ದಿನ ಬೆಳಗಾದರೆ ಆಹಾರ ಪದಾರ್ಥಗಳಲ್ಲಿನ ಕಲುಷಿತತೆಯ ಬಗ್ಗೆಯೇ ಎಲ್ಲರ ಮಾತು. ನಾವು ತಿನ್ನುವ ತರಕಾರಿ ಮತ್ತು ಸೊಪ್ಪನ್ನು ಬೆಳೆಸುವ ಪರಿಸರ, ಹಾಕುವ ರಾಸಾಯನಿಕ ಗೊಬ್ಬರದ ಪರಿಣಾಮ, ರೋಗಗಳ ದಂಡೇ ಮನುಜ ಕುಲವನ್ನು ಆವರಿಸುತ್ತಿವೆ. ಹಸಿರು ಕ್ರಾಂತಿಯ ಸಮಯದಲ್ಲಿ ಆಹಾರ ಪೂರೈಕೆಯಷ್ಟೇ ಎಲ್ಲರ ಗುರಿಯಾಗಿತ್ತು. ಅದಕ್ಕಾಗಿ ಯಾವ ಗೊಬ್ಬರವನ್ನು ಬಳಸಿದರೂ ಸರಿಯೇ. ಆಹಾರ ಉತ್ಪತ್ತಿಯಲ್ಲಿನ ಪ್ರಮಾಣವಷ್ಟೇ ಮುಖ್ಯವಾಗಿತ್ತು. ಆದರೆ ದೀರ್ಘಕಾಲ ಈ ರಾಸಾಯನಿಕ ಗೊಬ್ಬರಗಳ ಬಳಸುವಿಕೆಯ ಪರಿಣಾಮ ಕ್ಯಾನ್ಸರ್‌ನಂತಹ ರೋಗಗಳು ಲಗ್ಗೆ ಇಡಲು ಕಾರಣವಾಯಿತು. ಈಗ ಎಲ್ಲರೂ ಎಚ್ಚೆತ್ತು ಸಾವಯವ ಕೃಷಿಯತ್ತ ಒಲವು ತೋರುತ್ತಿದ್ದಾರೆ. ಸಾವಯವ ರೀತಿಯಲ್ಲಿ ಬೆಳೆದ ತರಕಾರಿ ಮತ್ತು ಧಾನ್ಯಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್‌! ಎಷ್ಟೇ ದುಬಾರಿಯಾದರೂ ಸರಿ, ನಾವು ತಿನ್ನುವ ಆಹಾರ ಸುರಕ್ಷಿತವಾಗಿ ಆರೋಗ್ಯಕರವಾಗಿ ಇರಲಿ ಎನ್ನುವುದು ಎಲ್ಲರ ಆಶಯ.

ಮನೆಯ ಮುಂದೆ ಸ್ಥಳವಿರುವವರು ಸ್ವಲ್ಪ ಮಟ್ಟಿಗಾದರೂ ತಮ್ಮ ಮನೆಗಾಗುವಷ್ಟು ತರಕಾರಿ ಹಣ್ಣುಗಳನ್ನು ಬೆಳೆದಾಗ, ಅದನ್ನು ತಿನ್ನುವಾಗ ಎಲ್ಲಿಲ್ಲದ ನಿರಾಳ. ಆದರೆ ಎಲ್ಲರಿಗೂ ಈ ಅವಕಾಶ ಎಲ್ಲಿಂದ ಬರಬೇಕು? ಅನೇಕರಿಗೆ ಆಸೆಯಿದ್ದರೂ ಬೆಂಗಳೂರಿನಂತಹ ದುಬಾರಿ ನಗರದಲ್ಲಿ ತರಕಾರಿಯನ್ನು ಬೆಳೆಯುವಷ್ಟು ಅನುಕೂಲವೆಲ್ಲಿ? ಆದರೂ ಜನ ಈಗ ಎಚ್ಚೆತ್ತಿದ್ದಾರೆ. ಮನೆಯ ಮುಂದೆ ಇರುವಷ್ಟು ಸ್ಥಳದಲ್ಲೇ ಕುಂಡಗಳಲ್ಲಿ, ತಾರಸಿಯಲ್ಲಿ ಹೂವು, ತರಕಾರಿಯನ್ನು ಬೆಳೆಯುತ್ತಿದ್ದಾರೆ. ಮನೆಯ ಮುಂದೆ ಸ್ವಲ್ಪ ಸ್ಥಳಾವಕಾಶವಿದ್ದರಂತೂ ಅದು ಸ್ವರ್ಗಕ್ಕೆ ಸಮಾನ ಬಿಡಿ.

flower

ಇಂತಹ ಅನೇಕ ಉದಾಹರಣೆಗಳು ನಮ್ಮ ಬೆಂಗಳೂರಿನಲ್ಲಿ ಕಾಣಸಿಗುತ್ತವೆ. ಅದರಲ್ಲಿ ಗಮನ ಸೆಳೆಯುವುದು ಎಚ್‌.ಎಸ್‌.ಆರ್‌. ಲೇಔಟ್‌ನ ಉಮಾದೇವಿ ದೇಶಮುಖ್‌ ಅವರ ಮನೆಯ ಮುಂದಿನ ತೋಟ. ಈಗ ನಿವೇಶನ ಎಷ್ಟೇ ದೊಡ್ಡದ್ದಿದರೂ ಅದನ್ನು ಪೂರ್ಣವಾಗಿ ಬಳಸಿಕೊಂಡು ಮನೆಯನ್ನು ಕಟ್ಟಿಬಿಡುತ್ತಾರೆ. ಆದರೆ ಉಮಾ, ತಮ್ಮ ಮನೆಯ ಮುಂದೆ ಸಾಕಷ್ಟು ಸ್ಥಳವನ್ನು ಬಿಟ್ಟು ಅಲ್ಲಿ ಸುಂದರವಾದ ಕೈತೋಟವನ್ನು ಬೆಳೆಸಿದ್ದಾರೆ. ಇವರು ಬಿಜಾಪುರದ ಮೂಲದವರು. ಕೃಷಿಯ ಕುಟುಂಬದ ಹಿನ್ನೆಲೆಯಿಂದ ಬಂದವರು.

ಇವರ ಮನೆಯಲ್ಲಿ ಎಲ್ಲ ರೀತಿಯ ಹೂಗಳಿಂದ ಹಿಡಿದು ತರಕಾರಿ, ಹಣ್ಣು, ಸೊಪ್ಪುಗಳನ್ನೂ ಬೆಳೆಸಿದ್ದಾರೆ. ಹಣ್ಣುಗಳ ವಿಷಯಕ್ಕೆ ಬಂದರೆ ಎರಡು ಬಗೆಯ ಸೀಬೆಹಣ್ಣು, ಎರಡು ಬಗೆಯ ಮಾವಿನ ಹಣ್ಣು, ಗಿಣಿ ಮೂತಿ ತೋತಾಪುರಿ ಮತ್ತು ಅಲ್ಫೋನ್ಸಾ, ರಾಮಫಲ, ಕಲ್ಲಂಗಡಿ ಮತ್ತು ಪಪ್ಪಾಯಿ ಮರಗಳನ್ನು ಬೆಳೆಸಿದ್ದಾರೆ. ಆ ಮರಗಳಲ್ಲಿ ಹಣ್ಣು ತುಂಬಿ ತುಳುಕುತ್ತಿರುತ್ತದೆ. ಹುಣಿಸೆ ಮತ್ತು ತೆಂಗಿನ ಮರಗಳೂ ಸಹ ತಂಗಾಳಿಯನ್ನು ಸೂಸುತ್ತಾ ತಮ್ಮ ಇರುವನ್ನು ವ್ಯಕ್ತಪಡಿಸುತ್ತವೆ. ಕೊಂಡು ತಿನ್ನಲು ಭಯಪಡುವ ಸೊಪ್ಪಿನ ಬದಲು ಮನೆಯಲ್ಲೇ ಕೊತ್ತಂಬರಿ, ಮೆಂತ್ಯ, ಕೆಂಪು ದಂಟು, ರಾಜಗಿರಿ, ಅರಿವೆಸೊಪ್ಪು, ದೊಡ್ಡಪತ್ರೆಗಳನ್ನು ಬೆಳೆಸಿದ್ದಾರೆ. ತರಕಾರಿಗಳ ವಿಷಯಕ್ಕೆ ಬಂದರೆ ಟೊಮೇಟೊ, ಬದನೆಕಾಯಿ, ಬೆಂಡೇಕಾಯಿ, ಮೆಣಸಿನಕಾಯಿಯೂ ಇವರ ತೋಟದಲ್ಲಿ ಲಭ್ಯ. ದಾಸವಾಳ, ಲಿಲ್ಲಿ, ಮಲ್ಲಿಗೆ ಹೂವಿನ ಬಳ್ಳಿಯನ್ನೂ ಹಬ್ಬಿಸಿದ್ದಾರೆ. ಗುಲಾಬಿಯ ಗ್ರಾಫ್ಟಿಂಗ್‌ ಸಹಾ ಸ್ವತಃ ತಾವೇ ಮಾಡುತ್ತಾರೆ.ಇವರ ತೋಟ ಇಷ್ಟು ಫಲವತ್ತಾಗಿರಲು ಕಾರಣ, ಇವರು ಮನೆಯಲ್ಲೇ ಗೊಬ್ಬರವನ್ನೂ ತಯಾರು ಮಾಡುತ್ತಾರೆ. ತರಕಾರಿ, ಹಣ್ಣಿನ ಸಿಪ್ಪೆ ಗುಂಡಿಯಲ್ಲಿ ಹಾಕಿ ಅದರ ಮೇಲೆ ಮಣ್ಣು ಹಾಕಿ ಆಗಾಗ ಕೈಯಾಡಿಸುತ್ತಾರೆ. ಒಂದು ತಿಂಗಳಿಗೆ ಗೊಬ್ಬರ ರೆಡಿಯಾಗುತ್ತದೆ. ಒಂದು ಗುಂಡಿ ತುಂಬಿದ ತಕ್ಷಣ ಪಕ್ಕದಲ್ಲಿ ಮತ್ತೊಂದು ಗುಂಡಿ ಸಿದ್ಧವಾಗಿರುತ್ತದೆ.  ಹೀಗೆ ನಿರಂತರವಾಗಿ ಮನೆಯಲ್ಲಿಯೇ ತ್ಯಾಜ್ಯದಿಂದ ಕಾಂಪೋಸ್ಟ್ ಮಾಡುವ ಪ್ರಕ್ರಿಯೆಯನ್ನು ರೂಢಿಸಿಕೊಂಡಿದ್ದಾರೆ.

fl

ಮನೆಯಲ್ಲಿರುವ ತೆಂಗಿನ ಮರದ ಗರಿಗಳಿಂದ ಪೊರಕೆ ಮಾಡುತ್ತಾರೆ. ಗಿಡಗಳ ಸುತ್ತಲೂ ಹಳ್ಳ ಮಾಡಿ ತೆಂಗಿನ ನಾರನ್ನು ಚಿಕ್ಕದಾಗಿ ಕತ್ತರಿಸಿ. ಅದರ ಮೇಲೆ ಮಣ್ಣು ಹಾಕಿ ನೀರು ಹಾಕಿದಾಗ ಮಣ್ಣಿನಲ್ಲಿ ತಂಪು ಹೆಚ್ಚು ಹೊತ್ತಿರುತ್ತದೆ ಮತ್ತು ಮಣ್ಣೂ ಜಿಗುಟಾಗಿ ಗಟ್ಟಿಯಾಗುವುದಿಲ್ಲ. ಗಿಡಗಳ ಬೇರಿಗೆ ನೀರು ಮತ್ತು ಗಾಳಿ ಯಥೇಚ್ಛವಾಗಿ ದೊರಕುತ್ತದೆ. ಪರಿಣಾಮ ಗಿಡಗಳು ಫಲವತ್ತವಾಗಿ ಬೆಳೆಯುತ್ತವೆ.

ಮನೆಗೆ ಬೇಕಾದಷ್ಟು ಸೊಪ್ಪು ತರಕಾರಿಯ ಜೊತೆಗೆ ಮೂರು ತಿಂಗಳಲ್ಲಿ ಎರಡು ಬಾರಿ 3 ಕಿಲೋ ಆಲೂಗಡ್ಡೆ ಬೆಳೆದು ತೆಗೆದಿದ್ದಾರೆ. ಸೀಬೆಹಣ್ಣು ವರ್ಷದಲ್ಲಿ ಎರಡು ಬಾರಿ ಬಿಡುತ್ತದೆ. ಮೊದಲು ಇವರು ಮನೆಯ ಮುಂದೆಯೇ ಚಿಕ್ಕ ಮಕ್ಕಳ ಶಾಲೆ ನಡೆಸುತ್ತಿದ್ದರು. ಆಗ ಮಕ್ಕಳಿಗೆ ಒಬ್ಬೊಬ್ಬರಿಗೆ ಇಂತಿಷ್ಟು ಸ್ಥಳವನ್ನು ನೀಡಿ ಅದನ್ನು ನೋಡಿಕೊಳ್ಳಲು ಅವರಿಗೇ ಒಪ್ಪಿಸುತ್ತಿದ್ದರಂತೆ. ಅವರ ಹೆಸರಿನ ಬೋರ್ಡನ್ನು ಅಲ್ಲಿ ಹಾಕುತ್ತಿದ್ದರಂತೆ. ಅವರ ಕೈನಲ್ಲೇ ಬೀಜ ಹಾಕಿಸಿ ದಿನ ನೀರು ಹಾಕಿಸುತ್ತಿದ್ದರಂತೆ. ಆ ಮಕ್ಕಳಿಗೆ ದಿನ ತಮ್ಮ ಗಿಡ ಎಷ್ಟು ಬೆಳೆದಿದೆ? ಹೇಗೆ ಬೆಳೆದಿದೆ? ಎನ್ನುವ ಕುತೂಹಲ ಮತ್ತು ಸಂತೋಷ ಹೇಳತೀರದು ಎನ್ನುತ್ತಾರೆ ಉಮಾ.

papaya

ಮಕ್ಕಳು ಮತ್ತು ಗಿಡಗಳು ಎರಡೂ ಒಂದೇ ಅಲ್ಲವೇ? ಇಬ್ಬರ ಮನಸ್ಸೂ ಮೃದು ಮತ್ತು ಮುಗ್ಧತೆ ಅಲ್ಲಿ ತುಂಬಿರುತ್ತದೆ ಅಲ್ಲವೇ? ನಮ್ಮ ಮುಂದಿನ ಪೀಳಿಗೆಗೆ ಕೃಷಿಯ ಬಗ್ಗೆ ಅರಿವು ಮೂಡಿಸಬೇಕು. ಅವರು ಆರೋಗ್ಯವಾಗಿರಬೇಕು. ಅವರೇ ನಮ್ಮ ದೇಶದ ಶಕ್ತಿ ಎನ್ನುವುದು ಉಮಾ ಅವರ ಮನದ ಮಾತು. ಮಕ್ಕಳಿಗೆ ಗಿಡಗಳ ಬಗ್ಗೆ ಅರಿವು ಮೂಡಿಸುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.

ಒಟ್ಟಿನಲ್ಲಿ ಮನೆಯ ಮುಂದಿನ ಕೈ ತೋಟದಲ್ಲಿ ತರಕಾರಿ. ಹಣ್ಣುಗಳನ್ನು ಬೆಳೆದು ಆರೋಗ್ಯಕರವಾದ ಆಹಾರ ಸೇವಿಸುವ ಭಾಗ್ಯ ಉಮಾ ಅವರದಾಗಿದೆ. ಆದರೆ ಮನಸ್ಸು ಮಾಡಿದರೆ ಇರುವ ಸ್ಥಳದಲ್ಲೇ ಎಲ್ಲರೂ ಒಂದು ಪುಟ್ಟ ಕೈತೋಟವನ್ನು ಮಾಡಲು ಸಾಧ್ಯ. ನಮ್ಮ ಮನೆಯಲ್ಲಿ ಬೆಳೆದ ತರಕಾರಿ ತಿನ್ನುವಾಗ ಆಗುವ ಸಂತೋಷ ಹೇಳ ತೀರದೆನ್ನುತ್ತಾರೆ ಉಮಾ, ಅದು ನಿಜ ಹೌದು. ನೀವು ಪ್ರಯತ್ನಿಸಿ ನೋಡಿ!

– ಮಂಜುಳಾ ರಾಜ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ