ಅರ್ಜೆಂಟೀನಾದ ಫುಟ್ಬಾಲ್‌ ದಂತಕತೆ ಲಿಯೋನೆಲ್‌ ಮೆಸ್ಸಿ ತಮ್ಮ ಭಾರತದ ಪ್ರವಾಸವನ್ನು ರಾಷ್ಟ್ರ ರಾಜಧಾನಿಯಲ್ಲಿ ಕಳೆದರು.

ಸೋಮವಾರ ಬೆಳಗ್ಗೆಯೇ ಮೆಸ್ಸಿ ಮುಂಬೈನಿಂದ ದೆಹಲಿಗೆ ಆಗಮಿಸಬೇಕಿತ್ತು. ಆದರೆ, ದೆಹಲಿಯಲ್ಲಿ ವಿಪರೀತ ವಾಯು ಮಾಲಿನ್ಯನಿಂದಾಗಿ ಅವರ ಆಗಮನ ವಿಳಂಬವಾಯಿತು. ಆದರೂ, ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಮೆಸ್ಸಿ ಭಾಗಿಯಾದರು.

ಈ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಅಧ್ಯಕ್ಷ ಜಯ್‌ ಶಾ, ಮೆಸ್ಸಿಯನ್ನು ಮುಂದಿನ ವರ್ಷ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಬರುವಂತೆ, ಟೂರ್ನಿಯ ಉದ್ಘಾಟನಾ ಪಂದ್ಯ (ಭಾರತ vs ಅಮೆರಿಕ)ದ ಟಿಕೆಟ್‌ ನೀಡಿ ಆಹ್ವಾನಿಸಿದರು. ಜೊತೆಗೆ ಮೆಸ್ಸಿಗೆ 2024ರ ಟಿ20 ವಿಶ್ವಕಪ್‌ ವಿಜೇತ ಭಾರತ ತಂಡದ ಸದಸ್ಯರ ಹಸ್ತಾಕ್ಷರವುಳ್ಳ ಬ್ಯಾಟ್‌, 2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ತೊಡಲಿರುವ ಜೆರ್ಸಿಯನ್ನು ಉಡುಗೊರೆಯಾಗಿ ನೀಡಲಾಯಿತು.

ಮೆಸ್ಸಿ ಜೊತೆ ಭಾರತಕ್ಕೆ ಬಂದಿರುವ ಲೂಯಿಸ್‌ ಸುವಾರೆಜ್‌, ರೋಡ್ರಿಗೋ ಡಿ ಪಾಲ್‌ಗೂ ಭಾರತ ತಂಡದ ಜೆರ್ಸಿ ನೀಡಲಾಯಿತು. ಜೆರ್ಸಿಯ ಹಿಂಭಾಗದಲ್ಲಿ ಅವರವರ ಹೆಸರು, ಸಂಖ್ಯೆಯನ್ನು ಮುದ್ರಿಸಲಾಗಿದೆ.

ಈ ವೇಳೆ ದೆಹಲಿ ಸಿಎಂ ರೇಖಾ ಗುಪ್ತಾ, ಭಾರತದ ಫುಟ್ಬಾಲ್‌ ದಿಗ್ಗಜ ಬೈಚುಂಗ್‌ ಭುಟಿಯಾ ಸಹ ಇದ್ದರು. ಭಾರತ ಮಹಿಳಾ ಫುಟ್ಬಾಲ್‌ ತಂಡದ ಗೋಲ್‌ಕೀಪರ್‌ ಅದಿತಿ ಚೌಹಾಣ್‌ ಸಹ ಮೆಸ್ಸಿಯನ್ನು ಭೇಟಿಯಾಗಿ, ಅವರಿಗೆ ತಮ್ಮ ಜೆರ್ಸಿಯನ್ನು ಗೌರವಪೂರ್ವಕವಾಗಿ ನೀಡಿದರು.

ಭಾರತಕ್ಕೆ ಮತ್ತೆ ಬರುವೆ: ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದ ವೇಳೆ ಮಾತನಾಡಿದ ಲಿಯೋನೆಲ್‌ ಮೆಸ್ಸಿ, ‘ಭಾರತದಲ್ಲಿ ಈ ರೀತಿಯ ಆತಿಥ್ಯ ನಿರೀಕ್ಷಿಸಿದ್ದೆ. ಅಂತೆಯೇ ನೀವೆಲ್ಲಾ ಪ್ರೀತಿ ತೋರಿಸಿದ್ದೀರಿ. ಭಾರತ ಭೇಟಿಯೂ ಬಹಳ ಖುಷಿ ನೀಡಿದೆ. ಖಂಡಿತವಾಗಿಯೂ ಮತ್ತೆ ಬರುತ್ತೇನೆ’ಎಂದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ