕ್ಸ್ಟ್ ಮೆಸೇಜ್‌ಗಳ ಜೊತೆಗೆ ಶಾರ್ಟ್‌ ಮೂವೀಸ್‌ ಕೂಡ ತೋರಿಸಲಾಗುತ್ತಿದೆ. ಭ್ರಮೆಯಿಂದ ಕೂಡಿದ ಸುದ್ದಿಗಳನ್ನು ತಮಗೆ ಹೇಗೆ ಬೇಕೋ ಹಾಗೂ ಎಡಿಟ್‌ ಮಾಡಿಕೊಂಡು ಉಣಬಡಿಸಲಾಗುತ್ತಿದೆ.

ತಪ್ಪು ಪ್ರಚಾರದ ದುಷ್ಪರಿಣಾಮವೆಂದರೆ ಜಗತ್ತಿನ ಯಾವುದೇ ದೇಶದಲ್ಲಿ ಧರ್ಮಾಂಧರ ಸರ್ಕಾರಗಳು ರಚಿಸಲ್ಪಟ್ಟಿವೆಯೋ, ಅಲ್ಲಿ 100 ವರ್ಷಗಳ ಪ್ರಜಾಪ್ರಭುತ್ವ ಸರ್ಕಾರದ ಬಳಿಕ ಪುನಃ ಸರ್ವಾಧಿಕಾರಿ ಧೋರಣೆಯ ಸರ್ಕಾರಗಳು ಅಧಿಕಾರ ಹಿಡಿಯುತ್ತವೆ.

ಸರ್ವಾಧಿಕಾರಿ ಧೋರಣೆಗೆ ಹೆಚ್ಚು ಬಲಿಪಶುಗಳಾಗುತ್ತಿರುವವರು ಮಹಿಳೆಯರೇ. ಅದರ ದುಷ್ಪರಿಣಾಮ ಸಿರಿಯಾ, ಲಿಬಿಯಾ ಹಾಗೂ ಇರಾಕ್‌ನಿಂದ ಪಲಾಯನ ಮಾಡಿದ ನಿರಾಶ್ರಿತರ ಕ್ಯಾಂಪ್‌ಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ನಿಮ್ಮ ಅಕ್ಕಪಕ್ಕದಲ್ಲೂ ಉಂಟಾಗವುದು ಎನ್ನುವ ಗ್ಯಾರಂಟಿಯೇನೂ ಇಲ್ಲ.

ಸಂಸ್ಕೃತಿಯ ಹೆಸರಿನಲ್ಲಿ ಸರ್ವಾಧಿಕಾರಿ ಪ್ರವೃತ್ತಿ

ಹುಡುಗಿಯರಿಗೆ ತೊಂದರೆ ಕೊಡುವ ಮತ್ತು ಚುಡಾಯಿಸುವವರನ್ನು ಮಟ್ಟಹಾಕಲು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ರೋಮಿಯೋ ಸ್ಕ್ವಾಡ್‌ ರಚಿಸಿದೆ. ಆ ಸ್ಕ್ವಾಡ್‌ ಈಗ ಯಾವುದೇ ಗುಂಪನ್ನಾದರೂ ಹಿಡಿಯಬಹುದಾಗಿದೆ. ಅವರಿಗೆ ಸ್ಥಳೀಯ ಭಾರತೀಯ ಜನತಾಪಕ್ಷದ ಕಾರ್ಯಕರ್ತರ ಬೆಂಬಲ ಕೂಡ ಇದೆ. ಅವರು ಪೊಲೀಸ್‌ ತಂಡದೊಂದಿಗೆ ಕೈಯಲ್ಲಿ ಕೋಲು ಹಿಡಿದುಕೊಂಡು ತಿರುಗುತ್ತಿರುತ್ತಾರೆ.

ಇದರಿಂದ ಹುಡುಗಿಯರು ಕೆಲವು ದಿನ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಆದರೆ ಅಪರಾಧ ನಿಯಂತ್ರಣ ಮಾಡುವ ಹೆಸರಿನಲ್ಲಿ ತನ್ನದೇ ಪಕ್ಷದ ಕಾರ್ಯಕರ್ತರಿಗೆ ಗುತ್ತಿಗೆ ಕೊಡುವುದು ಪ್ರಜಾಪ್ರಭುತ್ವಕ್ಕೆ ಬಹು ದೊಡ್ಡ ಅಪಾಯ.

ಈ ಸ್ಕ್ವಾಡ್‌ಗಳು ಹರಿಯಾಣ ಹಾಗೂ ಪಶ್ಚಿಮ ಉತ್ತರಪ್ರದೇಶದ ಖಾಪ್‌ ಪಂಚಾಯತ್‌ಗಳ ಹಾಗೆ ತಕ್ಷಣವೇ ನ್ಯಾಯ ದೊರಕಿಸಿಕೊಡುವ ಮತ್ತು ಶಿಕ್ಷೆ ವಿಧಿಸುವ ವಿಧಾನ ಅನುಸರಿಸುತ್ತಿವೆ. ಎಲ್ಲಿಯಾದರೂ 4 ಜೋಡಿಗಳು ಕೈಯಲ್ಲಿ ಕೈ ಹಾಕಿಕೊಂಡು ತಿರುಗಾಡುವುದು ಕಂಡುಬಂದರೆ ಸಾಕು, ಅವರು ಲಾಠಿ ಏಟಿನ ರುಚಿ ನೋಡಬೇಕಾಗುತ್ತದೆ. ಪೊಲೀಸರು ಇದೆಲ್ಲವನ್ನೂ ತಮಾಷೆಯ ರೀತಿಯಲ್ಲಿ ನೋಡುತ್ತಿರುತ್ತಾರೆ. ಭಗವಾ ಶಾಲು ಹಾಕಿಕೊಂಡ ಕಾರ್ಯಕರ್ತರು ಕಾನೂನು ಬಾಹಿರ ತೀರ್ಮಾನ ಕೈಗೊಂಡು ಭಯ ಹುಟ್ಟು ಹಾಕುತ್ತಿದ್ದಾರೆ. ಅದು ಮುಂಚೆ ರಾಜಮನೆತನಗಳಿಗಷ್ಟೇ ಸೀಮಿತವಾಗಿತ್ತು.

ಕುಟುಂಬಗಳಿಗೆ ಸರ್ಕಾರದ ಈ ನಿರ್ಧಾರ ಖುಷಿ ಕೊಡಬಹುದು. ಆದರೆ ಮುಂದೆ ಅಣ್ಣತಂಗಿ ಕೂಡ ಮನೆಯಿಂದ ಹೊರಗೆ ಹೋಗುವುದು ಕಷ್ಟವಾಗುತ್ತದೆ. ಹೇಳಿಕೊಳ್ಳಲು ಏಕಾಂಗಿ ಯುವತಿಯರು ಸುರಕ್ಷಿತ ಎನಿಸಬಹುದು. ಆದರೆ ರಾತ್ರಿ ಅಪರಾತ್ರಿ ಕೆಲಸದಿಂದ ವಾಪಸ್ಸಾಗುವ ಮಹಿಳೆಯರನ್ನು ರೋಮಿಯೋ ಸ್ಕ್ವಾಡ್‌ ಅಡ್ಡಗಟ್ಟಿ ವೇಶ್ಯಾವೃತ್ತಿಯ ಆರೋಪ ಹೊರಿಸಿ, ಅವರ ಮೇಲೆ ಹಲ್ಲೆ ನಡೆಸಿದರೆ ಆ ಬಗ್ಗೆ ಯಾರೊಬ್ಬರೂ ನೆರವಿಗೆ ಬರುವುದಿಲ್ಲ. ಮೊದಲು ಚುಡಾಯಿಸುವ ಘಟನೆಗಳು ನಡೆಯುತ್ತಿದ್ದವು. ಆ ಬಗ್ಗೆ ಪೊಲೀಸರು ಉದಾಸೀನತೆ ತೋರಿಸುತ್ತಿದ್ದರು. ಆದರೆ ಈಗ ಪೊಲೀಸರು ಸಕ್ರಿಯರಾಗಿರುತ್ತಾರೆ. ಆದರೆ ಸಂಸ್ಕೃತಿ ಮತ್ತು ಕಾನೂನಿನ ಬಗ್ಗೆ ಪ್ರೀತಿಯ ಭಾವನೆಯನ್ನು ಕೊನೆಗೊಳಿಸುವುದು ಘಾತಕವಾದುದಾಗಿದೆ. ಅದು ಸಮಾಜಕ್ಕೂ, ಪ್ರಜಾಪ್ರಭುತ್ವ ಆಧಾರಿತ ಆಡಳಿತ ಪದ್ಧತಿಗೂ ಅಪಾಯಕರ.

ತಾಯಿಯದಲ್ಲ ಗೋಮಾತೆಯ ಸೇವೆ ಮಾಡಿ

`ಗೋಮಾತಾ ಕೀ ಜೈ’ ಈ ಘೋಷಣೆ ವ್ಯರ್ಥವಲ್ಲ. ಒಂದು ವೇಳೆ ಸರ್ಕಾರವೇ ಈ ಘೋಷಣೆ ಹಾಕಲು ಹೇಳ್ತಿದ್ರೆ  ಅದು ಸರಿಯಾಗೇ ಇದೆ. ಸಾಮಾನ್ಯ ಗೃಹಿಣಿಯೊಬ್ಬಳು ತಾನು ಎರಡು ಒಣಗಿದ ರೊಟ್ಟಿಗಳನ್ನು ಹಸುವಿಗೆ ತಿನ್ನಿಸುವುದರಿಂದ ತನ್ನ ಮನೆಗೆ 4-5 ಟನ್‌ ಧಾನ್ಯ ಬಂದು ಸೇರಿಕೊಳ್ಳುತ್ತದೆಂದು ಹಾಗೆ ಹೇಳುವುದು ತಪ್ಪಲ್ಲ ಎನಿಸುತ್ತದೆ. ಏಕೆಂದರೆ, ಅವರಿಗೆ ಎಲ್ಲವೂ ಗೋಮಾತೆಯ ಆಶೀರ್ವಾದದಿಂದಲೇ ದೊರಕಿದೆ. ಕೋಟಿಕೋಟಿಯ ಆಸ್ತಿಪಾಸ್ತಿ ಸಿಕ್ಕಿದೆ. ನಿನ್ನೆಮೊನ್ನೆಯ ತನಕ ಅವರೆಲ್ಲ ಬೀದಿ ಬೀದಿ ಸುತ್ತುತ್ತಿದ್ದರು. ದೇಶಾದ್ಯಂತ ಗೋರಕ್ಷಕರ ತಂಡವೇ ತಯಾರಾಗಿದೆ. ಅವರಿಗೆ ನಿಮ್ಮ ರೆಫ್ರಿಜರೇಟರ್‌ಗಳನ್ನು ತೆರೆದು ನೋಡುವ ಅಧಿಕಾರವನ್ನು ಸರ್ಕಾರವೇ ಕೊಟ್ಟುಬಿಟ್ಟಿದೆಯಲ್ಲ…..?!

ಗೋಮಾತೆಯ ಸೇವೆಯ ಬಗ್ಗೆಯೇ ಎಲ್ಲೆಲ್ಲೂ ಚರ್ಚೆಗಳು ನಡೆಯುತ್ತವೆ. ಆದರೆ ಹಡೆದ ತಾಯಿಯ ಬಗ್ಗೆ ಇಷ್ಟು ಚರ್ಚೆ ಸಾಧ್ಯವೇ ಇಲ್ಲ. ಒಂದು ವೇಳೆ ಯುವಜನರು ಅಮ್ಮನನ್ನು ಹಣ ಕೊಡುವ ಯಂತ್ರ ಎಂದು ಭಾವಿಸುವುದರಲ್ಲಿ ತಪ್ಪೇನಿದೆ? ಏಕೆಂದರೆ ಗೋಮಾತೆ ಕೂಡ ಅದೇ ಕೆಲಸ ಮಾಡುತ್ತಾಳೆ. ಒಂದೆಡೆ ಬೆಳೆಯುತ್ತಿರುವ ಮಕ್ಕಳಿಗೆ ಹೆಚ್ಚು ವಯಸ್ಸಾದ ತಂದೆತಾಯಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಯಿರುತ್ತದೆ. ಇನ್ನೊಂದೆಡೆ, ತಂದೆತಾಯಿಗಳಿಗೆ ದುಂದುವೆಚ್ಚ ಮಾಡುವ ಮಕ್ಕಳ ಬೇಡಿಕೆಗಳನ್ನು ಪೂರೈಸುವ ಹೊಣೆಗಾರಿಕೆ ಇರುತ್ತದೆ. ಗೋಮಾತೆಯ ಹಾಗೆ ಅಮ್ಮನನ್ನು ಕೂಡ ಒಂದು ರೀತಿ ಹೊರಗೆ ಕೂರಿಸಿಬಿಟ್ಟಿರುತ್ತಾರೆ, ಹೋಗುವವರು ಬರುವವರು ಆಕೆಗೆ ಏನಾದರೂ ಕೊಡುತ್ತಿರಬೇಕು ಎನ್ನುವುದು ಅವರ ಅಪೇಕ್ಷೆಯಾಗಿರುತ್ತದೆ.

ಗೋಸೇವೆಯ ಹೆಸರಿನಲ್ಲಿ ನಡೆಯುತ್ತಿರುವ ನಾಟಕ ನಮ್ಮ ಜೀವನದ ಮೇಲೆ ಪರಿಣಾಮ ಬೀರಬಾರದು ಎಂದರೆ ಸಾಧ್ಯವೇ ಇಲ್ಲ. ಎಲ್ಲಿಯವರೆಗೆ ಹಸು ಕೇವಲ ಉಪಯುಕ್ತ, ಹಾಲು ಕೊಡುವ ಪ್ರಾಣಿಯಾಗಿತ್ತೋ, ಅಲ್ಲಿಯವರೆಗೆ ಅದರ ಜೊತೆ ಮಾನವೀಯತೆಯ ವ್ಯವಹಾರ ಅಥವಾ ಬೇರೆ ಯಾರನ್ನೂ ಹೋಲಿಕೆ ಮಾಡಲಾಗುತ್ತಿರಲಿಲ್ಲ. ಗೋವಿಗೆ ಮಾತೆಯ ಸ್ಥಾನ ಕೊಟ್ಟ ಶ್ರೇಯಸ್ಸು ಸರ್ಕಾರಕ್ಕೆ ಸಲ್ಲುತ್ತದೆ. ಹೆತ್ತ ತಾಯಿಗೆ ಸ್ವಾಭಾವಿಕವಾಗಿಯೇ ಸ್ಥಾನಮಾನ ಹೆಚ್ಚು, ಆದರೆ ಈಗ ಗೋವಿಗೆ ಅದಕ್ಕೂ ದೊಡ್ಡ ಸ್ಥಾನ ಲಭಿಸಿದೆ.

ಹೀಗೆಯೇ ಗುರು ಹಾಗೂ ತಂದೆಯ ನಡುವೆಯೂ ಆಗುತ್ತಿದೆ. ಕೆಲವು ಸಾಧು ಸಂತರು ತಮ್ಮನ್ನು ತಾವು ಮಹಾನ್‌ ಎಂದು ಬಿಂಬಿಸಿಕೊಳ್ಳಲು, ಗುರು ಭಗವಾನ್‌, ಗುರು ಬ್ರಹ್ಮ, ತಾನೇ ಸಮಸ್ತ, ಸಂಪೂರ್ಣ ಮತ್ತು ತಂದೆಗಿಂತ ಮಿಗಿಲಾದವನು ಎಂದೆಲ್ಲ ಮಾಡಿ ಧನಧಾನ್ಯ ವೃದ್ಧಿಯಾಗುತ್ತದೆ ಎಂದು ಸರ್ಕಾರ ಮೊಹರು ಹಾಕಿಬಿಟ್ಟಿದ್ದಾರೆ. ಒಂದು ಪಕ್ಷಕ್ಕೆ ಅಖಿಲ ಭಾರತೀಯ ಮಟ್ಟದ ಸ್ಥಾನಮಾನ ದೊರೆಯುತ್ತಿದ್ದಂತೆ ಅದೆಷ್ಟೋ ಪುಂಡರಿಗೆ ಗೋರಕ್ಷಣೆಯ ನೌಕರಿ ದೊರೆತಂತಾಗಿದೆ. ಅಮ್ಮನ ಸೇವೆ ಮಾಡಿ, ಬಿಡಿ… ಆಕೆಯಂತೂ ಕೊನೆಯಲ್ಲಿ ತನ್ನದೆಲ್ಲನ್ನು ಕೊಟ್ಟೇ ಹೋಗುತ್ತಾಳೆ. ಗೋಸೇವೆ ಮಾಡದೇ ಇದ್ದರೆ, ಗೋಮಾತೆಯ ಶಾಪ ತಟ್ಟುತ್ತದೆ ಹಾಗೂ ಗೋವು ಸಮರ್ಥಕ ಸರ್ಕಾರದ ಅವಕೃಪೆ ಕೂಡ!

ನಮ್ಮ ಸೋದರಿಯರು ಹಾಗೂ ತಾಯಂದಿರಲ್ಲಿ ಒಂದು ವಿನಂತಿ. ನೀವು ಸರಿಯಾದ ಮಾತೆಯನ್ನು ಆಯ್ಕೆ ಮಾಡಿ, ನಮ್ಮ ನಾಯಕರ ನಿರ್ಧಾರ ಹೇಗೆ ತಪ್ಪಾಗಿರಲು ಸಾಧ್ಯ? ಹೊಗಳಿಕೊಳ್ಳುತ್ತಾರೆ. ಎಷ್ಟೋ ಅಪ್ಪಂದಿರು ದಾರಿ ತಪ್ಪುವ ತಮ್ಮ ಮಕ್ಕಳನ್ನು ತಾವೇ ಸುಧಾರಿಸುವ ಗೋಜಿಗೆ ಹೋಗದೆ, ಗುರುಗಳ ಬಳಿ ಕರೆದುಕೊಂಡು ಹೋಗುತ್ತಾರೆ. ಗುರುಗಳ ಪಾದದ ಬಳಿ ಕೂರಿಸುತ್ತಾರೆ. ಅವರ ಮಗ ಬಹಳಷ್ಟು ಬದಲಾಗುತ್ತಾನೆ. ಸತತ ಪ್ರಚಾರದಿಂದ ತಮ್ಮ ವಿವೇಕ, ತಂತ್ರಜ್ಞಾನ ಮತ್ತು ಓದು ಬರಹ ಕಲಿತದ್ದನ್ನೂ ಮರೆತು ಕೈಜೋಡಿಸಿಕೊಂಡು ಕಣ್ಣುಮುಚ್ಚಿ ಕುಳಿತು ಎತ್ತಲೋ ನೋಡುವ ಸ್ವಾಮಿಯನ್ನು ದಾರಿ ತೋರಿಸು ಎಂದು ಭಾವಿಸುತ್ತಾರೆ.

ಅವರೇ ಈಗ ಗೃಹಿಣಿಯರಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಅಮ್ಮನ ಸೇವೆಯಲ್ಲ, ಗೋಮಾತೆಯ ಸೇವೆ ಸಮಾಜವನ್ನು ಪುನಃ 500 ವರ್ಷಗಳ ಹಿಂದಿನ ಸ್ವರ್ಣಯುಗ ತಂದುಕೊಡಲಿದೆ. ಆಗ ವೃದ್ಧ ತಾಯಿ 40-45ರ ವಯಸ್ಸಿನಲ್ಲೇ ಸಾವಿಗೀಡಾದರೂ ಆಶ್ಚರ್ಯವಿಲ್ಲ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ